ಚಿತ್ರದುರ್ಗ ಭೀಕರ ಬಸ್ ಅಪಘಾತ: ಲಾರಿ ಡಿಕ್ಕಿಗೆ ಸ್ಲೀಪರ್ ಕೋಚ್ ಹೊತ್ತಿ ಉರಿದು 17ಕ್ಕೂ ಹೆಚ್ಚು ಸಜೀವ ದಹನ.

ಚಿತ್ರದುರ್ಗ, ಡಿ.25:
ಕ್ರಿಸ್‌ಮಸ್ ಸಂಭ್ರಮದ ನಡುವೆಯೇ ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ಗೊರ್ಲತ್ತು ಕ್ರಾಸ್ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಕನಿಷ್ಠ 17ಕ್ಕೂ ಹೆಚ್ಚು ಪ್ರಯಾಣಿಕರು ಸಜೀವ ದಹನವಾಗಿ ಸಾವನ್ನಪ್ಪಿರುವ ದುರ್ಘಟನೆ ನಡೆದಿದೆ.

ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಒಂದು ಕಡೆಯಿಂದ ಬರುತ್ತಿದ್ದ ಕಂಟೇನರ್ ಲಾರಿ ಡಿವೈಡರ್ ಹಾರಿ ಎದುರುಗಡೆಯಿಂದ ಬರುತ್ತಿದ್ದ ಖಾಸಗಿ ಸ್ಲೀಪರ್ ಕೋಚ್ ಬಸ್ಸಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಬಸ್ ರಸ್ತೆ ಮಧ್ಯೆ ಹೊತ್ತಿ ಉರಿದಿದ್ದು, ಒಳಗಿದ್ದ ಪ್ರಯಾಣಿಕರು ಬೆಂಕಿಗೆ ಸಿಲುಕಿ ಪ್ರಾಣ ಕಳೆದುಕೊಂಡಿದ್ದಾರೆ.

ಈ ಬಸ್ ಬೆಂಗಳೂರಿನಿಂದ ಶಿವಮೊಗ್ಗಕ್ಕೆ ತೆರಳುತ್ತಿದ್ದು, ಲಾರಿ ಹಿರಿಯೂರಿನಿಂದ ಬೆಂಗಳೂರಿನತ್ತ ಸಾಗುತ್ತಿತ್ತು ಎಂದು ತಿಳಿದುಬಂದಿದೆ. ಲಾರಿ ಚಾಲಕನ ನಿರ್ಲಕ್ಷ್ಯವೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ. ಅಪಘಾತದಲ್ಲಿ ಕಂಟೇನರ್ ಲಾರಿ ಚಾಲಕ ಕುಲದೀಪ್ ಮೃತಪಟ್ಟಿದ್ದಾನೆ.

ಬಸ್ಸಿನಲ್ಲಿ ಒಟ್ಟು 32 ಸೀಟ್‌ಗಳಿದ್ದು 29 ಪ್ರಯಾಣಿಕರು ಪ್ರಯಾಣಿಸುತ್ತಿದ್ದರು. ಇದರಲ್ಲಿ 15 ಮಹಿಳೆಯರು ಹಾಗೂ 14 ಪುರುಷರು ಸೇರಿದ್ದರು. ಗೋಕರ್ಣದ 25 ಜನ, ಕುಮಟಾದ ಇಬ್ಬರು ಮತ್ತು ಶಿವಮೊಗ್ಗದ ಇಬ್ಬರು ಪ್ರಯಾಣಿಕರು ಬಸ್ಸಿನಲ್ಲಿ ಇದ್ದರು ಎಂದು ಹೇಳಲಾಗಿದೆ.

ಬಸ್ ಚಾಲಕ, ನಿರ್ವಾಹಕ ಹಾಗೂ ಕೆಲ ಪ್ರಯಾಣಿಕರು ಸಮಯಕ್ಕೆ ಸರಿಯಾಗಿ ಹೊರ ಜಿಗಿದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ ಹಲವರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹಿರಿಯೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪಘಾತದ ಹಿನ್ನೆಲೆ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಸುಮಾರು 30 ಕಿ.ಮೀ ದೂರದವರೆಗೆ ಟ್ರಾಫಿಕ್ ಜಾಮ್ ಉಂಟಾಗಿದ್ದು, ಶಿರಾವರೆಗೂ ವಾಹನಗಳು ಸಾಲುಗಟ್ಟಿ ನಿಂತಿದ್ದವು.

ಇದೇ ವೇಳೆ, ಇತ್ತೀಚೆಗೆ ಆಂಧ್ರಪ್ರದೇಶದ ಕರ್ನೂಲ್ ಸಮೀಪ ಖಾಸಗಿ ಬಸ್ ಹೊತ್ತಿ ಉರಿದು 20 ಜನ ಸಾವನ್ನಪ್ಪಿದ ಘಟನೆ ಮಾಸುವ ಮುನ್ನವೇ ಇಂತಹದೇ ಮತ್ತೊಂದು ದುರಂತ ಸಂಭವಿಸಿರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.

Views: 154

Leave a Reply

Your email address will not be published. Required fields are marked *