ಚಳಿಗಾಲದಲ್ಲಿ ಶುಂಠಿ ಚಹಾ ಸೇವನೆ – ಪ್ರಯೋಜನಗಳೂ, ಮುನ್ನೆಚ್ಚರಿಕೆಗಳೂ!

ನಮ್ಮ ಸುತ್ತಮುತ್ತ ಚಹಾ (Tea) ಪ್ರಿಯರಿಗೆ ಕೊರತೆಯಿಲ್ಲ. ಬೇಸಿಗೆ, ಮಳೆ ಅಥವಾ ಚಳಿ ಹೀಗೆ ಯಾವುದೇ ಕಾಲವಿರಲಿ, ಚಹಾ ಕುಡಿಯುವುದನ್ನು ಆನಂದಿಸುತ್ತಾರೆ. ಅದರಲ್ಲಿಯೂ ಚಳಿಗಾಲದಲ್ಲಿ ಚಹಾ ಕುಡಿಯುವ ಪ್ರಮಾಣ ತುಸು ಹೆಚ್ಚಾಗಿಯೇ ಇರುತ್ತದೆ. ಚಳಿಯಾಗದಂತೆ ಬೆಚ್ಚಗಿರಲು ವಿವಿಧ ರೀತಿಯ ಚಹಾಗಳನ್ನು ಟ್ರೈ ಮಾಡುತ್ತಾರೆ.

ಅದರಲ್ಲಿಯೂ ಹೆಚ್ಚಿನವರು ಈ ಸಮಯದಲ್ಲಿ ಶುಂಠಿ ಚಹಾ (Ginger Tea) ಕುಡಿಯಲು ಬಯಸುತ್ತಾರೆ. ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದರ ಜೊತೆಗೆ ನಮ್ಮ ದೇಹವನ್ನು ಬೆಚ್ಚಗಿಡಲು ಸಹಾಯ ಮಾಡುವಂತಹ ಹಲವಾರು ಪ್ರಯೋಜನಗಳನ್ನು ಹೊಂದಿದೆ. ಆದರೆ ಶುಂಠಿ ಚಹಾ ಕುಡಿಯುವುದು ಎಲ್ಲರಿಗೂ ಒಳ್ಳೆಯದೇ ಅಥವಾ ಇದು ಯಾರಿಗೆ ಪ್ರಯೋಜನಕಾರಿ ಎಂಬುದನ್ನು ತಿಳಿದುಕೊಳ್ಳಬೇಕಾಗುತ್ತದೆ.

ಏಕೆಂದರೆ ಬಿಪಿ (Hypertension) ಇರುವ ಕೆಲವರು ಈ ಚಹಾ ಕುಡಿಯಲು ಹಿಂದೇಟು ಹಾಕುತ್ತಾರೆ. ಹಾಗಾದರೆ ಇದು ಯಾರಿಗೆ ಒಳ್ಳೆಯದು ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.


ಸಂಶೋಧನೆ ಹೇಗೆ ನಡೆದಿತ್ತು?
ಅಧಿಕ ರಕ್ತದೊತ್ತಡ ಸಮಸ್ಯೆ ಇರುವ ರೋಗಿಗಳಿಗೆ ಶುಂಠಿಯ ಚಹಾದಿಂದ ಸಿಗುವ ಪ್ರಯೋಜನಗಳು ಮತ್ತು ಹಾನಿಗಳ ಕುರಿತು ಈಗಾಗಲೇ ಸಂಶೋಧನೆ ನಡೆದಿದೆ. ನ್ಯಾಷನಲ್ ಲೈಬ್ರರಿ ಆಫ್ ಮೆಡಿಸಿನ್ ನಡೆಸಿದ ಸಂಶೋಧನೆಯಲ್ಲಿ 18 ವರ್ಷಕ್ಕಿಂತ ಮೇಲ್ಪಟ್ಟ ಸುಮಾರು 5,000 ಜನರ ಮೇಲೆ ಅಧ್ಯಯನ ಮಾಡಲಾಗಿದ್ದು, ಇವರನ್ನು ಎರಡು ಗುಂಪುಗಳಾಗಿ ವಿಂಗಡಿಸಿ, ಒಂದು ಗುಂಪು ಶುಂಠಿ ಚಹಾವನ್ನು ಸೇವನೆ ಮಾಡುವವರು ಮತ್ತು ಇನ್ನೊಂದು ಗುಂಪು ಅದನ್ನು ಕುಡಿಯದವರು. ಈ ಎರಡೂ ಗುಂಪುಗಳನ್ನು ಕೆಲವು ದಿನಗಳ ವರೆಗೆ ಮೇಲ್ವಿಚಾರಣೆ ಮಾಡುವ ಮೂಲಕ ಅವರ ರಕ್ತದೊತ್ತಡವನ್ನು ಪ್ರತಿದಿನ ಪರೀಕ್ಷಿಸಲಾಯಿತು.


ಶುಂಠಿಯಿಂದ ರಕ್ತದೊತ್ತಡ ಹೆಚ್ಚುತ್ತದೆಯೋ ಇಲ್ಲವೋ?
ಯಾವುದೇ ರೂಪದಲ್ಲಿಯಾದರೂ ಶುಂಠಿ ಸೇವನೆ ಮಾಡುವವರಲ್ಲಿ ಅಧಿಕ ರಕ್ತದೊತ್ತಡದ ಅಪಾಯವು ಸುಮಾರು 8.4% ರಷ್ಟು ಕಡಿಮೆ ಎಂದು ಸಂಶೋಧನಾ ಫಲಿತಾಂಶಗಳಿಂದ ತಿಳಿದು ಬಂದಿದೆ. ಮಾತ್ರವಲ್ಲ ಸಂಶೋಧನೆಯಲ್ಲಿ ಶುಂಠಿಯ ಪ್ರಮಾಣವನ್ನು ಸಹ ನೋಡಲಾಗಿದ್ದು, ಪ್ರತಿದಿನ 4 ಗ್ರಾಂ ಗಿಂತ ಕಡಿಮೆ ಪ್ರಮಾಣದಲ್ಲಿ ಶುಂಠಿಯನ್ನು ಸೇವಿಸುವವರಲ್ಲಿ ಅಧಿಕ ರಕ್ತದೊತ್ತಡದ ಅಪಾಯವು ಅದನ್ನು ಸೇವಿಸದವರಿಗಿಂತ ಕಡಿಮೆ ಎಂದು ಕಂಡುಹಿಡಿದಿದೆ. ಶುಂಠಿಯಲ್ಲಿರುವ ಸಂಯುಕ್ತಗಳು ದೇಹದಲ್ಲಿ ಉರಿಯೂತದ ಪರಿಣಾಮವನ್ನು ಬೀರುತ್ತವೆ ಮತ್ತು ಚಯಾಪಚಯ ಕ್ರಿಯೆಯನ್ನು ಸುಧಾರಿಸುತ್ತವೆ ಎಂದು ಸಂಶೋಧಕರು ಹೇಳಿದ್ದಾರೆ. ಪ್ರತಿದಿನ ಶುಂಠಿಯನ್ನು ಸೇವಿಸುವುದರಿಂದ ರಕ್ತದೊತ್ತಡ ಕಡಿಮೆಯಾಗುತ್ತದೆ ಮತ್ತು ವಯಸ್ಕರಲ್ಲಿ ಅಧಿಕ ರಕ್ತದೊತ್ತಡದ ಅಪಾಯವನ್ನು ಕಡಿಮೆ ಮಾಡುತ್ತದೆ ಎಂದು ಸಂಶೋಧನೆಯು ಸ್ಪಷ್ಟವಾಗಿ ತಿಳಿಸಿದೆ.


ಈ ಬಗ್ಗೆ ತಜ್ಞರ ಅಭಿಪ್ರಾಯವೇನು?
ದೆಹಲಿ ಸರ್ಕಾರದ ಮುಖ್ಯ ಆಯುರ್ವೇದ ಅಧಿಕಾರಿ ಡಾ. ಆರ್.ಪಿ. ಪರಾಶರ್ ಹೇಳುವ ಪ್ರಕಾರ, ಆಯುರ್ವೇದದಲ್ಲಿಯೂ ಶುಂಠಿಯನ್ನು ಬಹಳ ಪ್ರಯೋಜನಕಾರಿ ಎಂದು ಪರಿಗಣಿಸುತ್ತಾರೆ. ಇದು ದೇಹಕ್ಕೆ ಹಲವು ವಿಧಗಳಲ್ಲಿ ಪ್ರಯೋಜನಕಾರಿಯಾಗಿದೆ. ಮಾತ್ರವಲ್ಲ ಒತ್ತಡದ ಹಾರ್ಮೋನುಗಳನ್ನು ಕೂಡ ಕಡಿಮೆ ಮಾಡುತ್ತದೆ ಮತ್ತು ರಕ್ತ ತೆಳುವಾಗಿಸುವ ಪರಿಣಾಮವನ್ನು ಸಹ ಹೊಂದಿದೆ, ಹಾಗಾಗಿ ಇದು ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಆದರೆ, ಶುಂಠಿಯನ್ನು ಯಾವಾಗಲೂ ಕಡಿಮೆ ಪ್ರಮಾಣದಲ್ಲಿ ಸೇವನೆ ಮಾಡಬೇಕು. ದಿನಕ್ಕೆ ಒಂದಕ್ಕಿಂತ ಹೆಚ್ಚು ಬಾರಿ (ಯಾವುದೇ ರೂಪದಲ್ಲಿ) ಶುಂಠಿಯನ್ನು ಸೇವಿಸಬೇಡಿ. ಏಕೆಂದರೆ ಅತಿಯಾದ ಸೇವನೆಯು ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಉಂಟುಮಾಡಬಹುದು. ಸೀಮಿತ ಪ್ರಮಾಣದಲ್ಲಿ ಸೇವಿಸಿದಾಗ ಶುಂಠಿ ಪ್ರಯೋಜನಕಾರಿಯಾಗಿದೆ. ರಕ್ತ ತೆಳುಗೊಳಿಸುವ ಔಷಧಿಗಳನ್ನು ತೆಗೆದುಕೊಳ್ಳುತ್ತಿರುವವರು ಅಥವಾ ಕಡಿಮೆ ರಕ್ತದೊತ್ತಡ ಹೊಂದಿರುವವರು ಮಾತ್ರ ವೈದ್ಯರ ಸಲಹೆಯ ಆಧಾರದ ಮೇಲೆ ಅದನ್ನು ಸೇವಿಸಬೇಕು ಎಂದಿದ್ದಾರೆ.

Views: 19

Leave a Reply

Your email address will not be published. Required fields are marked *