ದ್ವೇಷ ಭಾಷಣ ವಿಧೇಯಕ ರದ್ದತಿಗೆ ಎಸ್.ವಿ.ವಿಜಯಣ್ಣ ಆಗ್ರಹ.

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಚಿತ್ರದುರ್ಗ | ಡಿ. 27

ರಾಜ್ಯ ಕಾಂಗ್ರೆಸ್ ಸರ್ಕಾರ ಜಾರಿಗೆ ತರಲು ಮುಂದಾಗಿರುವ ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ ಪ್ರತಿಬಂಧಕ ವಿಧೇಯಕವು ನಾಗರಿಕರ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಸಂವಿಧಾನ ವಿರೋಧಿ ಮಸೂದೆ ಆಗಿದ್ದು, ಇದನ್ನು ತಕ್ಷಣವೇ ರದ್ದುಗೊಳಿಸಬೇಕು ಎಂದು ಬಿಜೆಪಿ ಮುಖಂಡ ಹಾಗೂ ವಾಣಿಜ್ಯೋದ್ಯಮಿ ಎಸ್.ವಿ. ವಿಜಯಣ್ಣ ಅವರು ರಾಜ್ಯಪಾಲರನ್ನು ಒತ್ತಾಯಿಸಿದ್ದಾರೆ.

ಈ ಕುರಿತು ಹೇಳಿಕೆ ನೀಡಿರುವ ಅವರು, ಭಾರತೀಯ ಸಂವಿಧಾನವು ಪ್ರತಿಯೊಬ್ಬ ನಾಗರಿಕನಿಗೂ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಭದ್ರಪಡಿಸಿದೆ. ಆದರೆ ಕಾಂಗ್ರೆಸ್ ಸರ್ಕಾರ ಈ ಮಸೂದೆಯ ಮೂಲಕ ನಾಗರಿಕರ ಬಾಯಿಗೆ ಬೀಗ ಹಾಕಲು ಮುಂದಾಗಿರುವುದು ಅಂಬೇಡ್ಕರ್ ಆಶಯಗಳಿಗೆ ವಿರುದ್ಧವಾದ ನಡೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮಸೂದೆಯಲ್ಲಿ “ದ್ವೇಷ ಭಾಷಣ” ಎಂಬ ಪದಕ್ಕೆ ಸ್ಪಷ್ಟ ವ್ಯಾಖ್ಯಾನವಿಲ್ಲ. ಸರ್ಕಾರದ ನೀತಿಗಳ ವಿರುದ್ಧ ಟೀಕೆ, ಸಾಮಾಜಿಕ ಚರ್ಚೆ, ವಿಮರ್ಶೆ ಹಾಗೂ ಸತ್ಯವನ್ನು ಹೇಳುವುದನ್ನೇ ದ್ವೇಷ ಭಾಷಣವೆಂದು ಪರಿಗಣಿಸುವ ಅಪಾಯವಿದೆ. ಇದರಿಂದ ಪ್ರಜಾಪ್ರಭುತ್ವದ ಮೌಲ್ಯಗಳು ನಾಶವಾಗಲಿದ್ದು, ಈ ಕಾಯ್ದೆ ಜನತಾಂತ್ರಿಕ ಧ್ವನಿಗಳನ್ನು ಮುಚ್ಚಿಸುವ ಸಾಧನವಾಗುತ್ತದೆ ಎಂದು ಆರೋಪಿಸಿದರು.

ಈ ಮಸೂದೆ ಜಾರಿಯಾದರೆ ರಾಜ್ಯದಲ್ಲಿ ನಡೆಯುವ ಪ್ರತಿಭಟನೆಗಳು, ಶಾಂತ ಸಭೆಗಳು ಹಾಗೂ ಸಾಮಾಜಿಕ ಚಳವಳಿಗಳು ಹತ್ತಿಕ್ಕಲ್ಪಡುವ ಸಾಧ್ಯತೆ ಇದೆ. ಆದ್ದರಿಂದ ರಾಜ್ಯಪಾಲರು ಕೂಡಲೇ ಈ ಕರಾಳ ಮಸೂದೆಯನ್ನು ರದ್ದುಗೊಳಿಸಬೇಕು ಎಂದು ಆಗ್ರಹಿಸಿದರು.

ಇದೇ ವೇಳೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ರಾಜ್ಯದ ಅಭಿವೃದ್ಧಿಗಿಂತ ತಮ್ಮ ಅಧಿಕಾರ ರಾಜಕಾರಣದಲ್ಲೇ ತೊಡಗಿದ್ದಾರೆ. ಇದರ ಪರಿಣಾಮವಾಗಿ ರಾಜ್ಯದ ಆರ್ಥಿಕ ಸ್ಥಿತಿ ಹದಗೆಟ್ಟಿದ್ದು, ಹಲವು ವಿದೇಶಿ ಕಂಪನಿಗಳು ನೆರೆಯ ರಾಜ್ಯಗಳಿಗೆ ವಲಸೆ ಹೋಗುತ್ತಿವೆ. ಇದರಿಂದ ಕನ್ನಡಿಗರ ಉದ್ಯೋಗ ಭದ್ರತೆಗೆ ಗಂಭೀರ ಅಪಾಯ ಎದುರಾಗಿದೆ ಎಂದು ವಿಜಯಣ್ಣ ಎಚ್ಚರಿಸಿದರು.

ರಾಜ್ಯದ ಭವಿಷ್ಯ, ಆರ್ಥಿಕ ಬೆಳವಣಿಗೆ ಮತ್ತು ಉದ್ಯೋಗ ಸೃಷ್ಟಿಯ ಕುರಿತು ಸರ್ಕಾರ ಗಂಭೀರವಾಗಿ ಚಿಂತನೆ ನಡೆಸಬೇಕಿದೆ ಎಂದು ಅವರು ಒತ್ತಾಯಿಸಿದ್ದಾರೆ.

Views: 63

Leave a Reply

Your email address will not be published. Required fields are marked *