ತುಮಕೂರು|ಮಹಾತ್ಮಾ ಗಾಂಧೀಜಿ ಒಳಾಂಗಣ ಕ್ರೀಡಾಂಗಣಕ್ಕೆ ಗೃಹ ಸಚಿವ ಜಿ.ಪರಮೇಶ್ವರ್ ಹೆಸರು – ಬಿಜೆಪಿ ಆಕ್ರೋಶ.

ನರೇಗಾ ಹೆಸರಿನ ವಿವಾದದ ನಡುವೆ ತುಮಕೂರಿನಲ್ಲಿ ಮತ್ತೊಂದು ಹೆಸರು ಬದಲಾವಣೆ ಗದ್ದಲ

ತುಮಕೂರು, ಜನವರಿ 13:
ನರೇಗಾ ಯೋಜನೆಯಲ್ಲಿ ಮಹಾತ್ಮಾ ಗಾಂಧೀಜಿ ಹೆಸರನ್ನು ಕೈಬಿಟ್ಟಿರುವುದಕ್ಕೆ ದೇಶವ್ಯಾಪಿ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸುತ್ತಿರುವ ನಡುವೆಯೇ, ತುಮಕೂರಿನಲ್ಲಿ ಅದೇ ಕಾಂಗ್ರೆಸ್ ಸರ್ಕಾರದ ಹಿರಿಯ ನಾಯಕ ಹಾಗೂ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರ ಹೆಸರನ್ನು ಮಹಾತ್ಮಾ ಗಾಂಧೀಜಿ ಒಳಾಂಗಣ ಕ್ರೀಡಾಂಗಣಕ್ಕೆ ನಾಮಕರಣ ಮಾಡಿರುವುದು ಭಾರೀ ವಿವಾದಕ್ಕೆ ಕಾರಣವಾಗಿದೆ. ಈ ಮೂಲಕ ಕಾಂಗ್ರೆಸ್ ಪಕ್ಷವೇ ಬಿಜೆಪಿ ಕೈಗೆ ಹೊಸ ರಾಜಕೀಯ ಅಸ್ತ್ರ ಒದಗಿಸಿದಂತಾಗಿದೆ.

ಮಹಾತ್ಮಾ ಗಾಂಧೀಜಿ ಹೆಸರಿನ ಬದಲಾವಣೆ ಆರೋಪ

ತುಮಕೂರಿನ ಜಿಲ್ಲಾಮಟ್ಟದ ಏಕೈಕ ಒಳಾಂಗಣ ಕ್ರೀಡಾಂಗಣವನ್ನು ಕೇಂದ್ರ ಸರ್ಕಾರದ ಸ್ಮಾರ್ಟ್ ಸಿಟಿ ಯೋಜನೆಯಡಿ 60 ಕೋಟಿ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಈ ಕ್ರೀಡಾಂಗಣವು ಹೊರಾಂಗಣ ಮಹಾತ್ಮಾ ಗಾಂಧೀಜಿ ಕ್ರೀಡಾಂಗಣದ ಆವರಣದಲ್ಲೇ ಇದ್ದು, ಇದುವರೆಗೂ “ಮಹಾತ್ಮಾ ಗಾಂಧೀಜಿ ಇಂಡೋರ್ ಸ್ಟೇಡಿಯಂ” ಎಂದೇ ಗುರುತಿಸಿಕೊಂಡಿತ್ತು.

ಆದರೆ ಯಾವುದೇ ಅಧಿಕೃತ ಆದೇಶ ಅಥವಾ ಸಾರ್ವಜನಿಕ ಚರ್ಚೆ ಇಲ್ಲದೆ, ಮೂರು ದಿನಗಳ ಹಿಂದೆ ದಿಢೀರ್ ಆಗಿ ‘ಡಾ. ಜಿ. ಪರಮೇಶ್ವರ್ ಒಳಾಂಗಣ ಕ್ರೀಡಾ ಸಂಕೀರ್ಣ’ ಎಂಬ ನಾಮಫಲಕ ಅಳವಡಿಸಲಾಗಿದೆ. ಇದರಿಂದ ಮಹಾತ್ಮಾ ಗಾಂಧೀಜಿ ಹೆಸರನ್ನು ಬದಲಿಸಲಾಗಿದೆ ಎಂಬ ಆರೋಪಗಳು ಎದ್ದಿವೆ.

ಬಿಜೆಪಿ ಕಾರ್ಯಕರ್ತರಿಂದ ಪ್ರತಿಭಟನೆ, ಪೊಲೀಸ್ ವಶಕ್ಕೆ

ಈ ಹೆಸರಿನ ಬದಲಾವಣೆಗೆ ವಿರೋಧವಾಗಿ ಸೋಮವಾರ ಸಂಜೆ ಬಿಜೆಪಿಯ ನೂರಾರು ಕಾರ್ಯಕರ್ತರು ಕ್ರೀಡಾಂಗಣದ ಮುಂದೆ ಪ್ರತಿಭಟನೆ ನಡೆಸಿದರು. ನಾಮಫಲಕ ತೆರವುಗೊಳಿಸಲು ಮುಂದಾದ ವೇಳೆ ಕಾರ್ಯಕರ್ತರು ಹಾಗೂ ಪೊಲೀಸರ ನಡುವೆ ಜಟಾಪಟಿ ನಡೆಯಿತು.

ಪೊಲೀಸರ ಬ್ಯಾರಿಕೇಡ್‌ ತಳ್ಳಿ ಒಳನುಗ್ಗಲು ಯತ್ನಿಸಿದ ಹಿನ್ನೆಲೆಯಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡಿತು. ನಂತರ ಪೊಲೀಸರು ಬಿಜೆಪಿ ಮುಖಂಡರು ಸೇರಿದಂತೆ 30ಕ್ಕೂ ಹೆಚ್ಚು ಕಾರ್ಯಕರ್ತರನ್ನು ವಶಕ್ಕೆ ಪಡೆದರು.

ಬಿಜೆಪಿ ನಾಯಕರ ಆರೋಪ

ಬಿಜೆಪಿ ಶಾಸಕ ಸುರೇಶ್‌ಗೌಡ ಮಾತನಾಡಿ,

“ಪರಮೇಶ್ವರ್ ಅವರ ಹಿಂಬಾಲಕರನ್ನು ಮೆಚ್ಚಿಸಲು ಈ ಕೆಲಸ ಮಾಡಲಾಗಿದೆ. ಈ ತಪ್ಪನ್ನು ಅವರೇ ಸರಿಪಡಿಸಬೇಕು” ಎಂದು ಆಗ್ರಹಿಸಿದರು.

ಇನ್ನೊಬ್ಬ ಶಾಸಕ ಜ್ಯೋತಿ ಗಣೇಶ್,

“ಸ್ಥಳೀಯ ಸಂಸ್ಥೆ ಅಥವಾ ಸಂಬಂಧಪಟ್ಟ ಇಲಾಖೆಯಿಂದ ಯಾವುದೇ ಠರಾವು ಇಲ್ಲದೆ ಹೆಸರು ಬದಲಾವಣೆ ಮಾಡಿರುವುದು ಸರಿಯಲ್ಲ” ಎಂದು ಟೀಕಿಸಿದರು.

ರಾಜ್ಯಮಟ್ಟದ ಒಲಂಪಿಕ್ ಕ್ರೀಡಾಕೂಟದ ಮಧ್ಯೆ ವಿವಾದ

ಇದೇ ತಿಂಗಳ ಜನವರಿ 16ರಿಂದ ಈ ಕ್ರೀಡಾಂಗಣದಲ್ಲಿ ರಾಜ್ಯಮಟ್ಟದ ಒಲಂಪಿಕ್ ಕ್ರೀಡಾಕೂಟ ನಡೆಯಲಿದ್ದು, ಇಂತಹ ಮಹತ್ವದ ಸಂದರ್ಭದಲ್ಲಿ ಸರ್ಕಾರದ ಅಧಿಕೃತ ಆದೇಶವಿಲ್ಲದೇ ಅಧಿಕಾರಿಗಳು ತರಾತುರಿಯಲ್ಲಿ ನಾಮಫಲಕ ಅಳವಡಿಸಿದ್ದು ವಿವಾದಕ್ಕೆ ಮತ್ತಷ್ಟು ಇಂಧನ ಸುರಿದಿದೆ.

ಪರಮೇಶ್ವರ್ ಸ್ಪಷ್ಟನೆ

ಈ ಕುರಿತು ಪ್ರತಿಕ್ರಿಯಿಸಿದ ಗೃಹ ಸಚಿವ ಡಾ. ಜಿ. ಪರಮೇಶ್ವರ್,

“ಗಾಂಧೀಜಿ ಹೆಸರನ್ನು ಬದಲಾವಣೆ ಮಾಡುತ್ತಾರೆ ಎನ್ನುವುದು ಹುಚ್ಚರು ಹೇಳುವ ಮಾತು. ಮಹಾತ್ಮಾ ಗಾಂಧೀಜಿ ಸ್ಟೇಡಿಯಂ ಹೆಸರನ್ನು ತೆಗೆಯಲು ಸಾಧ್ಯವೇ ಇಲ್ಲ. ಅಲ್ಲಿ ಇದ್ದ ಶೆಡ್ ಅನ್ನು ಒಳಾಂಗಣ ಕ್ರೀಡಾಂಗಣವಾಗಿ ಅಭಿವೃದ್ಧಿಪಡಿಸಿದ್ದು, ಅದಕ್ಕೆ ನನ್ನ ಹೆಸರು ಇಡಲು ಪತ್ರ ಬರೆಯಲಾಗಿದೆ. ಇದರಲ್ಲಿ ರಾಜಕೀಯ ಮಾಡುವುದೇ ಅರ್ಥವಿಲ್ಲ” ಎಂದು ಸ್ಪಷ್ಟನೆ ನೀಡಿದ್ದಾರೆ.

ವಿವಾದಕ್ಕೆ ತೆರೆ ಎಳೆಯುವ ಅಗತ್ಯ

ನರೇಗಾ ಹೆಸರಿನ ಬದಲಾವಣೆ ವಿಚಾರದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ತೀವ್ರವಾಗಿ ಧ್ವನಿ ಎತ್ತುತ್ತಿರುವ ಕಾಂಗ್ರೆಸ್, ಇದೇ ವೇಳೆ ಗಾಂಧೀಜಿ ಹೆಸರಿನ ಕುರಿತಂತೆ ಎದುರಾದ ಈ ವಿವಾದದಿಂದ ರಾಜಕೀಯ ಮುಜುಗರಕ್ಕೆ ಸಿಲುಕಿದೆ. ಈ ಹಿನ್ನೆಲೆಯಲ್ಲಿ ಡಾ. ಜಿ. ಪರಮೇಶ್ವರ್ ಅವರೇ ಮಧ್ಯಪ್ರವೇಶಿಸಿ ವಿವಾದಕ್ಕೆ ಸ್ಪಷ್ಟ ಅಂತ್ಯ ನೀಡಬೇಕೆಂಬ ಒತ್ತಾಯ ಹೆಚ್ಚುತ್ತಿದೆ.

Views: 53

Leave a Reply

Your email address will not be published. Required fields are marked *