ಕರ್ನಾಟಕ ಹಿಂದುಳಿದ ವರ್ಗಗಳ ಸಮೀಕ್ಷೆ: ಹೈಕೋರ್ಟ್‌ನಲ್ಲಿ ಮುಂದುವರೆದ ವಿಚಾರಣೆ.

ಸೆಪ್ಟೆಂಬರ್ 24: ಹಿಂದುಳಿದ ವರ್ಗಗಳ ಶಾಶ್ವತ ಆಯೋಗದಿಂದ ನಡೆಸಲಾಗುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಪ್ರಶ್ನಿಸಲಾದ ಅರ್ಜಿಗಳ ವಿಚಾರಣೆ ಬುಧವಾರವೂ ಅಪೂರ್ಣಗೊಂಡಿದ್ದು, ಗುರುವಾರ ಪುನಃ ಮುಂದುವರಿಯಲಿದೆ.


ಮುಖ್ಯಾಂಶಗಳು…

ಸಮೀಕ್ಷೆಗೆ ಈಗಾಗಲೇ ₹20.31 ಕೋಟಿ ವ್ಯಯಿಸಲಾಗಿದೆ-ಆಯೋಗ

ಸಮೀಕ್ಷೆ ನಡೆಸುವವರ ಸಂಬಳಕ್ಕೆ ₹350 ಕೋಟಿ

ಸಮೀಕ್ಷೆ ಮಾಡುವವರಿಗೆ ಪ್ರತಿ ಮನೆಗೆ ₹100

ಸರ್ಕಾರದ ನಡೆಯನ್ನು ಪ್ರಶ್ನಿಸಿ, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಎಸ್.ರಘುನಾಥ್‌, ಅಖಿಲ ಭಾರತ ವೀರಶೈವ ಮಹಾಸಭೆಯ ಬಿ.ಆರ್.ಉದಯಶಂಕರ್‌ ಸೇರಿದಂತೆ 9 ಜನರು, ರಾಜ್ಯ ಒಕ್ಕಲಿಗರ ಸಂಘ ಮತ್ತು ಕೆ.ಎನ್‌.ಸುಬ್ಬಾರೆಡ್ಡಿ ಸೇರಿದಂತೆ ನಾಲ್ವರು ಸಲ್ಲಿಸಿರುವ ಪ್ರತ್ಯೇಕ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ನೇತೃತ್ವದ ವಿಭಾಗೀಯ ನ್ಯಾಯಪೀಠ ಬುಧವಾರ ಮುಂದುವರಿಸಿತು.
ರಾಜ್ಯ ಸರ್ಕಾರದ ಪರ ವಾದ ಮುಂದುವರಿಸಿದ ಸುಪ್ರೀಂ ಕೋರ್ಟ್‌ನ ಪದಾಂಕಿತ ಹಿರಿಯ ವಕೀಲ ಅಭಿಷೇಕ್‌ ಮನು ಸಿಂಘ್ವಿ, ‘ಅರ್ಜಿದಾರರು, ಸಂವಿಧಾನದ 342 ಎ(3)ನೇ ವಿಧಿಯನ್ನು ಪ್ರಶ್ನಿಸಿಲ್ಲ. ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಕಾಯ್ದೆ-1995ರ ಕಲಂ 9 ಮತ್ತು 11ಕ್ಕೆ ತಡೆ ನೀಡುವಂತೆಯೂ ಕೋರಿಲ್ಲ. ಸಮೀಕ್ಷೆಯಲ್ಲಿ ಯಾವ ತಪ್ಪಿದೆ ಎಂಬುದನ್ನು ಸಹಾ ಕಾಣಿಸಿಲ್ಲ. ಹೀಗಾಗಿ, ಸಮೀಕ್ಷೆಗೆ ಮಧ್ಯಂತರ ತಡೆ ನೀಡಬಾರದು’ ಎಂದು ಮನವಿ ಮಾಡಿದರು.


‘ಕೇಂದ್ರ ಸರ್ಕಾರ ಜಾತಿ ಗಣತಿ ನಡೆಸಲು ಐದಾರು ವರ್ಷಗಳೇ ಬೇಕಾಗಬಹುದು. ಅಲ್ಲಿಯವರೆಗೆ ರಾಜ್ಯಗಳು ಜಾತಿಗಳ ಸಮೀಕ್ಷೆ ನಡೆಸಬಾರದು ಎಂದೇನಿಲ್ಲ. ಹಿಂದುಳಿದ ಜನರಿಗೆ ಸವಲತ್ತು ನೀಡಲು ಈ ಸಮೀಕ್ಷೆ ನಡೆಸಲಾಗುತ್ತಿದೆ. ಇದಕ್ಕಾಗಿ ಮಾಹಿತಿಗಳನ್ನು ಸಂಗ್ರಹಿಸುವುದು ಹಕ್ಕಿನ ಉಲ್ಲಂಘನೆಯಾಗುವುದಿಲ್ಲ. ಜಾತಿವಾರು ಅಂಕಿ ಅಂಶಗಳನ್ನು ಸಂಗ್ರಹಿಸದೇ ಯೋಜನೆಗಳನ್ನು ರೂಪಿಸಲು ಸಾಧ್ಯವಿಲ್ಲ. ಅಂಕಿ ಅಂಶಗಳನ್ನು ಸಂಗ್ರಹಿಸುವ ಮುನ್ನವೇ ತಪ್ಪು ಹುಡುಕಲಾಗದು. ಸಮೀಕ್ಷೆ ನಡೆದ ಬಳಿಕ ಅದರಲ್ಲಿ ಲೋಪವಿದ್ದರೆ ಪ್ರಶ್ನಿಸಲಿ. ಆದರೆ, ಸಮೀಕ್ಷೆಯ ಆರಂಭಕ್ಕೂ ಮೊದಲೇ ಪ್ರಶ್ನಿಸಲಾಗಿದೆ’ ಎಂದು ಪ್ರತಿಪಾದಿಸಿದರು.


ಹಿಂದುಳಿದ ವರ್ಗಗಳ ಆಯೋಗದ ಪರ ಪದಾಂಕಿತ ಹಿರಿಯ ವಕೀಲ ರವಿವರ್ಮ ಕುಮಾರ್, ‘ಸಮೀಕ್ಷೆಯ ಅನುಕೂಲಕ್ಕಾಗಿ ಮಾತ್ರವೇ 1,561 ಜಾತಿಗಳನ್ನು ಗುರುತಿಸಲಾಗಿದೆ. ನಮ್ಮ ಜಾತಿ ಸೇರಿಸಿಲ್ಲವೆಂಬ ಕೆಲವರ ಮನವಿ ಮೇರೆಗೆ ಹೊಸ ಜಾತಿಗಳನ್ನು ಸೇರ್ಪಡೆ ಮಾಡಲಾಗಿದೆ. ಸಮಾಲೋಚನೆ ನಡೆಸಿ ಈ ಮನವಿಗಳನ್ನು ಪರಿಗಣಿಸಲಾಗಿದೆ. ಸಮೀಕ್ಷೆಯಲ್ಲಿ ಜನರು ಹೇಳುವ ಜಾತಿಗಳನ್ನು ನಮೂದಿಸಿಕೊಳ್ಳುತ್ತೇವೆ’ ಎಂದರು.

‘ವ್ಯಕ್ತಿಯ ಗುರುತಿಗಾಗಿ ಮಾತ್ರವೇ ಆಧಾರ್ ನಂಬರ್ ಪಡೆಯಲಾಗುತ್ತಿದೆ. ಬೇರೆ ರಾಜ್ಯದವರನ್ನು ಪರಿಗಣಿಸದೇ ಇರಲು ಈ ಆಧಾರ್ ಸಂಖ್ಯೆ ಸಹಾಯವಾಗುತ್ತದೆ. ಅರವತ್ತೂ ಪ್ರಶ್ನೆಗಳಿಗೆ ಉತ್ತರಿಸುವಂತೆ ಯಾರನ್ನೂ ಒತ್ತಾಯ ಮಾಡುವುದಿಲ್ಲ. ಮಾಹಿತಿ ನಿರಾಕರಿಸಲಾಗಿದೆ ಎಂಬುದನ್ನು ನಮೂದಿಸಲು ಕಾಲಂ 10ರಲ್ಲಿ ಅವಕಾಶ ಮಾಡಿಕೊಡಲಾಗಿದೆ. ನೀಡುವ ಉತ್ತರವನ್ನಷ್ಟೇ ಬರೆದುಕೊಳ್ಳಲು ಸೂಚಿಸಲಾಗಿದೆ’ ಎಂದು ಸ್ಪಷ್ಟಪಡಿಸಿದರು.


‘ಸಾಮಾಜಿಕ, ಆರ್ಥಿಕ ಸರ್ವೆಗಳನ್ನು 1918ರಿಂದಲೂ ನಡೆಸಿಕೊಂಡು ಬರಲಾಗಿದೆ. ಬ್ರಿಟಿಷರ ಕಾಲದಲ್ಲೂ ಮಿಲ್ಲರ್ ಸಮಿತಿ ವರದಿ ನೀಡಿದೆ. ಈಗಿನ ಸಮೀಕ್ಷೆಯಲ್ಲಿ 2 ಕೋಟಿ ಮನೆಗಳ ವಿದ್ಯುತ್‌ ಮೀಟರ್‌ಗಳಿಗೆ ಜಿಯೋ ಟ್ಯಾಗ್ ಮಾಡಲಾಗಿದೆ. ಇದಕ್ಕಾಗಿ ಮಾತ್ರವೇ ಮೀಟರ್ ರೀಡರ್‌ಗಳನ್ನು ಬಳಸಿಕೊಳ್ಳಲಾಗಿದೆ. ಸ್ಟಿಕ್ಕರ್‌ ಅಂಟಿಸಿ ಕ್ಯೂ-ಆರ್ ಕೋಡ್ ನಮೂದಿಸಲಾಗಿದೆ. ಸಮೀಕ್ಷೆಯ ನಂತರವೇ ಈ ಸ್ಟಿಕ್ಕರ್‌ ಭರ್ತಿ ಮಾಡಲಾಗುತ್ತದೆ. ಸ್ಟಿಕ್ಕರ್ ತೆಗೆಯಬಾರದು ಎಂಬ ಬಲವಂತ ಏನಿಲ್ಲ. ಅದೇನಿದ್ದರೂ ಕೇವಲ ಮನವಿಯಷ್ಟೇ. ದೇಶದಲ್ಲೇ ಮೊದಲ ಬಾರಿಗೆ ಹೌಸ್ ಲಿಸ್ಟಿಂಗ್ ಮಾಡಲಾಗಿದೆ’ ಎಂದರು.


‘ಜನಗಣತಿಗೂ, ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆಗೂ ವ್ಯತ್ಯಾಸವಿದೆ. ಜನಗಣತಿಗಿಂತ ಸಮೀಕ್ಷೆಯಲ್ಲಿ ವಿವರಗಳನ್ನು ಸಾದ್ಯಂತವಾಗಿ ಪಡೆಯಲಾಗುತ್ತದೆ. ಸರ್ವೆಯಲ್ಲಿ ಸ್ವಯಂ ಪ್ರೇರಣೆಯಿಂದ ಉತ್ತರ ನೀಡಬಹುದು. ಇಲ್ಲಿ ಸಂಗ್ರಹಿಸುವ ದತ್ತಾಂಶ ನ್ಯಾಯಾಂಗ ಪರಾಮರ್ಶೆಗೆ ಒಳಪಡಬಹುದು. ಆದರೆ, ಜನಗಣತಿಯ ದತ್ತಾಂಶ ನ್ಯಾಯಾಂಗದ ಪರಾಮರ್ಶೆ ವ್ಯಾಪ್ತಿಗೆ ಬರುವುದಿಲ್ಲ. ಜನಗಣತಿಯಲ್ಲಿ ವಿವರ ನೀಡುವುದು ಕಡ್ಡಾಯ’ ಎಂದರು.


ಕೇಂದ್ರ ಸರ್ಕಾರದ ಪರ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಕೆ.ಅರವಿಂದ್ ಕಾಮತ್, ‘ಕೇಂದ್ರ ಸರ್ಕಾರವೇ 2027ರಲ್ಲಿ ಜಾತಿಗಣತಿ ಆರಂಭಿಸಲಿದೆ. ಜನಗಣತಿ ಜೊತೆಗೆ ಜಾತಿ ಗಣತಿಯನ್ನೂ ನಡೆಸಲಾಗುವುದು. ಎಲ್ಲ ರಾಜ್ಯಗಳೂ ಪ್ರತ್ಯೇಕ ಸಮೀಕ್ಷೆಗೆ ಮುಂದಾದರೆ ಸಮಸ್ಯೆ ಎದುರಾಗಲಿದೆ. ಕೇಂದ್ರ, ರಾಜ್ಯದ ಸಮೀಕ್ಷೆಗಳಲ್ಲಿ ವಿರೋಧಾಭಾಸ ಇರಬಾರದು’ ಎಂದರು.


‘ಹಿಂದುಳಿದ ವರ್ಗಗಳ ಆಯೋಗ ನಡೆಸುವ ಸಮೀಕ್ಷೆಗೆ ಇತಿಮಿತಿಗಳಿವೆ. ಸಮೀಕ್ಷೆಯ ಹೆಸರಿನಲ್ಲಿ ಸರ್ಕಾರ ಜನಗಣತಿ ಮಾಡುತ್ತಿದೆ. ರಾಜ್ಯದ ಸಮೀಕ್ಷೆಯಲ್ಲಿ ಜನರು ಉತ್ತರ ನೀಡುವುದು ಕಡ್ಡಾಯ ಅಲ್ಲ ಎನ್ನುವುದಾದರೆ ಇಂತಹ ಸಮೀಕ್ಷೆಯಿಂದ ಆಗುವ ಪ್ರಯೋಜನವಾದರೂ ಏನು? ಬೆಂಗಳೂರಿನಂತಹ ಮಹಾನಗರದಲ್ಲಿ ಶ್ರೀಮಂತರು ವಾಸಿಸುವ ಅಪಾರ್ಟ್‌ಮೆಂಟ್‌ಗಳಿಗೂ ಹೋಗಿ ಸಮೀಕ್ಷೆ ನಡೆಸುವ ಅಗತ್ಯವೇನಿದೆ’ ಎಂದು ಪ್ರಶ್ನಿಸಿದರು.


ಹಿಂದುಳಿದ ವರ್ಗಗಳ ಒಕ್ಕೂಟದ ಪರ ಪದಾಂಕಿತ ಹಿರಿಯ ವಕೀಲ ಕೆ.ಎನ್.ಫಣೀಂದ್ರ, ‘ಆಧಾರ್ ಸಂಖ್ಯೆಯನ್ನು ಸಿಸ್ಟಮ್‌ಗೆ ಹಾಕಿದ ಬಳಿಕ ಅದು ಉಳಿದವರಿಗೆ ಲಭ್ಯವಾಗುವುದಿಲ್ಲ. ಹೀಗಾಗಿ, ದುರುಪಯೋಗವಾಗುವ ಪ್ರಶ್ನೆಯೇ ಇಲ್ಲ. ಸುಪ್ರೀಂ ಕೋರ್ಟ್ ಕೂಡಾ ಹಿಂದುಳಿದ ವರ್ಗಗಳ ಸಮೀಕ್ಷೆಗೆ ಸೂಚಿಸಿದೆ. ರಾಜಕೀಯ ಮೀಸಲಾತಿಗೂ ಸಮೀಕ್ಷೆ ಅಗತ್ಯ ಎಂದಿದೆ’ ಎಂದರು.


ಅರ್ಜಿದಾರರ ಪರ ಪದಾಂಕಿತ ಹಿರಿಯ ವಕೀಲರಾದ ಪ್ರಭುಲಿಂಗ ಕೆ.ನಾವದಗಿ, ಅಶೋಕ ಹಾರನಹಳ್ಳಿ, ಜಯಕುಮಾರ್ ಎಸ್‌.ಪಾಟೀಲ್, ವಿವೇಕ್ ರೆಡ್ಡಿ, ಎಸ್‌.ಶ್ರೀರಂಗ ಮತ್ತು ಎಸ್‌.ಎಂ.ಚಂದ್ರಶೇಖರ್ ಹಾಜರಿದ್ದರು.


ವಿಭು ಬಖ್ರು, ಮುಖ್ಯ ನ್ಯಾಯಮೂರ್ತಿಸೈಬರ್ ಅಪರಾಧ ಹೆಚ್ಚುತ್ತಿರುವ ಈ ದಿನಗಳಲ್ಲಿ ಎಲ್ಲರ ಆಧಾರ್ ಸಂಖ್ಯೆ ಪಡೆಯುವುದು ವ್ಯಕ್ತಿಯೊಬ್ಬರ ಖಾಸಗಿತನದ ಉಲ್ಲಂಘನೆಯಾಗುವುದಿಲ್ಲವೇ? ಇಂತಹುದೊಂದು ಭೀತಿ ಅವರ ಮನದಲ್ಲಿ ಮೂಡುವುದಿಲ್ಲವೇ?


ನ್ಯಾಯಪೀಠ ಕೇಳಿದ್ದೇನು?

  • ಸರ್ಕಾರಕ್ಕೆ ಸಮೀಕ್ಷೆ ನಡೆಸುವ ಅಧಿಕಾರ ಇಲ್ಲವೆಂದು ಅರ್ಜಿದಾರರು ಹೇಳಿಲ್ಲ. ಆದರೆ, ಸರ್ವೆ ನಡೆಸುತ್ತಿರುವ ಪರಿಯನ್ನು ಪ್ರಶ್ನಿಸಿದ್ದಾರೆ. ಜಾತಿಗಳ ನಡುವೆ ಧರ್ಮವನ್ನು ಸೇರಿಸಿದ್ದೀರ ಮತ್ತು ಜಾತಿಗಳ ಪಟ್ಟಿ ಪ್ರಕಟಿಸುವ ಮುನ್ನ ಪೂರ್ವಭಾವಿ ಸಮಾಲೋಚನೆ ನಡೆಸಿಲ್ಲ ಎಂಬ ಆರೋಪವಿದೆಯಲ್ಲಾ? ಸರ್ಕಾರಕ್ಕೆ ಪ್ರಶ್ನೆ.
  • ಇಂದಿರಾ ಸಹಾನಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ನೀಡಿರುವ ತೀರ್ಪಿನ ಅನುಸಾರ ಜಾತಿಗಳ ಪಟ್ಟಿ ತಯಾರಿಸಲು ಅವಕಾಶ ನೀಡಲಾಗಿದೆ. ಮೀಸಲಾತಿಗೆ ಅಲ್ಲದಿದ್ದರೂ ಸವಲತ್ತು ನೀಡಲು ಸಮೀಕ್ಷೆ ಅಗತ್ಯವಲ್ಲವೇ? ಈಗಿನ ಸಮೀಕ್ಷೆಯಲ್ಲಿ ಪ್ರಶ್ನೆಗಳನ್ನು 60 ರಿಂದ 5ಕ್ಕೆ ಇಳಿಸಬೇಕು ಎಂಬುದು ನಿಮ್ಮ ಬೇಡಿಕೆಯೇ? ಪ್ರತಿ ಮನೆಯ ಸಮೀಕ್ಷೆ ಮಾಡಬಾರದು ಎಂದು ಕೇಳುತ್ತಿದ್ದೀರಾ? ಅರ್ಜಿದಾರರಿಗೆ ಪ್ರಶ್ನೆ.
  • ಸರ್ಕಾರ 1,561 ಜಾತಿಗಳನ್ನು ಹೇಗೆ ನಿಗದಿಪಡಿಸಿದೆ? ಜಾತಿ ವರ್ಗೀಕರಣಕ್ಕೆ ಅನುಸರಿಸಿದ ಕ್ರಮಗಳೇನು? ಆಧಾರ್ ನಂಬರ್‌ಗಳನ್ನು ಪಡೆಯಲು ಕಾರಣವೇನು? ಸ್ಟಿಕ್ಕರ್‌ಗಳನ್ನು ಹಾಕಲು ನಿಮಗಿರುವ ಅಧಿಕಾರವೇನು? ಮಾಹಿತಿ ನೀಡುವುದು ಬಿಡುವುದು ಜನರ ಆಯ್ಕೆಯೆಂದು ತಿಳಿಸಿದ್ದೀರ. ಸರ್ವೆ ಮಾಡುವಾಗ ಅವರಿಗೆಲ್ಲಾ ಮುಂಚಿತವಾಗಿಯೇ ಈ ಮಾಹಿತಿ ನೀಡಿದ್ದೀರಾ? ಪ್ರತಿ ಮನೆಯ ಸರ್ವೆ ಮಾಡಲೇಬೇಕೆಂದು ಕೈಪಿಡಿಯಲ್ಲಿದೆ. ಕೈಪಿಡಿಯಲ್ಲಿ ಸರ್ವೆ ನಿರಾಕರಿಸುವ ಆಯ್ಕೆಯನ್ನು ನೀಡಿಲ್ಲವಲ್ಲ? ಉತ್ತರ ನೀಡುವುದು ಕಡ್ಡಾಯ ಇಲ್ಲವೆಂದು ಎಲ್ಲಿ ಹೇಳಿದ್ದೀರ? ಸರ್ವೆಗೂ ಮೊದಲೇ ಸೂಕ್ತ ಸಮಾಲೋಚನೆ ಮಾಡಿಲ್ಲವೇಕೆ? ಹಿಂದುಳಿದ ವರ್ಗಗಳ ಆಯೋಗಕ್ಕೆ ಪ್ರಶ್ನೆ.

Views: 9

Leave a Reply

Your email address will not be published. Required fields are marked *