ಚಿತ್ರದುರ್ಗ ಸೆ. 30
ಪೋಟೋ ಮತ್ತು ವರದಿ ಸುರೇಶ್ ಪಟ್ಟಣ್
ಸರ್ಕಾರ ಜಿಲ್ಲೆಯ 6 ತಾಲೂಕುಗಳನ್ನು ಬರಪೀಡಿತ ಪ್ರದೇಶ ಪಟ್ಟಿಗೆ ಸೇರಿಸಬೇಕು, .ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯ ಮಾನದಂಡಗಳನ್ನು ಬದಲಾಯಿಸಿ ಹಣವನ್ನು ಕಟ್ಟಿಸಿಕೊಂಡು ಎಲ್ಲಾ ರೈತರ ಖಾತೆಗಳಿಗೆ ಹಣವನ್ನು ಹಾಕಬೇಕು ಸೇರಿದಂತೆ ವಿವಿಧ ರೀತಿಯ ಬೇಡಿಕೆಯನ್ನು ಈಡೇರಿಸುವಂತೆ ಆಗ್ರಹಿಸಿ ಅಖಿಲ ಭಾರತ ಕಿಸಾನ್ ಸಭಾ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆಯನ್ನು ನಡೆಸಿತು.
ಈ ಸಂದರ್ಭದಲ್ಲಿ ಮಾತನಾಡಿದ ಅಖಿಲ ಭಾರತ ಕಿಸಾನ್ ಸಭಾದ ಜಿಲ್ಲಾಧ್ಯಕ್ಷ ಜಾಫರ್ ಶರೀಫ್ ಮುಂಗಾರು ಹಾಗೂ ಮುಂಗಾರು ಮಳೆ ನಂಬಿಕೊಂಡು ಬಿತ್ತನೆ ಮಾಡಿದ ರೈತರ ಪರಿಸ್ಥಿತಿ ಹೇಳತೀರದಾಗಿದೆ. ಪ್ರತಿ ವರ್ಷವೂ ರೈತರ ಬದುಕಿನಲ್ಲಿ ಮಳೆ ಕಣ್ಣುಮುಚ್ಚಾಲೆ ಆಟವಾಡುತ್ತಿದೆ.
ಶೇಂಗಾ ಸೇರಿದಂತೆ, ಇತರ ಬೆಳೆಗಳು ಸರಿಯಾದ ಬೆಳೆಗೆ ಮಳೆ ಬಾರದೆ ಒಣಗಿ ನೆಲ ಕಚ್ಚಿ ಹೋಗುತ್ತಿವೆ. ರೈತ ಎಕರೆಗೆ ಬೀಜ ಗೊಬ್ಬರಕ್ಕೆ ಸುಮಾರು 45 ರಿಂದ 50 ಸಾವಿರ ರೂಗಳನ್ನು ಖರ್ಚು ಮಾಡಿ ಹಾಕಿದ ಬಂಡವಾಳವು ಸಹಾ ಇಲ್ಲದಂತಾಗಿ ದಿಕ್ಕು ದೋಚದೆ ಆಕಾಶ ನೋಡುವಂತಾಗಿದೆ. ವಿಮಾ ಕಂಪನಿಗಳು ಸರ್ಕಾರದ ಜೊತೆ ಒಡಂಬಡಿಕೆ ಮಾಡಿಕೊಂಡು ತಮ್ಮ ಅನುಕೂಲಕ್ಕೆ ತಕ್ಕಂತೆ ಮಾನದಂಡಗಳನ್ನು ರೂಪಿಸಿಕೊಂಡು ರೈತರನ್ನು ದಿವಾಳಿ ಮಾಡಲು ಹೊರಟಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬೇರೆ ಜಿಲ್ಲೆಗಳಲ್ಲಿ ಹೆಚ್ಚಿನ ಮಳೆಯಾಗಿ ಅತಿವೃಷ್ಟಿ ಉಂಟಾಗಿದೆ. ಆದರೆ, ಚಿತ್ರದುರ್ಗ ಜಿಲ್ಲೆಯಲ್ಲಿ ಮಳೆ ಇಲ್ಲದೆ ಗಿಡಗಳು ಒಣಗಿ ಹೋಗುತ್ತಿವೆ ಕೂಡಲೇ, ಸರ್ಕಾರ ಜಿಲ್ಲೆಯ ಆರು ತಾಲೂಕುಗಳನ್ನು ಬರಪೀಡಿತ ಪಟ್ಟಿಗೆ ಸೇರಿಸಿ,ಬರ ಪೀಡಿದ ಪ್ರದೇಶ ಘೋಷಿಸಬೇಕು.ಜಿಲ್ಲೆ ರೈತರಿಗೆ ರಾಜ್ಯ ಮತ್ತು ಕೇಂದ್ರ ಸರ್ಕಾರದಿಂದ ಬರ ಪರಿಹಾರ ಮೊತ್ತ ಹಂಚಿಕೆ ಆಗಬೇಕು.ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯ ಮಾನದಂಡಗಳನ್ನು ಬದಲಾಯಿಸಿ ಹಣವನ್ನು ಕಟ್ಟಿಸಿಕೊಂಡು ಎಲ್ಲಾ ರೈತರ ಖಾತೆಗಳಿಗೆ ಹಣವನ್ನು ಹಾಕಬೇಕು.
ಜಿಲ್ಲೆಯ ರೈತರ ಅಕ್ರಮ ಸಕ್ರಮ ಕೋರಿ ಅರ್ಜಿ ಹಾಕಿ ಸಾಗುವಳಿ ಮಾಡುತ್ತಿರುವ ಫಾರಂ 57ರ ಅರ್ಜಿಗಳನ್ನು ತಡ ಮಾಡದೆ ಸಾಗುವಳಿ ಪತ್ರ ವಿತರಿಸಬೇಕು. ಮೊಳಕಾಲ್ಮೂರು ತಾಲೂಕಿನ ಅಕ್ರಮ ಸಕ್ರಮಕ್ಜೆ ಕೋರಿ ರೈತರು ಹಾಕಿರುವ ಹಂಚಿಕೆ ಅಂತದಲ್ಲಿರುವ 493 ಅರ್ಜಿಗಳ ಸಾಗುವಳಿ ಪತ್ರಗಳನ್ನು ವಿತರಿಸಬೇಕು.ಅರಣ್ಯ ಹಕ್ಕು ಸಾಗುವಳಿ ಮತ್ತು ಬಗರಕುಂ ರೈತರನ್ನು ಒಕ್ಕಲಿಬ್ಬಿಸುವ ಯಾವ ಕ್ರಮಕ್ಕೂ ಮುಂದಾಗಬಾರದು ಎಂದು ಒತ್ತಾಯಿಸಿ, ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಅಖಿಲ ಭಾರತ ಕಿಸಾನ್ ಸಭಾದ ಉಪಾಧ್ಯಕ್ಷ ಟಿ.ಆರ್. ಉಮಾಪತಿ, ಜಿಲ್ಲಾ ಕಾರ್ಯದರ್ಶಿ ಸುರೇಶ್ ಬಾಬು, ಜಿಲ್ಲಾ ಸಹ ಕಾರ್ಯದರ್ಶಿ ಸತ್ಯ ಕೀರ್ತಿ, ಇರ್ಫಾನ್, ಮಾರಣ್ಣ, ಸೇರಿದಂತೆ ಇತರೆ ಪದಾಧಿಕಾರಿಗಳು, ಭಾಗವಹಿಸಿದ್ದರು.
Views: 18