ಪೋಟೋ ಮತ್ತು ವರದಿ ರವಿ ಕೆ ಅಂಬೇಕರ್
ಹಿರಿಯೂರು ತಾಲ್ಲೂಕುಯ ಯರಬಳ್ಳಿ ಗ್ರಾಮದಲ್ಲಿ ಡಿಸೆಂಬರ್ 21ರಂದು ನಡೆಯಲಿರುವ ಪೋಲಿಯೊ ಹನಿ ಕಾರ್ಯಕ್ರಮದ ಹಿನ್ನೆಲೆಯಲ್ಲಿ, ಸರ್ಕಾರಿ ಪಿಎಂಶ್ರೀ ಶಾಲೆಯ ಮಕ್ಕಳಿಂದ ಶನಿವಾರ ಜಾಗೃತಿ ಜಾಥೆ ನಡೆಸಲಾಯಿತು. ಗ್ರಾಮದ ಸರ್ಕಾರಿ ಆರೋಗ್ಯ ಮತ್ತು ಕ್ಷೇಮ ಕೇಂದ್ರದ ಸಹಯೋಗದಲ್ಲಿ ನಡೆದ ಈ ಕಾರ್ಯಕ್ರಮದ ಉದ್ದೇಶ ಐದು ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ತಪ್ಪದೇ ಪೋಲಿಯೊ ಹನಿ ಹಾಕಿಸುವ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವುದಾಗಿತ್ತು.

ಜಾಥೆಯ ವೇಳೆ ಮಾತನಾಡಿದ ಆರೋಗ್ಯ ನಿರೀಕ್ಷಣಾಧಿಕಾರಿ ಮಂಜುನಾಥ್ ಅವರು, ಈ ಬಾರಿ ಪೋಲಿಯೊ ಹನಿ ದಿನದ ಘೋಷವಾಕ್ಯವಾಗಿ “ತಪ್ಪದೇ ಎರಡು ಹನಿ ಪೋಲಿಯೊ ಲಸಿಕೆ ಹಾಕಿಸಿ, ಅಂಗವಿಕಲತೆ ತಡೆಯೋಣ” ಹಾಗೂ “ಪೋಲಿಯೊ ಮುಕ್ತ ಭಾರತವನ್ನು ಉಳಿಸಿಕೊಳ್ಳೋಣ” ಎಂಬ ಸಂದೇಶಗಳನ್ನು ಮುಂದಿಟ್ಟಿದ್ದಾರೆ. ಭಾರತ ಈಗಾಗಲೇ ಪೋಲಿಯೊ ಮುಕ್ತ ರಾಷ್ಟ್ರವಾಗಿದ್ದು, ಈ ಸಾಧನೆಯನ್ನು ಶಾಶ್ವತಗೊಳಿಸಲು ಪ್ರತಿಯೊಬ್ಬ ಪೋಷಕರ ಸಹಕಾರ ಅಗತ್ಯವೆಂದು ಅವರು ತಿಳಿಸಿದರು. ಐದು ವರ್ಷದೊಳಗಿನ ಮಕ್ಕಳಿಗೆ ಎಷ್ಟೇ ಬಾರಿ ಲಸಿಕೆ ಹಾಕಿಸಿದ್ದರೂ, ಡಿಸೆಂಬರ್ 21ರಂದು ಪೋಲಿಯೊ ಬೂತ್‌ಗೆ ಕರೆತಂದು ಎರಡು ಹನಿ ಲಸಿಕೆ ಹಾಕಿಸುವಂತೆ ಮನವಿ ಮಾಡಿದರು.
ಶಾಲೆಯ ಮುಖ್ಯ ಶಿಕ್ಷಕಿ ಶ್ರೀಮತಿ ಸವಿತ ಅವರ ನೇತೃತ್ವದಲ್ಲಿ ನಡೆದ ಜಾಥೆಯಲ್ಲಿ ಮಕ್ಕಳು ಪೋಲಿಯೊ ಜಾಗೃತಿ ಬ್ಯಾನರ್ ಹಾಗೂ ಪೋಸ್ಟರ್‌ಗಳನ್ನು ಹಿಡಿದು “ಹಾಕಿಸಿ ಹಾಕಿಸಿ ಪೋಲಿಯೊ ಹನಿ ಹಾಕಿಸಿ, ಮಕ್ಕಳನ್ನು ಪೋಲಿಯೊದಿಂದ ರಕ್ಷಿಸಿ” ಎಂಬ ಘೋಷಣೆಗಳನ್ನು ಕೂಗುತ್ತಾ ಗ್ರಾಮದ ಬೀದಿಗಳಲ್ಲಿ ಸಂಚರಿಸಿದರು.
ಈ ಕಾರ್ಯಕ್ರಮದಲ್ಲಿ ಆರೋಗ್ಯ ಸಂರಕ್ಷಣಾಧಿಕಾರಿ ಶ್ರೀಮತಿ ಕಾಳಮ್ಮ ಟಿ, ಆರೋಗ್ಯ ನಿರೀಕ್ಷಣಾಧಿಕಾರಿ ಶ್ರೀಮತಿ ವೀಣಾ, ಆಶಾ ಕಾರ್ಯಕರ್ತೆ ಜಯಲಕ್ಷ್ಮೀ ಹಾಗೂ ಶಾಲೆಯ ಎಲ್ಲಾ ಶಿಕ್ಷಕರು ಭಾಗವಹಿಸಿ ಜಾಗೃತಿ ಅಭಿಯಾನಕ್ಕೆ ಬೆಂಬಲ ನೀಡಿದರು.
Views: 39