‘ಕಾಂತಾರ: ಚಾಪ್ಟರ್ 1’ ಟ್ರೇಲರ್ ಬಿಡುಗಡೆಯ ನಡುವೆ ಫೇಕ್ ಪೋಸ್ಟರ್ ಗಾಸಿಪ್ – ರಿಷಬ್ ಶೆಟ್ಟಿ ರಿಯಾಕ್ಷನ್

ಬಿಡುಗಡೆಗೂ ಮುನ್ನವೇ ‘ಕಾಂತಾರ: ಚಾಪ್ಟರ್ 1’ (Kantara Chapter 1) ಸಿನಿಮಾ ಸೆನ್ಸೇಷನ್ ಸೃಷ್ಟಿ ಮಾಡಿದೆ. ಚಿತ್ರತಂಡದ ಪ್ಲ್ಯಾನ್ ಪ್ರಕಾರವೇ ಪ್ರಚಾರ ಕಾರ್ಯ ನಡೆಯುತ್ತಿದೆ. ಇಂದು (ಸೆ.22) ಈ ಸಿನಿಮಾದ ಟ್ರೇಲರ್ (Kantara Chapter 1 Trailer) ಬಿಡುಗಡೆ ಆಗಿದೆ.

ಸಿನಿಮಾ ಮೇಲಿನ ನಿರೀಕ್ಷೆಯನ್ನು ಡಬಲ್ ಮಾಡುವಲ್ಲಿ ಈ ಟ್ರೇಲರ್ ಯಶಸ್ವಿಯಾಗಿದೆ. ಬಳಿಕ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ಮಾಡಲಾಯಿತು. ಈ ವೇಳೆ ಚಿತ್ರತಂಡಕ್ಕೆ ಒಂದು ಪ್ರಮುಖ ಪ್ರಶ್ನೆ ಎದುರಾಯಿತು. ‘ಈ ಸಿನಿಮಾ ನೋಡುವವರು ಮಾಂಸಾಹಾರ ತಿನ್ನಬಾರದು’ ಎಂದು ಕೆಲವರು ನಕಲಿ ಪೋಸ್ಟರ್ ವೈರಲ್ ಮಾಡಿದ್ದರು. ಅದಕ್ಕೆ ರಿಷಬ್ ಶೆಟ್ಟಿ (Rishab Shetty) ಅವರು ಉತ್ತರ ನೀಡಿದರು.

ಸೋಶಿಯಲ್ ಮೀಡಿಯಾದಲ್ಲಿ ಇತ್ತೀಚೆಗೆ ಒಂದು ಫೇಕ್ ಪೋಸ್ಟರ್ ಹರಿದಾಡಿತ್ತು. ಅದರಲ್ಲಿ ಪ್ರಸ್ತಾಪಿಸಲಾಗಿದ್ದ ವಿಷಯಗಳ ಸಖತ್ ಚರ್ಚೆ ಹುಟ್ಟುಹಾಕಿದ್ದವು. ಅಲ್ಲದೇ ವಿವಾದಕ್ಕೂ ಕಾರಣ ಆಗುವಂತಿದ್ದವು. ‘ಕಾಂತಾರ ಸಿನಿಮಾ ನೋಡಲು ಬರುವವರು ಮದ್ಯಪಾನ ಮಾಡಬಾರದು, ಧೂಮಪಾನ ಮಾಡಬಾರದು ಹಾಗೂ ಮಾಂಸಾಹಾರ ಸೇವಿಸಬಾರದು’ ಎಂದು ಆ ಪೋಸ್ಟರ್​​ನಲ್ಲಿ ಬರೆಯಲಾಗಿತ್ತು.

ಅದು ಫೇಕ್ ಪೋಸ್ಟರ್ ಎಂದು ರಿಷಬ್ ಶೆಟ್ಟಿ ಅವರು ಸ್ಪಷ್ಟಪಡಿಸಿದ್ದಾರೆ. ‘ಊಟೋಪಚಾರಗಳನ್ನು, ಅವರವರ ಅಭ್ಯಾಸಗಳನ್ನು ಪ್ರಶ್ನಿಸೋಕೆ ಯಾರಿಗೂ ಅಧಿಕಾರ ಇರಲ್ಲ. ಅದೆಲ್ಲ ಅವರವರ ಸ್ವಂತ ವಿವೇಚನೆಗೆ ಬಿಟ್ಟಂತಹ ವಿಚಾರಗಳು. ಯಾರೋ ಫೇಕ್ ಪೋಸ್ಟರ್ ಹಾಕಿದ್ದಾರೆ. ಅದರ ಬಗ್ಗೆ ನಮ್ಮ ಗಮನಕ್ಕೂ ಬಂದಿದೆ. ಬಂದ ಕೂಡಲೇ ನಾವು ಅಲ್ಲಿಯೇ ಹೋಗಿ ಪ್ರತಿಕ್ರಿಯೆ ನೀಡುವುದು ಕಷ್ಟ ಆಗುತ್ತದೆ. ಆದರೆ ಆ ಪೋಸ್ಟರ್​ ಅನ್ನು ಅವರು ತೆಗೆದು ಹಾಕಿ ಕ್ಷಮೆ ಕೇಳಿದ್ದಾರೆ’ ಎಂದು ರಿಷಬ್ ಶೆಟ್ಟಿ ಹೇಳಿದ್ದಾರೆ.

‘ಆ ಪೋಸ್ಟರ್ ನಮ್ಮ ಪ್ರೊಡಕ್ಷನ್ ಹೌಸ್​​ಗೆ ಯಾವುದೇ ರೀತಿಯ ಸಂಬಂಧ ಇರುವಂಥದ್ದಲ್ಲ. ಅದನ್ನು ನೋಡಿದಾಗ ನಮಗೆ ಶಾಕ್ ಆಯಿತು. ನನಗೆ ಯಾರೋ ಕಳಿಸಿದರು. ನಾನು ಕೂಡಲೇ ಪ್ರೊಡಕ್ಷನ್ ಗ್ರೂಪಿನಲ್ಲಿ ಹಾಕಿದೆ. ಇದನ್ನು ಯಾರು ಮಾಡುತ್ತಿದ್ದಾರೆ? ಯಾಕೆ ಮಾಡುತ್ತಿದ್ದಾರೆ? ಜನರು ಇದರ ಬಗ್ಗೆ ಏನು ಅಂದುಕೊಳ್ಳುತ್ತಾರೆ ಅಂತ ಪ್ರಶ್ನಿಸಿದೆ’ ಎಂದಿದ್ದಾರೆ ರಿಷಬ್ ಶೆಟ್ಟಿ.

‘ಬದುಕಿನ ಶೈಲಿ ಪ್ರತಿಯೊಬ್ಬನಿಗೂ ಅವನವನಿಗೆ ಬಿಟ್ಟಿದ್ದು. ಅದನ್ನು ಪ್ರಶ್ನಿಸುವಂತಹ ಅಧಿಕಾರ ಯಾರಿಗೂ ಇಲ್ಲ. ಒಂದು ಸಿನಿಮಾ ಟ್ರೆಂಡ್ ಆಗಿ, ನರೇಟಿವ್ ಸೆಟ್ ಆಗುವಾಗ ಅದರಲ್ಲಿ ತಮ್ಮ ವಿಚಾರವನ್ನು ತೆಗೆದುಕೊಂಡು ಬಂದರೆ ಜನಪ್ರಿಯತೆ ಸಿಗುತ್ತದೆ ಎಂಬ ಕಾರಣಕ್ಕೆ ಕೆಲವರಿಂದ ಈ ರೀತಿ ಆಗುತ್ತದೆ. ಇದು ಕೂಡ ಅಂಥದ್ದೇ. ಅದಕ್ಕೂ ಪ್ರೊಡಕ್ಷನ್​ ಹೌಸ್​​ಗೂ ಸಂಬಂಧ ಇಲ್ಲ’ ಎಂದು ರಿಷಬ್ ಶೆಟ್ಟಿ ಅವರು ಸ್ಪಷ್ಟನೆ ನೀಡಿದ್ದಾರೆ.

Views: 10

Leave a Reply

Your email address will not be published. Required fields are marked *