IND vs ENG: 396 ರನ್​ಗಳಿಗೆ ಭಾರತ ಆಲೌಟ್; ಇಂಗ್ಲೆಂಡ್​ಗೆ 373 ರನ್​ಗಳ ಗೆಲುವಿನ ಗುರಿ.

ಭಾರತ ಮತ್ತು ಇಂಗ್ಲೆಂಡ್ (India vs England) ನಡುವಿನ ಐದು ಪಂದ್ಯಗಳ ಟೆಸ್ಟ್ ಸರಣಿಯ ಕೊನೆಯ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ತನ್ನ ಎರಡನೇ ಇನ್ನಿಂಗ್ಸ್ ಅನ್ನು ಸಹ ಆಡಿ ಮುಗಿಸಿದ್ದು, 396 ರನ್​ಗಳಿಗೆ ಆಲೌಟ್ ಆಗಿದೆ. ಈ ಪಂದ್ಯದ ಮೂರನೇ ದಿನದಾಟದ ಕೊನೆಯ ಸೆಷನ್​ನಲ್ಲಿ ಆಲೌಟ್ ಆದ ಟೀಂ ಇಂಡಿಯಾ, ಈ ಮೂಲಕ ಇಂಗ್ಲೆಂಡ್‌ ಗೆಲುವಿಗೆ 373 ರನ್‌ಗಳ ಗುರಿ ನೀಡಿದೆ.

ಭಾರತದ ಪರ ಆರಂಭಿಕ ಯಶಸ್ವಿ ಜೈಸ್ವಾಲ್ (Yashasvi Jaiswal) ಸ್ಮರಣೀಯ ಶತಕ ಸಿಡಿಸಿದರೆ, ಜೈಸ್ವಾಲ್ ಜೊತೆ ಶತಕದ ಜೊತೆಯಾಟವನ್ನಾಡಿದ ಯುವ ವೇಗಿ ಆಕಾಶ್ ದೀಪ್ ಕೂಡ ಅರ್ಧಶತಕ ಬಾರಿಸಿದರು. ಇಬ್ಬರು ಆಲ್​ರೌಂಡರ್​ಗಳಾದ ರವೀಂದ್ರ ಜಡೇಜಾ ಹಾಗೂ ವಾಷಿಂಗ್ಟನ್ ಸುಂದರ್ ಕೂಡ ತಲಾ ಅರ್ಧಶತಕ ಬಾರಿಸುವ ಮೂಲಕ ತಂಡವನ್ನು ಸ್ಪರ್ಧಾತ್ಮಕ ಮೊತ್ತದತ್ತ ಕೊಂಡೊಯ್ದರು. ಇತ್ತ ಇಂಗ್ಲೆಂಡ್‌ ಪರ ಜೋಸ್ ಟಂಗ್ 5 ವಿಕೆಟ್ ಪಡೆದರು.

ಜೈಸ್ವಾಲ್ ಶತಕ, ಆಕಾಶ್ ಅರ್ಧಶತಕ

75 ರನ್​ಗಳಿಗೆ 2 ವಿಕೆಟ್ ಕಳೆದುಕೊಂಡು 2ನೇ ದಿನದಾಟವನ್ನು ಅಂತ್ಯಗೊಳಿಸಿದ್ದ ಟೀಂ ಇಂಡಿಯಾ ಇಲ್ಲಿಂದ ತನ್ನ ಮೂರನೇ ದಿನದಾಟವನ್ನು ಪ್ರಾರಂಭಿಸಿತು. 2ನೇ ದಿನದಾಟದಲ್ಲಿ ಅಜೇಯರಾಗಿ ಉಳಿದಿದ್ದ ಯಶಸ್ವಿ ಮತ್ತು ಆಕಾಶ್ ದೀಪ್ ನಡುವೆ ಮೂರನೇ ವಿಕೆಟ್‌ಗೆ 107 ರನ್‌ಗಳ ಪಾಲುದಾರಿಕೆ ಇತ್ತು. ನೈಟ್‌ವಾಚ್‌ಮನ್ ಆಗಿ ಬ್ಯಾಟಿಂಗ್ ಮಾಡಲು ಬಂದ ಆಕಾಶ್ ದೀಪ್ ಬ್ಯಾಟಿಂಗ್‌ನಲ್ಲಿ ಮಿಂಚಿ 70 ಎಸೆತಗಳಲ್ಲಿ ತಮ್ಮ ಟೆಸ್ಟ್ ವೃತ್ತಿಜೀವನದ ಮೊದಲ ಅರ್ಧಶತಕ ಗಳಿಸಿದರು. ಆದಾಗ್ಯೂ ಆಕಾಶ್ ದೀಪ್ 66 ರನ್ ಗಳಿಸಿ ಔಟಾದರು.

ಆ ಬಳಿಕ ಬಂದ ನಾಯಕ ಶುಭ್​ಮನ್ ಗಿಲ್ 11 ರನ್ ಗಳಿಸಿ ಔಟಾದರು. ಇದರ ನಂತರ, ಬ್ಯಾಟಿಂಗ್ ಮಾಡಲು ಬಂದ ಕರುಣ್ ನಾಯರ್ ಕೂಡ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗದೆ 32 ಎಸೆತಗಳಲ್ಲಿ 17 ರನ್ ಗಳಿಸಿ ಔಟಾದರು. ಇದೇ ವೇಳೆ ಯಶಸ್ವಿ ಜೈಸ್ವಾಲ್ 127 ಎಸೆತಗಳಲ್ಲಿ ತಮ್ಮ ಟೆಸ್ಟ್ ವೃತ್ತಿಜೀವನದ ಆರನೇ ಶತಕವನ್ನು ಪೂರೈಸಿದರು.

ಸುಂದರ್- ಜಡೇಜಾ ಅರ್ಧಶತಕ

ಆ ಬಳಿಕ ಒಂದಾದ ರವೀಂದ್ರ ಜಡೇಜಾ ಮತ್ತು ಧ್ರುವ್ ಜುರೆಲ್ 50 ರನ್‌ಗಳ ಪಾಲುದಾರಿಕೆಯನ್ನು ಹಂಚಿಕೊಂಡರು. ಈ ವೇಳೆ ಜಡೇಜಾ ಕೂಡ ತಮ್ಮ ಅರ್ಧಶತಕವನ್ನು ಪೂರೈಸಿದರು. ಆದರೆ ಜಡೇಜಾ 77 ಎಸೆತಗಳಲ್ಲಿ 53 ರನ್ ಗಳಿಸಿ ಔಟಾದರೆ, ಜುರೆಲ್ 34 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಕೊನೆಯಲ್ಲಿ ವಾಷಿಂಗ್ಟನ್ ಸುಂದರ್ ಕೂಡ 46 ಎಸೆತಗಳಲ್ಲಿ 53 ರನ್ ಬಾರಿಸಿದರು. ಮೊಹಮ್ಮದ್ ಸಿರಾಜ್ ಶೂನ್ಯಕ್ಕೆ ಔಟಾದರೆ, ಪ್ರಸಿದ್ಧ್ ಕೃಷ್ಣ ಖಾತೆ ತೆರೆಯದೆ ಅಜೇಯರಾಗಿ ಉಳಿದರು. ಇಂಗ್ಲೆಂಡ್ ಪರ ಜೋಶ್ ಟಾಂಗ್ ಐದು ವಿಕೆಟ್, ಗಸ್ ಅಟ್ಕಿನ್ಸನ್ ಮೂರು ಮತ್ತು ಜೇಮೀ ಓವರ್ಟನ್ ಎರಡು ವಿಕೆಟ್ ಪಡೆದರು.

Views: 9

Leave a Reply

Your email address will not be published. Required fields are marked *