ರಾಯಣ್ಣ ಶ್ರೇಷ್ಠ ದೇಶಭಕ್ತ; ಜನರಲ್ಲಿ ದೇಶಭಕ್ತಿ ಕ್ಷೀಣ – ಮರುಬಿತ್ತನೆಗೆ ಜಾಗೃತಿ ಅಗತ್ಯ: ಸೇನೆ ಅಧ್ಯಕ್ಷೆ ಕವಿತಾ.
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಚಿತ್ರದುರ್ಗ, ಜ.19:
ಆಂಗ್ಲರು ದೇಶದ ಮೇಲೆ ದಾಳಿ ನಡೆಸಿ, ಸಂಪನ್ಮೂಲ ಲೂಟಿ ಜೊತೆಗೆ ರಾಜರುಗಳ ಮೇಲೆ ದಬ್ಬಾಳಿಕೆ ಹಾಗೂ ಸ್ವಾತಂತ್ರ್ಯ ಹೋರಾಟಗಾರರನ್ನು ಕೊಲ್ಲುವುದು, ಜೈಲಿಗೆ ಹಾಕುವುದು ದುಷ್ಕøತ್ಯ ವಿರುದ್ಧ ಲಕ್ಷಾಂತರ ಮಂದಿ ಚಳವಳಿ ನಡೆಸಿ ಪ್ರಾಣತ್ಯಾಗ ಮಾಡಿದ್ದಾರೆ ಎಂದು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸೇನೆ ಮಹಿಳಾ ಘಟಕದ ಅಧ್ಯಕ್ಷೆ ಕವಿತಾ ಹೇಳಿದರು.
ನಗರದ ಪ್ರವಾಸಿ ಮಂದಿರ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ದೇಶಭಕ್ತಿ-ಗಾನಸಂಗಮ ಭಿತ್ತಿಪತ್ರ ಬಿಡುಗಡೆ ಮಾಡಿ ಮಾತನಾಡಿ, ದೇಶಭಕ್ತರಲ್ಲಿ ಮುಂಚೂಣಿಯಲ್ಲಿ ನಿಲ್ಲುವ ವೀರ ಸಂಗೊಳ್ಳಿ ರಾಯಣ್ಣ ಬ್ರೀಟಿಷರ ವಿರುದ್ಧ ನಡೆಸಿದ ಹೋರಾಟ ರೋಮಾಂಚನ ಎಂದು ತಿಳಿಸಿದರು. ನಾಡು-ನುಡಿಗಾಗಿ ಪ್ರಾಣವನ್ನೇ ತ್ಯಾಗ ಮಾಡಿದ ರಾಯಣ್ಣ ಭಾರತದ ಶ್ರೇಷ್ಠ ದೇಶಭಕ್ತ. ಇಂತಹ ಸ್ವಾತಂತ್ರ್ಯ ಹೋರಾಟಗಾರನಿಗೆ ರಾಷ್ಟ್ರಮಟದಲ್ಲಿ ಗೌರವ ಸಲ್ಲಬೇಕಿದೆ. ಈ ನಿಟ್ಟಿನಲ್ಲಿ ಆಗಸ್ಟ್ 15 ಜನನ, ಜನವರಿ 26 ಹುತಾತ್ಮ ದಿನವನ್ನು ವಿಶೇಷವಾಗಿ ಆಚರಿಸಬೇಕು. ವೀರನ ಭಾವಚಿತ್ರಕ್ಕೆ ಗಣರಾಜ್ಯೋತ್ಸವ, ಸ್ವಾತಂತ್ರ್ಯ ದಿನಾಚರಣೆಯಲ್ಲಿಟ್ಟು ಗೌರವ ಸಲ್ಲಿಸುವ ಆದೇಶ ಆಗಬೇಕೆಂದು ಹೇಳಿದರು. ಈಚೆಗೆ ಜನರಲ್ಲಿ ದೇಶಭಕ್ತಿ ಕ್ಷೀಣಿಸುತ್ತಿದೆ. ಈ ಕಾರಣಕ್ಕೆ ರಾಯಣ್ಣನ ಕುರಿತು ಸಾಹಿತಿ ರಾಘವೇಂದ್ರ ರಚಿಸಿರುವ ಗೀತೆ ಯುವಪೀಳಿಗೆಯಲ್ಲಿ ದೇಶಭಕ್ತಿ ಮರು ಬಿತ್ತುವ ಕೆಲಸ ಮಾಡಲಿದೆ. ಈ ಧ್ವನಿಸುರಳಿ ಜ.24, 25ರಂದು ನಗರದ ವಾಲ್ಮೀಕಿ ಭವನದಲ್ಲಿ ಆಯೋಜಿಸಿರುವ ಗಾನಸಂಗಮ ಕಾರ್ಯಕ್ರಮದಲ್ಲಿ ಬಿಡುಗಡೆಗೊಳ್ಳಲಿದೆ ಎಂದು ಮಾಹಿತಿ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಮೈಲಾರಲಿಂಗೇಶ್ವರ ವಿದ್ಯಾಸಂಸ್ಥೆಯ ಎಂ.ಟಿ.ಪ್ರವೀಣ್ಕುಮಾರ್ ಮಾತನಾಡಿ, ಬಯಲುಸೀಮೆ ಪ್ರದೇಶದಲ್ಲಿ ಅನೇಕ ಪ್ರತಿಭೆಗಳು ಸುಪ್ತವಾಗಿದ್ದು, ಅವರನ್ನು ಮುಖ್ಯವಾಹಿನಿಗೆ ತರುವ ಕೆಲಸ ಆಗಬೇಕಾಗಿದೆ ಈ ನಿಟ್ಟಿನಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸೇನೆ ಹಾಗೂ ಪ್ರಜಾ ಕಲ್ಯಾಣ ಸಮಿತಿ ಆಶ್ರಯದಲ್ಲಿ ಜ.24, 25ರಂದು ಚಿತ್ರದುರ್ಗದಲ್ಲಿ ಆಯೋಜಿಸಿರುವ ಗಾನಸಂಗಮ ಕಾರ್ಯಕ್ರಮ ಪ್ರತಿಭೆಗಳನ್ನು ಅರಳಿಸುವ ವೇದಿಕೆ ಆಗಲಿದೆ. ಗಾಯಕರು ಹೆಚ್ಚಿನ ಸಂಖ್ಯೆಯಲ್ಲಿ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವ ಮೂಲಕ ಬರಡು ನೆಲದಲ್ಲಿ ಅಡಗಿರುವ ಪ್ರತಿಭೆಯನ್ನು ನಾಡಿಗೆ ಪರಿಚಯಿಸಬೇಕಿದೆ ಎಂದು ತಿಳಿಸಿದರು.
ರಾಯಣ್ಣ ಸೇನೆ ರಾಜ್ಯಾಧ್ಯಕ್ಷ ಟಿ.ಆನಂದ್ ಮಾತನಾಡಿ, ಮಧ್ಯಕರ್ನಾಟಕವನ್ನು ಎಲ್ಲ ಕ್ಷೇತ್ರದಲ್ಲಿಯೂ ನಿರ್ಲಕ್ಷ್ಯಿಸಲಾಗುತ್ತಿದೆ. ಇಲ್ಲಿನ ಪ್ರತಿಭೆಗಳಿಗೆ ಅವಕಾಶವೇ ದೊರೆಯುತ್ತಿಲ್ಲ. ಆದ್ದರಿಂದ ಬೃಹತ್ ವೇದಿಕೆಗೆ ಮುನ್ನುಡಿಯಾಗಿ ಪ್ರತಿವರ್ಷ ಸಂಘಟನೆಯಿಂದ ಗಾನಸಂಗಮ ಕಾರ್ಯಕ್ರಮ ಆಯೋಜಿಸಿಕೊಂಡು ಬರುತ್ತಿದ್ದೇವೆ ಎಂದರು.
ರಾಯಣ್ಣ ಸ್ಮರಣಾರ್ಥ ರಾಜ್ಯಮಟ್ಟದ ಗಾನಸಂಗಮ ಕಾರ್ಯಕ್ರಮ ಆಯೋಜಿಸಿದ್ದು, ಹೊರ ಜಿಲ್ಲೆಗಳಿಂದ ಬರುವ ಗಾಯಕರಿಗೆ ವಸತಿ, ಊಟದ ವ್ಯವಸ್ಥೆ ಮಾಡಲಾಗುವುದು. ಜ.25ರ ಸಂಜೆ 6ಕ್ಕೆ ರಾಯಣ್ಣನ ಕುರಿತ ದೇಶಭಕ್ತಿ ಗೀತೆಯ ಧ್ವನಿಸುರಳಿ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದರು.
ಮಾಜಿ ಸಂಸದ ಶಶಿಕುಮಾರ್ ಪುತ್ರ ಆದಿತ್ಯ ಶಶಿಕುಮಾರ್ ಸೇರಿ ಅನೇಕ ನಟರು, ನಿರ್ದೇಶಕರು, ನಿರ್ಮಾಪಕರು, ಗಣ್ಯರು, ಸಂಗೀತ ವಿದ್ಯಾನ್ಗಳು ಪಾಲ್ಗೊಳ್ಳಲಿದ್ದಾರೆ. ಸಂಗೀತಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಬಯಲುಸೀಮೆ ಗಾಯಕರನ್ನು ಬೆಂಬಲಿಸಬೇಕೆಂದು ಕೋರಿದರು.
ಸಾಹಿತಿ ರಾಘವೇಂದ್ರ ಮಾತನಾಡಿ, ದಾವಣಗೆರೆ, ಶಿವಮೊಗ್ಗ, ಚಿತ್ರದುರ್ಗ, ಬಳ್ಳಾರಿ, ತುಮಕೂರು ಸೇರಿ ಮಧ್ಯಕರ್ನಾಟಕದಲ್ಲಿ ಅನೇಕ ಸುಪ್ತಪ್ರತಿಭೆಗಳಿದ್ದು, ಪ್ರೋತ್ಸಾಹ, ಹಣದ ಕೊರತೆ ಕಾರಣಕ್ಕೆ ಮುನ್ನೇಲೆಗೆ ಬರುತ್ತಿಲ್ಲ. ಈ ನಿಟ್ಟಿನಲ್ಲಿ ಯುವ ಕಲಾವಿದರನ್ನು ಗುರುತಿಸಿ ರಾಜ್ಯ ಮಟ್ಟದಲ್ಲಿ ಅವಕಾಶ ನೀಡುವ ಕೆಲಸ ಮಾಡಲಾಗುತ್ತಿದೆ ಎಂದರು.
ನಿರ್ದೇಶಕ ದೇವರತ್ನ ಮಂಜುನಾಥ್, ಗ್ರಾಪಂ ಸದಸ್ಯ ಪ್ರಭು, ಸಂಘಟಕರಾದ ರಂಗನಾಥ್, ರಮೇಶ್, ಲಕ್ಷ್ಮಣ್ ಇತರರಿದ್ದರು.
ನೋಂದಣಿಗೆ 23 ಕೊನೇ ದಿನ ಗಾಯನ ಸ್ಪರ್ಧೆಯಲ್ಲಿ ಪಾಲ್ಗೊಂಡು ವಿಜೇತರಾದವರಿಗೆ ಪ್ರಥಮ, ದ್ವಿತೀಯ, ತೃತೀಯ ಬಹುಮಾನವನ್ನು ಕ್ರಮವಾಗಿ 25, 10, 5 ಸಾವಿರ ರೂ. ನಗದು ಹಾಗೂ ಆಕರ್ಷಕ ಪಾರಿತೋಷಕ ಮತ್ತು ಪ್ರತಿಯೊಬ್ಬರಿಗೂ ಅಭಿನಂದನ ಪತ್ರ ವಿತರಿಸಲಾಗುವುದು ಎಂದು ಪ್ರಜಾ ಕಲ್ಯಾಣ ಸಮಿತಿ ಅಧ್ಯಕ್ಷ ಟಿ.ಎಸ್.ಹರೀಶ್ ತಿಳಿಸಿದರು.
ಜ.23ರೊಳಗೆ (ಮೊ.ನಂ: 8861516138) ನೋಂದಣಿಗೆ ಅವಕಾಶ ಕಲ್ಪಿಸಲಾಗಿದೆ. ವೇದಿಕೆಗೆ ಸಾಲುಮರದ ತಿಮ್ಮಕ್ಕ ಹೆಸರಿಡಲಾಗಿದೆ ಎಂದು ಹೇಳಿದರು.
Views: 32