ಐಪಿಎಲ್‌ಗೆ ಹಸಿರು ನಿಶಾನೆ: ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಮತ್ತೆ ಕ್ರಿಕೆಟ್ ಹಬ್ಬ.

ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಐಪಿಎಲ್‌ಗೆ ಅಂತಿಮ ಗ್ರೀನ್ ಸಿಗ್ನಲ್ :17 ಅಂಶಗಳ ಕಟ್ಟುನಿಟ್ಟಿನ ಮಾರ್ಗಸೂಚಿ ಜಾರಿ, ಮಾರ್ಚ್ ವೇಳೆಗೆ ಕ್ರಿಕೆಟ್ ಹಬ್ಬ ಖಚಿತ

ಬೆಂಗಳೂರು, ಡಿಸೆಂಬರ್ 19:
ಬೆಂಗಳೂರಿನ ಐತಿಹಾಸಿಕ ಎಂ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಐಪಿಎಲ್ ಸೇರಿದಂತೆ ಎಲ್ಲಾ ಕ್ರಿಕೆಟ್ ಪಂದ್ಯಾವಳಿಗಳನ್ನು ಪುನರಾರಂಭಿಸಲು ಕೊನೆಗೂ ಅಂತಿಮ ಗ್ರೀನ್ ಸಿಗ್ನಲ್ ದೊರೆತಿದೆ. ಹಿಂದಿನ ಬಾರಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ವಿಜಯೋತ್ಸವದ ವೇಳೆ ಸಂಭವಿಸಿದ್ದ ಕಾಲ್ತುಳಿತದ ಹಿನ್ನೆಲೆಯಲ್ಲಿ ಸ್ಟೇಡಿಯಂನಲ್ಲಿ ಪಂದ್ಯ ಆಯೋಜನೆಗೆ ತಾತ್ಕಾಲಿಕ ನಿರ್ಬಂಧ ವಿಧಿಸಲಾಗಿತ್ತು. ಇದೀಗ ಗೃಹ ಇಲಾಖೆಯ ಸೂಚನೆ ಮೇರೆಗೆ ಬೆಂಗಳೂರು ಪೊಲೀಸರು 17 ಅಂಶಗಳ ಕಟ್ಟುನಿಟ್ಟಿನ ಮಾರ್ಗಸೂಚಿಗಳನ್ನು ಜಾರಿ ಮಾಡಿ, ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (KSCA)ಗೆ ಷರತ್ತುಬದ್ಧ ಅನುಮತಿ ನೀಡಲು ಸಜ್ಜಾಗಿದ್ದಾರೆ.

ನ್ಯಾ. ಮೈಕಲ್ ಡಿ. ಕುನ್ಹಾ ಸಮಿತಿ ವರದಿಯ ಶಿಫಾರಸುಗಳನ್ನು ಆಧರಿಸಿ ಈ ಮಾರ್ಗಸೂಚಿಗಳನ್ನು ಸಿದ್ಧಪಡಿಸಲಾಗಿದ್ದು, ಮುಂದಿನ ದಿನಗಳಲ್ಲಿ ಕಾಲ್ತುಳಿತ ಅಥವಾ ಅಹಿತಕರ ಘಟನೆಗಳು ನಡೆಯದಂತೆ ತಡೆಯುವುದು ಇದರ ಮುಖ್ಯ ಉದ್ದೇಶವಾಗಿದೆ. ಈ ಸಂಬಂಧ ಕೆಎಸ್‌ಸಿಎ ಅಧ್ಯಕ್ಷ ವೆಂಕಟೇಶ್ ಪ್ರಸಾದ್ ನೇತೃತ್ವದ ತಂಡ ಗೃಹ ಸಚಿವರನ್ನು ಭೇಟಿ ಮಾಡಿ ಮಾರ್ಗಸೂಚಿಗಳ ಬಗ್ಗೆ ಚರ್ಚೆ ನಡೆಸಲಿದೆ.

17 ಅಂಶಗಳ ಪ್ರಮುಖ ಮಾರ್ಗಸೂಚಿಗಳು

ಪೊಲೀಸರು ಹೊರಡಿಸಿರುವ ಮಾರ್ಗಸೂಚಿಗಳಲ್ಲಿ ಸ್ಟೇಡಿಯಂ ಒಳಗೆ ಹಾಗೂ ಹೊರಗೆ ಪ್ರೇಕ್ಷಕರ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಲಾಗಿದೆ. ಪ್ರಮುಖವಾಗಿ:

  • ಪ್ರವೇಶ ಮತ್ತು ನಿರ್ಗಮನ ದ್ವಾರಗಳನ್ನು ಕನಿಷ್ಠ ಆರು ಅಡಿ ಅಗಲಕ್ಕೆ ವಿಸ್ತರಣೆ
  • ಟಿಕೆಟ್ ವಿತರಣೆ ಹಾಗೂ ಪ್ರೇಕ್ಷಕರ ಸಾಲುಗಳಿಗೆ (Queue) ಪ್ರತ್ಯೇಕ ವ್ಯವಸ್ಥೆ
  • ಫುಟ್‌ಪಾತ್‌ಗಳಲ್ಲಿ ಜನಜಂಗುಳಿ ತಡೆಯಲು ನಿರ್ದಿಷ್ಟ ಸ್ಥಳ ಗುರುತು
  • ಅಗ್ನಿಶಾಮಕ ಸುರಕ್ಷತೆಗೆ ಪ್ರತ್ಯೇಕ ಎಮರ್ಜೆನ್ಸಿ ನಿರ್ಗಮನ ದ್ವಾರ
  • ಮಹಿಳೆಯರು ಹಾಗೂ ಮಕ್ಕಳಿಗೆ ಪ್ರತ್ಯೇಕ ಸೌಲಭ್ಯ
  • ಸ್ಟೇಡಿಯಂ ಒಳಗೆ ರಿಯಲ್–ಟೈಮ್ ಪ್ರೇಕ್ಷಕರ ಸಂಖ್ಯಾ ಗಣನೆ ವ್ಯವಸ್ಥೆ
  • ಪಾರ್ಕಿಂಗ್, ಪಿಕ್‌ಅಪ್ ಮತ್ತು ಡ್ರಾಪ್ ವ್ಯವಸ್ಥೆ ಸುಧಾರಣೆ

ಮಾರ್ಚ್ ವೇಳೆಗೆ ಕಾಮಗಾರಿ ಪೂರ್ಣ

ಈ ಎಲ್ಲಾ ಬದಲಾವಣೆಗಳಿಗೆ ಸಿವಿಲ್ ಕಾಮಗಾರಿಗಳು ಅಗತ್ಯವಿದ್ದು, ಅವುಗಳನ್ನು ಪೂರ್ಣಗೊಳಿಸಲು ಸುಮಾರು ಎರಡು ತಿಂಗಳ ಅವಧಿ ಬೇಕಾಗಬಹುದು ಎಂದು ಅಂದಾಜಿಸಲಾಗಿದೆ. ಎಲ್ಲ ಕೆಲಸಗಳು ನಿಗದಿತ ಸಮಯದಲ್ಲಿ ಪೂರ್ಣಗೊಂಡರೆ, ಮಾರ್ಚ್ ತಿಂಗಳ ವೇಳೆಗೆ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಐಪಿಎಲ್ ಸೇರಿದಂತೆ ಎಲ್ಲಾ ಕ್ರಿಕೆಟ್ ಪಂದ್ಯಗಳನ್ನು ಆಯೋಜಿಸಲು ಸಂಪೂರ್ಣ ಅವಕಾಶ ದೊರೆಯಲಿದೆ.

ಕ್ರಿಕೆಟ್ ಅಭಿಮಾನಿಗಳಿಗೆ ಸಂತಸದ ಸುದ್ದಿ

ಈ ನಿರ್ಧಾರದಿಂದ ಬೆಂಗಳೂರು ಹಾಗೂ ರಾಜ್ಯದ ಕ್ರಿಕೆಟ್ ಅಭಿಮಾನಿಗಳಿಗೆ ಭಾರಿ ಸಂತಸ ಉಂಟಾಗಿದೆ. ಸುರಕ್ಷಿತ ಹಾಗೂ ವ್ಯವಸ್ಥಿತ ವಾತಾವರಣದಲ್ಲಿ ಐಪಿಎಲ್ ಪಂದ್ಯಗಳನ್ನು ವೀಕ್ಷಿಸುವ ಅವಕಾಶ ಸಿಗಲಿದ್ದು, ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಮತ್ತೆ ಕ್ರಿಕೆಟ್ ಹಬ್ಬದ ವಾತಾವರಣ ನಿರ್ಮಾಣವಾಗಲಿದೆ.

Views: 10

Leave a Reply

Your email address will not be published. Required fields are marked *