ಎಡ್ಜ್ಬಾಸ್ಟನ್ ಟೆಸ್ಟ್ನ 4ನೇ ದಿನದಾಟದಲ್ಲಿ 427 ರನ್ಗಳಿಗೆ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡು ಆತಿಥೇಯ ಇಂಗ್ಲೆಂಡ್ ಗೆಲುವಿಗೆ 608 ರನ್ಗಳ ಬೃಹತ್ ಗುರಿ ನೀಡಿರುವ ಟೀಂ ಇಂಡಿಯಾ (Team India), ದಿನದಾಟದಂತ್ಯಕ್ಕೆ ಆಂಗ್ಲ ತಂಡದ ಪ್ರಮುಖ 3 ವಿಕೆಟ್ ಕಬಳಿಸಿ ಕೇವಲ 72 ರನ್ಗಳನ್ನು ಬಿಟ್ಟುಕೊಟ್ಟಿದೆ.
ಹೀಗಾಗಿ ಐದನೇ ಹಾಗೂ ಕೊನೆಯ ದಿನದಾಟದಲ್ಲಿ ಇಂಗ್ಲೆಂಡ್ ಗೆಲುವಿಗೆ 536 ರನ್ಗಳು ಬೇಕಿದ್ದರೆ, ಟೀಂ ಇಂಡಿಯಾ ಗೆಲುವಿಗೆ ಇನ್ನ 7 ವಿಕೆಟ್ಗಳ ಅಗತ್ಯವಿದೆ. ಎರಡನೇ ಇನ್ನಿಂಗ್ಸ್ನಲ್ಲಿ ಟೀಂ ಇಂಡಿಯಾ ಪರ ಬೌಲಿಂಗ್ನಲ್ಲಿ ಮತ್ತೊಮ್ಮೆ ಮಿಂಚಿದ ವೇಗಿ ಆಕಾಶ್ ದೀಪ್ (Akash Deep) ಪ್ರಮುಖ 2 ವಿಕೆಟ್ ಕಬಳಿಸಿದರೆ, ಮೊಹಮ್ಮದ್ ಸಿರಾಜ್ (Mohammed Siraj) ಒಂದು ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು. ಇಂಗ್ಲೆಂಡ್ ಪರ ಹ್ಯಾರಿ ಬ್ರೂಕ್ ಹಾಗೂ ಓಲಿ ಪೋಪ್ ಅಜೇಯರಾಗಿ ಉಳಿದಿದ್ದು, ಕೊನೆಯ ದಿನದಾಟಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
3 ವಿಕೆಟ್ ಕಳೆದುಕೊಂಡ ಇಂಗ್ಲೆಂಡ್
ಭಾರತ ನೀಡಿದ 608 ರನ್ಗಳ ಬೃಹತ್ ಗುರಿ ಬೆನ್ನಟ್ಟಿದ ಇಂಗ್ಲೆಂಡ್ ಉತ್ತಮ ಆರಂಭವನ್ನು ಪಡೆಯಲಿಲ್ಲ. ಆರಂಭಿಕ ಜ್ಯಾಕ್ ಕ್ರೌಲಿ ಬೇಗನೆ ಅಂದರೆ ಖಾತೆ ತೆರೆಯದೆ ಔಟಾದರು. ಈ ವಿಕೆಟ್ ಮೊಹಮ್ಮದ್ ಸಿರಾಜ್ ಪಾಲಾಯಿತು. ಇದರ ನಂತರ ಹೊಡಿಬಡಿ ಆಟಕ್ಕೆ ಮುಂದಾಗಿದ್ದ ಬೆನ್ ಡಕೆಟ್ಗೂ ಪೆವಿಲಿಯನ್ ಹಾದಿ ತೋರಿಸುವಲ್ಲಿ ಆಕಾಶ್ ದೀಪ್ ಯಶಸ್ವಿಯಾದರು. ಹೀಗಾಗಿ ತಂಡ ಬೇಗನೇ 2 ವಿಕೆಟ್ ಕಳೆದುಕೊಂಡಿದ್ದರಿಂದ ಅನುಭವಿ ಬ್ಯಾಟ್ಸ್ಮನ್ ಜೋ ರೂಟ್ ಮೇಲೆ ಸಾಕಷ್ಟು ಜವಾಬ್ದಾರಿ ಇತ್ತು. ಆದರೆ ಆಕಾಶ್ ದೀಪ್ ಎಸೆದ ಮ್ಯಾಜಿಕಲ್ ಎಸೆತಕ್ಕೆ ಆರು ರನ್ ಗಳಿಸಿದ್ದ ಜೋ ರೂಟ್ ಕ್ಲೀನ್ ಬೌಲ್ಡ್ ಆದರು. ಇನ್ನು ಐದನೇ ದಿನದಾಟಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿರುವ ಓಲಿ ಪೋಪ್ 24 ರನ್ ಬಾರಿಸಿದ್ದರೆ, ಹ್ಯಾರಿ ಬ್ರೂಕ್ 15 ರನ್ ಕಲೆಹಾಕಿದ್ದಾರೆ.
ಭಾರತಕ್ಕೆ ಗಿಲ್ ಶತಕದ ಆಸರೆ
ಇದಕ್ಕೂ ಮೊದಲು ಟೀಂ ಇಂಡಿಯಾದ ಎರಡನೇ ಇನ್ನಿಂಗ್ಸ್ 427 ರನ್ಗಳಿಗೆ ಅಂತ್ಯಗೊಂಡಿತು. ಟೀಂ ಇಂಡಿಯಾ ಪರ ಎರಡನೇ ಇನ್ನಿಂಗ್ಸ್ನಲ್ಲೂ ಮಿಂಚಿದ ನಾಯಕ ಶುಭ್ಮನ್ ಗಿಲ್ ಭರ್ಜರಿ ಶತಕ ಸಿಡಿಸಿದಲ್ಲದೆ, 161 ರನ್ಗಳ ಸ್ಫೋಟಕ ಇನ್ನಿಂಗ್ಸ್ ಆಡಿದರು. ನಾಯಕ ಗಿಲ್ಗೆ ಉತ್ತಮ ಸಾಥ್ ನೀಡಿದ ರಿಷಭ್ ಪಂತ್ 65 ರನ್ಗಳ ಇನ್ನಿಂಗ್ಸ್ ಆಡಿದರೆ, ಇತ್ತ ರವೀಂದ್ರ ಜಡೇಜಾ ಕೂಡ 69 ರನ್ಗಳ ಕಾಣಿಕೆ ನೀಡಿದರು. ಈ ಮೂವರನ್ನು ಹೊರತುಪಡಿಸಿ ಕೆಎಲ್ ರಾಹುಲ್ ಕೂಡ 55 ರನ್ಗಳ ಇನ್ನಿಂಗ್ಸ್ ಆಡಿದರು. ಇತ್ತ ಇಂಗ್ಲೆಂಡ್ ಪರ ಎಲ್ಲಾ ಬೌಲರ್ಗಳು ದುಬಾರಿಯಾಗಿದ್ದರು. ವೇಗಿ ಟಂಗ್ ಹಾಗೂ ಸ್ಪಿನ್ನರ್ ಶೋಯೆಬ್ ಬಶೀರ್ ತಲಾ 2 ವಿಕೆಟ್ ಪಡೆದರೆ, ಬ್ರೈಡನ್ ಕಾರ್ಸೆ ಮತ್ತು ಜೋ ರೂಟ್ ತಲಾ ಒಂದು ವಿಕೆಟ್ ಪಡೆದರು.