ಚಿತ್ರದುರ್ಗ ಜಿಲ್ಲಾ ಜಂಗಮ ಸಮಾಜದಿಂದ 2026ರ ದಿನದರ್ಶಿಕೆ ಬಿಡುಗಡೆ.

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಚಿತ್ರದುರ್ಗ, ಡಿ.19:

ಚಿತ್ರದುರ್ಗ ಜಿಲ್ಲಾ ಜಂಗಮ ಸಮಾಜದ ವತಿಯಿಂದ ಜೆಸಿಆರ್ ಬಡಾವಣೆಯಲ್ಲಿರುವ ಸಮಾಜದ ಕಚೇರಿಯಲ್ಲಿ 2026ನೇ ಸಾಲಿನ ದಿನದರ್ಶಿಕೆಯನ್ನು ಸಮಾಜದ ಹಿರಿಯರು ಹಾಗೂ ಬಂಧುಗಳು ಶುಕ್ರವಾರ ಬಿಡುಗಡೆ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಜಂಗಮ ಸಮಾಜದ ಕಾರ್ಯದರ್ಶಿ ಎಸ್. ಷಡಾಕ್ಷರಯ್ಯ, ಕಳೆದ 5–6 ವರ್ಷಗಳಿಂದ ನಿರಂತರವಾಗಿ ದಿನದರ್ಶಿಕೆಯನ್ನು ಬಿಡುಗಡೆ ಮಾಡುತ್ತಿದ್ದು, ಸಮಾಜದ ವಿಶೇಷ ದಿನಗಳು, ಮಹತ್ವದ ಮಾಹಿತಿಗಳನ್ನು ಒಳಗೊಂಡಂತೆ ಸಿದ್ಧಪಡಿಸಲಾಗಿದೆ ಎಂದರು. ಇದರ ತಯಾರಿಕೆಯಲ್ಲಿ ಸುಮಾರು 12–13 ಜನರು ಶ್ರಮವಹಿಸಿರುವುದಾಗಿ ತಿಳಿಸಿದರು. ಜೊತೆಗೆ ಸಮಾಜದಲ್ಲಿನ ಬಡ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗಾಗಿ ಉಚಿತ ಪ್ರಸಾದ ವಿದ್ಯಾರ್ಥಿ ನಿಲಯ ಸ್ಥಾಪನೆಗೆ ಸಮಾಜ ಮುಂದಾಗಿದ್ದು, ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಹೇಳಿದರು.

ಜಿಲ್ಲಾ ಜಂಗಮ ಸಮಾಜದ ಕಾರ್ಯಾಧ್ಯಕ್ಷ ಎಂ.ಟಿ. ಮಲ್ಲಿಕಾರ್ಜುನಯ್ಯ ಮಾತನಾಡಿ, ಸಮಾಜದ ಸದಸ್ಯರ ಆರ್ಥಿಕ ಅಭಿವೃದ್ಧಿಗಾಗಿ ಸ್ಥಾಪಿಸಲಾಗಿರುವ ಬ್ಯಾಂಕಿನಲ್ಲಿ ಷೇರುಗಳನ್ನು ಪಡೆದು ಸದಸ್ಯರಾಗುವ ಮೂಲಕ ಸಾಲ ಸೌಲಭ್ಯವನ್ನು ಪಡೆದುಕೊಳ್ಳಬಹುದಾಗಿದೆ ಎಂದರು. ಸಮಾಜದ ಮಕ್ಕಳಿಗಾಗಿ ವಿದ್ಯಾರ್ಥಿ ನಿಲಯ ನಿರ್ಮಾಣಕ್ಕೆ ಹಲವು ಕಡೆ ನಿವೇಶನ ಪರಿಶೀಲನೆ ನಡೆದಿದ್ದರೂ, ಕಾರಣಾಂತರಗಳಿಂದ ಕೈಬಿಡಬೇಕಾಯಿತು. ಮುಂದಿನ ದಿನಗಳಲ್ಲಿ ಖಾಸಗಿಯಾಗಿ ನಿವೇಶನ ಖರೀದಿ ಮಾಡಿ ಶೀಘ್ರದಲ್ಲೇ ವಿದ್ಯಾರ್ಥಿ ನಿಲಯ ನಿರ್ಮಿಸಲಾಗುವುದು ಎಂದು ಭರವಸೆ ನೀಡಿದರು.

ಸಭೆಯಲ್ಲಿ ಚೈತನ್ಯ, ಪ್ರಭುದೇವ್, ಗಣೇಶಯ್ಯ, ಆನಂದ್, ಶಶಿಧರ್ ಬಾಬು, ಕುಮಾರಸ್ವಾಮಿ ಸೇರಿದಂತೆ ಅನೇಕರು ಸಲಹೆ–ಸೂಚನೆಗಳನ್ನು ನೀಡಿದರು. ಗೌರವಾಧ್ಯಕ್ಷ ನಿಜಲಿಂಗಯ್ಯ, ಉಪಾಧ್ಯಕ್ಷ ತಿಪ್ಪೇಸ್ವಾಮಿ, ಕಾನೂನು ಸಲಹೆಗಾರ ಕೆ.ಎನ್. ವಿಶ್ವನಾಥಯ್ಯ ಸೇರಿದಂತೆ ನಿರ್ದೇಶಕರು ಹಾಗೂ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Views: 16

Leave a Reply

Your email address will not be published. Required fields are marked *