ಚಿತ್ರದುರ್ಗದಲ್ಲಿ ನಿವೃತ್ತ ಸರ್ಕಾರಿ ನೌಕರರ ಸಮಾವೇಶ: ಬೇಡಿಕೆಗಳ ಈಡೇರಿಕೆಗೆ ಸರ್ಕಾರಕ್ಕೆ ಕರೆ.

ಚಿತ್ರದುರ್ಗ ಆ. 29

ವರದಿ ಮತ್ತು ಪೋಟೋ ಸುರೇಶ್ ಪಟ್ಟಣ್

ನಿವೃತ್ತ ಸರ್ಕಾರಿ ನೌಕರರ ವಿವಿಧ ಬೇಡಿಕೆ ಈಡೇರಿಕೆಯಲ್ಲಿ ನಾವು ಸಹಾ ಭಾಗಿಯಾಗುವುದರ ಮೂಲಕ ನಿಮ್ಮ ಜೊತೆಯಲ್ಲಿ ನಾವು ಇದ್ದೇವೆ ಎಂಬುದನ್ನು ಮರೆಯಬೇಡಿ ನಿಮ್ಮ ಬೇಡಿಕೆಯ ಬಗ್ಗೆ ನಿಮ್ಮ ರಾಜ್ಯಾಧ್ಯಕ್ಷರ ಜೊತೆಯಲ್ಲಿ ನಾನು ಸಹಾ ಸಹಕಾರ ನೀಡುವುದಾಗಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಷಡಾಕ್ಷರಿ ಭರವಸೆಯನ್ನು ನೀಡಿದರು.

ಕರ್ನಾಟಕ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘದವತಿಯಿಂದ ಚಿತ್ರದುರ್ಗ ನಗರದ ವಿನಾಯಕ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಬೆಂಗಳೂರು ವಿಭಾಗ ಮಟ್ಟದ ಪದಾಧಿಕಾರಿಗಳ ಮತ್ತು ನಿವೃತ್ತ ನೌಕರರ ಹಾಗೂ ಕುಟುಂಬ ಪಿಂಚಿಣಿದಾರರ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, ನೀವು ಸಹಾ ಸರ್ಕಾರಿ ನೌಕರರಾಗಿ ಕೆಲಸವನ್ನು ಮಾಡುವ ಸಮಯದಲ್ಲಿ ನಿಮ್ಮ ಜ್ಞಾನವನ್ನು ಧಾರೆ ಎರೆಯಲಾಗಿದೆ, ಇದರಿಂದ ಸರ್ಕಾರ ಹಾಗೂ ಜನರಿಗೆ ಉಪಯೋಗವಾಗಿದೆ. ಈಗ ನೀವು ವಯೋ ನಿವೃತ್ತಿಯನ್ನು ಹೊಂದಿದ್ದಿರಾ ಆದರೂ ಸಹಾ ನಿಮ್ಮ ಅನುಭವ ಇಂದಿಗೂ ಸಹಾ ಅಗತ್ಯ ಇದೆ. ಸರ್ಕಾರ ಇದನ್ನು ಪರಿಗಣಿಸಿ ನಿಮ್ಮ ಸೇವೆಯನ್ನು ಮುಂದುವರೆಸಬಹುದಾಗಿದೆ ಎಂದರು.

ನೀವು ಸರ್ಕಾರದ ಸೇವೆಯಲ್ಲಿ ಉತ್ತಮವಾದ ಕೆಲಸವನ್ನು ಮಾಡುವುದರ ಮೂಲಕ ಜನಮನ್ನಣೆಯನ್ನು ಗಳಿಸಿದ್ದಾರ. ನೀವು ಮಾಡಿದ ಕೆಲಸದಿಂದ ಸರ್ಕಾರದಲ್ಲಿ ಉತ್ತಮವಾದ ಕಾರ್ಯಗಳು ಆಗಿದ್ದು, ವಿವಿಧ ಯೋಜನೆಗಳು ಶೀಘ್ರವಾಗಿ ಜಾರಿಯಾಗುವುದರಲ್ಲಿ ಯಶಸ್ವಿಯಾಗಿವೆ. ಈಗ ನೀವು ನಿವೃತ್ತಿಯಾಗಿದ್ದೀರಾ ಆದರೆ ನೀವು ನಾವು ಯಾವುದಕ್ಕೂ ಉಪಯೋಗ ಇಲ್ಲ ಎಂಬ ಮನೋಭಾವ ಬೇಡ ನಿವೃತ್ತಿ ಎನ್ನುವುದು ಬರೀ ವಯಸ್ಸಿಗೆ ಮಾತ್ರ ಆದರೆ ನಿಮ್ಮಲ್ಲಿ ಇನ್ನೂ ಸಹಾ ಉತ್ಸಾಹ ಇದೆ ಯಾವ ಕೆಲಸವನ್ನಾದರೂ ಮಾಡಲು ಸಿದ್ದರಿದ್ದೀರಾ, ಸರ್ಕಾರ ನಿಮ್ಮ ಸೇವೆಯನ್ನು ಪರಿಗಣಿಸಬೇಕಿದೆ ಇನ್ನೂ ನಿಮ್ಮ ಸೇವೆಯನ್ನು ಪಡೆಯುವುದರ ಮೂಲಕ ನಿಮ್ಮ ಅನುಭವ ಮತ್ತಷ್ಟು ಧಾರೆ ಎರೆಯಬೇಕಿದೆ ಎಂದು ಕರೆ ನೀಡಿದರು.ಸರ್ಕಾರ ಕೆಲಸದಲ್ಲಿ ಇರುವವರಿಗೆ ಕಾಲ ಕಾಲಕ್ಕೆ ತಕ್ಕಂತೆ ವಿವಿಧ ರೀತಿಯ ಸೌಲಭ್ಯಗಳನ್ನು ನೀಡುತ್ತಿದೆ.

ನಿಮ್ಮ ದೇಹಕ್ಕೆ ಮಾತ್ರ ವಯಸ್ಸಾಗಿದೆ ಆದರೆ ನಿಮ್ಮ ಅನುಭವ ಮಾತ್ರ ಆಗಾಧವಾಗಿದೆ, ಇದರ ಪ್ರಯೋಜನ ಇನ್ನೂ ಆಗಬೇಕಿದೆ. 60 ಎನ್ನುವುದು ಬರೀ ಸಂಖ್ಯೆ ಮಾತ್ರ ಆದರೆ ನಿಮ್ಮ ಅನುಭವ ಮಾತ್ರ ಹೆಚ್ಚಾಗಿದೆ. ನಿವೃತ್ತಿ ನಂತರ ನನ್ನ ಕೈಯಲ್ಲಿ ಏನು ಆಗುವುದಿಲ್ಲ ಎಂಬ ಅಭಿಪ್ರಾಯ ತಪ್ಪು ಸರ್ಕಾರ ನಿಮ್ಮ ಬೇಡಿಕೆಯನ್ನು ಈಡೇರಿಸುವಲ್ಲಿ ನಮ್ಮ ಸರ್ಕಾರಿ ನೌಕರರ ಸಂಘವೂ ಸಹಾ ಜೊತೆಯಲ್ಲಿ ಇರುವುದರ ಮೂಲಕ ಸಹಕಾರ ವನ್ನು ನೀಡಲಾಗುವುದು ಎಂದ ಅವರು ನಿಮ್ಮಂತ ಸರ್ಕಾರಿ ನೌಕರರ ಅನುಭವ ಸರ್ಕಾರಕ್ಕೆ ಅಗತ್ಯವಾಗಿದೆ ಇದನ್ನು ಸರ್ಕಾರ ಬಳಕೆ ಮಾಡಿಕೊಳ್ಳಬೇಕಿದೆ ಎಂದು ಷಡಾಕ್ಷರಿ ತಿಳಿ ಹೇಳಿದರು.ಕರ್ನಾಟಕ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘಅಧ್ಯಕ್ಷ ಡಾ.ಎಲ್.ಬೈರಪ್ಪ ಮಾತನಾಡಿ, ಕರ್ನಾಟಕ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘವು ಸ್ಥಾಪನೆಗೊಂಡು ಸುಮಾರು 65ವರ್ಷಗಳು ಕಳೆದಿವೆ.

ನಿವೃತ್ತ ನೌಕರರು ರಾಜ್ಯದ ವಿವಿಧ ಇಲಾಖೆಗಳಲ್ಲಿ ಸುದೀರ್ಘ ಸೇವೆಯನ್ನು ಸಲ್ಲಿಸಿ ನಿವೃತ್ತಿ ಹೊಂದಿರುತ್ತಾರೆ. ರಾಜ್ಯದಲ್ಲಿ ಸುಮಾರು 4 ಲಕ್ಷ 20ಸಾವಿರ ನಿವೃತ್ತಿ ನೌಕರರು 1 ಲಕ್ಷ ಕುಟುಂಬ ಪಿಂಚಣಿದಾರರಿದ್ದಾರೆ. ಇವರಿಗೆ ಪ್ರಮುಖವಾಗಿ ಆರೋಗ್ಯ ಕಾಪಾಡಿಕೊಳ್ಳುವುದು ಆದ್ಯ ಕರ್ತವ್ಯ. ಇದರ ಹಿನ್ನೆಲೆಯಲ್ಲಿ “ನಗದು ರಹಿತ ಆರೋಗ್ಯ ಭಾಗ್ಯ ಅಂದರೆ, “ಸಂಧ್ಯಾ ಕಿರಣ” ಯೋಜನೆಯನ್ನು ಅನುಷ್ಟಾನಗೊಳಿಸಬೇಕೆಂದು ಸರ್ಕಾರದ ಜೊತೆಯಲ್ಲಿ ಸಾಕಷ್ಟು ಚರ್ಚೆಯಾಗಿದೆ. ಆದರೆ ಇದುವರೆವಿಗೂ ಸರ್ಕಾರ ಅನುಷ್ಟಾನ ಮಾಡಿರುವುದಿಲ್ಲ ಆದುದರಿಂದ ಸರ್ಕಾರವು ಕೂಡಲೇ ಜಾರಿಗೊಳಿಸಬೇಕೆಂದು ಅಗ್ರಹಪಡಿಸಿದರು.

7ನೇ ವೇತನ ಆಯೋಗವು ತನ್ನ ವರದಿಯಲ್ಲಿ ಸರ್ಕಾರಿ ನಿವೃತ್ತಿ ನೌಕರರಿಗೆ ಹಾಗೂ ಕುಟುಂಬ ಪಿಂಚಣಿದಾರರಿಗೆ 70 ವರ್ಷದ ಮೇಲ್ಪಟ್ಟು 80 ವರ್ಷದೊಳಗಿನ ವಯೋಮೀತಿ ಮೀರಿದವರಿಗೆ ಶೇ.10%ರಷ್ಟು ಮೂಲ ಪಿಂಚಣಿಯಲ್ಲಿ ಆರ್ಥಿಕ ಸೌಲಭ್ಯವನ್ನು ನೀಡಬೇಕೆಂದು ತನ್ನ ಸರ್ಕಾರವು ಕೂಡಲೇ ವರದಿಯಲ್ಲಿ ಸರ್ಕಾರಕ್ಕೆ ಶಿಫಾರಸ್ಸು ಮಾಡಿರುತ್ತದೆ. ಇದನ್ನು ಅನುಷ್ಟಾನಗೊಳಿಸಬೇಕಿದೆ. ರಾಜ್ಯ ಸರ್ಕಾರಿ ನಿವೃತ್ತಿ ನೌಕರರು ಹಾಗೂ ಕುಟುಂಬ ಪಿಂಚಣಿದಾರರು ನಿಧನ ಹೊಂದಿದ ಸಂಧರ್ಭದಲ್ಲಿ ಅಂತಹ ಪ್ರಕರಣಗಳಿಗೆ ಅಂತಿಮ ವಿಧಿ ವಿಧಾನಗಳ ವೆಚ್ಚಗಳನ್ನು ನಿರ್ವಹಿಸುವುದಕ್ಕಾಗಿ ಈಗಾಗಲೇ ಸರ್ಕಾರಿ ನೌಕರರಿಗೆ ಸುಮಾರು ವರ್ಷಗಳಿಂದ ರೂ.25,000/-ಗಳನ್ನು ನೀಡುತ್ತದೆ. ಅದೇ ಮಾದರಿಯಲ್ಲಿ 7ನೇ ವೇತನ ಆಯೋಗವು ತನ್ನ ವರದಿಯಲ್ಲಿ ನಿವೃತ್ತ ನೌಕರರು ಹಾಗೂ ಕುಟುಂಬ ಪಿಂಚಣಿದಾರರು ನಿಧನ ಹೊಂದಿದ ಸಂಧರ್ಭದಲ್ಲಿ ರೂ.10,000/ಗಳನ್ನು ಸಂಬಂಧಪಟ್ಟ ವಾರಸುದಾರರಿಗೆ ನೀಡಬೇಕೆಂದು ಆಗ್ರಹಿಸಿದರು.

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷರಾದ ಮಾಲತೇಶ್ ಮುದ್ದಜ್ಜಿ ಮಾತನಾಡಿ, ನಿಮ್ಮ ಬೇಡಿಕೆ ಈಡೇರಿಕೆಗೆ ಇಂತಹ ಸಮಾವೇಶಗಳು ಅಗತ್ಯ ಇದೆ. ಇದಕ್ಕೆ ಬೇಕಾದ ಸಹಕಾರವನ್ನು ಸಹಾ ನೀಡಲಾಗುವುದು, ನಿಮ್ಮ ಮಾರ್ಗದರ್ಶನ ನಮಗೆ ಅಗತ್ಯವಾಗಿದೆ. ನಿಮ್ಮ ದಾರಿಯಲ್ಲಿ ನಾವುಗಳು ನಡೆಯಲಾಗುತ್ತದೆ. ಸಮಾಜದ ಅಭೀವೃದ್ದಿಯಲ್ಲಿ ನಿಮ್ಮ ಪಾತ್ರ ಹೆಚ್ಚಾಗಿದೆ. ನಿಮಗೆ ಅವಕಾಶ ಸಿಕ್ಕರೆ ಇನ್ನೂ ಸಹಾ ಸರ್ಕಾರಿ ಕೆಲಸ ಮಾಡಲು ಸಿದ್ದರಿದೀರಾ, ನಿಮ್ಮಲ್ಲಿನ ಕಲೆ, ಸಾಹಿತ್ಯ, ಸಂಸ್ಕøತಿಯನ್ನು ಮುಂದಿನ ಪೀಳಿಗೆಗೆ ತಿಳಿಸಬೇಕಿದೆ ಎಂದರು.

ಸಮಾವೇಶದ ಅಧ್ಯಕ್ಷತೆಯನ್ನು ವಹಿಸಿದ್ದ ಕರ್ನಾಟಕ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘದ ಚಿತ್ರದುರ್ಗ ಜಿಲ್ಲಾ ಘಟಕದ ಅಧ್ಯಕ್ಷರಾದ ಬಿ.ಪಿ.ಪ್ರೇಮನಾಥ್ ಮಾತನಾಡಿ, ನಮ್ಮ ಬೇಡಿಕೆ ಈಡೇರುವ ಸಲುವಾಗಿ ಸಂಘಟನೆ ಅಗತ್ಯವಿದೆ. ನಮ್ಮ ಕಷ್ಟ ಸುಖಗಳನ್ನು ಸರ್ಕಾರ ಆಲಿಸುತ್ತಿಲ್ಲ, ಇದರ ಬಗ್ಗೆ ಹೋರಾಟವನ್ನು ಮಾಡಬೇಕಿದೆ. ಸಂಘವನ್ನು ಬಲಗೊಳಿಸಬೇಕಿದೆ. ಇದಕ್ಕೆ ಭೈರಪ್ಪ ರವರ ಕೈಯನ್ನು ಬಲಪಡಿಸಬೇಕಿದೆ ಇದಕ್ಕೆ ನಿಮ್ಮಲ್ಲರ ಸಹಕಾರ ಅಗತ್ಯ ಇದೆ ಎಂದರು.

ಸಮಾವೇಶದಲ್ಲಿ ತುಮಕೂರು ನಿವೃತ್ತ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಕುಮಾರಿ ರಮಾಕುಮಾರಿ, ನಿಕಟ ಪೂರ್ವ ಅಧ್ಯಕ್ಷರಾದ ರಂಗಪ್ಪ ರೆಡ್ಡಿ, ಗೌರವಾಧ್ಯಕ್ಷರಾದ ವೈ.ಚಂದ್ರಶೇಖರ್, ಕಾರ್ಯಾಧ್ಯಕ್ಷರಾದ ಶಿವಾನಂದಪ್ಪ, ನಾಗರಾಜ್ ಸೇರಿದಂತೆ ಬೆಂಗಳೂರು ವಿಭಾಗ ಮಟ್ಟದ 8 ಜಿಲ್ಲೆಗಳ 51 ತಾಲ್ಲೂಕುಗಳಲ್ಲಿನ ಸಂಘದ ಪದಾಧಿಕಾರಿಗಳು, ನಿವೃತ್ತ ನೌಕರರು ಸಮಾವೇಶದಲ್ಲಿ ಭಾಗವಹಿಸಿದ್ದರು. ನಿವೃತ್ತ ಸರ್ಕಾರಿ ನೌಕರರ ಸಂಘದ ಜಂಟಿ ಕಾರ್ಯದರ್ಶಿ ನಾಗೇಂದ್ರಪ್ಪ ಪ್ರಾರ್ಥಿಸಿದರೆ, ಜಿಲ್ಲಾ ಪ್ರಧಾನ ಕಾಯದರ್ಶಿ ತಿಮ್ಮಪ್ಪ ಸ್ವಾಗತಿದರು, ಖಂಜಾಚಿ ಆನಂದಪ್ಪ, ಪ್ರಧಾನ ಕಾರ್ಯದರ್ಶಿ ರಂಗೇಗೌಡ ಪ್ರಸ್ತಾವಿಕವಾಗಿ ಮಾತನಾಡಿದರು, ಸಾಂಸ್ಕøತಿಕ ಕಾರ್ಯದರ್ಶಿ ಜ್ಞಾನಮೂರ್ತಿ ವಂದಿಸಿದರು.

Views: 32

Leave a Reply

Your email address will not be published. Required fields are marked *