ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಚಿತ್ರದುರ್ಗ, ಡಿ.19:
ದುರ್ಗ ರನ್ನರ್ಸ್ ಸಂಸ್ಥೆಯ ವತಿಯಿಂದ ‘ರನ್ ದುರ್ಗ ರನ್–2025’ ಎಂಬ ಬೃಹತ್ ಓಟ ಸ್ಪರ್ಧೆಯನ್ನು ಇದೇ ಡಿಸೆಂಬರ್ 21ರ ಭಾನುವಾರ ನಗರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ಚೇತನ್ ಬಾಬು ತಿಳಿಸಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪುರುಷರು, ಮಹಿಳೆಯರು ಹಾಗೂ ಮಕ್ಕಳಿಗಾಗಿ ಒಟ್ಟು ನಾಲ್ಕು ವಿಭಾಗಗಳಲ್ಲಿ ಸ್ಪರ್ಧೆಗಳನ್ನು ಆಯೋಜಿಸಲಾಗಿದ್ದು, 10 ಕಿ.ಮೀ, 5 ಕಿ.ಮೀ ಮತ್ತು 3 ಕಿ.ಮೀ ದೂರ ನಿಗದಿಪಡಿಸಲಾಗಿದೆ ಎಂದು ತಿಳಿಸಿದರು. ಪ್ರತಿಯೊಂದು ವಿಭಾಗದಲ್ಲೂ ವಿಜೇತರಿಗೆ ಮೂರು ಹಂತಗಳಲ್ಲಿ ಬಹುಮಾನ ವಿತರಿಸಲಾಗುವುದು ಎಂದರು.
ಈ ಸ್ಪರ್ಧೆಯಲ್ಲಿ ಕರ್ನಾಟಕದ ವಿವಿಧ ಜಿಲ್ಲೆಗಳ ಜೊತೆಗೆ ನೆರೆ ರಾಜ್ಯ ಮಹಾರಾಷ್ಟ್ರದಿಂದಲೂ ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ. ಭಾನುವಾರ ಬೆಳಿಗ್ಗೆ 6 ಗಂಟೆಗೆ ಆರಂಭವಾಗುವ ಓಟ ಸ್ಪರ್ಧೆಗಳು ಮಧ್ಯಾಹ್ನ 12 ಗಂಟೆಗೆ ಮುಕ್ತಾಯಗೊಳ್ಳಲಿವೆ ಎಂದು ಮಾಹಿತಿ ನೀಡಿದರು.
ಸ್ಪರ್ಧೆಯಲ್ಲಿ ಭಾಗವಹಿಸುವ ಪ್ರತಿಯೊಬ್ಬರಿಗೆ ಟಿ-ಶರ್ಟ್, ಪದಕ, ಪ್ರಮಾಣ ಪತ್ರ ಹಾಗೂ ಓಟದ ಫೋಟೋಗಳು ನೀಡಲಾಗುವುದು. ಒಟ್ಟು 1,000 ಜನರಿಗೆ ಅವಕಾಶ ಕಲ್ಪಿಸಲಾಗಿದ್ದು, ಈಗಾಗಲೇ 950 ಕ್ರೀಡಾಪಟುಗಳು ಹೆಸರು ನೋಂದಾಯಿಸಿಕೊಂಡಿದ್ದಾರೆ ಎಂದರು.
ಈ ಕ್ರೀಡಾಕೂಟವನ್ನು ಸಂಸದ ಗೋವಿಂದ ಎಂ. ಕಾರಜೋಳ ಹಾಗೂ ವಿಧಾನ ಪರಿಷತ್ ಸದಸ್ಯ ಕೆ.ಎಸ್. ನವೀನ್ ಉದ್ಘಾಟಿಸಲಿದ್ದಾರೆ ಎಂದು ಚೇತನ್ ಬಾಬು ತಿಳಿಸಿದರು.
ಕಾರ್ಯಕ್ರಮದ ಸಂಯೋಜಕರಾದ ವಿ.ಎಲ್. ಪ್ರಶಾಂತ್ ಮಾತನಾಡಿ, ನಗರದ ಒನಕೆ ಓಬವ್ವ ಕ್ರೀಡಾಂಗಣದಿಂದ ಓಟ ಆರಂಭವಾಗಿ ಅದೇ ಸ್ಥಳದಲ್ಲಿ ಮುಕ್ತಾಯವಾಗಲಿದೆ. ಚಿತ್ರದುರ್ಗದಲ್ಲಿ ಇದೇ ಮೊದಲ ಬಾರಿಗೆ ಈ ರೀತಿಯ ಬೃಹತ್ ರನ್ ಆಯೋಜಿಸಲಾಗುತ್ತಿದ್ದು, ಅಂತರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳು ಕೂಡ ಭಾಗವಹಿಸಲಿದ್ದಾರೆ ಎಂದು ಹೇಳಿದರು.
ವಿಶೇಷ ಆಕರ್ಷಣೆಯಾಗಿ ಮಹಿಳೆಯರು ಸೀರೆಯನ್ನು ಧರಿಸಿ ಓಟ ಮತ್ತು ನಡಿಗೆಯಲ್ಲಿ ಭಾಗವಹಿಸುವ ಕಾರ್ಯಕ್ರಮ ಆಯೋಜಿಸಲಾಗಿದೆ. ಮನೆಗೇ ಸೀಮಿತರಾಗಿರುವ ಮಹಿಳೆಯರಿಗೆ ಇದು ಉತ್ತಮ ಅವಕಾಶವಾಗಿದೆ ಎಂದು ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಸುಷ್ಮಾ, ವಿಕ್ರಮ್, ಮಹೇಶ್ ಉಪಸ್ಥಿತರಿದ್ದರು.
Views: 25