ವಾಣಿವಿಲಾಸ ಸಾಗರ ಭರ್ತಿ: ಸಚಿವ ಡಿ.ಸುಧಾಕರ್ ಬಾಗಿನ ಅರ್ಪಣೆ, ಪ್ಲಾಸ್ಟಿಕ್ ಬಳಕೆಗೆ ಪರಿಸರವಾದಿಗಳ ಆಕ್ಷೇಪ.

ಚಿತ್ರದುರ್ಗ: ಒಂದೇ ವರ್ಷದಲ್ಲಿ ಸತತ ಎರಡನೇ ಬಾರಿಗೆ ಬರದನಾಡು ಚಿತ್ರದುರ್ಗ (Chitradurga) ಜಿಲ್ಲೆಯ ಹಿರಿಯೂರು ತಾಲೂಕಿನ ಜೀವನಾಡಿ ಎನಿಸಿರುವ ವಾಣಿವಿಲಾಸ ಸಾಗರ ಜಲಾಶಯ (Vani Vilas Sagar Dam) ಭರ್ತಿಯಾದ ಹಿನ್ನೆಲೆ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ (D Sudhakar) ಭಾನುವಾರ ಬಾಗಿನ ಸಮರ್ಪಿಸಿದರು.

ವಿವಿಧ ಆಕರ್ಷಕ ಪುಷ್ಪಗಳಿಂದ ಅಲಂಕಾರಗೊಂಡಿದ್ದ ವಿ.ವಿ.ಸಾಗರ ಜಲಾಶಯದ ಅಣೆಕಟ್ಟೆ ಮೇಲಿಂದ ಸಚಿವ ಡಿ.ಸುಧಾಕರ್ ಹಾಗೂ ಶಾಸಕರಾದ ಬಿ.ಜಿ. ಗೋವಿಂದಪ್ಪ, ಟಿ.ರಘುಮೂರ್ತಿ, ಡಾ.ಎಂ.ಚಂದ್ರಪ್ಪ, ಸೇರಿದಂತೆ ವಿವಿಧ ಗಣ್ಯರು ಪುಷ್ಪಾರ್ಚನೆ ಮಾಡಿ, ಹಾಲುತುಪ್ಪ ಸುರಿದಿದ್ದು, ಆಕರ್ಷಕವಾಗಿರಲೆಂದು ಬಾಗಿನಗಳಿಗೆ ಕಲರ್ ಪ್ಲಾಸ್ಟಿಕ್‌ಗಳನ್ನು ಅಧಿಕಾರಿಗಳು ಸುತ್ತಿದ್ದರು. ಆದರೆ ಬಾಗಿನ ಸಮರ್ಪಣೆ ವೇಳೆ ಅವುಗಳನ್ನು ತೆಗೆಯದೇ ಪ್ಲಾಸ್ಟಿಕ್ ಸಮೇತವಾಗಿ ಬಾಗಿನ ಅರ್ಪಿಸಿ ಗಂಗೆಗೆ ನಮನ ಸಲ್ಲಿಸಿದರು. ಇನ್ನು ಬಾಗಿನಕ್ಕೆ ಸುತ್ತಿದ್ದ ಪ್ಲಾಸ್ಟಿಕ್ ಸಮೇತವಾಗಿ ಬಾಗಿನವನ್ನು ಡ್ಯಾಂಗೆ ಎಸೆದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ಪರಿಸರವಾದಿಗಳು ಹಿಡಿಶಾಪ ಹಾಕಿದರು.

ಈ ವೇಳೆ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್, ಕಳೆದ 2025ರ ಜನವರಿಯಲ್ಲಿ ವಾಣಿವಿಲಾಸ ಜಲಾಶಯಕ್ಕೆ ಬಾಗಿನ ಅರ್ಪಿಸಲಾಗಿತ್ತು. ನಂತರ ಅಕ್ಟೋಬರ್ ತಿಂಗಳಿನಲ್ಲಿಯೇ ಮತ್ತೊಮ್ಮೆ ಜಲಾಶಯ ಭರ್ತಿಯಾಗಿತ್ತು. ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳಿಂದ ಜಲಾಶಯಕ್ಕೆ ಕಳೆದ ಡಿಸೆಂಬರ್ ಮಾಹೆಯಲ್ಲಿ ಬಾಗಿನ ಅರ್ಪಿಸುವ ಕಾರ್ಯಕ್ರಮ ಏರ್ಪಡಿಸಲು ಪ್ರಯತ್ನ ನಡೆಸಲಾಗಿತ್ತು. ಆದರೆ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳ ಸಮಯ ಅಭಾವದ ಕಾರಣ ಇಂದು ಜಿಲ್ಲಾಡಳಿತದ ವತಿಯಿಂದ ಜಿಲ್ಲೆಯ ಶಾಸಕರು ಹಾಗೂ ಜನಪ್ರತಿನಿಧಿಗಳೊಂದಿಗೆ ಬಾಗಿನ ಅರ್ಪಿಸಲಾಗಿದೆ ಎಂದರು.

ಒಂದೇ ವರ್ಷದಲ್ಲಿಯೇ ಎರಡು ಬಾರಿ ವಿ.ವಿ.ಸಾಗರ ಜಲಾಶಯ ಭರ್ತಿಯಾಗಿರುವುದು ಜಿಲ್ಲೆಯ ಜನರಿಗೆ ತುಂಬಾ ಹರ್ಷ ತಂದಿದೆ. ವಾಣಿವಿಲಾಸ ಜಲಾಶಯದ ಹಿನ್ನೀರಿನಿಂದಾಗಿ ಹೊಸದುರ್ಗ ರೈತರ ಸಮಸ್ಯೆ ಬಗೆಹರಿಸುವ ಸಂಬಂಧ ಕಳೆದ ತಿಂಗಳು ಜಿಲ್ಲೆಯ ಶಾಸಕರು ಹಾಗೂ ಉಪಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಇಲಾಖಾ ಅಧಿಕಾರಿಗಳು ರೂಪುರೇಷೆ ಸಿದ್ಧಪಡಿಸಿದ್ದೇವೆ. ವಿ.ವಿ.ಸಾಗರ ಜಲಾಶಯದ ಹಿನ್ನೀರಿನಿಂದಾಗಿ ರೈತರು ಅನುಭವಿಸುವ ತೊಂದರೆಗಳ ನಿವಾರಣೆ ಮಾಡುತ್ತೇವೆ ಎಂದು ಹೇಳಿದರು. ಹೊಸದುರ್ಗ ತಾಲ್ಲೂಕಿನ 920 ರೈತರಿಗೆ ಪರಿಹಾರ ವಿತರಣೆ ಮಾಡಲು ಈಗಾಗಲೇ ಅಧಿಕಾರಿಗಳು ಅಗತ್ಯ ಸಿದ್ಧತೆ ಮಾಡಿಕೊಂಡಿದ್ದು, ಕೆರೆ, ರಸ್ತೆ, ಸೇತುವೆ ರಿಪೇರಿಗೂ ಕ್ರಮ ಕೈಗೊಳ್ಳಲಾಗಿದೆ ಎಂದು ಹೊಸದುರ್ಗ ಶಾಸಕ ಬಿ.ಜಿ.ಗೋವಿಂದಪ್ಪ ತಿಳಿಸಿದರು.

ಈ ಸಂದರ್ಭದಲ್ಲಿ ಸಚಿವರೊಂದಿಗೆ ಶಾಸಕರಾದ ಬಿ.ಜಿ.ಗೋವಿಂದಪ್ಪ, ಡಾ.ಎಂ.ಚಂದ್ರಪ್ಪ, ಟಿ.ರಘುಮೂರ್ತಿ, ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಪಿ.ರಘು ಸಾಥ್ ನೀಡಿದರು. ಆದರೆ ಚಿತ್ರದುರ್ಗ ಶಾಸಕ ಕೆಸಿ ವೀರೇಂದ್ರ ಪಪ್ಪಿ, ಮೊಳಕಾಲ್ಮೂರು ಶಾಸಕ ಎನ್‌ವೈ ಗೋಪಾಲಕೃಷ್ಣ ಹಾಗೂ ಎಂಎಲ್‌ಸಿಗಳಾದ ನವೀನ್ ಮತ್ತು ಶ್ರೀನಿಯ ಗೈರಾಗಿದ್ದರು. ನೀರು ಬಾಗಿನ ಅರ್ಪಣೆ ವೇಳೆ ಚಿತ್ರದುರ್ಗ ಜಿಲ್ಲಾಧಿಕಾರಿ ಟಿ.ವೆಂಕಟೇಶ್, ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ವಿಶ್ವೇಶ್ವರಯ್ಯ ಜಲನಿಗಮದ ವ್ಯವಸ್ಥಾಪಕ ನಿರ್ದೇಶಕ ಸಣ್ಣಚಿತ್ತಯ್ಯ, ಭದ್ರಾ ಮೇಲ್ದಂಡೆ ಯೋಜನೆ ಮುಖ್ಯ ಇಂಜಿನಿಯರ್ ಎಫ್.ಹೆಚ್.ಲಮಾಣಿ, ಅಧೀಕ್ಷಕ ಇಂಜಿನಿಯರ್ ಹರೀಶ್ ಕೆ.ಟಿ., ಕಾರ್ಯಪಾಲಕ ಇಂಜಿನಿಯರ್ ಚಂದ್ರಪ್ಪ ಬಾರಿಕರ ಸೇರಿದಂತೆ ರೈತ ಮುಖಂಡರು ಇದ್ದರು

Views: 29

Leave a Reply

Your email address will not be published. Required fields are marked *