ಚಿತ್ರದುರ್ಗ ಸಿವಿಲ್ ನ್ಯಾಯಾಲಯದಿಂದ ಬಣಜಾರ ಹಾಸ್ಟೆಲ್ ಪರ ತೀರ್ಪು;14 ವರ್ಷದ ಪ್ರಕರಣಕ್ಕೆ ತೆರೆ, ನಕಲಿ ವಿಲ್ ವಜಾ.

ಚಿತ್ರದುರ್ಗ ನ. 23

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ನಗರದ ಬಣಜಾರ ಬಾಲಕಿಯರ ವಿದ್ಯಾರ್ಥಿನಿಲಯ (ರಿ.) ಇದರ ದಾವ ಸ್ವತ್ತು ಆಡಳಿತ ಸಮಿತಿ ತೆಕ್ಕೆಗೆ ಬಂದಿದ್ದು, ಚಿತ್ರದುರ್ಗದ ಹಿರಿಯ ಸಿವಿಲ್ ಮತ್ತು ಸಿಜಿಎಮ್ ನ್ಯಾಯಾಲಯ ಮಹತ್ವದ ತೀರ್ಪು ನೀಡಿದೆ ಎಂದು ಬಣಜಾರ ಸಮುದಾಯದ ಮುಖಂಡರಾದ ನಿಂಗಾನಾಯ್ಕ್ ತಿಳಿಸಿದ್ದಾರೆ.

ಚಿತ್ರದುರ್ಗ ನಗರದ ಪ್ರವಾಸಿ ಮಂದಿರದಲ್ಲಿ ಶನಿವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು 1934ರಲ್ಲಿ ಅನಂತಯ್ಯಶೆಟ್ಟಿರವರಿಂದ ಖರೀದಿಸಿದ ತ.ರಾ.ಸು ರಂಗಮಂದಿರದ ಮುಂಭಾಗದಲ್ಲಿರುವ ದಾವ ಸ್ವತ್ತು ಬಣಜಾರ ಹಾಸ್ಟೆಲ್ ಸ್ಥಾಪನೆ ಮೂಲಕ ಮತ್ತು ಶಿಕ್ಷಣದಿಂದ ವಂಚಿತರಾಗಿರುವ ಲಂಬಾಣಿ ಸಮುದಾಯದ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗಾಗಿ ಅಂದಿನ ಕಾರ್ಯದರ್ಶಿಗಳಾಗಿದ್ದ ಮತ್ತು ಮೈಸೂರು ಮಹಾರಾಜರ ಆಸ್ಥಾನದಲ್ಲಿ ಪ್ರಜಾ ಪ್ರತಿನಿಧಿಯಾಗಿದ್ದ ದಿವಂಗತ ಜಾತ್ರಾನಾಯ್ಕರವರ ನೇತೃತ್ವದಲ್ಲಿ ಜನಾಂಗದವರ ದೇಣಿಗೆಯಿಂದ ಮೈಸೂರು ಮಂಜೂರಾದ ಹಣದಲ್ಲಿ ಈ ಸ್ವತ್ತನ್ನು ಖರೀದಿಸಲಾಗಿತ್ತು. ಅಂದಿನಿಂದ ಬಣಜಾರ ಬಾಲಕ ಮತ್ತು ಬಾಲಕಿಯರ ವಿದ್ಯಾರ್ಥಿ ನಿಲಯವನ್ನು ನಡೆಸಿಕೊಂಡು ಬರಲಾಗಿರುತ್ತದೆ ಎಂದು ತಿಳಿಸಿದರು.

ಈ ಮಧ್ಯೆ ಸದರಿ ದಾವ ಸ್ವತ್ತನ್ನು ತಮ್ಮದಾಗಿಸಿಕೊಳ್ಳುವ ಯಾವುದೇ ದೃಷ್ಠಿಕೋನ ಜಾತ್ರಾನಾಯ್ಕ ರವರಿಗೆ ಇರಲಿಲ್ಲ ಆದರೆ ಇವರ ಮರಣ ನಂತರ ಇವರ ಕುಟುಂಬಸ್ಥರು ಜಾತ್ರಾ ನಾಯ್ಕರ ಹೆಸರಿನಲ್ಲಿ ನಕಲಿ ವಿಲ್ ಯಾನೆ ಮರಣ ಶಾಸನ ಪತ್ರ ತಯಾರಿಸಿಕೊಂಡು ಸ್ವತ್ತನ್ನು ತಮ್ಮದಾಗಿಸಿಕೊಳ್ಳವ ದುರದ್ದೇಶದಿಂದ ಚಿತ್ರದುರ್ಗ ಹಿರಿಯ ಸಿವಿಲ್ ನ್ಯಾಯಾಲದ ಮೊರೆ ಹೋಗಿದ್ದು, 2011 ರಿಂದ 2025ನೇ ಸಾಲಿನವರೆಗೆ ಸುದೀರ್ಘವಾದ ವಾದ ವಿವಾದ ಆಲಿಸಿದ ನ್ಯಾಯಾಲವು ದಿನಾಂಕ:18-10-2025ರಲ್ಲಿ ನಕಲಿ ವಿಲ್ ಪರಿಗಣಿಸದೇ ಸದರಿ ದಾವ ಸ್ವತ್ತು ಬಣಜಾರ ಬಾಲಕಿಯರ ವಿದ್ಯಾರ್ಥಿ ನಿಲಯದ ಆಡಳಿತ ಸಮಿತಿಗೆ ಸೇರಿದ್ದಾಗಿದೆ ಎಂದು ತೀರ್ಪು ನೀಡಿ ಅಸಲು ದಾವ ಸಂಖ್ಯೆ : 91/2019ನ್ನು ವಜಾಗೊಳಿಸಲಾಗಿದೆ ಎಂದ ಅವರು ಶ್ರೀಮತಿ ಕಮಲಾಬಾಯಿ ಯವರು ಬಣಜಾರ ಬಾಲಕಿಯರ ವಿದ್ಯಾರ್ಥಿ ನಿಲಯದ ಅಧಿಕೃತ ಕಾರ್ಯದರ್ಶಿಯಾಗಿದ್ದು, ಸದರಿ ಸ್ವತ್ತಿನಲ್ಲಿ ಸಂಘದ ಸದಸ್ಯರಲ್ಲದವರು ಅನಗತ್ಯ ಹಸ್ತಕ್ಷೇಪ ಮಾಡಿ ಸದರಿ ಸ್ವತ್ತನ್ನು ತಮ್ಮ ಅಧೀನಕ್ಕೆ ಪಡೆಯಲು ಯತ್ನಿಸಿದ್ದನ್ನು ಪ್ರಶ್ನಿಸಿ ಮಾನ್ಯ ಚಿತ್ರದುರ್ಗ ಸಿವಿಲ್ ನ್ಯಾಯಾಲಯದಿಂದ ಅಕ್ರಮ ಪ್ರವೇಶ ಮಾಡದಂತೆ ಯಾವುದೇ ಸಭೆ ಸಮಾರಂಭಗಳನ್ನು ಮಾಡದಂತೆ ಶಾಶ್ವತ ನಿರ್ಬಂಧಕಾಜ್ಞೆಯನ್ನು ಜಾರಿಗೊಳಿಸಿ ರುತ್ತದೆ. ಇದನ್ನು ಕಾಲ್ಲಂಘಿಸಿದವರ ವಿರುದ್ಧ ಕಾನೂನು ರಿತ್ಯಾ ಕ್ರಮ ಕೈಗೊಳ್ಳಲಾಗುವುದೆಂದು ತಿಳಿಯಪಡಿಸಿದೆ ಎಂದಿದ್ದಾರೆ.

ಈ ಹಿಂದೆ ಸದರಿ ಸಂಘದಲ್ಲಿ ಸದಸ್ಯರಾಗಿರುವ 45 ಸದಸ್ಯರ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದು, ಅವನ್ನು ಹೊರತುಪಡಿಸಿ ಸಂಘದ ಸದಸ್ಯರಲ್ಲದವರು ಈ ದಾವ ಸ್ವತ್ತಿನ ವಿಚಾರವಾಗಿ ಹಣ ಖರ್ಚು ಮಾಡಿರುತ್ತೇವೆಂದು ಸುಳ್ಳು ಹೇಳಿಕೊಂಡು ಲಂಬಾಣಿ ಸಮುದಾಯದಿಂದ ಹಣ ಎತ್ತುವಳಿ ಮಾಡಲು ಮುಂದಾಗಿದ್ದು ಮತ್ತು ಮುಂದಿನ ನ್ಯಾಯಾಲಯಕ್ಕೆ ಹೋಗಲು ಹಣ ಬೇಕೆಂದು ನಿಮ್ಮಲ್ಲಿ ಬಂದು ಕೇಳಿದ್ದಲ್ಲಿ ಯಾವುದೇ ಕಾರಣಕ್ಕೆ ಹಣ ಕೊಡಬಾರದು. ಅಲ್ಲದೆ ಕಾನೂನು ಬಾಹಿರವಾಗಿ ಪ್ರತಿವಾದಿಗಳ ಹೆಸರಿನಲ್ಲಿ ರಚನೆ ಮಾಡಿ ಸಲ್ಲಿಸಿದ್ದ ಅನಧೀಕೃತ ಆಡಳಿತ ಮಂಡಳಿಯ ಪ್ರಸ್ತಾವನೆಯನ್ನು ಈಗಾಗಲೇ ಜಿಲ್ಲಾ ನೊಂದಣಾಧಿಕಾರಿಗಳು ಸಂಘ ಸಂಸ್ಥೆಗಳ ನೊಂದಣಾಧಿಕಾರಿಗಳ ಕಾರ್ಯಾಲಯ ತಿರಸ್ಕರಿಸಿರುತ್ತಾರೆ. ಈ ಬಗ್ಗೆ ಸಹ ಘನ ನ್ಯಾಯಾಲಯದ ತೀರ್ಪಿನಲ್ಲಿ ಉಲ್ಲೇಖಿಸಿದೆ ಎಂದರು.

ಗೋಷ್ಟಿಯಲ್ಲಿ ಬಣಜಾರ ಬಾಲಕಿಯರ ವಿದ್ಯಾರ್ಥಿ ನಿಲಯ ಸಂಸ್ಥೆಯ ಕಾರ್ಯದರ್ಶಿ ಶ್ರೀಮತಿ ಕಮಲಾ ಬಾಯಿ, ಶ್ರೀಮತಿ ಭಾಗ್ಯಬಾಯಿ, ಸವಿತಾ, ರಮೇಶ್, ತಿಪ್ಪೇಸ್ವಾಮಿ, ಜಯರಾಮ್, ಅರುಣ್ ಕುಮಾರ್, ಶ್ರೀನಿವಾಸ್ ಪ್ರವೀಣ್, ಸೇರಿದಂತೆ ಇತರರು ಭಾಗವಹಿಸಿದ್ದರು.

Views: 43

Leave a Reply

Your email address will not be published. Required fields are marked *