
ದಟ್ಟವಾಗಿರುವ ಮಳೆಕಾಡುಗಳು (Rainforest) ದ್ಯುತಿ ಸಂಶ್ಲೇಷಣೆ ಕ್ರಿಯೆ ಮೂಲಕ ಅತಿ ದೊಡ್ಡ ಪ್ರಮಾಣದಲ್ಲಿ ಆಮ್ಲಜನಕ, ಇಂಗಾಲದ ಡೈ ಆಕ್ಸೈಡ್ ಬಿಡುಗಡೆ ಮಾಡುತ್ತದೆ. ಅದಕ್ಕಾಗಿಯೇ ಮಳೆಕಾಡುಗಳನ್ನು ಜಗತ್ತಿನ ಶ್ವಾಸಕೋಶ (Lungs of the world) ಎಂದು ಕರೆಯಲಾಗುತ್ತದೆ.
ಜೀವಿಗಳಿಗೆ ಬೇಕಾದ ಶೇ. 28 ರಷ್ಟು ಆಮ್ಲಜನಕ ಮಳೆಕಾಡಿನಲ್ಲೇ ಉತ್ಪತ್ತಿಯಾಗುತ್ತದೆ. ಅಷ್ಟೇ ಅಲ್ಲದೆ ಮಳೆಕಾಡುಗಳು ಸಸ್ತನಿಗಳು, ಸರೀಸೃಪಗಳು ಸೇರಿದಂತೆ ಪ್ರಾಣಿ ಮತ್ತು ಪಕ್ಷಿ ಸಂಕುಲಗಳ ಆಶ್ರಯ ತಾಣವಾಗಿದೆ. ಜೊತೆಗೆ ಮಳೆಕಾಡುಗಳಲ್ಲಿ ಅಪಾರ ಪ್ರಮಾಣದ ಗಿಡ ಮೂಲಿಕೆ ಸಸ್ಯಗಳಿವೆ. ಇದಲ್ಲದೆ ವಿಶ್ವದಲ್ಲಿರುವ ಮಳೆಕಾಡುಗಳು ವಾತಾವರಣದ ಇಂಗಾಲದ ಡೈಆಕ್ಸೈಡ್ ಹೀರಿಕೊಳ್ಳುವ ಮೂಲಕ ಹವಾಮಾನ ಬದಲಾವಣೆಯನ್ನು ತಗ್ಗಿಸಲು ಸಹಾಯ ಮಾಡುತ್ತದೆ. ಆದರೆ ಇಂದು ಮನುಷ್ಯನ ಸ್ವಾರ್ಥದ ಕಾರಣ ಮಳೆಕಾಡುಗಳು ಅಪಾಯದ ಅಂಚಿನಲ್ಲಿದೆ. ಆದ್ದರಿಂದ ಈ ದಟ್ಟ ಕಾನನದ ರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸಲು ಪ್ರತಿವರ್ಷ ಜೂನ್ 22 ರಂದು ವಿಶ್ವ ಮಳೆಕಾಡು (World Rainforest Day) ದಿನವನ್ನು ಆಚರಿಸಲಾಗುತ್ತದೆ.
ವಿಶ್ವ ಮಳೆಕಾಡು ದಿನದ ಇತಿಹಾಸ:
ಪ್ರತಿ ವರ್ಷ ಜೂನ್ 22 ಅನ್ನು ವಿಶ್ವ ಮಳೆಕಾಡು ದಿನವನ್ನಾಗಿ ಆಚರಿಸಲಾಗುತ್ತದೆ. ಈ ದಿನವನ್ನು ರೇನ್‌ಫಾರೆಸ್ಟ್ ಪಾರ್ಟ್‌ನರ್‌ಶಿಪ್ ಎಂಬ ಸಂಸ್ಥೆ ಮಳೆಕಾಡುಗಳನ್ನು ರಕ್ಷಿಸುವ ಉದ್ದೇಶದಿಂದ ಪ್ರಾರಂಭಿಸಿತು. ಇದರ ನಂತರ, 2017 ರಲ್ಲಿ ಮೊದಲ ಬಾರಿಗೆ ಈ ದಿನವನ್ನು ಆಚರಿಸಲಾಯಿತು. ಅಂದಿನಿಂದ ಪ್ರತಿವರ್ಷ ಮಳೆಕಾಡುಗಳ ಮಹತ್ವ ಮತ್ತು ಅವುಗಳ ರಕ್ಷಣೆ ಎಷ್ಟು ಮುಖ್ಯ ಎಂದು ಜನರಲ್ಲಿ ಜಾಗೃತಿ ಮೂಡಿಸಲು ಪ್ರತಿವರ್ಷ ಈ ದಿನವನ್ನು ಆಚರಿಸುತ್ತಾ ಬರಲಾಗುತ್ತಿದೆ.
ವಿಶ್ವ ಮಳೆಕಾಡು ದಿನದ ಮಹತ್ವ:
ಮಳೆಕಾಡುಗಳನ್ನು ಸಾಮಾನ್ಯವಾಗಿ ಭೂಮಿಯ ಶ್ವಾಸಕೋಶಗಳು ಎಂದು ಕರೆಯಲಾಗುತ್ತದೆ. ಇವುಗಳು ಇಂಗಾಲದ ಡೈ ಆಕ್ಸೈಡನ್ನು ಹೀರಿಕೊಳ್ಳುತ್ತವೆ ಮತ್ತು ಆಮ್ಲಜನಕವನ್ನು ಬಿಡುಗಡೆ ಮಾಡುತ್ತವೆ. ಶುದ್ಧ ನೀರು, ಗಾಳಿ ಮತ್ತು ಆಮ್ಲಜನಕ ನಮ್ಮನ್ನು ತಲುಪುತ್ತಿದೆ ಎಂದರೆ ಅದಕ್ಕೆ ಮುಖ್ಯ ಕಾರಣ ಅದು ಮಳೆಕಾಡುಗಳು. ಅಲ್ಲದೆ ಈ ಕಾಡುಗಳು ಪಕ್ಷಿ-ಪ್ರಾಣಿ ಸಂಕುಲಗಳಿಗೆ ಆಶ್ರಯ ತಾಣವಾಗಿದೆ. ಜೊತೆಗೆ ಆಹಾರ, ಆಶ್ರಯ, ಔಷಧಕ್ಕಾಗಿ ಅವುಗಳನ್ನು ಅವಲಂಬಿಸಿರುವ ಸ್ಥಳೀಯ ಸಮುದಾಯದವರು ಜೀವನೋಪಾಯಕ್ಕೆ ಈ ಮಳೆಕಾಡುಗಳನ್ನೇ ಅತ್ಯಗತ್ಯ.
ಆದರೆ ಇಂದು ಅರಣ್ಯ ನಾಶ, ಹವಾಮಾನ ಬದಲಾವಣೆ ಮಳೆಕಾಡುಗಳಿಗೆ ಬೆದರಿಕೆಯಾಗಿ ಪರಿಣಮಿಸಿದೆ. ಹಾಗಾಗಿ ಭೂಮಿಯ ಶ್ವಾಸಕೋಶವನ್ನು ರಕ್ಷಿಸುವ ಉದ್ದೇಶದಿಂದ ವಿಶ್ವ ಮಳೆಕಾಡು ದಿನವನ್ನು ಆಚರಿಸುವುದು ಅತ್ಯಗತ್ಯವಾಗಿದೆ. ಈ ವಿಶೇಷ ದಿನದಂದು ಮಳೆಕಾಡು ಸಂರಕ್ಷಣೆಯನ್ನು ಉತ್ತೇಜಿಸಲು ಪ್ರಪಂಚದಾದ್ಯಂತ ವಿವಿಧ ಚಟುವಟಿಕೆಗಳನ್ನು ಆಯೋಜಿಸಲಾಗುತ್ತದೆ. ಮಳೆಕಾಡುಗಳ ಮಹತ್ವ, ಅವುಗಳು ಎದುರಿಸುತ್ತಿರುವ ಬೆದರಿಕೆಗಳ ಬಗ್ಗೆ ಜನರಿಗೆ ಅರಿವು ಮೂಡಿಸಲಾಗುತ್ತದೆ.