ಡಯಟ್ ಉಪನ್ಯಾಸಕರ ಮೂಲಕ ಪಿಯು ಕಾಲೇಜುಗಳ ಪರಿಶೀಲನೆ ವಿರುದ್ಧ ಮನವಿ – ಆದೇಶ ಹಿಂಪಡೆಯಲು ಪ್ರಾಂಶುಪಾಲ-ಉಪನ್ಯಾಸಕರ ಸಂಘದ ಆಗ್ರಹ.

ಚಿತ್ರದುರ್ಗ ಆ. 23

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಹಿರಿಯ ಉಪನ್ಯಾಸಕರ ಮೂಲಕ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಶೈಕ್ಷಣಿಕ ಚಟುವಟಿಕೆಗಳ, ಸ್ಥಿತಿಗತಿಗಳ ಮಾಹಿತಿ ಸಂಗ್ರಹಿಸುವ ಜಂಟಿ ಸುತ್ತೋಲೆ ಹಿಂಪಡೆಯುವಂತೆ ಕೋರಿ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನ್ಯಾಸಕರ ಮತ್ತು ಪ್ರಾಂಶುಪಾಲರ ಸಂಘದಿಂದ ಉಪನಿರ್ದೇಶಕರ ಮೂಲಕ ನಿರ್ದೇಶಕರಿಗೆ ಮನವಿಯನ್ನು ಸಂಜೆ ಸಲ್ಲಿಸಲಾಯಿತು.

ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನ್ಯಾಸಕರ ಮತ್ತು ಪ್ರಾಂಶುಪಾಲರ ಶೈಕ್ಷಣಿಕ ಚಟುವಟಿಕೆಗಳ ಕಾರ್ಯವೈಖರಿಯನ್ನು ಪರಿಶೀಲಿಸುವ ಜವಾಬ್ದಾರಿಯನ್ನು ಡಯಟ್‌ನ ಹಿರಿಯ ಉಪನ್ಯಾಸಕರಿಗೆ ನೀಡಿರುವ ಆದೇಶವನ್ನು ದಿನಾಂಕ : 18.10.2025 ರಂದು ಹೊರಡಿಸಿರುವ ಜಂಟಿ ಸುತ್ತೋಲೆಯಲ್ಲಿ ಉಲ್ಲೇಖಿಸಲಾಗಿದೆ. ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಶೈಕ್ಷಣಿಕ ಚಟುವಟಿಕೆಗಳನ್ನು ಪರಿಣಾಮಕಾರಿಯಾಗಿ ನಿಗಾವಹಿಸುವ ಉದ್ದೇಶದಿಂದ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಹಿರಿಯ ಉಪನ್ಯಾಸಕರ ಮೂಲಕ ಸ್ಥಳೀಯ ಪರಿಶೀಲನೆಗಳನ್ನು ನಡೆಸುವಂತೆ ತೀರ್ಮಾನಿಸಲಾಗಿದೆ.

ಆದರೆ, ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಹಾಗೂ ರಾಜ್ಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ನಿರ್ದೇಶನಾಲಯಗಳು ಒಟ್ಟಿಗೆ ಹೊರಡಿಸಿರುವ ಈ ಜಂಟಿ ಸುತ್ತೋಲೆ ಪದವಿ ಪೂರ್ವ ಶಿಕ್ಷಣದ ಅಸ್ಮಿತೆ, ಗೌರವ ಮತ್ತು ಶೈಕ್ಷಣಿಕ ತತ್ತ್ವಗಳ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎತ್ತಿದೆ.

ಸುತ್ತೋಲೆಯಲ್ಲಿ “ಡಯಟ್‌ನ ಹಿರಿಯ ಉಪನ್ಯಾಸಕರು” ಎಂದು ಉಲ್ಲೇಖಿಸಿದ್ದರೂ, ವಾಸ್ತವದಲ್ಲಿ ಡಯಟ್‌ನಲ್ಲಿ ಇರುವ ಹುದ್ದೆ “ಉಪನ್ಯಾಸಕ” ಹುದ್ದೆಯಲ್ಲ. ಅದು “ಪ್ರಶಿಕ್ಷಕರ” ಹುದ್ದೆ ಆಗಿದ್ದು, ಅಶಿಕ್ಷಕ ಹುದ್ದೆ ಎಂದು ಸಂಬೋಧಿಸಲಾಗುತ್ತದೆ. ಅವರು ವಿಷಯಕ್ಕೆ ಸಂಬಂಧಪಟ್ಟಂತೆ ಬೋಧನಾ ಪದ್ಧತಿಗಳ ಬಗ್ಗೆ ತರಬೇತಿ ನೀಡುತ್ತಾರೆ ಅಷ್ಟೇ ವಿನಃ, ಅವರಿಗೆ ಪದವಿ ಪೂರ್ವ ಶಿಕ್ಷಣದ ವಿಷಯಗಳಿಗೆ ಸಂಬಂಧಪಟ್ಟಂತೆ (10+2) ಹಂತದ ಆಳವಾದ ಜ್ಞಾನ ಇರುವುದಿಲ್ಲ. ಪದವಿ ಪೂರ್ವ ಶಿಕ್ಷಣ ಹಂತವು ಶಾಲಾ ತರಬೇತಿ ವಿಸ್ತರಣೆ ಅಲ್ಲ; ಅದು ವೈಜ್ಞಾನಿಕ ಪೂರ್ವ ಪಠ್ಯಕ್ರಮದ ವೈಜ್ಞಾನಿಕ ಹಿನ್ನೆಲೆ, ಪಾಠ್ಯಕ್ರಮ ಆಧಾರಿತ ವಿಷಯದ ವ್ಯಾಪ್ತಿ ಹಾಗೂ ಆಳವಾದ ಕಲ್ಪನೆಗಳ ಅರಿವಿನ ಆಧಾರದ ಮೇಲೆ ನಡೆಯುವ ಹಂತವಾಗಿದೆ.

ಡಯಟ್‌ನಲ್ಲಿ ಸೇವೆ ಸಲ್ಲಿಸುವ ಶಿಕ್ಷಕರಿಗೆ ಗಣಿತ, ರಸಾಯನಶಾಸ್ತ್ರ, ಜೀವಶಾಸ್ತ್ರ, ಎಲೆಕ್ಟ್ರಾನಿಕ್ಸ್, ಕಂಪ್ಯೂಟರ್ ವಿಜ್ಞಾನ ಇತ್ಯಾದಿ ವಿಷಯಗಳ ಕುರಿತು ಪರಿಕಲ್ಪನಾತ್ಮಕ ಅರಿವು ಹಾಗೂ ವಿಷಯದ ಆಳವಾದ ತಿಳುವಳಿಕೆ ಇರುವುದಿಲ್ಲ. ಇವರು ಶಾಲಾ ಮಟ್ಟದ ತರಬೇತಿದಾರರಾಗಿರುವುದರಿಂದ, ವಿಜ್ಞಾನ ಹಾಗೂ ಇತರ ವಿಶಿಷ್ಟ ವಿಷಯಗಳಲ್ಲಿ ಪದವಿ ಪೂರ್ವ ಮಟ್ಟದ ಉಪನ್ಯಾಸಕರ ಬೋಧನೆ ಹಾಗೂ ಮೌಲ್ಯಮಾಪನದ ಕುರಿತು ಪೂರ್ಣ ದೃಷ್ಟಿ ಕೊರತೆಯಿದೆ.

ಈ ಎಲ್ಲ ಕಾರಣಗಳಿಂದಾಗಿ ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಹಾಗೂ ರಾಜ್ಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಇಲಾಖೆಯು ದಿನಾಂಕ 18.10.2025 ರಂದು ಹೊರಡಿಸಿರುವ ಈ ಸುತ್ತೋಲೆಯನ್ನು ತಕ್ಷಣವೇ ಹಿಂಪಡೆಯಬೇಕು. ಇಲ್ಲವಾದರೆ ಯಾವುದೇ ಅನ್ಯ ಮಾರ್ಗವಿಲ್ಲದೆ ಕರ್ನಾಟಕ ರಾಜ್ಯ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರ ಸಂಘ ಮತ್ತು ಕರ್ನಾಟಕ ರಾಜ್ಯ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘದಿಂದ ತೀವ್ರವಾದ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಲಾಗಿದೆ.

ಈ ಸಂದರ್ಭದಲ್ಲಿ ಪ್ರಾಂಶುಪಾಲರ ಸಂಘದ ಅಧ್ಯಕ್ಷರಾದ ಪಿ.ಎಂ. ರಾಜೇಶ್, ಕಾರ್ಯದರ್ಶಿ ಕೆ.ಎನ್. ವಂಸಂತ ಕುಮಾರ್, ಖಜಾಂಚಿ ಡಾ. ಶಬ್ಬೀರ್ ಅಹ್ಮದ್ ಖಾನ್, ಉಪನ್ಯಾಸಕರ ಸಂಘದ ಅಧ್ಯಕ್ಷ ಮಲ್ಲೇಶಪ್ಪ, ಕಾರ್ಯದರ್ಶಿ ಕಾಂತರಾಜ್, ಕಾರ್ಯಾಧ್ಯಕ್ಷ ಜಿ.ಎಸ್. ತಿಪ್ಪಸ್ವಾಮಿ, ಖಜಾಂಚಿ ಎಸ್. ಕೆಂಚವೀರಪ್ಪ, ಜಿಲ್ಲಾ ಜಂಟಿ ಕಾರ್ಯದರ್ಶಿ ನಾಗರಾಜ್ ಸೇರಿದಂತೆ ಇತರರು ಭಾಗವಹಿಸಿದ್ದರು.

Views: 13

Leave a Reply

Your email address will not be published. Required fields are marked *