ಸುಳ್ಳು ಆರೋಪ ಸಾಬೀತಾದರೆ ರಾಜಕೀಯದಿಂದ ನಿವೃತ್ತಿ – ಶಾಸಕ ಡಾ.ಎಂ.ಚಂದ್ರಪ್ಪ ಸವಾಲ್

ಪೋಟೋ ಮತ್ತು ವರದಿ ಸುರೇಶ್ ಪಟ್ಟಣ್

ಚಿತ್ರದುರ್ಗ, ಡಿ.20:
ಹೊಳಲ್ಕೆರೆ ಕ್ಷೇತ್ರದ ಶಾಸಕ ಡಾ. ಎಂ. ಚಂದ್ರಪ್ಪ ಅವರು ತಮ್ಮ 35 ವರ್ಷದ ರಾಜಕೀಯ ಜೀವನದಲ್ಲಿ ಯಾವುದೇ ಅಕ್ರಮ, ಭೂ ಕಬಳಿಕೆ ಅಥವಾ ಅಕ್ರಮ ಗಣಿಗಾರಿಕೆ ನಡೆಸಿಲ್ಲ ಎಂದು ಸ್ಪಷ್ಟಪಡಿಸಿದರು. ತಮ್ಮ ಮೇಲೆ ಈ ಆರೋಪಗಳಲ್ಲಿ ಒಂದನ್ನಾದರೂ ಯಾರಾದರೂ ಸಾಕ್ಷ್ಯ ಸಮೇತ ಸಾಬೀತುಪಡಿಸಿದರೆ ರಾಜಕೀಯದಿಂದಲೇ ನಿವೃತ್ತಿಯಾಗುವುದಾಗಿ ಅವರು ಸವಾಲು ಹಾಕಿದರು.
ಚಿತ್ರದುರ್ಗ ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜಕೀಯವಾಗಿ ತಮ್ಮನ್ನು ತೇಜೋವಧೆ ಮಾಡಲು ಕೆಲವರು ಆಧಾರರಹಿತ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಮಾಧ್ಯಮಗಳ ಮುಂದೆ ಸುಳ್ಳು ಹೇಳುವ ಮೂಲಕ ತಮ್ಮ ಸ್ವಾರ್ಥ ಸಾಧಿಸಲು ಪ್ರಯತ್ನಿಸಲಾಗುತ್ತಿದೆ ಎಂದೂ ಹೇಳಿದರು.
ಹೊಳಲ್ಕೆರೆಯಲ್ಲಿ ತಮ್ಮ ಮಗನ ಹೆಸರಿನಲ್ಲಿ ದಲಿತರ ಭೂಮಿಯನ್ನು ಖರೀದಿಸಲಾಗಿದೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಶಾಸಕ ಚಂದ್ರಪ್ಪ, 1910ರಲ್ಲಿಯೇ ಆ ಭೂಮಿಗೆ ಉಳಿಮೆ ನಡೆದಿದ್ದು, ನಂತರ ನಾಲ್ಕು ಕೈಬದಲಾವಣೆಗಳಾಗಿ ತಮ್ಮ ಮಗನ ಹೆಸರಿಗೆ ಸರ್ಕಾರದ ದಾಖಲಾತಿಯಂತೆ ಖರೀದಿ ಆಗಿದೆ ಎಂದು ವಿವರಿಸಿದರು. ದಲಿತರ ಭೂಮಿಯನ್ನು ಕಬಳಿಸಿಲ್ಲ ಎಂಬುದಕ್ಕೆ ಅಗತ್ಯ ದಾಖಲೆಗಳು ತಮ್ಮ ಬಳಿ ಇವೆ ಎಂದರು.
ತಮಗೆ ಒಟ್ಟು ಸುಮಾರು 500 ಎಕರೆ ಭೂಮಿ ಇದ್ದು, ಅಡಿಕೆ, ತೆಂಗು ಸೇರಿದಂತೆ ವಿವಿಧ ಬೆಳೆಗಳನ್ನು ಬೆಳೆಯಲಾಗುತ್ತಿದೆ. ಇಂತಹ ಸ್ಥಿತಿಯಲ್ಲಿ ಬೇರೆಯವರ ಭೂಮಿಯನ್ನು ಕಬಳಿಸುವಂತಹ ಕೀಳು ಮಟ್ಟದ ಕೆಲಸಕ್ಕೆ ತಾವು ಹೋಗುವುದಿಲ್ಲ ಎಂದು ಕಿಡಿಕಾರಿದರು.
ಹೊಳಲ್ಕೆರೆ ತಾಲ್ಲೂಕಿನ ಬಿ.ದುರ್ಗ ಹೋಬಳಿಯ ಹೀರೇಕಂದವಾಡಿ ಗ್ರಾಮದ ವಿವಿಧ ಸರ್ವೆ ನಂಬರ್‌ಗಳ ಭೂಮಿಯನ್ನು ಲಿಂಗಾಯತ, ಭೋವಿ ಹಾಗೂ ಈಡಿಗ ಸಮುದಾಯದವರಿಂದ ಸರ್ಕಾರದ ದಾಖಲಾತಿಯಂತೆ ಖರೀದಿ ಮಾಡಲಾಗಿದೆ. ಎಲ್ಲವೂ ಪಾರದರ್ಶಕವಾಗಿದ್ದು ಯಾವುದೇ ಮುಚ್ಚುಮರೆ ಇಲ್ಲ ಎಂದು ಅವರು ಸ್ಪಷ್ಟಪಡಿಸಿದರು. 1910ರಲ್ಲಿ ಪರಿಶಿಷ್ಟ ಜಾತಿ ಕಾಯ್ದೆ ಇರಲಿಲ್ಲ ಎಂಬ ಅರಿವು ಆರೋಪ ಮಾಡುವವರಿಗೆ ಇಲ್ಲ ಎಂದು ಟೀಕಿಸಿದರು.
ಇನ್ನೂ, ತಪ್ಪು ಪಹಣಿ ತೋರಿಸಿ ಗೊಂದಲ ಸೃಷ್ಟಿಸಲಾಗಿದೆ; ಈ ಕುರಿತು ಸಮಗ್ರ ತನಿಖೆ ಅಗತ್ಯವಿದೆ. ತಹಶೀಲ್ದಾರ್ ಕಚೇರಿಯಿಂದ ತಪ್ಪು ವರದಿ ಸಿದ್ಧಗೊಂಡಿದೆ ಎಂಬ ಆರೋಪವೂ ಕೇಳಿಬಂದಿದೆ. ತಮ್ಮ ರಾಜಕೀಯ ಜೀವನ ‘ವೈಟ್ ಪೇಪರ್’ನಂತೆ ಶುದ್ಧವಾಗಿದ್ದು ಯಾವುದೇ ಕಪ್ಪು ಚುಕ್ಕೆ ಇಲ್ಲ ಎಂದು ಶಾಸಕ ಚಂದ್ರಪ್ಪ ಹೇಳಿದರು.

Views: 51

Leave a Reply

Your email address will not be published. Required fields are marked *