‘ಸಂವಿಧಾನವೇ ಬದುಕಿನ ದಾರಿ’:– ಪರಿನಿಬ್ಬಾಣ ವಿಚಾರ ಸಂಕಿರಣದಲ್ಲಿ ಚಿಂತಕರ ಚುರುಕಿನ ಚರ್ಚೆ, ಜಾಗೃತಿ ಹಾಗೂ ಆತಂಕಗಳ ಹಂಚಿಕೆ.

ಚಿತ್ರದುರ್ಗ ಡಿ. 06

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಅಂಬೇಡ್ಕರ್ ಅವರನ್ನು ಅರಿತುಕೊಳ್ಳಲು ನಾವು ಸಂವಿಧಾನದ ತಿರುಳು ತಿಳಿಯಬೇಕಿದೆ. ಅವರು ನಿಧನದ ಬಳಿಕವೂ ನಮ್ಮೊಂದಿಗೆ ಜೀವಂತವಾಗಿದ್ದಾರೆ. ಅವರು ಕೊಟ್ಟ ಸಂವಿಧಾನ ನಮ್ಮ ಬದುಕನ್ನು ಉನ್ನತಕ್ಕೆ ಕೊಂಡೊಯ್ಯುವ ಕೆಲಸ ಮಾಡುತ್ತಿದೆ. ಆದರೆ, ಅದನ್ನು ನಾವುಗಳು ಎಷ್ಟರಮಟ್ಟಿಗೆ ಉಪಯೋಗ ಪಡೆಸಿಕೊಂಡಿದ್ದೇವೆ ಎಂಬ ಅವಲೋಕನ ಅಗತ್ಯ ಎಂದು ಚಿಂತಕ ವೇದಾಂತ್ ಏಳಂಗಿ ತಿಳಿಸಿದರು.

ಮಾದಿಗ ಮೀಸಲಾತಿ ಹೋರಾಟ ಸಮಿತಿ, ಸ್ಲಂ ಜನಾಂದೋಲನ ಸಂಘಟನೆ ಆಶ್ರಯದಲ್ಲಿ ಜಿಲ್ಲಾ ಪತ್ರಿಕಾ ಭವನದಲ್ಲಿ ಶನಿವಾರ ಆಯೋಜಿಸಿದ್ದ ಪರಿನಿಬ್ಬಾಣ ವಿಚಾರಸಂಕಿರಣದಲ್ಲಿ ಉಪನ್ಯಾಸ ನೀಡಿ ನಾವೆಲ್ಲರೂ ಸಂವಿಧಾನದಡಿಯೇ ಬದುಕುತ್ತಿದ್ದೇವೆ. ಸೌಲಭ್ಯಗಳನ್ನು, ಸ್ವತಂತ್ರ ಹೀಗೆ ವಿವಿಧ ರೀತಿ ಮುಖಾಮುಖಿ ಆಗುತ್ತಿದ್ದೇವೆ. ದೂರದೃಷ್ಟಿ ಚಿಂತನೆಯ ಕೂಸು ಸಂವಿಧಾನ ಅರಿತರೆ ನೈತಿಕತೆ ಬದುಕು ನಮ್ಮದಾಗಲಿದೆ. ಆದ್ದರಿಂದ ಸಂವಿಧಾನ ಓದು ಅಗತ್ಯ ಎಂದ ಅವರು. ನೊಂದ ಜನರಿಗೆ ಹಕ್ಕುಗಳನ್ನು ಕೊಡಿಸಲು ಅಂಬೇಡ್ಕರ್ ಹೋರಾಟದ ಜೊತೆಗೆ ಸಂವಿಧಾನ ಕೊಡುಗೆ ನೀಡಿದರು. ಸಂವಿಧಾನ ಅರಿತುಕೊಳ್ಳಲು ಬಹುದೊಡ್ಡ ಜ್ಞಾನಬೇಕೆಂಬ ಬೀಜ ಮನಸ್ಸಿನಲ್ಲಿ ಬಿತ್ತುವ ಕಾರ್ಯ ಆಗಿದೆ. ವಾಸ್ತವವಾಗಿ ಅತ್ಯಂತ ಸರಳವಾಗಿದೆ. ನಿತ್ಯ ಜೀವನ, ವ್ಯವಹರಿಸುವ ಚಟುವಟಿಕೆ, ಬದುಕು ಇವೆಲ್ಲವೂ ಸಂವಿಧಾನವೇ ಆಗಿದೆ ಎಂದು ತಿಳಿಸಿದರು.

ಅತ್ಯಂತ ದೂರದೃಷ್ಟಿಯಡಿ ರಚಿತವಾಗಿರುವ ಸಂವಿಧಾನ ನಾಶಗೊಳಿಸಲು ಅನೇಕ ದುಷ್ಟಶಕ್ತಿಗಳು ಪ್ರಯತ್ನಿಸುತ್ತಿವೆ. ಆದರೆ, ಅಂತಹ ಕೆಲಸ ಸಾಧ್ಯವೇ ಇಲ್ಲ. ಕಾರಣ ಸಂವಿಧಾನ ಜನರ ಒಡನಾಡಿಯಾಗಿ ಬೆರೆತುಕೊಂಡಿದೆ ನಮ್ಮ ವಿರೊಧಿಗಳು ಯಾರೆಂಬುದನ್ನು ಅಂಬೇಡ್ಕರ್ ಕೃತಿಗಳು ತಿಳಿಸಿಕೊಡುತ್ತವೆ. ಆರೆಸ್ಸೆಸ್ಸಿನ ಮಾಳವಿ ದಲಿತರ ವಿರೋಧಿ ಆಗಿದ್ದೂ ಜ್ಞಾನದ ಕಾರಣಕ್ಕೆ ಅಂಬೇಡ್ಕರ್ ಅವರನ್ನು ಗೌರವಿಸುತ್ತಿದ್ದರು. ಆದ್ದರಿಂದ ನಾವೆಲ್ಲರೂ ಜ್ಞಾನಕ್ಕಾಗಿ ಹೆಚ್ಚು ಹೆಚ್ಚು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಆಗ ಮಾತ್ರ ಶತ್ರುಗಳು ಕೂಡ ನಮ್ಮನ್ನು ಗೌರವಿಸುತ್ತಾರೆ ಎಂದು ತಿಳಿಸಿದರು.

ಜಾತಿ-ಧರ್ಮ-ಪ್ರಾದೇಶಿಕ ಹೆಸರಲ್ಲಿ ಜನರನ್ನು ಇಬ್ಭಾಗ ಅಂಬೇಡ್ಕರ್ ಮಾಡಲಿಲ್ಲ. ಬದಲಿಗೆ ಎಲ್ಲ ವರ್ಗದ ಜನರನ್ನು ಮುಖ್ಯವಾಹಿನಿಗೆ ತರಲು, ಅವರಿಗೆ ಹಕ್ಕುಗಳನ್ನು ಕೊಡಿಸಲು ಶ್ರಮಿಸಿದರು. ಜಾತ್ಯತೀತ ಮನೋಭಾವ, ಸಮ ಸಮಾಜದ ಕನಸುಗಳೊಂದಿಗೆ ಸಂವಿಧಾನ ರಚಿಸಿದರು ನೋಟು ಮುದ್ರಣ ಸರ್ಕಾರದ ಕೈಯಲ್ಲಿರಬಾರದು. ಅದಕ್ಕಾಗಿ ಸ್ವತಂತ್ರ ಸಂಸ್ಥೆ ಇರಬೇಕೆಂದು ಹಾಗೂ ನೋಟು ಮುದ್ರಣಕ್ಕೆ ಇಂತಿಷ್ಟು ಚಿನ್ನ ಆಧಾರವಿಡಬೇಕೆಂದು ಪ್ರಬಂಧ ಮಂಡಿಸಿದ ಫಲ ಆರ್‍ಬಿಐ ಇಂದು ಖಾಸಗೀಕರಣ ಮತ್ತು ಸರ್ಕಾರದ ಮುಷ್ಠಿಯಿಂದ ಹೊರಗಡೆ ಇದೆ ಎಂದು ತಿಳಿಸಿ ಕ್ಷತ್ರಿಯ ಭಾಗವೇ ಆಗಿದ್ದ ಶೂದ್ರರು ಒಂದು ಕಾಲಘಟ್ಟದಲ್ಲಿ ರಾಜರು ಆಗಿದ್ದರು ಎಂಬುದನ್ನು ತಿಳಿಸಿಕೊಡುವ ಮೂಲಕ ನಮಗೂ ಆಡಳಿತ ನಡೆಸುವ ಶಕ್ತಿ, ಯುಕ್ತಿ ಇದೆ ಎಂದು ತಿಳಿಸಿಕೊಟ್ಟಿದ್ದಾರೆ. ಮುಖ್ಯವಾಗಿ ಮಹಿಳೆಯರಿಗೆ ಓದುವ, ಮತದಾನ, ಉದ್ಯೊಗ, ರಾಜಕೀಯ, ಮೀಸಲಾತಿ ಹಕ್ಕು ನೀಡಿದ ಮಹಾನ್ ಪುರುಷ ಎಂದು ಸ್ಮರಿಸಿದರು. ದಲಿತ ಸಮುದಾಯ ಅತ್ಯಂತ ಹಿಂದುಳಿದಿರುವುದಕ್ಕೆ ಅವರು ಆಯೋಜಿಸುವ ಕಾರ್ಯಕ್ರಮಗಳಲ್ಲಿನ ಅವ್ಯವಸ್ಥೆಯೇ ಸಾಕ್ಷಿ ನ್ಯಾಯಯುತ ಹಕ್ಕುಗಳಿಗಾಗಿ ಹೋರಾಟ ನಡೆಸುವ ದಲಿತರಿಗೆ ಕಾರ್ಯಕ್ರಮ ಮಾಡಲು ಬರುವುದಿಲ್ಲ ಎಂಬ ಮಾತು ಪದೇ ಪದೆ ದೃಢಪಡುತ್ತಿದೆ. ಶಿಷ್ಟಾಚಾರಕ್ಕಿಂತಲೂ ಬದ್ಧತೆ ಮುಖ್ಯವೆಂಬುದನ್ನು ಮಾತ್ರ ಕಾರ್ಯಕ್ರಮಗಳು ಸಾಬೀತುಪಡಿಸುತ್ತಿವೆ ಎಂದರು.

ಜಿಲ್ಲಾ ಕುರುಬ ಸಂಘದ ಗೌರವಾಧ್ಯಕ್ಷ ಹೆಚ್.ಮಂಜಪ್ಪ ಮಾತನಾಡಿ, ಭಾರತದ ಪ್ರತಿ ಮನೆಯಲ್ಲೂ ಅಂಬೇಡ್ಕರ್ ಭಾವಚಿತ್ರ ಕಾಣುವ ಕಾಲ ಬರಬೇಕಿದೆ. ಮುಖ್ಯವಾಗಿ ನಮ್ಮೆಲ್ಲರ ಮನದಲ್ಲಿ ಅವರು ನೆಲೆಕಾಣಬೇಕು. ಅವರ ಆಶಯಗಳನ್ನು ಈಡೇರಿಸಲು ನಾವೆಲ್ಲರೂ ಮತ ಮಾರಾಟ ನಿಲ್ಲಿಸಬೇಕು ಎಂದರು. ದಸಂಸ ಮುಖಂಡ ಡಿ.ದುರುಗೇಶ್ ಮಾತನಾಡಿ, ನಮ್ಮಗಳ ಮೇಲೆ ಹೆಚ್ಚು ಜವಾಬ್ದಾರಿ ಬಿಟ್ಟು ಹೋಗಿದ್ದಾರೆ. ಸಂವಿಧಾನ ಅನುಷ್ಠಾನಕ್ಕೆ ಆಡಳಿತ ಪಕ್ಷಗಳು ಪ್ರಯತ್ನಿಸಿಲ್ಲ. ಆದ್ದರಿಂದ ನಾವು ಸಾಮಾಜಿಕ ಕ್ರಾಂತಿಗೆ ಮುನ್ನುಡಿ ಬರೆಯಬೇಕಿದೆ ಎಂದು ತಿಳಿಸಿದರು.

ಸಾಮಾಜಿಕ ಸಂಘರ್ಷ ಸಮಿತಿ ಸಂಚಾಲಕ ಟಿ.ರಾಮಣ್ಣ ಮಾತನಾಡಿ, ಅಂಬೇಡ್ಕರ್ ನಿಧನದ ಬಳಿಕ 20 ವರ್ಷ ಅವರ ಕಾರ್ಯ ಸ್ಮರಿಸುವ ಕೆಲಸವೇ ಆಗಲಿಲ್ಲ. ದಸಂಸ ಅವರನ್ನು ನಾಡಿನ ಜನರಲ್ಲಿ ಜಾಗೃತಿ ಮೂಡಿಸಿದೆ ಆದರೆ, ಈಗ ಅಂಬೇಡ್ಕರ್ ಅವರನ್ನು ದೇವರ ರೀತಿ ಪೂಜೆ ಮಾಡಲಾಗುತ್ತಿದೆ. ಇದು ಅತ್ಯಂತ ಅಪಾಯಕಾರಿ ನಡೆ. ಇದೇ ಪರಿಸ್ಥಿತಿ ಮುಂದುವರಿದರೆ ಅವರ ಆಶಯಗಳ ಜೊತೆಗೆ ಅವರು ನಮ್ಮಿಂದ ಕಣ್ಮರೆ ಆಗುವ ಆತಂಕ ಇದೆ ಎಂದು ಎಚ್ಚರಿಸಿದರು. ದಲಿತ ವರ್ಗ ಪ್ರಜ್ಞಾನವಂತಿಕೆ ಬೆಳೆಸಿಕೊಳ್ಳಬೇಕು. ಆದರೆ, ಜನರಲ್ಲಿ ಜಾತಿ-ಧರ್ಮಾಂಧತೆ ವಿಷಯ ಬಿತ್ತುವ ಕಾರ್ಯದೊಂದಿಗೆ ಮಾದಿಗರ ಹೆಸರಲ್ಲಿರುವ ಮಠ ಕೆಲಸ ಮಾಡುತ್ತಿದೆ. ಅಂತಹ ಮಠದ ಸ್ವಾಮೀಜಿಯನ್ನು ನಾವು ತಿರಸ್ಕರಿಸಬೇಕು. ಅವರ ಸ್ವಹಿತಾಸಕ್ತಿಗಾಗಿ ಸಮುದಾಯ ಬಲಿ ಕೊಡುವ ನಡೆಯನ್ನು ನಾವು ವಿರೋಧಿಸಬೇಕೆಂದು ದಲಿತ ಮುಖಂಡ ಟಿ.ರಾಮಣ್ಣ ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಹನುಮಂತಪ್ಪ ದುರ್ಗ ಮಾತನಾಡಿ, ನೊಂದ ಜನರಿಗೆ ಧ್ವನಿಕೊಟ್ಟ ಪ್ರೊ.ಬಿ.ಕೃಷ್ಣಪ್ಪ ನಾಡಿಗೆ ಅಂಬೇಡ್ಕರ್ ಸೇರಿ ಅನೇಕ ಮಹಾನ್ ನಾಯಕರ ಚರಿತ್ರೆ ಪರಿಚಯಿಸಿದರು ಎಲ್ಲರೂ ಒಂದೇ ಎಂಬ ಮನಸ್ಥಿತಿಯಲ್ಲಿ ಸಂವಿಧಾನ ರಚನೆ ಮಾಡಿದ ಅಂಬೇಡ್ಕರ್ ಮುಖ್ಯವಾಗಿ ಮಹಿಳೆಯರನ್ನು ಮುಖ್ಯವಾಹಿನಿಗೆ ತರುವ ಪ್ರಯತ್ನ ಮಾಡಿದರು. ಈಗಲೂ ಅಸಮಾನತೆ ಇದೆ. ಇದಕ್ಕಾಗಿ ಸ್ವತಂತ್ರ ಚಳವಳಿ ರೀತಿ ಹೋರಾಟ ಆರಂಭಿಸಬೇಕಾಗಿದೆ ಎಂದು ತಿಳಿಸಿದರು. ಖಾಸಗೀಕರಣ ಮೀಸಲಾತಿಗೆ ಕಂಟಕವಾಗಿದ್ದು, ಸಂವಿಧಾನ ಆಶಯಗಳನ್ನು ರಕ್ಷಿಸಬೇಕಿದೆ. ಮೀಸಲಾತಿಯಡಿ ಗೆದ್ದ ಚಿತ್ರದುರ್ಗದ ಸಂಸದರು ದಲಿತ ಸಮುದಾಯದ ವಿದ್ಯಾರ್ಥಿನಿ ಅತ್ಯಾಚಾರ, ಕೊಲೆಯಾದರೂ ಬಾಯಿ ಬಿಡಲಿಲ್ಲ. ಇಂತಹವರಿಂದ ಸಂವಿಧಾನ ರಕ್ಷಣೆಗೆ ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.

ಶಿಕ್ಷಣ ಇಲಾಖೆ ನಿವೃತ್ತ ಅಧಿಕಾರಿ ಎಂ.ಮಲ್ಲಣ್ಣ, ಹಿರಿಯ ಮುಖಂಡ ಬಿ.ರಾಜಪ್ಪ ಜೆಜೆ ಹಟ್ಟಿ, ರುದ್ರಮುನಿ ಮಾತನಾಡಿದರು. ನೀರಾವರಿ ಹೋರಾಟ ಸಮಿತಿ ಸಂಚಾಲಕ ಈ.ಮಹೇಶಬಾಬು, ಸ್ಲಂ ಜನ ಸಂಘಟನೆ ಸಂಚಾಲಕ ಟಿ.ಮಂಜುನಾಥ್, ಮುಖಂಡರಾದ ಭಾಗ್ಯಮ್ಮ, ಎಂ.ಮಹೇಶ್, ಮಲ್ಲಿಕಾರ್ಜುನ್, ತಿಪ್ಪೇಸ್ವಾಮಿ ಇತರರಿದ್ದರು.

Leave a Reply

Your email address will not be published. Required fields are marked *