ಅರಬ್ಬಿ ಸಮುದ್ರದಲ್ಲಿ ಮತ್ಸ್ಯ ಬೇಟೆಗೆ ತೆರಳಿದ್ದ ಮೀನುಗಾರನೇ ಮೀನಿಗೆ ಬೇಟೆಯಾಗಿದ್ದಾನೆ. ಸಮುದ್ರದಿಂದ ಜಿಗಿದು ಮೀನೊಂದು ಫಿಷರ್‌ಮ್ಯಾನ್‌ಗೆ ಚುಚ್ಚಿ ಆತನನ್ನೇ ಬಲಿ ಪಡೆದಿದೆ. ಮೀನಿನಿಂದಲೇ ಹೊಟ್ಟೆ ತುಂಬಿಸಿಕೊಂಡು ಜೀವನ ಮಾಡುತ್ತಿದ್ದ ಯುವಕ ಇದೀಗ ಇದೇ ಮೀನಿನಿಂದ್ಲೇ ಮೀನುಗಾರ ಪ್ರಾಣಬಿಟ್ಟಿದ್ದಾನೆ. ಮೀನು ಚುಚ್ಚಿ ಯುವಕ ಸಾವನ್ನಪ್ಪಿದ್ದಾನೆ ಎನ್ನುವುದು ಅಚ್ಚರಿ ಅನ್ನಿಸಿದರೂ ಸತ್ಯ.
ಕಾರವಾರ, ಅಕ್ಟೋಬರ್ 16): ಮೀನು (Fish) ಕರಾವಳಿಗರ ಹೊಟ್ಟೆ ತುಂಬಿಸುತ್ತೆ, ಬದುಕು ಕೊಡುತ್ತೆ. ಆದ್ರೆ, ಇದೇ ಮೀನಿನಿಂದ್ಲೇ ಮೀನುಗಾರ (fisherman) ಪ್ರಾಣಬಿಟ್ಟಿದ್ದಾನೆ. ಹೌದು..ಅರಬ್ಬಿ ಸಮುದ್ರದಲ್ಲಿ ಮತ್ಸ್ಯ ಬೇಟೆಗೆ ತೆರಳಿದ್ದ ಮೀನುಗಾರನೇ ಮೀನಿಗೆ ಬೇಟೆಯಾಗಿದ್ದಾನೆ. ಕಾರವಾರದ (Karwar) ಮಾಜಾಳಿಯ ದಾಂಡೇಭಾಗದ ಅಕ್ಷಯ್ ಅನಿಲ್ ಮಾಜಾಳಿಕರ್ ಮೀನಿನಿಂದಲೇ ಬಲಿ ಆಗಿರುವ ನತದೃಷ್ಟ ಯುವಕ. ಅರಬ್ಬಿ ಸಮುದ್ರದಲ್ಲಿ ಮತ್ಸ್ಯ ಬೇಟೆಗೆ ತೆರಳಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಇನ್ನು ಮೀನಿನ ದಾಳಿಗೆ ಒಳಗಾದ ಬಳಿಕ ಆಸ್ಪತ್ರೆಗೆ ಬಂದಿದ್ದ ಅಕ್ಷಯ್ ಗೆ ವೈದ್ಯರು ಸರಿಯಾದ ಚಿಕಿತ್ಸೆ ನೀಡಿಲ್ಲ ಎನ್ನುವ ಆರೋಪ ಕೇಳಿ ಬಂದಿದೆ.
ಅಕ್ಟೋಬರ್ 14ರಂದು ಅಕ್ಷಯ್, ಆಳ ಸಮುದ್ರದಲ್ಲಿ ಮತ್ಸ್ಯ ಶಿಕಾರಿಗೆ ತೆರಳಿದ್ದ. ದೋಣಿಯಲ್ಲಿದ್ದಾಗಲೇ 8ರಿಂದ 10 ಇಂಚು ಉದ್ದದ ಚೂಪು ಮೂತಿಯ ಕಾಂಡೆ ಮೀನು, ನೀರಿನಿಂದ ಜಿಗಿದು ಬಂದು ಅಕ್ಷಯ್ ಹೊಟ್ಟೆಗೆ ಚುಚ್ಚಿದೆ. ಇದರಿಂದ ಗಂಭೀರವಾಗಿ ಗಾಯಗೊಂಡ ಅಕ್ಷಯ್‌ನನ್ನ ಕೂಡ್ಲೇ ಕಾರವಾರದ ಕ್ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. 2ದಿನ ಚಿಕಿತ್ಸೆ ಪಡೆದ ಬಳಿಕ ಗಾಯಕ್ಕೆ ಹೊಲಿಗೆ ಹಾಕಿ ವೈದ್ಯರು ಡಿಸ್ಚಾರ್ಜ್ ಮಾಡಿದ್ದರು. ಆದ್ರೆ, ನೋವು ಮರುಕಳಿಸಿದ್ದರಿಂದ ಮತ್ತೆ ಆಸ್ಪತ್ರೆಗೆ ದಾಖಲಾಗಿದ್ದ. ದುರದೃಷ್ಟವಶಾತ್ ಇಂದು (ಅಕ್ಟೋಬರ್ 16) ಬೆಳಗಿನ ಜಾವ 5 ಗಂಟೆಗೆ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.
ಅಕ್ಷಯ್ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ನೂರಾರು ಮೀನುಗಾರರು ಕಿಮ್ಸ್ ಆಸ್ಪತ್ರೆ ಬಳಿ ಜಮಾಯಿಸಿದ್ದು, ವೈದ್ಯರ ನಿರ್ಲಕ್ಷ್ಯದ ವಿರುದ್ಧ ಆಕ್ರೋಸ ಹೊರಹಾಕಿದರು.
ಉತ್ತರ ಕನ್ನಡ ಜಿಲ್ಲೆಗೆ ಹೈಟೆಕ್ ಆಸ್ಪತ್ರೆ ಬೇಕು ಎನ್ನುವುದು ದಶಕದಿಂದಲೂ ಹೋರಾಟ ನಡೆಯುತ್ತಿದೆ. ಇದರ ನಡುವೆ ಮೀನುಗಾರ ಸೂಕ್ತ ಚಿಕಿತ್ಸೆ ಸಿಗದೇ ಪ್ರಾಣ ಬಿಟ್ಟಿದ್ದು ನಿಜಕ್ಕೂ ದುರಂತ.
Views: 33