ಸೊಲ್ಲಾಪುರ ಗ್ರಾಮದ ಸರ್ಕಾರಿ ಶಾಲೆ ಭೂಮಿ ಪೂಜೆ ನೆರವೇರಿಸಿದರು.

ಚಿತ್ರದುರ್ಗ: ಸರ್ಕಾರಿ ಶಾಲೆಗಳಲ್ಲಿ ಪಾಠ ಮಾಡುವ ಶಿಕ್ಷಕರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಯಲ್ಲಿ ಓದಿಸುತ್ತಿರುವಾಗ ಸರ್ಕಾರಿ ಶಾಲೆಗಳ ಅಭಿವೃದ್ಧಿ ಹೇಗೆ ಸಾಧ್ಯವಾಗುತ್ತದೆ, ಮಕ್ಕಳ ದಾಖಲಾತಿ ಕೊರತೆಯಿಂದಾಗಿ ಶಾಲೆಗಳು ಮುಚ್ಚುತ್ತಿವೆ ಎಂದು ಸಂಸದ ಗೋವಿಂದ ಕಾರಜೋಳ ತಿಳಿಸಿದರು.
ತಾಲೂಕಿನ ಸೊಲ್ಲಾಪುರ ಗ್ರಾಮದಲ್ಲಿ ಮಂಗಳವಾರ ಸಂಸದರ ಅನುದಾನದ ಅಡಿಯಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಟ್ಟಡದ ಭೂಮಿ ಪೂಜೆಯನ್ನು ನೆರವೇರಿಸಿ ಮಾತನಾಡಿದರು.
ಸರ್ಕಾರಿ ಶಾಲೆಗಳು ಮುಚ್ಚುವಂತಹ ಪರಿಸ್ಥಿತಿಗೆ ಶಿಕ್ಷಕರು ಕೂಡ ಒಂದು ಭಾಗದಲ್ಲಿ ಕಾರಣರಾಗಿದ್ದಾರೆ. ಸರ್ಕಾರಿ ಶಾಲೆಗಳಲ್ಲಿ ಸೇವೆ ಮಾಡುತ್ತಿರುವ ಶಿಕ್ಷಕರೇ ತಮ್ಮ ಮಕ್ಕಳನ್ನ ಸರ್ಕಾರಿ ಶಾಲೆಗೆ ಸೇರಿಸುವ ಬದಲಿಗೆ ಖಾಸಗಿ ಶಾಲೆಗಳಲ್ಲಿ ಸೇರಿಸಿ ವ್ಯಾಸಂಗವನ್ನು ನೀಡುತ್ತಿದ್ದಾರೆ. ಇದರಿಂದಾಗಿ ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಕೊರತೆಯಿಂದಾಗಿ ಶಾಲೆಗಳನ್ನು ಮುಚ್ಚುವಂತಹ ಪರಿಸ್ಥಿತಿ ಉಂಟಾಗಿದೆ. ಸರ್ಕಾರಿ ಉದ್ಯೋಗ ಬೇಕು ಸರ್ಕಾರದ ಯೋಜನೆಗಳು ಬೇಕು ಆದರೆ ಸರ್ಕಾರ ನಡೆಸುತ್ತಿರುವ ಶಾಲೆಗಳಲ್ಲಿ ತಮ್ಮ ಮಕ್ಕಳನ್ನು ಓದಿಸುವುದಕ್ಕೆ ನಿರ್ಲಕ್ಷ ಬೇಕೆ ಎಂದು ಪ್ರಶ್ನಿಸಿದರು.
ಅಟಲ್ ಬಿಹಾರಿ ವಾಜಪೇ ಅವರು ಸಾರ್ವಜನಿಕ ಶಿಕ್ಷಣ ಅಭಿಯಾನದ ಮುಖಾಂತರ ಮೂಲಭೂತ ಸೌಕರ್ಯ, ಪುಸ್ತಕ, ಬಟ್ಟೆ, ಬಿಸಿ ಊಟದ ಸೌಲಭ್ಯಗಳನ್ನು ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ಎಲ್ಲಾ ವಿದ್ಯಾರ್ಥಿಗಳಿಗೆ ನೀಡುವುದರ ಮೂಲಕ ಪ್ರತಿಯೊಬ್ಬರು ನಾಗರಿಕರು ಜ್ಞಾನವಂತರಾಗಬೇಕೆನ್ನುವ ಪರಿಕಲ್ಪನೆಯನ್ನು ಇಟ್ಟುಕೊಂಡು ಯೋಜನೆಯನ್ನು ಜಾರಿಗೊಳಿಸಿದ್ದರು. ಪ್ರಸ್ತುತ ದಿನಮಾನಗಳಲ್ಲಿ ಸರ್ಕಾರಿ ಶಾಲೆಗಳಲ್ಲಿ ಓದುವ ಮಕ್ಕಳ ಸಂಖ್ಯೆಯೇ ಕಡಿಮೆಯಾಗುತ್ತಿದೆ. ಖಾಸಗಿ ಶಾಲೆಗಳ ಹಾವಳಿಯಿಂದಾಗಿ ಸರ್ಕಾರಿ ಶಾಲೆಗಳ ಬಾಗಿಲು ಕಡೆಗೆ ವಿದ್ಯಾರ್ಥಿಗಳು ಮುಖ ಮಾಡದಂತಾಗಿದೆ ಎಂದು ತಿಳಿಸಿದರು.
ಖಾಸಗಿ ಶಾಲೆಗಳಲ್ಲಿ ಮೆರಿಟ್ ಆಧಾರದ ಶಿಕ್ಷಕರ ನೇಮಕ ಇರೋದಿಲ್ಲ, ಈ ವ್ಯವಸ್ಥೆ ಇರೋದು ಸರ್ಕಾರದಲ್ಲಿ ಮಾತ್ರ ಗುಣಮಟ್ಟದ ಶಿಕ್ಷಕರಿಂದ ಸರ್ಕಾರಿ ಶಾಲೆಗಳಲ್ಲಿ ಪಾಠ ನಡೆಯುತ್ತಿದೆ ವಿನಹ ಖಾಸಗಿ ಶಾಲೆಗಳಲ್ಲಿ ನಡೆಯುವುದಿಲ್ಲ ಹಾಗಾಗಿ ಗ್ರಾಮಸ್ಥರು ಸರ್ಕಾರಿ ಶಾಲೆಗಳಲ್ಲಿ ತಮ್ಮನ್ನ ಮಕ್ಕಳನ್ನು ಓದಿಸಬೇಕೆಂದು ಗ್ರಾಮಸ್ಥರಿಗೆ ಮನವಿ ಮಾಡಿದರು.
ಕಟ್ಟಡಗಳನ್ನು ನಿರ್ಮಾಣ ಮಾಡುವಂತಹ ಸಂದರ್ಭದಲ್ಲಿ ಗುಣಮಟ್ಟದ ರೀತಿಯಲ್ಲಿ ಶಾಲೆಯನ್ನು ನಿರ್ಮಾಣ ಮಾಡಬೇಕು, ಸರ್ಕಾರದಿಂದ ಹಣವನ್ನು ಹೇಗೆ ಪಡೆದುಕೊಳ್ಳುತ್ತೀರೋ ಅದೇ ರೀತಿ ಉತ್ತಮ ಕೆಲಸ ಮಾಡಿ ಶಾಲೆಯ ಅಭಿವೃದ್ಧಿ ಹೆಚ್ಚಿಸಬೇಕೆಂದು ಇಂಜಿನಿಯರ್ ಅಧಿಕಾರಿಗಳಿಗೆ ಸಲಹೆ ನೀಡಿದರು.
ವಿಧಾನ ಪರಿಷತ್ ಶಾಸಕ ಕೆ.ಎಸ್ ನವೀನ್ ಮಾತನಾಡಿ ಸ್ವತಂತ್ರ ಪೂರ್ವದ ಶಾಲೆಗಳ ಅಭಿವೃದ್ಧಿ ಕಾರ್ಯ ಜನಪ್ರತಿನಿಧಿಗಳು ಮತ್ತು ಗ್ರಾಮಸ್ಥರ ಸಹಕಾರದೊಂದಿಗೆ ಆಗಬೇಕಿದೆ. ಜನರು ದೇವಸ್ಥಾನಗಳನ್ನು ಕಟ್ಟುವುದಕ್ಕೆ ಧನ ಸಹಾಯ ಕೇಳಿಕೊಂಡು ಬರ್ತಾರೆ ವಿನಹ ಸರ್ಕಾರಿ ಶಾಲೆಗಳನ್ನು ಕಟ್ಟಬೇಕೆಂದು ಧನಸಹ ಕೇಳಿಕೊಂಡು ಬರುವವರು ಯಾರು ಇಲ್ಲದಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಸರ್ಕಾರಿ ಶಾಲೆಗಳ ಅಭಿವೃದ್ಧಿ ಜನಪ್ರತಿನಿಧಿಗಳ ಜೊತೆಗೆ ಗ್ರಾಮಸ್ಥರ ಸಹಕಾರದೊಂದಿಗೆ ಆಗಬೇಕಿದೆ ಶಿಕ್ಷಕ ಮತ್ತು ಗ್ರಾಮಸ್ಥರ ನಡುವಿನ ಸಂಬಂಧ ಶಾಲೆಯ ದಾಖಲಾತಿ ಹೆಚ್ಚಳಕ್ಕೆ ಕಾರಣವಾಗುತ್ತದೆ ಹಾಗಾಗಿ ಪ್ರತಿಯೊಬ್ಬ ಶಿಕ್ಷಕರು ಗ್ರಾಮಸ್ಥರೊಂದಿಗೆ ಉತ್ತಮ ಒಡನಾಟವನ್ನು ಇಟ್ಟುಕೊಂಡು ಶಾಲೆಯ ಅಭಿವೃದ್ಧಿ ಕಡೆಗೆ ಗಮನ ಹರಿಸಬೇಕೆಂದು ಶಿಕ್ಷಕರಿಗೆ ಈ ಮಾತು ತಿಳಿಸಿದರು.
ಜಾನುಕೊಂಡ ಗ್ರಾಮ ಪಂಚಾಯಿತಿ ಮಂಜುಳಾಸ್ವಾಮಿ ಮಾತನಾಡಿ ಚುನಾವಣೆ ಸಂದರ್ಭದಲ್ಲಿ ನೀಡಿದಂತಹ ಆಶ್ವಾಸನೆಗಳನ್ನು ಸಂಸದರು ನೆರವೇರಿಸಿಕೊಟ್ಟಿದ್ದಾರೆ ನಿಮಗೆ ಅನಂತವಾದ ಧನ್ಯವಾದಗಳು ಗ್ರಾಮಸ್ಥರು ಪರವಾಗಿ ತಿಳಿಸುತ್ತಿದ್ದೇನೆ, ಯಾವುದೇ ಕೆಲಸವನ್ನು ಜವಾಬ್ದಾರಿತವಾಗಿ ಮಾಡಿದಾಗ ಮಾತ್ರ ಅದರ ಯಶಸ್ಸು ಖಂಡಿತ ಸಾಧ್ಯವಾಗುತ್ತದೆ ಎನ್ನುವುದಕ್ಕೆ ಸೋಲಾಪುರ ಗ್ರಾಮದ ಶಾಲೆಯ ಗುದ್ದಲಿ ಪೂಜೆ ಸಾಕ್ಷಿ ಸಾಕ್ಷಿಯಾಗಿದೆ ಎಂದು ತಿಳಿಸಿದರು.
ಸೊಲ್ಲಾಪುರ ಗ್ರಾಮದ ಸುಬ್ಬಮ್ಮ ಎಂಬುವರು ಈ ಶಾಲೆಗೆ ಜಾಗವನ್ನು ನೀಡಿ, ತಮ್ಮ ಊರಿನ ಮಕ್ಕಳು ಜ್ಞಾನವಂತರಾಗಬೇಕೆನ್ನುವ ನಿಟ್ಟಿನಲ್ಲಿ ಸ್ವತಂತ್ರ ಪೂರ್ವದಲ್ಲಿ ಶಾಲೆಯನ್ನ ಸ್ವಂತ ಖರ್ಚಿನಲ್ಲಿ ಕಟ್ಟಿಸಿದ್ದರು. ಈ ಶಾಲೆ ಶತಮಾನ ಕಳೆದಿದೆ ಇಂತಹ ಶಾಲೆಗಳ ಅಭಿವೃದ್ಧಿ ಮಾಡುವುದು ನಮ್ಮ ಕರ್ತವ್ಯ, ಯಾರೇ ಜನಪ್ರತಿನಿಧಿಗಳಾದರೂ ಸಹ ಮಕ್ಕಳ ವಿಚಾರದಲ್ಲಿ ರಾಜಕಾರಣ ಮಾಡದೆ ಊರಿನ ಒಳಿತಿಗಾಗಿ ಮಕ್ಕಳ ಅಭಿವೃದ್ಧಿಗಾಗಿ ಶಾಲೆಗಳ ಅಭಿವೃದ್ಧಿ ಕೆಲಸ ಮಾಡಬೇಕೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಚಿತ್ರದುರ್ಗ ಕ್ಷೇತ್ರ ಶಿಕ್ಷಣಾಧಿಕಾರಿ ಗಿರಿಜಮ್ಮ, ಬಿಜೆಪಿ ಜಿಲ್ಲಾಧ್ಯಕ್ಷರಾದ ಕೆ.ಟಿ ಶಿವಕುಮಾರ್, ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಸೌಭಾಗ್ಯ ಬಸವರಾಜನ್, ಸೊಲ್ಲಾಪುರ ಗ್ರಾಮ ಪಂಚಾಯತಿ ಸದಸ್ಯರಾದ ಬೆಳ್ಳಿ ರಾಜಪ್ಪ, ಚಳಕೆರಮ್ಮ ಈಶ್ವರಪ್ಪ, ಮಾಜಿ ಉಪಾಧ್ಯಕ್ಷರಾದ ಲೋಕೇಶ್ವರಪ್ಪ, ಮಾಜಿ ಸದಸ್ಯರಾದ ಲಕ್ಷ್ಮಣ್ ಮುಖಂಡರಾದ ರವಿ ಒಡೆಯರ್, ಸಿದ್ದೇಶ್ ಯಾದವ್, ಚಂದ್ರಪ್ಪ ಎಸ್ ಡಿಎಂಸಿ ಅಧ್ಯಕ್ಷ ಸುರೇಶ್, ಶಿವರಾಜ್, ಮಹಾಂತೇಶ್ ಹಾಗೂ ಇತರರು ಇದ್ದರು.
Views: 13