ಐದು ಪಂದ್ಯಗಳ ಟೆಸ್ಟ್ ಸರಣಿಗಾಗಿ ಇಂಗ್ಲೆಂಡ್ ಪ್ರವಾಸ ಮಾಡಿರುವ ಟೀಂ ಇಂಡಿಯಾ (Team India) ಕೊನೆಗೂ ಗೆಲುವು ಖಾತೆ ತೆರೆಯುವಲ್ಲಿ ಯಶಸ್ವಿಯಾಗಿದೆ. ಲೀಡ್ಸ್ ಟೆಸ್ಟ್ನಲ್ಲಿ ಗೆಲುವಿನ ಸನಿಹದಲ್ಲಿ ಎಡವಿದ್ದ ಟೀಂ ಇಂಡಿಯಾ ಇದೀಗ ಎಡ್ಜ್ಬಾಸ್ಟನ್ ಟೆಸ್ಟ್ನಲ್ಲಿ ಭಾರಿ ಗೆಲುವು ದಾಖಲಿಸಿದೆ.
ಈ ಮೂಲಕ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-1 ರಲ್ಲಿ ಸಮಬಲ ಸಾಧಿಸಿದೆ. ಎರಡನೇ ಟೆಸ್ಟ್ನಲ್ಲಿ ಟೀಂ ಇಂಡಿಯಾ ನೀಡಿದ 608 ರನ್ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ಇಂಗ್ಲೆಂಡ್ 271 ರನ್ಗಳಿಗೆ ಆಲೌಟ್ ಆಗುವ ಮೂಲಕ 337 ರನ್ಗಳಿಂದ ಪಂದ್ಯವನ್ನು ಕಳೆದುಕೊಂಡಿತು. ಭಾರತದ ಈ ಗೆಲುವಿನಲ್ಲಿ ನಾಯಕ ಶುಭ್ಮನ್ ಗಿಲ್ (Shubman Gill) ಬ್ಯಾಟಿಂಗ್ನಲ್ಲಿ ಅಮೋಘ ಪ್ರದರ್ಶನ ನೀಡಿದರೆ, ಇತ್ತ ಬೌಲಿಂಗ್ನಲ್ಲಿ ಆಕಾಶ್ ದೀಪ್ (Akash Deep) ಹಾಗೂ ಮೊಹಮ್ಮದ್ ಸಿರಾಜ್ ಬೌಲಿಂಗ್ನಲ್ಲಿ ಮಾರಕ ದಾಳಿ ನಡೆಸಿ ಆಂಗ್ಲರನ್ನು ಕಟ್ಟಿಹಾಕುವಲ್ಲಿ ಯಶಸ್ವಿಯಾದರು. ಈ ಗೆಲುವಿನೊಂದಿಗೆ ಭಾರತ 4ನೇ ಆವೃತ್ತಿಯ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ತನ್ನ ಗೆಲುವಿನ ಖಾತೆಯನ್ನು ಸಹ ತೆರೆದಿದೆ.
ಪಂದ್ಯದ ಸಾರಾಂಶ
ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ಮೊದಲ ಇನ್ನಿಂಗ್ಸ್ನಲ್ಲಿ 587 ರನ್ ಕಲೆಹಾಕಿತು. ಆ ಬಳಿಕ ಇಂಗ್ಲೆಂಡ್ ತಂಡವನ್ನು 407 ರನ್ಗಳಿಗೆ ಆಲೌಟ್ ಮಾಡುವ ಮೂಲಕ ಮೊದಲ ಇನ್ನಿಂಗ್ಸ್ನಲ್ಲಿ 180 ರನ್ಗಳ ದೊಡ್ಡ ಮುನ್ನಡೆ ಪಡೆದುಕೊಂಡಿತು. ಆ ನಂತರ ಎರಡನೇ ಇನ್ನಿಂಗ್ಸ್ನಲ್ಲಿ ನಾಯಕ ಶುಭ್ಮನ್ ಗಿಲ್ ಅವರ ಶತಕ, ಕೆಎಲ್ ರಾಹುಲ್, ರಿಷಭ್ ಪಂತ್ ಹಾಗೂ ರವೀಂದ್ರ ಜಡೇಜಾ ಅವರ ಅರ್ಧಶತಕದ ನೆರವಿನಿಂದ ಆರು ವಿಕೆಟ್ಗಳಿಗೆ 427 ರನ್ ಬಾರಿಸಿ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು. ಈ ಮೂಲಕ ಇಂಗ್ಲೆಂಡ್ ತಂಡಕ್ಕೆ 608 ರನ್ಗಳ ಗುರಿಯನ್ನು ನಿಗದಿಪಡಿಸಿತು. ಈ ಗುರಿ ಬೆನ್ನಟ್ಟಿದ ಇಂಗ್ಲೆಂಡ್ ತಂಡ ತನ್ನ ಎರಡನೇ ಇನ್ನಿಂಗ್ಸ್ನಲ್ 271 ರನ್ಗಳಿಗೆ ಆಲೌಟ್ ಆಗುವ ಮೂಲಕ ಪಂದ್ಯವನ್ನು ಕಳೆದುಕೊಂಡಿತು.
ಇತಿಹಾಸ ನಿರ್ಮಿಸಿದ ಆಕಾಶ್ ದೀಪ್
ಈ ಗೆಲುವಿನೊಂದಿಗೆ 5 ಟೆಸ್ಟ್ ಪಂದ್ಯಗಳ ಸರಣಿಯು 1-1 ರಿಂದ ಸಮನಾಗಿದೆ. ಲೀಡ್ಸ್ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯವನ್ನು ಇಂಗ್ಲೆಂಡ್ ಗೆದ್ದಿತ್ತು. ಇದೀಗ ಎಡ್ಜ್ಬಾಸ್ಟನ್ ಟೆಸ್ಟ್ ಪಂದ್ಯವನ್ನು ಗೆಲ್ಲುವ ಮೂಲಕ ಟೀಂ ಇಂಡಿಯಾ ಸರಣಿಯಲ್ಲಿ ಸಮಬಲ ಸಾಧಿಸಿದೆ. ಟೀಂ ಇಂಡಿಯಾದ ಈ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ ಆಕಾಶ್ ದೀಪ್ ಮೊದಲ ಇನ್ನಿಂಗ್ಸ್ನಲ್ಲಿ 4 ವಿಕೆಟ್ ಮತ್ತು ಎರಡನೇ ಇನ್ನಿಂಗ್ಸ್ನಲ್ಲಿ 6 ವಿಕೆಟ್ಗಳನ್ನು ಕಬಳಿಸಿದರು. ಈ ಮೂಲಕ ಇಂಗ್ಲೆಂಡ್ ನೆಲದಲ್ಲಿ ನಡೆದ ಪಂದ್ಯವೊಂದರಲ್ಲಿ 10 ವಿಕೆಟ್ಗಳನ್ನು ಪಡೆದ ಎರಡನೇ ಭಾರತೀಯ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಪ್ರಾಸಂಗಿಕವಾಗಿ, ಅವರಿಗಿಂತ ಮೊದಲು, ಚೇತನ್ ಶರ್ಮಾ 1986 ರಲ್ಲಿ ಇದೇ ಮೈದಾನದಲ್ಲಿ ಈ ಸಾಧನೆ ಮಾಡಿದ್ದರು.