ಶ್ರದ್ಧಾ–ಭಕ್ತಿಯಿಂದ ನೆರವೇರಿದ ಮಹೇಶ್ವರಸ್ವಾಮಿ ಜಾತ್ರೆ ಮತ್ತುಶ್ರೀ ಮಾವಿನಹಳ್ಳಿ ಬಸವೇಶ್ವರ ಸ್ವಾಮಿಯ ಕಡೇ ಕಾರ್ತಿಕ ಮಹೋತ್ಸವ.

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಚಿತ್ರದುರ್ಗ, ಡಿ.17:
ತಾಲ್ಲೂಕಿನ ಹಿರೇಗುಂಟನೂರು ಹೋಬಳಿಯ ಭೀಮಸಮುದ್ರ ಮಜುರೆ ಬಸವಾಪುರದ ಶ್ರೀ ಮಾವಿನಹಳ್ಳಿ ಬಸವೇಶ್ವರ ಸ್ವಾಮಿಯ ಕಡೇ ಕಾರ್ತಿಕ ಮಹೋತ್ಸವ ಹಾಗೂ ಮಹೇಶ್ವರಸ್ವಾಮಿ ಜಾತ್ರೆ ಡಿ.16ರ ಮಂಗಳವಾರ ಭಕ್ತಿಭಾವದಿಂದ ನೆರವೇರಿತು.

ಬೆಳಿಗ್ಗೆ ಮಹೇಶ್ವರಸ್ವಾಮಿ ಜಾತ್ರೆ ಹಮ್ಮಿಕೊಳ್ಳಲಾಗಿದ್ದು, ಮುಂಜಾನೆಯೇ ಆರಂಭವಾದ ಈ ಅದ್ಧೂರಿ ಜಾತ್ರೆಯಲ್ಲಿ ಆಬಾಲವೃದ್ಧರು ಸೇರಿದಂತೆ ಸಾವಿರಾರು ಭಕ್ತಾದಿಗಳು ಭಾಗವಹಿಸಿದರು. ಶತಮಾನಗಳಿಂದ ನಡೆದುಕೊಂಡು ಬಂದಿರುವ ಈ ಜಾತ್ರೆಗೆ ಶೈಕ್ಷಣಿಕ ಪ್ರಗತಿ, ವಿವಾಹ, ಆರೋಗ್ಯ ಸಮಸ್ಯೆಗಳ ನಿವಾರಣೆ ಸೇರಿದಂತೆ ವಿವಿಧ ಹರಕೆಗಳೊಂದಿಗೆ ಭಕ್ತರು ಚಳಿಯನ್ನೂ ಲೆಕ್ಕಿಸದೇ “ಓಂ ನಮಃ ಶಿವಾಯ” ಎಂಬ ಜಪದೊಂದಿಗೆ ಭಕ್ತಿ ಮೆರೆದರು. ಮಹೇಶ್ವರಸ್ವಾಮಿ ಜಾತ್ರೆಗೆ ಶತಮಾನಕ್ಕೂ ಅಧಿಕ ಇತಿಹಾಸವಿದೆ.

ಜಾತ್ರೆಯ ಅಂಗವಾಗಿ ಗಂಗಾಪೂಜೆ ನೆರವೇರಿಸಿ ಪ್ರಸಾದ ವಿನಿಯೋಗ ಮಾಡಲಾಯಿತು. ಸಾತ್ವಿಕ ಆಹಾರವಾದ ಅನ್ನ, ಬೆಲ್ಲ, ಹಾಲು ಹಾಗೂ ಬಾಳೆಹಣ್ಣಿನ ಪ್ರಸಾದವನ್ನು ಸಾವಿರಾರು ಭಕ್ತರು ಸ್ವೀಕರಿಸಿದರು.

ಸಂಜೆಯ ವೇಳೆ ನಡೆದ ಶ್ರೀ ಮಾವಿನಹಳ್ಳಿ ಬಸವೇಶ್ವರ ಸ್ವಾಮಿಯ ಕಡೇ ಕಾರ್ತಿಕ ಮಹೋತ್ಸವಕ್ಕೆ ದೇವಾಲಯವನ್ನು ತಳಿರು–ತೋರಣ, ವಿದ್ಯುತ್ ದೀಪಾಲಂಕಾರ, ಕೇಸರಿ ಬಣ್ಣದ ಭಂಟಿಂಗ್ಸ್, ಸ್ವಾಗತ ಕಮಾನುಗಳು ಹಾಗೂ ಹೂವಿನ ಅಲಂಕಾರಗಳಿಂದ ಸಿಂಗಾರಿಸಲಾಗಿತ್ತು. ದೇವಾಲಯದ ಸುತ್ತ ದೀಪಗಳನ್ನು ಬೆಳಗಿಸುವ ಮೂಲಕ ವಿಜೃಂಭಣೆಯಿಂದ ಕಡೇ ಕಾರ್ತಿಕ ಆಚರಿಸಲಾಯಿತು. ವಿವಿಧೆಡೆಗಳಿಂದ ಆಗಮಿಸಿದ ನೂರಾರು ಭಕ್ತರು ಸ್ವಾಮಿಯ ದರ್ಶನ ಪಡೆದು ಪುನೀತರಾದರು.

Views: 19

Leave a Reply

Your email address will not be published. Required fields are marked *