ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಚಿತ್ರದುರ್ಗ ಜ. 02
ಪೆಬ್ರವರಿ ತಿಂಗಳ ಎರಡನೇ ವಾರದಲ್ಲಿ ಚಿತ್ರದುರ್ಗದ ತರಾಸು ರಂಗಮಂದಿರದಲ್ಲಿ ವಿಕಲಚೇತನರ ರಾಜ್ಯ ಮಟ್ಟದ ಸಮಾವೇಶ ಹಾಗೂ ವಿಶೇಷಚೇತನರ 10 ಬೇಡಿಕೆಗಳು ಕೃತಿಯನ್ನು ಲೋಕಾರ್ಪಣೆಗೊಳಿಸುವ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದಿರುವ ವಿಶೇಷ ಸಾಧಕರಿಗೆ ವಿಕಲಚೇತನರ ಅಭಿವೃದ್ಧಿ ಸಂಘದ ವತಿಯಿಂದ ರಾಜ್ಯ ಮಟ್ಟದ ಪ್ರಶಸ್ತಿ ನೀಡಿ ಗೌರವಿಸುವ ಕಾರ್ಯಕ್ರಮ ನಡೆಯಲಿದೆ ಎಂದು ವಿಕಲಚೇತನರ ಅಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷರಾದ ಮಹಾಂತೇಶ್ ಬ್ರಹ್ಮ ತಿಳಿಸಿದ್ದಾರೆ.
ಚಿತ್ರದುರ್ಗ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಸಮಾಜದಲ್ಲಿ ಕಟ್ಟಕಡೆಯ ಪ್ರಜೆಗಳಾಗಿ ಬದುಕುತ್ತಿರುವ ವಿಶೇಷಚೇತನರ ಶ್ರೇಯೋಭಿವೃದ್ಧಿಗಾಗಿ ವಿಕಲಚೇತನರ ಅಭಿವೃದ್ಧಿ ಸಂಘ(ರಿ) ಕಳೆದ 5 ವರ್ಷಗಳಿಂದ ರಾಜ್ಯಾದ್ಯಂತ ತೀವ್ರ ಹೋರಾಟ ನಡೆಸುತ್ತ ಸರ್ಕಾರದ ಗಮನ ಸೆಳೆದು ವಿಕಲಚೇತನರಿಗೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲು ಶ್ರಮಿಸುತ್ತಿದೆ.
ಪೆಬ್ರವರಿ ತಿಂಗಳ ಎರಡನೇ ವಾರದಲ್ಲಿ ಚಿತ್ರದುರ್ಗದ ತರಾಸು ರಂಗಮಂದಿರದಲ್ಲಿ ವಿಕಲಚೇತನರ ರಾಜ್ಯ ಮಟ್ಟದ ಸಮಾವೇಶವನ್ನು ಹಮ್ಮಿಕೊಂಡಿದೆ. ಇದೇ ಸಂದರ್ಭದಲ್ಲಿ ವಿಶೇಷ ಚೇತನರ ಮಾಸಾಶನ 5 ಸಾವಿರಕ್ಕೆ ಹೆಚ್ಚಳ ಮಾಡಬೇಕು, ಕರ್ನಾಟಕ ರಾಜ್ಯಾದ್ಯಂತ ಉಚಿತ ಬಸ್ ಪಾಸ್ ನೀಡಬೇಕು, ವಿಶೇಷ ಚೇತನರ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಬೇಕು, ರಾಜ್ಯಾದ್ಯಂತ ಪ್ರತಿ ಜಿಲ್ಲಾ ಹಾಗೂ ತಾಲ್ಲೂಕು ಕೇಂದ್ರಗಳಲ್ಲಿ ವಿಕಲಚೇತನರ ಭವನ ನಿರ್ಮಾಣ ಮಾಡಬೇಕು, ವಿಶೇಷ ಚೇತನರನ್ನು ಮದುವೆಯಾಗುವ ವಧು-ವರರಿಗೆ ಈಗಿರುವ 50 ಸಾವಿರ ಪ್ರೋತ್ಸಾಹ ಧನವನ್ನು 5 ಲಕ್ಷಕ್ಕೆ ಹೆಚ್ಚಳ ಮಾಡಬೇಕು, ವಿಶೇಷ ಚೇತನರಿಗೆ ವಿಶೇಷ ಸಂಜೀವಿನಿ ಹೆಸರಿನಲ್ಲಿ 10 ಲಕ್ಷ ರೂಪಾಯಿಗಳ ಆರೋಗ್ಯ ವಿಮೆ.ನೀಡಬೇಕು, ಕರ್ನಾಟಕದಲ್ಲಿ ನಡೆಯುವ ಚುನಾವಣೆಯಲ್ಲಿ ಸ್ಪರ್ಧಿಸಲು ವಿಕಲಚೇತನರಿಗೆ ಶೇ.5ರ ಮೀಸಲಾತಿ ನೀಡಬೇಕು, ಕರ್ನಾಟಕ ಸರ್ಕಾರದಿಂದ ವಿಕಲಚೇತನರ ಜನ ಗಣತಿಯನ್ನು ಮಾಡಬೇಕು, ವಿಕಲಚೇತನರ ಮೇಲೆ ನಡೆಯುವ ದೌರ್ಜನ್ಯ ತಡೆ ಕಾಯ್ದೆ ಕಟ್ಟುನಿಟ್ಟಾಗಿ ಜಾರಿ ಮಾಡಬೇಕು ಮತ್ತು ಡಿಸೆಂಬರ್ 3ರಂದು ನಡೆಯುವ ಅಂಗವಿಕಲರ ದಿನಾಚರಣೆಯಲ್ಲಿ ಪಂಡಿತ್ ಪುಟ್ಟರಾಜ ಗವಾಯಿಗಳ ಪೊಟೋ
ಬಳಕೆಗೆ ಸರ್ಕಾರದಿಂದ ಆದೇಶ ಮಾಡಬೇಕು ಹಾಗೂ ವಿಕಲಚೇತನರು ಮತ್ತು ಹಿರಿಯ ನಾಗರಿಕರಿಗೆ ಪ್ರತ್ಯೇಕ ಸಚಿವಾಲಯ ಸ್ಥಾಪನೆ ಮಾಡುವಂತೆ ‘ವಿಶೇಷಚೇತನರ 10 ಬೇಡಿಕೆಗಳು ಕೃತಿಯನ್ನು ಲೋಕಾರ್ಪಣೆಗೊಳಿಸಿ ಈ ಬೇಡಿಕೆಗಳನ್ನು ಜಿಲ್ಲಾಡಳಿತದ ಮೂಲಕ ಜಿಲ್ಲಾ ಉಸ್ತುವಾರಿ ಸಚಿವರ ಮುಂದೆ ಹಕ್ಕೊತ್ತಾಯ ಪಡಿಸಲು ನಮ್ಮ ಸಮಿತಿಯಿಂದ ತೀರ್ಮಾನಿಸಲಾಗಿದೆ ಎಂದರು.
ವಿಕಲಚೇತನರ ರಾಜ್ಯ ಮಟ್ಟದ ಸಮಾವೇಶ ಕಾರ್ಯಕ್ರಮದಲ್ಲಿ ಕವಿಗೋಷ್ಠಿಯನ್ನು ಏರ್ಪಡಿಸಿದ್ದು, “ವಿಶೇಷ ಚೇತನರ ಹಕ್ಕುಗಳು ಮತ್ತು ಇಂದಿನ ಸರ್ಕಾರಗಳ ನಡೆ” ಎಂಬ ವಿಷಯದ ಬಗ್ಗೆ ಕುರಿತಂತೆ ಕವಿಗಳು ಕವಿಯತ್ರಿಯರು ಟೈಪಿಂಗ್ ಮೂಲಕ 25 ಸಾಲುಗಳಿಗೆ ಮೀರದಂತೆ ಕವಿತೆ ರಚನೆ ಮಾಡಿ ಟೈಪಿಂಗ್ ಮೂಲಕ ವಾಟ್ಸಪ್ ನಂಬರ್ 9739743485 ಕಳಿಸಲು ಕೋರಲಾಗಿದೆ.
ಆಯ್ಕೆ ಸಮಿತಿಯ ತೀರ್ಮಾನದೊಂದಿಗೆ ಆಯ್ದ 100 ಕವನಗಳನ್ನು ಮುದ್ರಣ ಮಾಡಿ “ವಿಶೇಷ ಕೂಗು” ಎಂಬ ಕವನ ಸಂಕಲನವನ್ನು ರಾಜ್ಯ ಮಟ್ಟದ ಸಮಾವೇಶ ಕಾರ್ಯಕ್ರಮದಲ್ಲಿ ಲೋಕರ್ಪಣೆಗೊಳಿಸಲಾಗುವುದು ಜೊತೆಗೆ ಪ್ರಥಮ ಬಹುಮಾನವಾಗಿ 5 ಸಾವಿರ ದ್ವಿತೀಯ ಬಹುಮಾನವಾಗಿ 3 ಸಾವಿರ ತೃತೀಯಬಹುಮಾನವಾಗಿ 2 ಸಾವಿರ ಮತ್ತು ಇಬ್ಬರಿಗೆ ಸಮಾಧಾನಕರ ಬಹುಮಾನವಾಗಿ ತಲಾ 1 ಸಾವಿರ ಮತ್ತು ನೆನಪಿನ ಕಾಣಿಕೆ ಹಾಗೂ ಪ್ರಶಸ್ತಿ ಪತ್ರವನ್ನು ನೀಡಲಾಗುವುದು. ಕವನಗಳನ್ನು ಕಳಿಸಲು 2026 ಜನವರಿ 20 ಕಡೆ ದಿನಾಂಕವಾಗಿದೆ ಎಂದರು.
ಗೋಷ್ಟಿಯಲ್ಲಿ ವಿಕಲಚೇತನ ಸಮಿತಿ ರಾಜ್ಯ ಸಮಿತಿಯ ಶಿವಣ್ಣ, ಪೆದ್ದಣ್ಣ ಸೇರಿದಂತೆ ಇತರರು ಇದ್ದರು.
Views: 24