ರಥಸಪ್ತಮಿ ಪ್ರಯುಕ್ತ ಭಾರತೀಯ ಯೋಗ ಶಿಕ್ಷಣ ಸಂಸ್ಥೆಯಿಂದ ಸೂರ್ಯಾರಾಧನಾ ಕಾರ್ಯಕ್ರಮ.

ರಥಸಪ್ತಮಿ: 108 ಸೂರ್ಯನಮಸ್ಕಾರ, ಅಗ್ನಿಹೋತ್ರ, ಅರ್ಘ್ಯೋದಕ ಸಮರ್ಪಣೆ; ಭಾರತೀಯ ಯೋಗ ಶಿಕ್ಷಣ ಸಂಸ್ಥೆಯಿಂದ ವಿಶೇಷ ಕಾರ್ಯಕ್ರಮ ಆಯೋಜನೆ.

ವರದಿ ಮತ್ತು ಫೋಟೋ ಕೃಪೆ, ರವಿ ಕೆ. ಅಂಬೇಕರ್

ಚಿತ್ರದುರ್ಗ, ಜ. 25:

ರಥಸಪ್ತಮಿ ದಿನದ ಅಂಗವಾಗಿ ಭಾನುವಾರ ಭಾರತೀಯ ಯೋಗ ಶಿಕ್ಷಣ ಸಂಸ್ಥೆ ವತಿಯಿಂದ ನಗರದ ತುರುವನೂರು ರಸ್ತೆಯಲ್ಲಿರುವ ಶ್ರೀ ಪ್ರಸನ್ನ ವೆಂಕಟೇಶ್ವರಸ್ವಾಮಿ ದೇವಸ್ಥಾನದ ಆವರಣದಲ್ಲಿ ಸೂರ್ಯದೇವರ ಆರಾಧನಾ ಕಾರ್ಯಕ್ರಮವನ್ನು ಭಕ್ತಿಭಾವದಿಂದ ಆಯೋಜಿಸಲಾಯಿತು.

ಬೆಳಿಗ್ಗೆ 5ರಿಂದ 7:30ರವರೆಗೆ ನಡೆದ ಈ ಕಾರ್ಯಕ್ರಮದಲ್ಲಿ ಯೋಗ ಸಂಸ್ಥೆಯ ಸದಸ್ಯರು ಹಾಗೂ ಸೂರ್ಯದೇವರ ಉಪಾಸಕರು ಶ್ರದ್ಧಾ–ಭಕ್ತಿಯಿಂದ ಭಾಗವಹಿಸಿದರು. ಸೂರ್ಯದೇವರಿಗೆ ಅತ್ಯಂತ ಪ್ರಿಯವಾದ ಅಗ್ನಿಹೋತ್ರ ಹೋಮವನ್ನು ನೆರವೇರಿಸಿ, ಅನಾಯಾಸವಾಗಿ 108 ಸೂರ್ಯನಮಸ್ಕಾರಗಳ ಪೂರ್ಣ ಪ್ರದರ್ಶನ ನೀಡಿದರು. ನಂತರ ಸೂರ್ಯನಿಗೆ ಅರ್ಘ್ಯೋದಕ ಸಮರ್ಪಿಸಲಾಯಿತು.

ಕಾರ್ಯಕ್ರಮದ ಕುರಿತು ಮಾತನಾಡಿದ ಯೋಗ ಪ್ರಚಾರಕ ರವಿ ಕೆ. ಅಂಬೇಕರ್ ಅವರು,
ಸೂರ್ಯದೇವರ ಆರಾಧನೆಯಿಂದ ಆಯುಷ್ಯ, ಆರೋಗ್ಯ, ಸಂಪತ್ತು ಹಾಗೂ ಆತ್ಮವಿಶ್ವಾಸ ವೃದ್ಧಿಯಾಗುತ್ತದೆ. ರಥಸಪ್ತಮಿಯಂದು ಸೂರ್ಯೋದಯಕ್ಕೂ ಮೊದಲು ಬ್ರಹ್ಮ ಮುಹೂರ್ತದಲ್ಲಿ ಎದ್ದು, ಎಕ್ಕದ ಗಿಡದ ಏಳು ಎಲೆಗಳನ್ನು ಅಕ್ಷತೆಯೊಂದಿಗೆ ತಲೆ, ಎರಡು ಭುಜಗಳು, ಬೆನ್ನು, ಎರಡು ತೊಡೆಗಳು ಹಾಗೂ ಎರಡು ಕಾಲುಗಳ ಮೇಲೆ ಇಟ್ಟು ಸ್ನಾನ ಮಾಡಿ, ಸೂರ್ಯೋದಯ ಸಮಯದಲ್ಲಿ ಅಥವಾ ಒಂದು ಗಂಟೆಯೊಳಗೆ ಸೂರ್ಯನಿಗೆ ಅರ್ಘ್ಯ ಸಮರ್ಪಿಸುವುದು ಅತ್ಯಂತ ಶುಭಪ್ರದವಾಗಿದೆ,” ಎಂದು ಹೇಳಿದರು.

ಇದನ್ನು ನಿಯಮಿತವಾಗಿ ಆಚರಿಸಿದರೆ ಪೂರ್ವಜನ್ಮ ಪಾಪಗಳು ನಿವಾರಣೆಯಾಗುತ್ತವೆ ಹಾಗೂ ದುಃಖಗಳು ದೂರವಾಗುತ್ತವೆ ಎಂಬ ನಂಬಿಕೆ ನಮ್ಮ ಸನಾತನ ಹಿಂದೂ ಧರ್ಮದಲ್ಲಿದೆ. ಆದ್ದರಿಂದಲೇ ನಮ್ಮ ಹಿರಿಯರು ಪ್ರತಿದಿನ ಈ ಪದ್ಧತಿಯನ್ನು ಅನುಸರಿಸುತ್ತಿದ್ದರು. ಇಂದಿಗೂ ಕೆಲ ಮನೆಗಳಲ್ಲಿ ಈ ಸಂಪ್ರದಾಯ ಕಂಡುಬರುತ್ತದೆ. ಪ್ರತಿದಿನ ಸೂರ್ಯನಮಸ್ಕಾರ ಮಾಡುವುದೇ ಸೂರ್ಯದೇವರ ಆರಾಧನೆಯ ಶ್ರೇಷ್ಠ ರೂಪ ಎಂದು ಅವರು ಅಭಿಪ್ರಾಯಪಟ್ಟರು.

ಈ ಸಂದರ್ಭದಲ್ಲಿ 108 ಸೂರ್ಯನಮಸ್ಕಾರಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಯೋಗ ಸಾಧಕರಿಗೆ ಭಾರತೀಯ ಯೋಗ ಶಿಕ್ಷಣ ಸಂಸ್ಥೆಯ ವತಿಯಿಂದ ಅಭಿನಂದನಾ ಪತ್ರ ನೀಡಿ ಗೌರವಿಸಲಾಯಿತು.

Views: 96

Leave a Reply

Your email address will not be published. Required fields are marked *