“ಸಂವಿಧಾನ ವಿರೋಧಿಗಳಿಂದ ಅಪಸ್ವರಮಾಜಿ ಸಚಿವ” ಎಚ್.ಆಂಜನೇಯ ಹೇಳಿಕೆ

ಉಪಸಮಿತಿ ರಚನೆ ಅಗತ್ಯವೇ ಇಲ್ಲ

16ರಂದು ಒಳಮೀಸಲಾತಿ ಜಾರಿ ಖಚಿತ

ಚಿತ್ರದುರ್ಗ: ಆ.11


ಒಳಮೀಸಲಾತಿ ಜಾರಿ ಸಂಬಂಧ ನ್ಯಾ.ನಾಗಮೋಹನ್ ದಾಸ್ ಆಯೋಗ
ಸಲ್ಲಿಸಿರುವ ವರದಿ ಅತ್ಯಂತ ವೈಜ್ಞಾನಿಕವಾಗಿದ್ದು, ಈ ಕುರಿತು ಅಪಸ್ವರ ಕೂಗು ಹಾಕುತ್ತಿರುವವರು ಸಂವಿಧಾನದ ವಿರೋಧಿಗಳು ಎಂದು ಮಾಜಿ ಸಚಿವ ಎಚ್.ಆಂಜನೇಯ ಆಕ್ರೋಶ ವ್ಯಕ್ತಪಡಿಸಿದರು.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಯಾವುದೇ
ಕಾರಣಕ್ಕೂ ಉಪ ಸಮಿತಿ ರಚನೆ ಅಥವಾ ಮತ್ತೊಂದು ಸಚಿವ ಸಂಪುಟದ ಸಭೆಗೆ ಮುಂದೂಡದೆ ಆಗಸ್ಟ್ 16ರಂದು ಮಾದಿಗರು ಮತ್ತಿತರ ನೊಂದ ಜನರಿಗೆ ಸ್ವತಂತ್ರ ನೀಡುವ ಕ್ರಮಕೈಗೊಳ್ಳಬೇಕು, ಈ ವಿಷಯದಲ್ಲಿ ಸಂಶಯವೇ ಬೇಡ ಎಂದರು.

ಮೊದಲು ಒಳಮೀಸಲಾತಿ ಜಾರಿಗೊಳಿಸುವ ಬದ್ಧತೆ ಇಲ್ಲವೆಂದರು, ನಾಗಮೋಹನ್ ದಾಸ್ ಆಯೋಗ ರಚನೆ ವೇಳೆ ವಿರೋಧಿಸಿದರು. ಜಾತಿಗಣತಿ ಸಮೀಕ್ಷೆ ಕೈಗೊಳ್ಳುತ್ತಿದ್ದಂತೆ ಷಡ್ಯಂತ್ರ ಎಂದು ಕುಹುಕುವಾಡಿದರು. ಈಗ ವರದಿ ಸರ್ಕಾರದ ಕೈ ಸೇರಿ, ಸಚಿವ ಸಂಪುಟದಲ್ಲಿ ಮಂಡನೆ ಆಗುತ್ತಿದ್ದಂತೆ ಕೆಲವರು ಭೀತಿಗೆ ಒಳಗಾಗಿ ಜ್ಞಾನ, ಸಂವಿಧಾನದ ಅರಿವು ಇಲ್ಲದೆ ಟೀಕಿಸುತ್ತಿದ್ದಾರೆ ಎಂದು ತಿಳಿಸಿದರು.

ಈ ವಿಷಯದಲ್ಲಿ ಕಾಂಗ್ರೆಸ್ ಪಕ್ಷ ಏಕತೆ, ಬದ್ಧತೆಯಿಂದ ಮುನ್ನಡೆಯುತ್ತಿದೆ.
ಚಿತ್ರದುರ್ಗದಲ್ಲಿ ಈ ಹಿಂದೆ ಎಸ್ಸಿ, ಎಸ್ಟಿ ಸಮಾವೇಶದಲ್ಲಿ ಘೋಷಣೆ ಮಾಡಿದಂತೆ ಹಾಗೂ ಪಕ್ಷದ ಪ್ರಣಾಳಿಕೆಯಲ್ಲಿ ಹೇಳಿದಂತೆ ನಡೆದುಕೊಳ್ಳುತ್ತಿದ್ದೇವೆ ಎಂದರು.

ಸದಾಶಿವ ಆಯೋಗದ ವರದಿ ಜಾರಿಗೆ ಸರ್ಕಾರ ಪ್ರಯತ್ನ ಕೈಗೊಂಡಿತ್ತು. ಆದರೆ, ಒಳಮೀಸಲಾತಿ ಜಾರಿ ಅಧಿಕಾರ ರಾಜ್ಯ ಸರ್ಕಾರಗಳಿಗೆ ಇಲ್ಲವೆಂಬ ತೀರ್ಪು ಅಡ್ಡಿಯಾಗಿತ್ತು. ಆದರೆ, ಸುಪ್ರೀಂ ಕೋರ್ಟ್ ಆಗಸ್ಟ್ 1, 2024ರಂದು ನೀಡಿದ ತೀರ್ಪು ಅಡ್ಡಿಗೆ ತೆರೆ ಎಳೆದಿದ್ದು, ಇದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿ ಎಲ್ಲರೂ ಸ್ವಾಗತಿಸಿದ್ದಾರೆ ಎಂದರು.

ಆಗಸ್ಟ್ 7ರಂದು ಸಚಿವ ಸಂಪುಟದಲ್ಲಿಯೇ ತೀರ್ಮಾನ ಕೈಗೊಳ್ಳಲು ವರದಿ
ಕುರಿತು ಸಚಿವರಿಗೆ ಮಾಹಿತಿ ದೊರೆಯಲಿ. 1700 ಪುಟಗಳ ವರದಿಯನ್ನು
ಅಧ್ಯಯನ ಮಾಡಲಿ ಎಂಬ ಕಾರಣಕ್ಕೆ ಪ್ರತಿಗಳನ್ನು ಕೊಡಲಾಗಿದೆ. ಬರುವ
ಆಗಸ್ಟ್ 16ರಂದು ವಿಶೇಷ ಸಚಿವ ಸಂಪುಟದ ಸಭೆ ಕರೆಯಲಾಗಿದ್ದು, ಈ ಸಭೆಯಲ್ಲಿ ಅಂತಿಮ ತೆರೆ ಎಳೆಯಲಾಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮೇ 5ರಿಂದ ಜುಲೈ 6ರ ವರೆಗೆ ಬರೋಬ್ಬರಿ 60 ದಿನಗಳ ಕಾಲ, ವಿವಿಧ ಹಂತಗಳಲ್ಲಿ ಯಾರೋಬ್ಬರೂ ಸಮೀಕ್ಷೆಯಿಂದ ಹೊರಗುಳಿಯದಂತೆ ಸಮೀಕ್ಷೆ
ನಡೆಸಲಾಗಿದ್ದು, ಬಳಿಕ ಸಮಗ್ರ ಅಧ್ಯಯನ ನಡೆಸಿ ಅತ್ಯಂತ, ಎಲ್ಲರೂ
ಮೆಚ್ಚುವ, ಸಂವಿಧಾನದ ಆಶಯದಂತೆ ಆಯೋಗವು ವರದಿ ಸಲ್ಲಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸರ್ಕಾರ ವರದಿ ಜಾರಿಗೆ ಉತ್ಸಾಹಕತೆ ಹೊಂದಿದೆ ಎಂದರು.

ಆದಿಆಂಧ್ರ, ಆದಿಕರ್ನಾಟಕ, ಆದಿದ್ರಾವಿಡ ಎಂದು ಕೆಲವರು ಗುರುತಿಸಿಕೊಂಡಿದ್ದು, ಅವರಿಗೆ ಶೇ.1 ಮೀಸಲಾತಿ ನೀಡಿರುವುದನ್ನು ಕೆಲವರು ವಿರೋಧಿಸುತ್ತಿದ್ದಾರೆ. ಆದರೆ, ಸಂವಿಧಾನತ್ಮಕವಾಗಿ ಎಎ, ಎಕೆ, ಎಡಿ ಎಂದು ಗುರುತಿಸಿಕೊಳ್ಳಲು ಹಕ್ಕು ನೀಡಲಾಗಿದೆ. ಆದ್ದರಿಂದ ಈ ಗುಂಪನ್ನು ಉಳಿಸಿಕೊಳ್ಳಬೇಕು. ಜೊತೆಗೆ ಅವರೆಲ್ಲರಿಗೂ ಗುರುತಿನ ಚೀಟಿ ನೀಡಿ ಶೇ.1ರ ಮೀಸಲಾತಿಯಡಿಯೇ ಸೌಲಭ್ಯ ಪಡೆಯಲು ಕ್ರಮಕೈಗೊಳ್ಳಬೇಕು. ಯಾವುದೇ ಕಾರಣಕ್ಕೂ ಛಲವಾದಿ, ಮಾದಿಗರ ಗುಂಪಿಗೆ ನುಸಳಲು ಅವಕಾಶ ನೀಡಬಾರದು ಎಂದು ತಿಳಿಸಿದರು.

ರಾಜ್ಯದಲ್ಲಿ ಮಾದಿಗರ ಸಂಖ್ಯೆಯಲ್ಲಿ ಹೆಚ್ಚು ಇರುವ ಜೊತೆಗೆ ಉದ್ಯೋಗ, ಶಿಕ್ಷಣ, ಆಸ್ತಿ ಗಳಿಸಿ, ಸಾಮಾಜಿಕ ಸ್ಥಾನದ ಸೇರಿ ವಿವಿಧ ಕ್ಷೇತ್ರದಲ್ಲಿ ಅತ್ಯಂತ
ಹಿಂದುಳಿದಿದ್ದಾರೆಂಬ ನಿಖರ ಮಾಹಿತಿ ಸಮೀಕ್ಷೆ ವೇಳೆ ದೊರೆತಿದೆ. ಆದ್ದರಿಂದ ಶೇ.6 ಮೀಸಲಾತಿ ನೀಡಲಾಗಿದೆ. ಇದು 7ಕ್ಕೆ ಏರಿಸಬೇಕಾಗಿತ್ತು. ಆದರೂ ನಾವುವರದಿಯನ್ನು ಸ್ವಾಗತಿಸಿದ್ದೇವೆ. ಆದರೆ, ಕೆಲವರು ಅನಗತ್ಯ ಗೊಂದಲ ಏರ್ಪಡಿಸುವ ಹುನ್ನಾರು ನಡೆಸುತ್ತಿದ್ದಾರೆ. ಇದಕ್ಕೆ ಸರ್ಕಾರ ಕಿವಿಕೊಡಬಾರದು ಎಂದು ಆಗ್ರಹಿಸಿದರು.

ಕೆಲವರು ಟೀಕೆ, ಆರೋಪ ಮಾಡಿದರೆ ಪ್ರಚಾರ ದೊರೆಯುತ್ತಿದೆವೆಂಬ ಕಾರಣಕ್ಕೆ ಅಪಸ್ವರ ಎತ್ತುತ್ತಿದ್ದಾರೆ. ಇಂತಹ ನಡೆಯಿಂದ ಸರ್ಕಾರದ ಮೇಲೆ ಯಾವುದೇ ರೀತಿ ಪ್ರಭಾವ ಬೀರಲು ಸಾಧ್ಯವಿಲ್ಲ ಎಂದರು.

ಲಿಡ್ಕರ್ ಮಾಜಿ ಅಧ್ಯಕ್ಷ ಓ.ಶಂಕರ್, ವಕೀಲರಾದ ಶರಣಪ್ಪ, ರವೀಂದ್ರ, ತಾಪಂ ಮಾಜಿ ಸದಸ್ಯ ಸಮರ್ಥರಾಯ, ಅನಿಲ್ ಕೋಟಿ, ಎಂ.ಜೆ.ಪ್ರಸನ್ನ ಇತರರಿದ್ದರು.

Views: 9

Leave a Reply

Your email address will not be published. Required fields are marked *