ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಚಿತ್ರದುರ್ಗ ಜ. 21:
ಪರಿಶಿಷ್ಟ ಜಾತಿಗಳ ಒಳಮೀಸಲಾತಿ ವರ್ಗೀಕರಣದಲ್ಲಿ ಬಂಜಾರ, ಭೋವಿ, ಕೊರಮ, ಕೊರಚ ಮತ್ತು ಅಲೆಮಾರಿ ಸಮುದಾಯಗಳಿಗೆ ಆಗಿರುವ ಅನ್ಯಾಯ ಸರಿಪಡಿಸಲು ಒತ್ತಾಯಿಸಿ ಕರ್ನಾಟಕ ಮೀಸಲಾತಿ ಸಂರಕ್ಷಣಾ ಒಕ್ಕೂಟದವತಿಯಿಂದ ಮಂಗಳವಾರ ರಾಜ್ಯಪಾಲರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಯಿತು.
ತಮ್ಮ ಮನವಿಯಲ್ಲಿ ಕರ್ನಾಟಕ ಅಧಿಸೂಚಿತ ಜಾತಿಗಳ (ಉಪ-ವರ್ಗಿಕರಣ) ವಿಧೇಯಕ-2025ರ ಪ್ರಕಾರ ಪ್ರರ್ಗ-ಸಿ ಗುಂಪಿನಲ್ಲಿ ಇರುವ 63 ಸಮುದಾಯಗಳ ಮೀಸಲಾತಿ ಪ್ರಮಾಣವನ್ನು ಶೇಕಡಾ 6ಕ್ಕೆ ಹೆಚ್ಚಿಸಬೇಕು. ಅಲೆಮಾರಿ. ಸೂಕ್ಷ್ಮ ಸಮುದಾಯಗಳಿಗೆ ಪ್ರತ್ಯೇಕವಾಗಿ ಶೇಕಡಾ 1 ಮೀಸಲಾತಿ ಒದಗಿಸಬೇಕು. ಪ್ರವರ್ಗ-ಸಿ ಗುಂಪಿನ ಸಮುದಾಯಗಳು ಪರಿಶಿಷ್ಟ ಜಾತಿಗಳಲ್ಲೇ ಸಾಮಾಜಿಕ, ಶೈಕ್ಷಣಿಕವಾಗಿ ಅತೀ ಹಿಂದುಳಿದ ಗುಂಪು ಎಂಬುದು ನ್ಯಾಯಮೂರ್ತಿ ಎಚ್.ಎನ್.ನಾಗಮೋನ್ ದಾಸ್ ಆಯೋಗದ ವರದಿಯ ಅಂಕಿ ಅಂಶಗಳು ಅಧ್ಯಯನ ಮಾಡಿದಾಗ ತಿಳಿದುಬರುತ್ತದೆ. ಹೀಗಾಗಿ ಪ್ರವರ್ಗ-ಸಿ ಗುಂಪನ್ನು ಬದಲಾಯಿಸಿ ಪ್ರವರ್ಗ-1 ಎಂದು ಮರು ಸಂಯೋಜನೆ ಮಾಡಲು ಕೋರಿದೆ. ಆ ಮೂಲಕ ಬಂಜಾರ, ಭೋವಿ, ಕೊರಮ, ಕೊರಚ, ಮತ್ತು ಅಲೆಮಾರಿ ಸೂಕ್ಷ್ಮ ಸಮುದಾಯಗಳಿಗೆ ನ್ಯಾಯ ಒದಗಿಸಬೇಕು. ಪರಿಶಿಷ್ಟ ಜಾತಿಗಳ ಶೈಕ್ಷಣಿಕ, ಸಾಮಾಜಿಕ ಹಿಂದುಳಿದಿ ರುವಿಕೆಯನ್ನು ಪರಿಗಣಿಸಿ ಮೀಸಲಾತಿ ಪ್ರಮಾಣವನ್ನು ಕನಿಷ್ಠ ಶೇಕಡಾ 18ಕ್ಕೆ ಹೆಚ್ಚಿಸಬೇಕು ಎಂದು ಒತ್ತಾಯಿಸಲಾಯಿತು.
ಮೀಸಲಾತಿ ಮಿತಿಯು ಶೇಕಡಾ 50ಕ್ಕೆ ಮೀರಬಾರದು ಎಂಬ ಸರ್ವೊಚ್ಛ ನ್ಯಾಯಾಲಯದ ಆದೇಶವನ್ನು ಉಲ್ಲೇಖಿಸಿ ಉಚ್ಚನ್ಯಾಯಾಲಯದಲ್ಲಿ ಈಗಾಲೇ ಪ್ರಶ್ನಿಸಲಾಗಿದೆ. ಹಾಗಾಗಿ ರಾಜ್ಯ ಸರ್ಕಾರ ಈಗಾಗಲೇ ಶೇಕಡಾ 17ಕ್ಕೆ ಹೆಚ್ಚಿಸಿರುವ ಮೀಸಲಾತಿ ಪ್ರಮಾಣವನ್ನು ಕಾರ್ಯಕಾರಿ ಆದೇಶದ ಮೂಲಕ ಶೇಕಡಾ. 18ಕ್ಕೆ ವಿಸ್ತರಿಸಬೇಕು. ಈ ಮತ್ತು ಮುಂದೆ ಹೆಚ್ಚಿಸಲಿರುವ ಮೀಸಲಾತಿ ಕಾರ್ಯಕಾರಿ ಆದೇಶವನ್ನು ಭಾರತದ ಸಂವಿಧಾನದ ಒಂಭತ್ತನೇ ಶೆಡ್ಯೂಲ್ಗೆ ಸೇರಿಸಲು ಕೇಂದ್ರ ಸರ್ಕಾರಕ್ಕೆ ಶಿಪಾರಸ್ಸು ಮಾಡಬೇಕು ಎಂದು ಆಗ್ರಹಿಸಲಾಯಿತು.
ರಾಜ್ಯ ಸರ್ಕಾರ ದಿನಾಂಕ: 03.09.2025ರಂದು ಹೊರಡಿಸಿರುವ ಸರ್ಕಾರಿ ಆದೇಶ ಸಂಖ್ಯೆ:ಸಿಆಸುಇ 02 ಸೆಹಿಮ 2025, ಆದೇಶದಲ್ಲಿ ವಿವಿಧ ಬಿಂದುಗಳಲ್ಲಿ ನಿಗಧಿಪಡಿಸಲಾಗಿದೆ. ನೇಮಕಾತಿ ರೋಸ್ಟರ್ ಬಿಂದು ನಿಗದಿ ಆದೇಶದ ದೋಷದಿಂದಾಗಿ ಇತ್ತೀಚೆಗೆ ನಡೆದ ಧಾರವಾಡ ಕೃಷಿ ವಿಶ್ವವಿದ್ಯಾಲಯ ಮತ್ತು ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯಗಳ ನೇಮಕಾತಿ ಮತ್ತು ಶೈಕ್ಷಣಿಕ ಪ್ರವೇಶ ಪ್ರಕ್ರಿಯೆಯಲ್ಲಿ ಪ್ರರ್ಗ-ಬಿ ಮತ್ತು ಪ್ರರ್ಗ-ಸಿ ಗುಂಪಿಗೆ ಹುದ್ದೆಗಳು/ಸೀಟುಗಳು ಸಿಗದೆ ಅನ್ಯಾಯ ಆಗಿದೆ. ತಕ್ಷಣ ಈ ಆದೇಶವನ್ನು ವಾಪಸು ಪಡೆಯಬೇಕು. ಯಾವುದೇ ಸಮುದಾಯಕ್ಕೆ ಅನ್ಯಾಯ ಆಗದಂತೆ ಹೊಸ ನಿಯಮ ರೂಪಿಸಬೇಕು. ಅಲ್ಲಿಯವರೆಗೆ ಎಲ್ಲಾ ನೇಮಕಾತಿ ಪ್ರಕ್ರಿಯೆಗಳನ್ನು ಹಳೆಯ ನಿಯಮಗಳಂತೆ ಮುಂದುವರೆಸಬೇಕು ಎಸ್.ಸಿ.ಪಿ, ಟಿ.ಎಸ್.ಪಿ, ಯೋಜನೆಯ 24 ಶೇಕಡ ಅನುದಾನ ಹಂಚಿಕೆಯ ನಿಯಮದಂತೆ ಈ ಪ್ರವರ್ಗ ಸಿ ಗುಂಪಿಗೆ ಒಟ್ಟು ಹಣದ ಕನಿಷ್ಠ ಶೇಕಡ 6ರಷ್ಟನ್ನು ಕರ್ನಾಟಕ ತಾಂಡ ಅಭಿವೃದ್ಧಿ ನಿಗಮ, ಕರ್ನಾಟಕ ಭೋವಿ-ವಡ್ಡರ್ ಅಭಿವೃದ್ಧಿ ನಿಗಮ ಮತ್ತು ಅಲೆಮಾರಿ ಅಭಿವೃದ್ಧಿ ನಿಗಮಗಳಿಗೆ ಹಂಚಿಕೆ ಮಾಡಲು ರಾಜ್ಯ ಸರ್ಕಾರಕ್ಕೆ ಸಲಹೆ ನೀಡಬೇಕು ಕರ್ನಾಟಕ ತಾಂಡ ಅಭಿವೃದ್ಧಿ ನಿಗಮ, ಕರ್ನಾಟಕ ಭೋವಿ-ವಡ್ಡರ್ ಅಭಿವೃದ್ಧಿ ನಿಗಮ ಮತ್ತು ಅಲೆಮಾರಿ ಅಭಿವೃದ್ಧಿ ನಿಗಮಗಳಿಗೆ ಹಂಚಿಕೆ ಮಾಡಲು ರಾಜ್ಯ ಸರ್ಕಾರಕ್ಕೆ ಸಲಹೆ ನೀಡಬೇಕು ಎಂದು ಮನವಿ ಮಾಡಲಾಯಿತು.
ನಿಯೋಗದಲ್ಲಿ ಭೋವಿ ಗುರುಪೀಠದ ಜಗದ್ಗುರು ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಉಪ ಸಭಾಪತಿ ರುದ್ರಪ್ಪ ಲಮಾಣಿ, ಮಾಜಿ ಸಚಿವರಾದ ಅರವಿಂದ ಲಿಂಬಾವಳಿ, ಮಾಜಿ ಸಂಸದರಾದ ಜನಾರ್ಧನ ಸ್ವಾಮಿ, ಮಾಜಿ ಸಚಿವರಾದ ಡಾ ಬಿ ಟಿ ಲಲಿತಾನಾಯ್ಕ, ಮಾಜಿ ಶಾಸಕರಾದ ಭೀಮನಾಯ್ಕ, ಬಸವರಾಜ್ ನಾಯ್ಕ, ಜಲಜಾನಾಯ್ಕ, ನಿವೃತ್ತ IಂS ಅಧಿಕಾರಿ ಮಂಜುನಾಥ ಪ್ರಸಾದ್, ರವಿ ಮಾಕಳಿ ಔಅಅI ರಾಷ್ಟ್ರೀಯ ಅಧ್ಯಕ್ಷ, ಅನಂತನಾಯ್ಕ ಎನ್, ಜಯದೇವ ನಾಯ್ಕ,ಬಾಲರಾಜ್ ನಾಯ್ಕ, ಹಿರಿಯ ವಕೀಲರಾದ ಶಂಕರಪ್ಪ ಉಪಸ್ಥಿತರಿದ್ದರು.
Views: 33