ವರದಿ ಮತ್ತು ಫೋಟೋ ಕೃಪೆ ವೇದಮೂರ್ತಿ ಭೀಮಸಮುದ್ರ ಮೊ : 8088076203
ಭೀಮಸಮುದ್ರ, ಜ. 21:
ಭೀಮಸಮುದ್ರ ಗ್ರಾಮದ ಮಧ್ಯಭಾಗದಲ್ಲಿ ಗಣಿ ಲಾರಿಗಳ ಸಂಚಾರ ಪುನರಾರಂಭಗೊಂಡ ಹಿನ್ನೆಲೆಯಲ್ಲಿ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದರು. ಗ್ರಾಮದ ಒಳಗಡೆ ಲಾರಿಗಳ ಸಂಚಾರದಿಂದ ಸಾರ್ವಜನಿಕರ ಜೀವನಕ್ಕೆ ತೀವ್ರ ತೊಂದರೆಯಾಗುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಸುಮಾರು 20 ದಿನಗಳ ಕಾಲ ಗಣಿ ಲಾರಿಗಳ ಸಂಚಾರ ಸ್ಥಗಿತಗೊಂಡಿದ್ದರಿಂದ ಗ್ರಾಮಸ್ಥರು ನೆಮ್ಮದಿಯಿಂದ ಜೀವನ ನಡೆಸುತ್ತಿದ್ದರು. ಆದರೆ ಸೋಮವಾರ ತಡರಾತ್ರಿ ಸುಮಾರು 2 ಗಂಟೆ ಸುಮಾರಿಗೆ ಏಕಾಏಕಿ ಸುಮಾರು 150 ಗಣಿ ಲಾರಿಗಳು ಗ್ರಾಮದೊಳಗೆ ಪ್ರವೇಶಿಸಲು ಸಜ್ಜಾಗಿದ್ದವು. ಈ ವೇಳೆ ಗ್ರಾಮಸ್ಥರು ಲಾರಿಗಳನ್ನು ತಡೆದು ಆಕ್ರೋಶ ವ್ಯಕ್ತಪಡಿಸಿದರು.
ಗ್ರಾಮಸ್ಥರ ವಿರೋಧದ ನಡುವೆಯೂ ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಲಾರಿಗಳ ಸಂಚಾರಕ್ಕೆ ಅನುಮತಿ ಇದೆ ಎಂದು ಲಾರಿ ಟ್ರಾನ್ಸ್‌ಪೋರ್ಟ್ ಸಿಬ್ಬಂದಿ ತಿಳಿಸಿರುವುದಾಗಿ ಗ್ರಾಮಸ್ಥರು ಹೇಳಿದ್ದಾರೆ. ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದರೂ ಲಾರಿಗಳ ಓಡಾಟ ಮುಂದುವರಿಸಲಾಗುತ್ತದೆ ಎಂಬ ಧೋರಣೆಯೇ ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.
ರೈತ ಸಂಘದ ಅಧ್ಯಕ್ಷ ಶಂಕ್ರಮೂರ್ತಿ ಆಕ್ರೋಶ
ಗ್ರಾಮದ ರೈತ ಸಂಘದ ಅಧ್ಯಕ್ಷರಾದ ಶಂಕ್ರಮೂರ್ತಿ ಮಾತನಾಡಿ,
“ಕಳೆದ ನಾಲ್ಕು ತಿಂಗಳಿಂದ ಗಣಿ ಲಾರಿಗಳ ಸಮಸ್ಯೆ ಗ್ರಾಮದಲ್ಲಿ ಮುಂದುವರಿದಿದೆ. 20 ದಿನಗಳ ಕಾಲ ಲಾರಿಗಳನ್ನು ಗ್ರಾಮಸ್ಥರ ಸಹಕಾರದಿಂದ ನಿಲ್ಲಿಸಿದ್ದೆವು. ಆದರೆ ಇದೀಗ ರಾತ್ರಿ ಇಡೀ ಲಾರಿಗಳನ್ನು ಕಾಯುವ ಪರಿಸ್ಥಿತಿ ಬಂದಿದೆ. ನಮ್ಮ ಬೇಡಿಕೆ ಒಂದೇ — ಗ್ರಾಮದ ಒಳಗಡೆ ಗಣಿ ಲಾರಿಗಳ ಸಂಚಾರ ಬೇಡ. ಪರ್ಯಾಯ ಮಾರ್ಗವನ್ನು ರೂಪಿಸಬೇಕು. ಗಣಿಗಾರಿಕೆಗೆ ನಾವು ವಿರೋಧಿಸುತ್ತಿಲ್ಲ, ಇದರಿಂದ ಸರ್ಕಾರಕ್ಕೂ ಆದಾಯ ಬರುತ್ತದೆ ಎಂಬುದು ನಮಗೆ ಗೊತ್ತಿದೆ. ಆದರೆ ಲಾರಿಗಳ ಬದಲು ರೈಲು ಮಾರ್ಗದ ಮೂಲಕ ಸಾಗಣೆ ವ್ಯವಸ್ಥೆ ಮಾಡಬೇಕು” ಎಂದು ಆಗ್ರಹಿಸಿದರು.
ಜಿಲ್ಲಾಧಿಕಾರಿಗಳ ಭರವಸೆ, ಆದರೆ ದಿಢೀರ್ ಲಾರಿ ಸಂಚಾರ
ಗ್ರಾಮದ ರೈತ ಮುಖಂಡ ವೀರೇಶ್ ಮಾತನಾಡಿ,
“ಚಿತ್ರದುರ್ಗದಲ್ಲಿ ಜಿಲ್ಲಾಧಿಕಾರಿಗಳು ಗ್ರಾಮಸ್ಥರು ಹಾಗೂ ರೈತ ಮುಖಂಡರನ್ನು ಕರೆಸಿ ಪರ್ಯಾಯ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದ್ದರು. ಬೇರೆ ಮಾರ್ಗ ಸೂಚಿಸುವಂತೆ ಕೇಳಿದ್ದರು. ಆದರೆ ಯಾವುದೇ ಮುನ್ಸೂಚನೆ ಇಲ್ಲದೇ ದಿಢೀರ್ ರಾತ್ರಿ 150 ಲಾರಿಗಳು ಗ್ರಾಮಕ್ಕೆ ಬಂದಿರುವುದನ್ನು ಕಂಡು ನಾವು ಗಾಬರಿಗೊಂಡಿದ್ದೇವೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಆರೋಗ್ಯ ಸಮಸ್ಯೆಗಳಿಂದ ಜನರು ತತ್ತರ
ಗ್ರಾಮಸ್ಥರು ಲಾರಿ ಸಂಚಾರದಿಂದ ಉಂಟಾಗುತ್ತಿರುವ ಆರೋಗ್ಯ ಸಮಸ್ಯೆಗಳ ಕುರಿತು ಗಂಭೀರ ಆರೋಪ ಮಾಡಿದ್ದಾರೆ.
“ವರ್ಷಗಳಿಂದ ಲಾರಿಗಳ ಓಡಾಟದಿಂದ ಧೂಳು ಸಮಸ್ಯೆ ಇದೆ. ಇತ್ತೀಚೆಗೆ ಆರೋಗ್ಯ ಸಮಸ್ಯೆಗಳು ಹೆಚ್ಚಾಗಿವೆ. ದಿನನಿತ್ಯ ಕಣ್ಣಿನಲ್ಲಿ ಧೂಳು ಸೇರುತ್ತಿದ್ದು, ಒಂದು ವರ್ಷದಿಂದ ಆಸ್ಪತ್ರೆಗೆ ಓಡಾಡುತ್ತಿದ್ದೇನೆ. ಮನೆಗಳಲ್ಲಿನ ಆಹಾರ ಪದಾರ್ಥಗಳಲ್ಲಿಯೂ ಧೂಳು ಸೇರಿ ಊಟ ಮಾಡಲು ಕೂಡ ಸಮಸ್ಯೆಯಾಗುತ್ತಿದೆ. ಜಿಲ್ಲಾಡಳಿತದ ನಿರ್ಲಕ್ಷ್ಯದಿಂದ ಅನೇಕರು ಸಂಕಷ್ಟ ಅನುಭವಿಸುತ್ತಿದ್ದಾರೆ. ಇದಕ್ಕೆ ತಕ್ಷಣ ಗಮನ ಹರಿಸಬೇಕು” ಎಂದು ಗ್ರಾಮಸ್ಥರು ಆಗ್ರಹಿಸಿದರು.
ಗ್ರಾಮದ ಒಳಗಡೆ ಗಣಿ ಲಾರಿಗಳ ಸಂಚಾರಕ್ಕೆ ಶಾಶ್ವತ ಪರಿಹಾರ ನೀಡದಿದ್ದರೆ ಪ್ರತಿಭಟನೆ ತೀವ್ರಗೊಳಿಸುವ ಎಚ್ಚರಿಕೆಯನ್ನೂ ಗ್ರಾಮಸ್ಥರು ನೀಡಿದ್ದಾರೆ.
Views: 70