ವಿಶ್ವ ಹಿಂದೂ ಪರಿಷತ್‌ ಲೆಕ್ಕಪತ್ರ ಬಹಿರಂಗಪಡಿಸುವ ಪದ್ಧತಿಗೆ ಸ್ಪಷ್ಟನೆ:

ಚಿತ್ರದುರ್ಗ , ಜುಲೈ 25, 2025.

ವರದಿ ಮತ್ತು ಪೋಟೋ ಸುರೇಶ್ ಪಟ್ಟಣ್

ಹಿಂದೂ ಮಹಾಗಣಪತಿ ಉತ್ಸವ ಮುಗಿದ ನಂತರ ಸಮಿತಿ ಲೆಕ್ಕಪತ್ರ ಮಂಡನೆ ಮಾಡುತ್ತದೆಯಾದರೂ, ಲೆಕ್ಕಪತ್ರವನ್ನು ಬಹಿರಂಗಪಡಿಸುವ ಪದ್ಧತಿ ವಿಶ್ವ ಹಿಂದೂ ಪರಿಷತ್‌ನಲ್ಲಿ ಇಲ್ಲ ಎಂಬುದು ವಿಶ್ವ ಹಿಂದೂ ಪರಿಷತ್‌ನ ಪ್ರಾಂತ್ಯ ಕಾರ್ಯದರ್ಶಿ ಶರಣ ಪಂಪವಲ್ ಅವರ ಸ್ಪಷ್ಟನೆ.

ಚಿತ್ರದುರ್ಗದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಉತ್ಸವದ ಬಳಿಕ ಲೆಕ್ಕಪತ್ರ ನೀಡುವುದಿಲ್ಲ ಎಂಬ ಆರೋಪಗಳಿಗೆ ಉತ್ತರವಾಗಿ, ಲೆಕ್ಕಪತ್ರದ ಬಗ್ಗೆ ಯಾರಿಗಾದರೂ ಮಾಹಿತಿ ಬೇಕಾದರೆ, ಅವರು ವೈಯಕ್ತಿಕವಾಗಿ ಸಂಪರ್ಕಿಸಿದರೆ ಮಾಹಿತಿ ನೀಡುತ್ತೇವೆ. ಆದರೆ ಈ ವಿಷಯವನ್ನು ಸಾರ್ವಜನಿಕವಾಗಿ ಬಹಿರಂಗಪಡಿಸುವ ಪದ್ಧತಿ ನಮ್ಮಲ್ಲಿ ಇಲ್ಲ,” ಎಂದು ಹೇಳಿದರು.

ಹಾಗೆಯೇ, “ಹಿಂದಿನ ಬಾರಿ ಲೆಕ್ಕಪತ್ರ ಮಂಡನೆ ಸಂದರ್ಭದಲ್ಲಿ ನಾನು ಇದ್ದೆ. ಲೆಕ್ಕಪತ್ರ ಪರಿಶೀಲನೆ ಕೂಡ ಮಾಡಿದ್ದೇವೆ. ಯಾವುದೇ ಅವ್ಯವಹಾರ ಕಂಡುಬಂದಿಲ್ಲ. ಕೆಲವು ಆರೋಪಗಳು ಸುಳ್ಳಾಗಿವೆ. ಆರೋಪ ಮಾಡುವವರು ವೈಯಕ್ತಿಕವಾಗಿ ಬಂದು ಸಮಸ್ಯೆ ಹಂಚಿಕೊಂಡರೆ, ನಾವೆಲ್ಲ ವಿವರಗಳನ್ನೂ ನೀಡಲು ಸಿದ್ಧರಾಗಿದ್ದೇವೆ,” ಎಂದು ಸ್ಪಷ್ಟಪಡಿಸಿದರು.

“ಹಣಕಾಸಿನ ವಿಷಯವಾಗಿ ಬಹಿರಂಗಪಡಿಸುವ ಕುರಿತು ಸಾರ್ವಜನಿಕರ ಸಲಹೆಯನ್ನು ನಮ್ಮ ಸಮಿತಿಯಲ್ಲಿ ಚರ್ಚೆ ಮಾಡುತ್ತೇವೆ,” ಎಂದೂ ಅವರು ಹೇಳಿದರು.

ಈ ಸಂದರ್ಭ ಅವರು ಒತ್ತಿಯಂತೆ ಹೇಳಿದರು: “ನಮ್ಮದು ವ್ಯಕ್ತಿ ಪ್ರಧಾನವಾದ ಸಂಘಟನೆ ಅಲ್ಲ. ಈ ಕಾರ್ಯಕ್ರಮವೂ ವ್ಯಕ್ತಿ ಪ್ರಧಾನವಲ್ಲ. ಯಾವುದೇ ಭಿನ್ನತೆಗೆ ಸ್ಥಳವಿಲ್ಲ; ಎಲ್ಲರನ್ನೂ ಒಳಗೊಂಡು ಉತ್ಸವವನ್ನು ಯಶಸ್ವಿಯಾಗಿ ನೆರವೇರಿಸುತ್ತೇವೆ.”

ಈ ಸುದ್ದಿಗೋಷ್ಠಿಯಲ್ಲಿ ವಿಶ್ವ ಹಿಂದೂ ಪರಿಷತ್‌ನ ಜಿಲ್ಲಾಧ್ಯಕ್ಷ ಷಡಾಕ್ಷರಯ್ಯ, ದಕ್ಷಿಣ ಪ್ರಾಂತ್ಯ ಉಪಾಧ್ಯಕ್ಷ ಡಾ. ಮಂಜುನಾಥ್, ವಿಭಾಗ ಕಾರ್ಯದರ್ಶಿ ಚಂದ್ರಶೇಖರ್, ಹಾಗೂ ಚಿತ್ರದುರ್ಗ ಕಾರ್ಯದರ್ಶಿ ಕೇಶವ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *