ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಚಿತ್ರದುರ್ಗ ಜ. 03
ಇಂದು ಭಾರತದ ಮಹಿಳೆಯರ ಸಮಾಜದ ಎಲ್ಲಾ ಕ್ಷೇತ್ರದಲ್ಲಿ ಸಮಾನತೆಯ ಹಕ್ಕಿಗೆ ಕಾರಣರಾದವರು ಮಾತೆ ಸಾವಿತ್ರಿ ಬಾಪುಲೆ. ಇವರು ಸಮಾಜದ ಅನಿಷ್ಟ ಪದ್ದತಿಗಳಾದ ಬಾಲ್ಯ ವಿವಾಹ, ಸತಿಸಹಗಮನ ಪದ್ದತಿ, ಕೇಶ ಮುಂಡನೆ ವಿರುದ್ದ ಹೋರಾಟ ಮಾಡಿ, ಮಹಿಳೆಯರಿಗೋಸ್ಕರ ಪ್ರಪ್ರಥಮವಾಗಿ ಶಾಲೆಗಳು, ಅಬಲಾಶ್ರಮ ಸ್ಥಾಪನೆ ಮಾಡಿದ ಕೀರ್ತಿ ಇವರಿಗೆ ಸಲ್ಲುತ್ತದೆ ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿಯ ಹಿಂದುಳಿದ ವಿಭಾಗದ ವರ್ಗಗಳ ಜಿಲ್ಲಾಧ್ಯಕ್ಷರಾದ ಎನ್.ಡಿ.ಕುಮಾರ್ ತಿಳಿಸಿದರು.
ಚಿತ್ರದುರ್ಗ ನಗರದ ಕಾಂಗ್ರೆಸ್ ಸಮಿತಿಯ ಕಚೇರಿಯಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿಯ ಹಿಂದುಳಿದ ವಿಭಾಗದ ವರ್ಗಗಳ ಘಟಕದವತಿಯಿಂದ ಶನಿವಾರ ಭಾರತದ ಮೊದಲ ಮಹಿಳಾ ಶಿಕ್ಷಕಿ ಮಹಾನ್ ಸ್ತ್ರೀ ಸಮಾನತಾವಾದಿ ಸಾವಿತ್ರಿಬಾಯಿ ಪುಲೆ ಅವರ 195ನೇ ಜನ್ಮ ದಿನಾಚರಣೆಯ ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸಾವಿತ್ರಿಬಾಯಿ ಪುಲೆ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಅವರು ವೃಕ್ಷಕ್ಕೆ ತಿಮ್ಮಕ್ಕನಾದರೇ, ಅಕ್ಷರಕ್ಕೆ ಸಾವಿತ್ರಿಬಾಯಿ ಪುಲೆ ಅವರು, ಸಾವಿತ್ರಿಬಾಯಿ ಫುಲೆ 1831 ರಲ್ಲಿ ಮಹಾರಾಷ್ಟ್ರದ ಸತಾರಜಿಲ್ಲೆಯ ‘ನೈಗಾಂನ್’ನಲ್ಲಿ ಹುಟ್ಟಿದರು. ತಂದೆ ನೇವಸೆ ಪಾಟೀಲ. ಬಾಲ್ಯದಲ್ಲಿಯೇ ಸಾವಿತ್ರಿಬಾಯಿ ಫುಲೆ ಅವರು ಜ್ಯೋತಿಬಾಫುಲೆಯವರನ್ನು ಲಗ್ನವಾದರು. ಅವರ ಯಶಸ್ಸು, ಶ್ರೇಯಸ್ಸಿನ ವಿಕ್ರಮಪಾಲು ಜ್ಯೋತಿ ಬಾ ಫುಲೆ ಅವರದಾಗಿತ್ತು. ಸ್ತ್ರೀ ಶಿಕ್ಷಣವನ್ನು ತೆರೆದ ಕೀರ್ತಿ ಜ್ಯೋತಿಬಾಫುಲೆ ಅವರಿಗೆ ಸಲ್ಲಬೇಕು. ಬಾಲ್ಯ ವಿವಾಹ ರೂಢಿಯಲ್ಲಿದ್ದ ಕಾಲದಲ್ಲಿ ಸಾವಿತ್ರಿಬಾಯಿ ಫುಲೆ ಮದುವೆಯಾದಾಗ ಅವರಿಗೆ 8 ವರ್ಷ ವಯಸ್ಸು, ಜ್ಯೋತಿಬಾಫುಲೆ ಅವರಿಗೆ 13 ವರ್ಷ ವಯಸ್ಸಾಗಿತ್ತು. ಸಾವಿತ್ರಿಬಾಯಿ ಅವರಿಗೆ ಮನೆಯೇ ಮೊದಲ ಪಾಠಶಾಲೆ, ಪತಿ ಜ್ಯೋತಿಬಾ ಅವರೇ ಗುರುಗಳು. 1847ರಲ್ಲಿ ಸಾವಿತ್ರಿಬಾಯಿ ಶ್ರೀಮತಿ ಮಿಚಲ್ ಅವರ ನಾರ್ಮಲ್ ಶಾಲೆಯಲ್ಲಿ ಶಿಕ್ಷಕಿಯ ತರಬೇತಿ ಪಡೆದರು. ಅವರಿಗೆ 17 ವರ್ಷ. ಹೀಗಾಗಿ ಮಹಾರಾಷ್ಟ್ರದಲ್ಲಿ ತರಬೇತಿ ಆದ ಮೊದಲ ಶಿಕ್ಷಕಿಯಾಗಿದ್ದಾರೆ ಎಂದರು.
ಈ ಪಾಠಶಾಲೆಗಳ ಆಡಳಿತದ ಜವಾಬ್ದಾರಿಯನ್ನು ಸಾವಿತ್ರಿಬಾಯಿ ನಿರ್ವಹಿಸಬೇಕಾಗಿತ್ತು. ಶಿಕ್ಷಕಿ, ಸಂಚಾಲಕಿ, ಮುಖ್ಯೋಪಾಧ್ಯಾಯಿನಿ ಮುಂತಾದ ಕೆಲಸಗಳನ್ನು ಇವರು ಸಮರ್ಪಕವಾಗಿ ನಿಭಾಯಿಸುವುದರ ಮೂಲಕ ಜ್ಯೋತಿಬಾಫುಲೆ ಅವರಿಗೆ ನೆರವಾದರು. ಬ್ರಿಟಿಷ್ ಸರ್ಕಾರದವರು ಅವರ ಕೆಲಸ ಕಾರ್ಯಗಳನ್ನು ಕೂಲಂಕುಷವಾಗಿ ಅವಲೋಕಿಸಿ ಮೆಚ್ಚುಗೆ ಸೂಸಿದ್ದರು. ಈ ಎಲ್ಲಾ ಸಾಧನೆಗಳನ್ನು ಪರಿಗಣಿಸಿ , ಬ್ರಿಟಿಷ್ ಸರಕಾರ ಇವರಿಗೆ “ಇಂಡಿಯಾಸ್ ಫಸ್ಟ್ ಲೇಡಿ ಟೀಚರ್” ಎಂದು ಬಿರುದು ಕೂಡ ಕೊಟ್ಟಿದೆ. ಸ್ತ್ರೀಯರು ಕೂಡ ಪುರುಷರಂತೆ ಶಿಕ್ಷಣವನ್ನು ಪಡೆಯಬೇಕೆಂಬ ಮಹದಾಸೆಯಿಂದ ತಮಗೊದಗಿದ ಕಷ್ಟ – ಕಾರ್ಪಣ್ಯ ಗಳನ್ನು ಲೆಕ್ಕಿಸದೇ ಸ್ತ್ರೀ ಸಂಕುಲಕ್ಕೆ ಶೈಕ್ಷಣಿಕ ರಹದಾರಿಯನ್ನು ತೋರಿಸಿದರು ಎಂದು ತಿಳಿಸಿದರು.
ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಸಂಪತ್ ಕುಮಾರ್ ಮಾತನಾಡಿ, 1848ರಲ್ಲಿ ಪತಿ ಜ್ಯೋತಿಬಾ ಫುಲೆಯವರೊಂದಿಗೆ ಸೇರಿ ತಳ ಸಮುದಾಯದ ಹೆಣ್ಣುಮಕ್ಕಳಿಗಾಗಿ ಪುಣೆಯಲ್ಲಿ ಶಾಲೆಯನ್ನು ಪ್ರಾರಂಭಿಸಿದರು. 1855 ರಲ್ಲಿ ಕೂಲಿ ಕಾರ್ಮಿಕರಿಗಾಗಿ ರಾತ್ರಿಪಾಳೆಯದ ಶಾಲೆ ಸ್ಥಾಪನೆ. 1868 ರಲ್ಲಿ ದಲಿತರಿಗಾಗಿ ಮನೆಯ ಕುಡಿಯುವ ನೀರಿನ ಟ್ಯಾಂಕನ್ನು ಬಿಟ್ಟುಕೊಟ್ಟರು. ಬ್ರಾಹ್ಮಣ ವಿಧವೆಯ ಮಗುವೊಂದನ್ನು ದತ್ತು ತೆಗೆದುಕೊಂಡ ಪಶ್ಚಿಮ ಮಹಾರಾಷ್ಟ್ರದ ಕ್ಷಾಮ ಪ್ರದೇಶಗಳಲ್ಲಿ ಎರಡು ವರ್ಷ ಸೇವೆ ಸಲ್ಲಿಸಿದರು. 1863ರಲ್ಲಿ ಅನಾಥ ಮಕ್ಕಳಿಗಾಗಿ ಶಿಶುಕೇಂದ್ರವನ್ನು ತೆರೆಯುತ್ತಾರೆ. ಆ ಅನಾಥ ಮಕ್ಕಳೊಂದಿಗೆ ಪ್ರಾಂಜಲ ಮನಸ್ಸಿನಿಂದ ಬೆರೆಯುತ್ತಾರೆ ಎಂದರು.
ಕಾಂಗ್ರೆಸ್ ಮುಖಂಡರಾದ ನಜ್ಮಾತಾಜ್ ಮಾತನಾಡಿ, 150 ವರ್ಷಗಳ ಹಿಂದೆ ಸ್ತ್ರೀ ವಿಮೋಚನೆ ಕನಸಾಗಿದ್ದ ಕಾಲದಲ್ಲಿ ಅದನ್ನು ನನಸಾಗಿಸಲು ಸಾವಿತ್ರಿಬಾಯಿ ಫುಲೆ ಶ್ರಮಿಸಿದ್ದಾರೆ. ಆದರಿಂದು ಸ್ತ್ರೀ ವಿಮೋಚನೆ ಫ್ಯಾಷನ್ ಆಗಿದೆ. ಇಂದಿನ ಅಕ್ಷರಸ್ಥ ಭಾರತೀಯ ಪ್ರತಿಯೊಬ್ಬ ಮಹಿಳೆಯ ಮನದಲ್ಲೂ ಸಾವಿತ್ರಿಬಾಯಿ ಫುಲೆ ಇದ್ದಾರೆ. ಶಿಕ್ಷಣದ ಕ್ಷೇತ್ರಕ್ಕೆ ಯಾವ ಬಗೆಯ ಕಾಣಿಕೆಯನ್ನೂ ನೀಡದಂತಹ ವಿದ್ವಾಂಸರ ಹೆಸರಿನಲ್ಲಿ ಇಂದು ಶಿಕ್ಷಕರ ದಿನಾಚರಣೆ ಆಚರಿಸಲಾಗುತ್ತಿದೆ. ಆದರೆ ದಮನಿತ ಸಮುದಾಯಗಳ ಶಿಕ್ಷಣಕ್ಕಾಗಿ ಪ್ರತ್ಯೇಕ ಶಾಲೆಯನ್ನು ಸ್ಥಾಪಿಸಿ, ಕ್ರಾಂತಿಕಾರಿ ಚಳುವಳಿ ಮಾಡಿದ ಸಾವಿತ್ರಿಬಾಯಿ ಫುಲೆ ಅವರ ಬಗ್ಗೆ ಎಷ್ಟು ಜನರಿಗೆ ಗೊತ್ತಿದೆ ? ಎಂದು ಪ್ರಶ್ನಿಸಿ ಸಾವಿರಾರು ದೀಪಗಳನ್ನು ಹಚ್ಚಿದ ಆಧುನಿಕ ಶಿಕ್ಷಣದ ತಾಯಿ ಸಾವಿತ್ರಿಬಾಯಿ ಫುಲೆಗೆ ನಾವು ಚಿರಋಣಿಯಾಗಿರಬೇಕು ಫುಲೆ ದಂಪತಿಗಳ ಪ್ರಕಾರ ಹುಟ್ಟುವ ಪ್ರತಿಯೊಂದು ಮಗುವು ವಿಶೇಷವಾದುದು. ಮಕ್ಕಳು ಭೂಮಿಯ ಮೇಲಿನ ನಕ್ಷತ್ರಗಳು ಎಂದಿದ್ದಾರೆ.
ಕಾರ್ಯಕ್ರಮದಲ್ಲಿ ಸೈಯದ್ ಖುದ್ದುಸ್, ಎಸ್.ಟಿ.ಘಟಕದ ಅಧ್ಯಕ್ಷ ಮಂಜುನಾಥ್, ಮಹಿಳಾ ಕಾಂಗ್ರೆಸ್ ಉಪಾಧಕ್ಷರಾದ ಪವಿತ್ರ, ಮಧುಗೌಡ, ನೇತ್ರಾವತಿ ಬಸವರಾಜು, ಪ್ರಕಾಶ ರಾಮ ನಾಯ್ಕ್, ಸೇರಿದಂತೆ ಇತರರು ಭಾಗವಹಿಸಿದ್ದರು.
Views: 79