ದುಬೈ: ಸಿಡಿಲಮರಿ ಅಭಿಷೇಕ್ ಶರ್ಮಾ ಬೀಸಾಟದ ಬೆರಗು ಮತ್ತು ಸ್ಪಿನ್ನರ್‌ಗಳ ಬೌಲಿಂಗ್ ಸೊಬಗಿನಿಂದಾಗಿ ಭಾರತ ತಂಡಕ್ಕೆ ಬಾಂಗ್ಲಾದೇಶದ ಎದುರು ಜಯ ಒಲಿಯಿತು. ಇದರೊಂದಿಗೆ ಸೂರ್ಯಕುಮಾರ್ ಯಾದವ್ ಪಡೆಯು ಏಷ್ಯಾ ಕಪ್ ಟಿ20 ಕ್ರಿಕೆಟ್ ಟೂರ್ನಿಯ ಫೈನಲ್‌ಗೆ ಲಗ್ಗೆ ಇಟ್ಟಿತು.
ಬುಧವಾರ ನಡೆದ ಸೂಪರ್ ಫೋರ್ ಪಂದ್ಯದಲ್ಲಿ ಭಾರತ ತಂಡವು 41 ರನ್‌ಗಳಿಂದ ಜೇಕರ್ ಅಲಿ ಬಳಗವನ್ನು ಮಣಿಸಿತು.
ಭಾರತ ನೀಡಿದ್ದ 169 ರನ್‌ಗಳ ಗುರಿ ಬೆನ್ನಟ್ಟಿದ ಬಾಂಗ್ಲಾ ತಂಡವು, ಎಡಗೈ ಸ್ಪಿನ್ನರ್ ಕುಲದೀಪ್ ಯಾದವ್ (18ಕ್ಕೆ3) ಹಾಗೂ ಬಲಗೈ ವೇಗಿ ಜಸ್‌ಪ್ರೀತ್ ಬೂಮ್ರಾ (18ಕ್ಕೆ2) ಅವರ ಪರಿಣಾಮಕಾರಿ ಬೌಲಿಂಗ್ ಎದುರು 19.3 ಓವರುಗಳಲ್ಲಿ 127 ರನ್‌ಗಳಿಗೆ ಆಲೌಟ್ ಆಯಿತು. ಆರಂಭಿಕ ಆಟಗಾರ ಸೈಫ್ ಹಸನ್ (69; 51 ಎಸೆತ, 4×3, 6×5) ಅವರ ಏಕಾಂಗಿ ಹೋರಾಟದ ನಡುವೆಯೂ ಭಾರತದ ಬೌಲರ್‌ಗಳು ಮೇಲುಗೈ ಸಾಧಿಸಿದರು.
ಇದಕ್ಕೆ ಮುನ್ನ, ಟಾಸ್ ಸೋತು ಬ್ಯಾಟಿಂಗ್ ಇಳಿಸಲ್ಪಟ್ಟ ಸೂರ್ಯಕುಮಾರ್ ಪಡೆಯು ಸಿಡಿಲಮರಿ ಅಭಿಷೇಕ್ ಶರ್ಮಾ (75; 37ಎಸೆತ, 4×6, 6×5) ಅವರ ಅಬ್ಬರದ ಆಟದಿಂದಾಗಿ 6 ವಿಕೆಟ್‌ಗಳಿಗೆ 168 ರನ್ ಗಳಿಸಿತು.
ಈ ಟೂರ್ನಿಯ ಬಹುತೇಕ ಎಲ್ಲ ಪಂದ್ಯಗಳಲ್ಲಿಯೂ ಬೀಸಾಟವಾಡುತ್ತಿರುವ ಅಭಿಷೇಕ್ ಇಲ್ಲಿಯೂ ತಮ್ಮ ತೋಳ್ಬಲ ಪ್ರದರ್ಶಿಸಿದರು. ತಮ್ಮ ‘ಪಂಜಾಬಿ ಗೆಳೆಯ’ ಶುಭಮನ್ ಗಿಲ್ (29; 19ಎಸೆತ) ಅವರೊಂದಿಗೆ ಅಮೋಘ ಆರಂಭ ನೀಡಿದರು. ಕೇವಲ 6 ಓವರ್‌ಗಳಲ್ಲಿ ತಂಡದ ಮೊತ್ತವು 77 ರನ್‌ಗಳಾದವು. ಅಭಿಷೇಕ್ ಆಟದ ಅಡಿಪಾಯದ ಮೇಲೆ ಭಾರತ ತಂಡವು 200 ರನ್‌ಗಳಿಗಿಂತಲೂ ಹೆಚ್ಚಿನ ಮೊತ್ತವನ್ನು ದಾಖಲಿಸುವ ನಿರೀಕ್ಷೆ ಮೂಡಿತ್ತು. ಆದರೆ ಹಾಗಾಗಲಿಲ್ಲ.
ಏಳನೇ ಓವರ್‌ನಲ್ಲಿ ಗಿಲ್ ವಿಕೆಟ್ ಗಳಿಸಿದ ರಿಷಾದ್ ಹುಸೇನ್ ಸಂಭ್ರಮಿಸಿದರು. ಈ ಹಂತದಲ್ಲಿ ಭಾರತ ತಂಡದ ಮ್ಯಾನೇಜ್‌ಮೆಂಟ್ ತೆಗೆದುಕೊಂಡ ಅಚ್ಚರಿಯ ನಿರ್ಧಾರದಲ್ಲಿ ಶಿವಂ ದುಬೆ ಮೂರನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದರು. ಆದರೆ ಅವರು 2 ರನ್ ಗಳಿಸಿ ನಿರ್ಗಮಿಸಿದರು. ಅವರ ಹಿಂದೆಯೇ ಸೂರ್ಯಕುಮಾರ್ ಯಾದವ್ (5; 11ಎಸೆತ) ಕೂಡ ಆಲ್‌ರೌಂಡರ್ ಜೇಕರ್ ಅಲಿ ಪಡೆದ ಅದ್ಭುತ ಕ್ಯಾಚ್‌ಗೆ ಔಟಾದರು.
ಆದರೆ ಇನ್ನೊಂದು ಬದಿಯಲ್ಲಿ ಅಭಿಷೇಕ್ ಬೀಸಾಟ ಮುಂದುವರಿದಿತ್ತು. ಸ್ಕೋರ್‌ಬೋರ್ಡ್‌ನಲ್ಲಿರನ್‌ಗಳ ನಾಗಾಲೋಟವೂ ಸಾಗಿತ್ತು. ಕೇವಲ 10 ಓವರ್‌ಗಳಲ್ಲಿ 96 ರನ್‌ಗಳೂ ಸೇರಿದ್ದವು. ಆದರೆ 12ನೇ ಓವರ್‌ನಲ್ಲಿ ಅಭಿಷೇಕ್ ಅವರನ್ನು ರನೌಟ್ ಮಾಡುವಲ್ಲಿ ರಿಷಾದ್ ಹುಸೇನ್ ಮತ್ತು ಮುಸ್ತಫಿಜುರ್ ರೆಹಮಾನ್ ಯಶಸ್ವಿಯಾದರು. ಇದು ತಂಡದ ರನ್ ಗಳಿಕೆಯ ವೇಗ ಕುಸಿಯಲು ಕಾರಣವಾಯಿತು. ಹಾರ್ದಿಕ್ ಪಾಂಡ್ಯ 29 ಎಸೆತಗಳಲ್ಲಿ 38 ರನ್ ಗಳಿಸಿದರು. ಕೊನೆಯ ಹಂತದ ಓವರ್‌ಗಳಲ್ಲಿ ರನ್‌ಗಳಿಗೆ ತಡೆಯೊಡ್ಡುವಲ್ಲಿ ಬಾಂಗ್ಲಾ ಬೌಲರ್‌ಗಳು ಯಶಸ್ವಿಯಾದರು.
ಪಾಕಿಸ್ತಾನ ಹಾಗೂ ಬಾಂಗ್ಲಾದೇಶ ತಂಡಗಳ ನಡುವಣ ಗುರುವಾರ ನಡೆಯಲಿರುವ ಸೂಪರ್ ಫೋರ್ ಪಂದ್ಯವು ಪ್ರಶಸ್ತಿ ಸುತ್ತು ಪ್ರವೇಶಿಸಲಿರುವ ಇನ್ನೊಂದು ತಂಡವನ್ನು ನಿರ್ಧರಿಸಲಿದೆ. ಮತ್ತೊಂದೆಡೆ ಶ್ರೀಲಂಕಾ ತಂಡ ಕೂಟದಿಂದಲೇ ನಿರ್ಗಮಿಸಿದೆ.
ಸಂಕ್ಷಿಪ್ತ ಸ್ಕೋರು:
ಭಾರತ: 20 ಓವರ್‌ಗಳಲ್ಲಿ 6ಕ್ಕೆ168 (ಅಭಿಷೇಕ್ ಶರ್ಮಾ 75, ಶುಭಮನ್ ಗಿಲ್ 29, ಹಾರ್ದಿಕ್ ಪಾಂಡ್ಯ 38, ಅಕ್ಷರ್ ಪಟೇಲ್ ಔಟಾಗದೇ 10, ರಿಷಾದ್ ಹುಸೇನ್ 27ಕ್ಕೆ2)
ಬಾಂಗ್ಲಾದೇಶ: 19.3 ಓವರುಗಳಲ್ಲಿ 127 (ಸೈಫ್ ಹಸನ್ 69, ಪರ್ವೇಜ್ ಹುಸೇನ್ 21, ಕುಲದೀಪ್ ಯಾದವ್ 18ಕ್ಕೆ3, ಜಸ್‌ಪ್ರೀತ್ ಬೂಮ್ರಾ 18ಕ್ಕೆ2, ವರುಣ್ ಚಕ್ರವರ್ತಿ 29ಕ್ಕೆ2)
ಫಲಿತಾಂಶ: ಭಾರತಕ್ಕೆ 41 ರನ್ ಗೆಲುವು, ಫೈನಲ್‌ಗೆ ಅರ್ಹತೆ
Views: 18