Sports News: ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡಿನ ಪ್ರಭುತ್ವವನ್ನು ಕೊನೆಗಾಣಿಸಿದ ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಭಾನುವಾರದ ವನಿತಾ ಏಕದಿನ ವಿಶ್ವಕಪ್ ಫೈನಲ್ ಹಣಾಹಣಿಗೆ ಸಜ್ಜಾಗಿವೆ. ಇಲ್ಲಿ ಯಾರೇ ಗೆದ್ದರೂ ಇತಿಹಾಸ, ಮೊದಲ ಸಲ ಪಟ್ಟವನ್ನು ಅಲಂಕರಿಸುವ ಸುವರ್ಣಾವಕಾಶ.
ಈ ಕಾರಣಕ್ಕಾಗಿ ಇತ್ತಂಡಗಳ ಪ್ರಶಸ್ತಿ ಸಮರ ಭಾರೀ ಕುತೂಹಲ ಮೂಡಿಸಿದೆ, ಕ್ರಿಕೆಟ್ ಅಭಿಮಾನಿಗಳನ್ನು ತುದಿಗಾಲಿನಲ್ಲಿ ನಿಲ್ಲಿಸಿದೆ.ಭಾರತ ಈವರೆಗೆ 2 ಫೈನಲ್ ಗಳಲ್ಲಿ ಸೋತು ಪ್ರಶಸ್ತಿ ವಂಚಿತವಾಗಿತ್ತು. 3ನೇ ಪ್ರಯತ್ನ ತವರಿನಂಗಳದಲ್ಲೇ ಸಾಗಲಿದೆ. 7 ಬಾರಿ ಪ್ರಶಸ್ತಿ ಗೆದ್ದು ಮೆರೆದಾಡುತ್ತಿದ್ದ ಹಾಲಿ ಚಾಂಪಿಯನ್ ಖ್ಯಾತಿಯ ಆಸ್ಟ್ರೇಲಿಯಾವನ್ನು ಸೆಮಿಫೈನಲ್ ಕದನದಲ್ಲಿ ವಿಶ್ವದಾಖಲೆ ಚೇಸಿಂಗ್ ಮೂಲಕ ಸದೆಬಡಿದ ಹರ್ಮನ್ ಪ್ರೀತ್ ಕೌರ್ ನಾಯಕತ್ವದ ಭಾರತ ಇಲ್ಲಿನ ನೆಚ್ಚಿನ ತಂಡ ಎಂಬುದರಲ್ಲಿ ಎರಡು ಮಾತಿಲ್ಲ. ಈ ಒಂದು ಗೆಲುವು ಭಾರತ ತಂಡಕ್ಕೆ ಮುಂದಿನ ಹತ್ತು ಹಲವು ಪಂದ್ಯಗಳಿಗಾಗುವಷ್ಟು ಆತ್ಮವಿಶ್ವಾಸ, ಸ್ಫೂರ್ತಿ, ನೈತಿಕ ಸ್ಥೈರ್ಯವನ್ನು ತುಂಬಿದೆ. ‘ಆಸ್ಟ್ರೇಲಿಯಾವನ್ನು ಸೋಲಿಸಿದವರಿಗೆ ವಿಶ್ವಕಪ್’ ಎಂಬ ಅಲಿಖಿತ ನಿಯಮವನ್ನು ಸಾಕಾರಗೊಳಿಸುವ ಸಮಯವೀಗ ಸನ್ನಿಹಿತವಾಗಿದೆ ಎನ್ನಲಡ್ಡಿಯಿಲ್ಲ.
ಹಾಗೆ ನೋಡಹೋದರೆ ಗುರುವಾರ ಇದೇ ನವಿ ಮುಂಬಯಿ ಅಂಗಳದಲ್ಲಿ ಸಾಗಿದ ಭಾರತ ಆಸ್ಟ್ರೇಲಿಯಾ ನಡುವಿನ ಸೆಮಿಫೈನಲ್ ಪಂದ್ಯವೇ ‘ಫೈನಲ್’ ಆಗಿತ್ತು. ಭಾನುವಾರದ್ದೇನಿದ್ದರೂ ‘ಔಪಚಾರಿಕ ಫೈನಲ್!’ ಎನ್ನಬಹುದು.
ಪ್ರಚಂಡ ಪ್ರತೀಕಾರ!:
ಸೆಮಿಫೈನಲ್ ಸಮರದಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳೆರಡೂ ಲೀಗ್ ಸೋಲಿಗೆ ಬಡ್ಡಿ ಸಮೇತ ಸೇಡು ತೀರಿಸಿಕೊಂಡದ್ದು ಈ ವಿಶ್ವಕಪ್ ವಿಶೇಷವಾಗಿ ದಾಖಲಾಗಿದೆ. ಲೀಗ್ ಹಂತದಲ್ಲಿ ಆಸೀಸ್ ವಿಶ್ವದಾಖಲೆಯ ಚೇಸಿಂಗ್ ಮೂಲಕ ಭಾರತವನ್ನು ಮಣಿಸಿದರೆ, ಭಾರತ ಸೆಮಿಯಲ್ಲಿ ವಿಶ್ವದಾಖಲೆ ಮೂಲಕವೇ ಕಾಂಗರೂಗಳ ಬೇಟೆಯಾಡಿತ್ತು. ಜೆಮಿಮಾ ರೋಡ್ರಿಗಸ್ ಅವರ ಜಬರ್ದಸ್ತ್ ಬ್ಯಾಟಿಂಗ್ ದಕ್ಷಿಣ ಆಫ್ರಿಕಾ ಪಾಲಿಗೆ ಎಚ್ಚರಿಕೆಯ ಗಂಟೆ.
ಇತ್ತಂಡಗಳ ಬ್ಯಾಟಿಂಗ್ ಬಲಿಷ್ಠ:
ಬಲಾಬಲದ ಕುರಿತು ಒಂದೇ ಸಾಲಲ್ಲಿ ಹೇಳುವುದಾದರೆ, ಇತ್ತಂಡಗಳ ಬ್ಯಾಟಿಂಗ್ ವಿಭಾಗ ಅತ್ಯಂತ ಸದೃಢ; ಬೌಲಿಂಗ್ ಆಕ್ರಮಣದಲ್ಲಿ ಹಾಗೂ ಆಲ್ರೌಂಡ್ ವಿಭಾಗದಲ್ಲಿ ದಕ್ಷಿಣ ಆಫ್ರಿಕಾವೇ ತುಸು ಮೇಲು.
ಭಾರತಕ್ಕೆ 3ನೇ ಫೈನಲ್
ಇದು ಭಾರತೀಯ ವನಿತೆಯರ 3ನೇ ಏಕದಿನ ವಿಶ್ವಕಪ್ ಫೈನಲ್. ಮೊದಲ ಸಲ ಪ್ರಶಸ್ತಿ ಸುತ್ತು ತಲುಪಿದ್ದು 2005ರಲ್ಲಿ. ಎದುರಾಳಿ ಆಸ್ಟ್ರೇಲಿಯ. ಸೆಂಚುರಿಯನ್ ನಲ್ಲಿ ನಡೆದ ಈ ಪಂದ್ಯದಲ್ಲಿ ಆಸೀಸ್ 98 ರನ್ನುಗಳಿಂದ ಮಿಥಾಲಿ ರಾಜ್ ಪಡೆಯನ್ನು ಪರಾಭವಗೊಳಿಸಿತ್ತು. ಆಸೀಸ್ 4ಕ್ಕೆ 215 ರನ್ ಗಳಿಸಿದರೆ, ಭಾರತ 46 ಓವರ್ ಗಳಲ್ಲಿ 117ಕ್ಕೆ ಕುಸಿಯಿತು. ಭಾರತ 2ನೇ ಫೈನಲ್ ಕಂಡದ್ದು 2017ರಲ್ಲಿ. ಇದು ಆತಿಥೇಯ ಇಂಗ್ಲೆಂಡ್ ವಿರುದ್ಧ ನಡೆದ ಲಾರ್ಡ್ಸ್ ಕದನವಾಗಿತ್ತು. 9 ರನ್ನುಗಳಿಂದ ಸೋತ ಕೌರ್ ಬಳಗ ಮತ್ತೊಮ್ಮೆ ಪ್ರಶಸ್ತಿಯಿಂದ ವಂಚಿತವಾಯಿತು.
*ಗೆದ್ದರೆ ಭಾರತೀಯ ವನಿತೆಯರಿಗೆ 125 ಕೋಟಿ!:*ಭಾರತದ ವನಿತೆಯರು ಏಕದಿನ ವಿಶ್ವಕಪ್ ಜಯಿಸಿದ್ದೇ ಆದರೆ ಬಿಸಿಸಿಐ ಬರೋಬ್ಬರಿ 125 ಕೋಟಿ ರೂ. ಬಹುಮಾನ ನೀಡುವ ಕುರಿತು ಯೋಚಿಸುತ್ತಿದೆ. ಇದು ರೋಹಿತ್ ಶರ್ಮ ಸಾರಥ್ಯದ ಪುರುಷರ ತಂಡ ಟಿ20 ವಿಶ್ವಕಪ್ ಗೆದ್ದಾಗ ನೀಡಲಾದ ಬಹುಮಾನಕ್ಕೆ ಸಮನಾದ ಮೊತ್ತವೆಂಬುದು ವಿಶೇಷ. ಹಾಗೆಯೇ ಇದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ ‘ಸಮಾನ ವೇತನ’ ನೀತಿಯ ಪಾಲನೆಯಾಗಿದೆ.
ಮುಖಾಮುಖಿ:
ಒಟ್ಟು ಪಂದ್ಯ: 34
ಭಾರತ ಜಯ: 20
ಆಫ್ರಿಕಾ ಜಯ: 13
ಫಲಿತಾಂಶವಿಲ್ಲ: 1
ಅಂಕಣಗುಟ್ಟು:ಡಿ.ವೈ.ಪಾಟೀಲ್ ಅಂಗಳ ಈಗಾಗಲೇ ಬ್ಯಾಟಿಂಗ್ ಸ್ನೀಹಿ ಎಂಬುದು ಸಾಬೀತಾಗಿದೆ. ಇಲ್ಲಿ 3 ಸಲ ತಂಡದ ಮೊತ್ತ ಮುನ್ನೂರರ ಗಡಿ ದಾಟಿದೆ. ಚೇಸಿಂಗ್ ವಿಶ್ವದಾಖಲೆ ಕೂಡ ನಿರ್ಮಾಣಗೊಂಡಿದೆ. ಭಾನುವಾರವೂ ಇದೇ ಟ್ರ್ಯಾಕ್ ಬಳಸಿದರೆ ರನ್ ಸುರಿಮಳೆ ಖಚಿತ. ಪಂದ್ಯಕ್ಕೆ ಮಳೆಯಿಂದ ಅಡಚಣೆಯಾಗುವ ಸಾಧ್ಯತೆ ಕಡಿಮೆ.
ಸಂಭಾವ್ಯ ತಂಡಗಳು:ಭಾರತ: ಸ್ಮೃತಿ ಮಂಧನಾ, ಶಫಾಲಿ ವರ್ಮ, ಜೆಮಿಮಾ ರೋಡ್ರಿಗಸ್, ಹರ್ಮನ್ ಪ್ರೀತ್ ಕೌರ್ (ನಾಯಕಿ), ದೀಪ್ತಿ ಶರ್ಮ, ರಿಚಾ ಘೋಷ್, ಅಮನ್ಜೋತ್ ಕೌರ್, ರಾಧಾ ಯಾದವ್/ಸ್ನೇಹ್ ರಾಣಾ, ಕ್ರಾಂತಿ ಗೌಡ್, ಶ್ರೀಚರಣಿ, ರೇಣುಕಾ ಸಿಂಗ್.
ದಕ್ಷಿಣ ಆಫ್ರಿಕಾ: ಲಾರಾ ವೋಲ್ವಾರ್ಟ್ (ನಾಯಕಿ), ಟಾಜ್ಮಿನ್ ಬ್ರಿಟ್ಸ್, ಆಯನೆಕ್ ಬಾಶ್/ಮಸಬಟ ಕ್ಲಾಸ್, ಸುನೆ ಲುಸ್, ಮರಿಜಾನ್ ಕಾಪ್, ಸಿನಾಲೊ ಜಾಫ್ತಾ, ಆಯನೇರಿ ಡರ್ಕ್ಸನ್, ಕ್ಲೊ ಟ್ರಯಾನ್, ನಾಡಿನ ಡಿ ಕ್ಲರ್ಕ್, ಅಯಬೊಂಗ ಖಾಕ, ನೊಂಕುಲುಲೆಕೊ ಮಲಾಬ.
ಸ್ಥಳ: ನವಿ ಮುಂಬೈ, ಪಂದ್ಯ
ಆರಂಭ: ಮಧ್ಯಾಹ್ನ 3
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್
ಭಾರತದ ಫೈನಲ್ ಹಾದಿ:
1. ಶ್ರೀಲಂಕಾ ವಿರುದ್ಧ 59 ರನ್ ಜಯ
2. ಪಾಕ್ ವಿರುದ್ಧ 88 ರನ್ ಗೆಲುವು
3. ದ.ಆಫ್ರಿಕಾ ವಿರುದ್ಧ 3 ವಿಕೆಟ್ ಸೋಲು
4. ಆಸ್ಟ್ರೇಲಿಯ ವಿರುದ್ಧ 3 ವಿಕೆಟ್ ಸೋಲು
5. ಇಂಗ್ಲೆಂಡ್ ವಿರುದ್ಧ 4 ರನ್ ಸೋಲು
6. ಕಿವೀಸ್ ವಿರುದ್ಧ 53 ರನ್ ಜಯ
7. ಬಾಂಗ್ಲಾದೇಶ ಪಂದ್ಯ ರದ್ದು
8. ಆಸೀಸ್ ವಿರುದ್ಧ 5 ವಿಕೆಟ್ ಜಯ (ಸೆಮಿ)
ದ.ಆಫ್ರಿಕಾದ ಫೈನಲ್ ಹಾದಿ:
1. ಇಂಗ್ಲೆಂಡ್ ವಿರುದ್ಧ 10 ವಿಕೆಟ್ ಸೋಲು
2. ನ್ಯೂಜಿಲೆಂಡ್ ವಿರುದ್ಧ 6 ವಿಕೆಟ್ ಜಯ
3. ಭಾರತ ವಿರುದ್ಧ 3 ವಿಕೆಟ್ ಜಯ
4. ಬಾಂಗ್ಲಾದೇಶ ವಿರುದ್ಧ 3 ವಿಕೆಟ್ ಜಯ
5. ಶ್ರೀಲಂಕಾ ವಿರುದ್ಧ 10 ವಿಕೆಟ್ ಜಯ
6. ಪಾಕಿಸ್ತಾನ ವಿರುದ್ಧ 150 ರನ್ ಜಯ
7. ಆಸ್ಟ್ರೇಲಿಯಾ ವಿರುದ್ಧ 7 ವಿಕೆಟ್ ಸೋಲು
8. ಇಂಗ್ಲೆಂಡ್ ವಿರುದ್ಧ 125 ರನ್ ಜಯ (ಸೆಮಿ)