ಚಿತ್ರದುರ್ಗ: ನಗರದ ಪ್ರತಿಷ್ಟಿತ ವಿದ್ಯಾ ವಿಕಾಸ ವಿದ್ಯಾ ಸಂಸ್ಥೆಯಲ್ಲಿ 1ನೇ ತರಗತಿಯ ವಿದ್ಯಾರ್ಥಿಗಳಿಂದ ಅಜ್ಜಿ–ತಾತಂದಿರ ದಿನಾಚರಣೆಯನ್ನು ಹರ್ಷೋದ್ಗಾರದಿಂದ ಆಚರಿಸಲಾಯಿತು. ಕುಟುಂಬ ಮೂಲ್ಯಗಳನ್ನು ಪುನರುಜ್ಜೀವನಗೊಳಿಸುವ ಉದ್ದೇಶದಿಂದ ಆಯೋಜಿಸಲಾದ ಈ ವಿಶೇಷ ಕಾರ್ಯಕ್ರಮಕ್ಕೆ ಅಜ್ಜಿ–ತಾತಂದಿರು ತನ್ನ ಮೊಮ್ಮಕ್ಕಳೊಂದಿಗೆ ಉತ್ಸಾಹದಿಂದ ಭಾಗವಹಿಸಿದರು.
ಕಾರ್ಯಕ್ರಮವನ್ನು ಸಂಸ್ಥೆಯ ಕಾರ್ಯದರ್ಶಿಗಳಾದ ಬಿ. ವಿಜಯಕುಮಾರ್, ನಿರ್ದೇಶಕರಾದ ಸುನೀತಾ ವಿಜಯಕುಮಾರ್ ಹಾಗೂ ಮುಖ್ಯೋಪಾಧ್ಯಾಯರಾದ ಎನ್.ಜಿ. ತಿಪ್ಪೇಸ್ವಾಮಿ ಅವರ ಉಪಸ್ಥಿತಿಯಲ್ಲಿ, ಅತಿಥಿಯಾಗಿ ಭಾಗವಹಿಸಿದ ಶ್ರಿಮತಿ ಮೀನಾ ಅವರಿಂದ ಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡಲಾಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಶ್ರೀ ಬಿ. ವಿಜಯಕುಮಾರ್ ಅವರು, “ಮೊಮ್ಮಕ್ಕಳೊಂದಿಗೆ ಸಮಯ ಕಳೆಯುವುದು ನಮ್ಮಲ್ಲಿರುವ ತಾಳ್ಮೆಯನ್ನು ಹೆಚ್ಚಿಸುವುದೇ ಅಲ್ಲದೆ, ಅವರ ಜೊತೆಗಿನ ಆತ್ಮೀಯತೆ ಜೀವನಕ್ಕೆ ಹೊಸ ಅರ್ಥ ನೀಡುತ್ತದೆ” ಎಂದು ಹೇಳಿದರು. ಅಜ್ಜ–ಅಜ್ಜಿಯಂದಿರಿಗೆ ಮೊಮ್ಮಕ್ಕಳು ಇದ್ದರೆ ಮನೆಯಲ್ಲಿ ಹೊಸ ಚೈತನ್ಯ ಬೆಳೆಯುತ್ತದೆ ಎಂದು ಅವರು ಅಭಿಪ್ರಾಯಪಟ್ಟರು. ಮೊಮ್ಮಕ್ಕಳಿಗೆ ಪಾಠ ಹೇಳುವ ಮೂಲಕ ಅಜ್ಜಿ–ತಾತಂದಿರೇ ಶಿಕ್ಷಕರಾಗುತ್ತಾರೆ. ತಮ್ಮ ಅನುಭವವನ್ನು ಹಂಚಿಕೊಳ್ಳುವ ಮೂಲಕ ಮಕ್ಕಳು ಬುದ್ಧಿವಂತರಾಗುತ್ತಾರೆ ಎಂದು ಹೇಳಿದರು.
ವಿಶೇಷ ಅತಿಥಿಗಳಾದ ಶ್ರಿಮತಿ ಮೀನಾ ಅವರು ಮಾತನಾಡಿ, ವಿದ್ಯಾ ವಿಕಾಸ ಶಾಲೆಯ ಶಿಕ್ಷಣ ಗುಣಮಟ್ಟವು ಮೂರು ದಶಕಗಳ ಹಿಂದಿನಂತೆ ಇಂದಿಗೂ ಸಮಾನವಾಗಿದೆ ಎಂದು ಪ್ರಶಂಸಿಸಿದರು. “ನಮ್ಮ ಮಕ್ಕಳು ಮತ್ತು ಮೊಮ್ಮಕ್ಕಳು ಇದೇ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವುದು ನಮ್ಮ ಹೆಮ್ಮೆ. ಮಕ್ಕಳು ಮೂಲ ಬೇರುಗಳಾದರೆ, ಮೊಮ್ಮಕ್ಕಳು ಅದಕ್ಕೆ ಮುದ್ದಾದ ಚಿಗುರುಗಳು” ಎಂದು ಅವರು ಹೇಳಿದರು. ಮಾನವೀಯ ಮೌಲ್ಯಗಳನ್ನು ಬೆಳೆಸುವಲ್ಲಿ ಅಜ್ಜಿ–ತಾತಂದಿರ ಪಾತ್ರ ಅತ್ಯಂತ ಮುಖ್ಯವೆಂದರು.
ಮುಖ್ಯೋಪಾಧ್ಯಾಯರಾದ ಎನ್.ಜಿ. ತಿಪ್ಪೇಸ್ವಾಮಿ ಅವರು, “ಅಜ್ಜಿ–ತಾತಂದಿರ ಮಮತೆ, ಹೇಳಿಕೊಟ್ಟ ಕಥೆಗಳು, ಜೀವನ ಪಾಠಗಳು, ಅನುಭವಗಳು – ಇವೆಲ್ಲವೂ ನಮ್ಮ ಬದುಕಿನ ಅಮೂಲ್ಯ ಸಂಪತ್ತು” ಎಂದು ಹೇಳಿದರು. ಇಂದಿನ ವೇಗದ ಯುಗದಲ್ಲಿ ತಲೆಮಾರುಗಳ ನಡುವಿನ ಸಂಬಂಧವನ್ನು ಉಳಿಸಲು ಅಜ್ಜಿ–ತಾತಂದಿರ ಪಾತ್ರ ಮಹತ್ವದ್ದೆಂದರು.
ಕಾರ್ಯಕ್ರಮದಲ್ಲಿ ಮಕ್ಕಳಿಂದ ಅಜ್ಜಿ–ತಾತಂದಿರ ವೇಷಧಾರಣೆ, ನೃತ್ಯ ಪ್ರದರ್ಶನ, ಬಣ್ಣ ಬಣ್ಣದ ಉಡುಗೆತೊಟ್ಟು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಅಜ್ಜಿ–ತಾತಂದಿರ ಮತ್ತು ಮೊಮ್ಮಕ್ಕಳ ಜತೆಗಿನ ರ್ಯಾಂಪ್ ವಾಕ್ ಕಾರ್ಯಕ್ರಮಕ್ಕೆ ಎಲ್ಲರಿಂದಲೂ ಪ್ರಶಂಸೆ ವ್ಯಕ್ತವಾಯಿತು. ನಂತರ ಅತಿಥಿಗಳಿಗಾಗಿ ವಿವಿಧ ಮನೋರಂಜನಾ ಸ್ಪರ್ಧೆಗಳನ್ನೂ ಆಯೋಜಿಸಲಾಯಿತು.
ಈ ಸಂದರ್ಭದಲ್ಲಿ ಸಂಸ್ಥೆಯ ನಿರ್ದೇಶಕಿ ಸುನಿತಾ ಪಿ.ಸಿ, ವ್ಯವಸ್ಥಾಪಕ ನಿರ್ದೇಶಕ ಎಸ್.ಎಂ. ಪೃಥ್ವೀಶ್, ಐಸಿಎಸ್ಇ ಪ್ರಾಂಶುಪಾಲರಾದ ಬಸವರಾಜಯ್ಯ ಪಿ ಸೇರಿದಂತೆ ಎಲ್ಲಾ ಶಿಕ್ಷಕ/ಶಿಕ್ಷಕೇತರ ಸಿಬ್ಬಂದಿ, ಪೋಷಕರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.
ಕಾರ್ಯಕ್ರಮವನ್ನು ವಿದ್ಯಾರ್ಥಿಗಳಾದ ರಿಶಿಕಾ ಪ್ರಾರ್ಥನಾ ಗೀತೆಯಿಂದ ಪ್ರಾರಂಭಿಸಿ, ದುತಿದೇವ್ ಸ್ವಾಗತಿಸಿ, ಗ್ರಂಥ ಯದ್ರಾಣಿ ಮತ್ತು ಲೋಚನ್ ನಿರೂಪಣೆ ನಡೆಸಿ, ಇಶಾನ್ವಿ ವಂದನೆ ಸಲ್ಲಿಸಿದರು.
ಅಜ್ಜಿ–ತಾತಂದಿರ ಪ್ರೀತಿಯಿಂದ ಅರಳಿದ ಈ ಕಾರ್ಯಕ್ರಮವು ಹರ್ಷೋಲ್ಲಾಸದ ನಡುವೆಯೇ ಅದ್ದೂರಿಯಾಗಿ ಮುಕ್ತಾಯವಾಯಿತು.
Views: 27