ಚಿತ್ರದುರ್ಗಸೆ. 17
ಪೋಟೋ ಮತ್ತು ವರದಿ ಸುರೇಶ್ ಪಟ್ಟಣ್
ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು 2014ರಲ್ಲಿ ಪ್ರತಿ ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇನೆಂದು ಈ ದೇಶದ ಯುವಕರಿಗೆ ಆಶ್ವಾಸನೆ ನೀಡಿ, ಪ್ರಧಾನಿ ಪಟ್ಟಕ್ಕೇರಿ ದೇಶದ ಯುವಕರಿಗೆ ಹಾಗೂ ನಿರುದ್ಯೋಗಿಗಳಿಗೆ ಅನ್ಯಾಯ ಮಾಡಿದ್ದಾರೆ ಎಂದು ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಕಾರೇಹಳ್ಳಿ ಉಲ್ಲಾಸ್ ಕಿಡಿ ಕಾರಿದರು.
ನಗರದ ಕಾಂಗ್ರೆಸ್ ಕಚೇರಿಯ ಮುಂಭಾಗ ಕಾರ್ಯಕರ್ತರ ಜೊತೆ ಸೇರಿಕೊಂಡು ಪಕೋಡ ಮಾಡಿ ಮಾರಾಟ ಮಾಡುವ ಮೂಲಕ ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಮಾತನಾಡಿ, ಮೋದಿ ಹೇಳಿದಂತೆ ಪ್ರತಿ ವರ್ಷ 2 ಕೋಟಿ ಅಂದರೇ, 11 ವರ್ಷಕ್ಕೆ 22 ಕೋಟಿ ಉದ್ಯೋಗಗಳು ಸೃಷ್ಟಿಯಾಗಿದ್ದರೇ, ನಮ್ಮ ದೇಶ ಚೈನಾ, ಅಮೆರಿಕಾ ದೇಶಗಳನ್ನು ಮೀರಿಸುವ ವೇಗದಲ್ಲಿ ಅಭಿವೃದ್ಧಿ ಹೊಂದುತ್ತಿತ್ತು ಆದರೆ ಇದುವರೆಗೂ ಅದು ಆಗಿಲ್ಲ.
ಹಾಗಾಗಿ ಈ ವಿಷಯವನ್ನು ಚಿತ್ರದುರ್ಗ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ಗಂಭೀರವಾಗಿ ಪರಿಗಣಿಸಿ, ದೇಶದ ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನವನ್ನು ನಿರುದ್ಯೋಗಿಗಳ ದಿನಾಚರಣೆಯನ್ನಾಗಿ ಪ್ರತಿ ವರ್ಷದಂತೆ ಈ ವರ್ಷವು “ನೌಕರಿ ಚೋರ್-ಗದ್ದಿ ಜೋಡ್” ಎನ್ನುವ ಘೋಷವಾಕ್ಯದ ಮೂಲಕ ಪಕೋಡ ತಯಾರಿಸಿ ಮಾರುವುದರ ಮೂಲಕ ನಿರುದ್ಯೋಗಿಗಳ ವಾಸ್ತವಿಕ ಪರಿಸ್ಥಿತಿಯನ್ನು ನರೇಂದ್ರ ಮೋದಿಯವರೇ ಪಕೋಡ ಮಾಡುವಂತೆ ಯುವಕರಿಗೆ ಕರೆ ಕೊಟ್ಟಿರುವುದನ್ನು ನೆನಪಿಸುತ್ತಿದ್ದೇವೆ ಎಂದು ಹೇಳಿದರು.
ಕೇಂದ್ರದ ಬಿಜೆಪಿ ನೇತೃತ್ವದ ಸರ್ಕಾರ ಹಾಗೂ ನರೇಂದ್ರ ಮೋದಿಯವರಿಗೆ ಧಿಕ್ಕಾರ ಹೇಳುವುದರ ಮೂಲಕ ನಿರುದ್ಯೋಗಿಗಳ ದಿನಾಚರಣೆಯನ್ನು ಜಿಲ್ಲೆಯಲ್ಲಿ ಪದವಿ ಪಡೆದ ನಿರುದ್ಯೋಗಿ ಯುವಕರೊಂದಿಗೆ ಆಚರಿಸುತ್ತಾ ಈಗಲಾದರೂ ಕೇಂದ್ರ ಸರ್ಕಾರ ಗಾಢ ನಿದ್ದೆಯಿಂದ ಎದ್ದು ವಿದ್ಯಾವಂತ ಪದವೀದರ ನಿರುದ್ಯೋಗಿಗಳಿಗೆ ಉದ್ಯೋಗಾವಕಾಶವನ್ನು ಸೃಷ್ಟಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಲಿ. ಇಲ್ಲವಾದರೇ ಮುಂಬರುವ 2029 ರ ಲೋಕಸಭಾ ಚುನಾವಣೆಯಲ್ಲಿ ಸೋತು ಸ್ವತಃ ಪಕೋಡ ಮಾಡುವ ಪರಿಸ್ಥಿತಿ ಅವರಿಗೇ ನಿರ್ಮಾಣವಾಗಲಿರುವುದು ಶತಸಿದ್ದ ಎಂದು ಎಚ್ಚರಿಕೆ ನೀಡಲಾಗಿದೆ ಎಂದರು.
ಈ ಸಂದರ್ಭದಲ್ಲಿ ಡಿಸಿಸಿ ಅಧ್ಯಕ್ಷರಾದ ತಾಜ್‍ಪೀರ್, ಮುದಾಸಿರ್ ಓಬಿಸಿ ಅಧ್ಯಕ್ಷ ಎನ್.ಡಿ.ಕುಮಾರ್, ಪದವೀಧರ ಘಟಕದ ಮುದಸಿರ್, ಯುವ ಘಟಕದ ದಾದಪೀರ್, ವಿನಯ ಪ್ರಸಾದ್, ಪ್ರದೀಪ್ ಗೌಡ, ಪವನ ನಾಯ್ಕ್, ಮಹಾಂತೇಶ್, ವೈಶಾಖ, ಇಂಜಿಮಾವತಿ, ನಿಜಾಮ್, ಮಧು ಶ್ರೀನಿವಾಸ್, ಯಸೀನ ಸೇರಿದಂತೆ ಜಿಲ್ಲಾ ಯುವ ಕಾಂಗ್ರೆಸ್ ಮುಖಂಡರು, ಪದಾಧಿಕಾರಿಗಳು, ಪಕ್ಷದ ಕಾರ್ಯಕರ್ತರು ಭಾಗವಹಿಸಿದ್ದರು.
Views: 31