ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಚಿತ್ರದುರ್ಗ, ಜ.25:
ಮಠ ಸೇರಿ ಎಲ್ಲ ಜಾತಿ-ಧರ್ಮದ ಧಾರ್ಮಿಕ ಕೇಂದ್ರಗಳಿಗೆ ನೂರಾರು ಎಕರೆ ಭೂಮಿ ಸರ್ಕಾರ ಕೊಡುತ್ತಿದೆ. ಆದರೆ, ಸ್ವಂತ ಸೂರು ಕನಸು ನನಸಾಗಿಸಿಕೊಳ್ಳುವ ಬಡವರಿಗೆ ಸಣ್ಣದೊಂದು ಸೈಟ್ ಕೊಟ್ಟು, ಮನೆ ಕಟ್ಟಿಸಿಕೊಡುವ ಔಧಾರ್ಯ ಜನಪ್ರತಿನಿಧಿಗಳು ಮಾಡುತ್ತಿಲ್ಲ. ಈ ವಿಷಯದಲ್ಲಿ ಎಲ್ಲ ಪಕ್ಷಗಳ ನಡೆ ಜನವಿರೋಧಿ ಆಗಿದೆ ಎಂದು ಸ್ಲಂ ಜನರ ಸಂಘಟನೆ ರಾಜ್ಯಾಧ್ಯಕ್ಷ ಅಮೃತ್ ರಾಜ್ ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾ ಪತ್ರಿಕಾ ಭವನದಲ್ಲಿ ಶನಿವಾರ ಏರ್ಪಡಿಸಿದ್ದ ಫಾತೀಮಾ ಶೇಖ್-ಸಾವಿತ್ರಿಬಾಯಿ ಫುಲೆ ಜಯಂತ್ಯುತ್ಸವ ಉದ್ಘಾಟಿಸಿ ಮಾತನಾಡಿ, ರಾಜ್ಯದಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ಬಡವರು, ಕೂಲಿಕಾರ್ಮಿಕರು ಸ್ಲಂಗಳಲ್ಲಿ ವಾಸವಿದ್ದರೇ, ಬಹುತೇಕರು ಬಾಡಿಗೆ ಮನೆಯಲ್ಲಿ ವಾಸವಿದ್ದಾರೆ. ಇವರುಗಳ ಸೂರು ಕನಸು ಇಲ್ಲಿಯವರೆಗೂ ಈಡೇರಿಸುವ ಬದ್ಧತೆ ಸರ್ಕಾರ ಪ್ರದರ್ಶಿಸುತ್ತಿಲ್ಲ ಕೂಗು ಇಲ್ಲದ ವರ್ಗದ ಪರ ಅನೇಕ ಸಂಘಟನೆಗಳು ಕೆಲಸ ಮಾಡುತ್ತಿವೆ. ಆದರೆ, ನಾವುಗಳು ಅವರ ಹೋರಾಟದೊಂದಿಗೆ ಹೆಜ್ಜೆ ಹಾಕಬೇಕಾಗಿದೆ ಎಂದರು.
ಸ್ಲಂ ಬೋರ್ಡ್‌ಲ್ಲಿ 5 ಸಾವಿರ ಕೋಟಿ ರೂ. ಇದೆ. ನಮ್ಮ ಹೆಸರಲ್ಲಿ ಕೋಟ್ಯಂತರ ಹಣ ಬರುತ್ತಲೇ ಇದೆ, ಕಾನೂನು ರಕ್ಷಣೆ ಜೊತೆಗೆ ಸಂಘಟನೆಗಳ ಬೆಂಬಲ ಇದೆ. ಆದರೆ, ನಮಗೆ ಅದರ ಅರಿವು ಜ್ಞಾನದ ಕೊರತೆ ಇದೆ. ಆದ್ದರಿಂದಲೇ ಹಕ್ಕುದಾರರಾದ ನಮ್ಮನ್ನು ಫಲಾನುಭವಿಗಳು ಎನ್ನುತ್ತಿದ್ದಾರೆ ಎಂದು ಅವರು. ನಮ್ಮ ಹಣ ಬೇರೆಯವರ ಪಾಲಾಗುತ್ತಿದೆ. ಬಾಡಿಗೆ ಮನೆಯಲ್ಲಿರುವ ಬಡಜನರ ಸ್ಥಿತಿ ಚಿಂತಾಜನಕ. ಇವರುಗಳಿಗೆ ನಿವೇಶನ, ಮನೆ ನೀಡುವಲ್ಲಿ ಎಲ್ಲ ಸರ್ಕಾರಗಳು ನಿರಂತರವಾಗಿ ನಿರ್ಲಕ್ಷ್ಯ ವಹಿಸಿವೆ ಎಂದರು. ಶಿಕ್ಷಣ ಮೂಲ ಹಕ್ಕು ಆಗಿದ್ದು, ನಾವು ಮಕ್ಕಳನ್ನು ಶೈಕ್ಷಣಿಕ ಪ್ರಗತಿಯತ್ತ ಕೊಂಡೊಯ್ಯುವ ಕೆಲಸ ಮಾಡಬೇಕು. ಮುಖ್ಯವಾಗಿ ನಮ್ಮನ್ನು ಸಮಾಜ ಇಬ್ಭಾಗ ಮಾಡಿದೆ. ನಾವು ಯಾರೆಂಬ ವಾಸ್ತವ ಸತ್ಯ ಅರಿತುಕೊಳ್ಳಬೇಕು. ಮಕ್ಕಳ ಬದುಕು ಉತ್ತಮಗೊಳ್ಳಬೇಕು. ಹರಿಯುವ ನೀರಾಗಬೇಕು. ಆಗ ಮಾತ್ರ ನ್ಯಾಯ ದೊರೆಯಲಿದೆ ಎಂದು ಅಮೃತ್ ರಾಜ್ ತಿಳಿಸಿದರು.
ದಲಿತ ಸಮಾಜದ ಹಿರಿಯ ಮುಖಂಡ ಬಿ.ರಾಜಪ್ಪ ಮಾತನಾಡಿ, ಅನಕ್ಷರಸ್ಥೆ ಸಾವಿತ್ರಿಬಾಯಿ ಫುಲೆ, ತನ್ನ ಗಂಡನಿಂದ ಅಕ್ಷರ ಕಲಿತು ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡ ರೀತಿಯೇ ರೋಮಾಂಚನ. ಅದೇ ಫಾತೀಮಾ ಶೇಖ್ ಕೂಡ ಶೈಕ್ಷಣಿಕ ಕ್ರಾಂತಿಗೆ ಮುನ್ನುಡಿ ಬರೆದಿದ್ದಾರೆ. ಅವರೆಲ್ಲರ ಸ್ಮರಣೆಯೊಂದಿಗೆ ಉತ್ತಮ ಸಮಾಜ ನಿರ್ಮಾಣಕ್ಕೆ ನಾವು ಪಣ ತೊಡಬೇಕೆಂದ ಅವರು ಮಕ್ಕಳಿಗೆ ಆಸ್ತಿ ಮಾಡುವುದಕ್ಕಿಂತ ಅವರನ್ನೇ ಆಸ್ತಿಯನ್ನಾಗಿಸಲು ಶಿಕ್ಷಣ ಕೊಡಿಸಬೇಕು. ಆಗ ಮಾತ್ರ ನಮ್ಮ ವೃದ್ಧಾಪ್ಯದ ಜೀವನ ನೆಮ್ಮದಿಯಿಂದ ಇರುತ್ತದೆ ಭಗವದ್ಗೀತೆಗಿಂತಲೂ ಸಂವಿಧಾನ ಓದು ಅಗತ್ಯ. ಮೂಲಸೌಲಭ್ಯಕ್ಕಾಗಿ ಪರದಾಡುವಂತ ವ್ಯವಸ್ಥೆ ಇದ್ದು, ದೇಶ, ಜಾತಿ ವ್ಯವಸ್ಥೆ ಅರಿತು ಸಮಾಜಮುಖಿ ಚಿಂತನೆ ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.
ಸಂಘಟನೆ ಪದಾಧಿಕಾರಿ ವರಮಹಾಲಕ್ಷ್ಮೀ ಮಾತನಾಡಿ, ಮೌಢ್ಯ ತೊರೆದು, ಶಿಕ್ಷಣ ಪಡೆದು ಜೀವನ ಉನ್ನತಗೊಳಿಸಿಕೊಳ್ಳುವ ಜತೆಗೆ ಸಮಾಜಕ್ಕೆ ಸೇವೆ ಸಲ್ಲಿಸುವ ಕೆಲಸ ಮಾಡಬೇಕು ಎಂದು ತಿಳಿಸಿದರು. ಜಿಲ್ಲಾ ಕಾರ್ಯದರ್ಶಿ ಟಿ.ಮಂಜುನಾಥ್ ಮಾತನಾಡಿ, ಭೂಮಿ, ನಿವೇಶನ ಸ್ಲಂ ಜನರ ಹಕ್ಕು. ಅದನ್ನು ಪಡೆದುಕೊಳ್ಳಲು ನಮ್ಮ ಮುಂದೆ ಹೋರಾಟದ ಹಾದಿ ಮಾತ್ರ ಇದೆ. ಆದ್ದರಿಂದ ನಾವು ಸದಾ ಸೈನಿಕರ ರೀತಿ ಚಳವಳಿಗೆ ಸಿದ್ಧವಾಗಿರಬೇಕು ಎಂದ ಅವರು ನಾವು ಮನುಷ್ಯರು, ನಮ್ಮನ್ನು ಮನುಷ್ಯರಂತೆ ಕಾಣುವಂತೆ ಸರ್ಕಾರದ ಮೇಲೆ ಒತ್ತಡ ಹಾಕಬೇಕಿದೆ. ಕೂಲಿ, ಶಿಕ್ಷಣ, ಮನೆ, ನಿವೇಶನ ಇಲ್ಲ. ಸ್ಲಂ ಜನರ ಬದುಕು ನಿಕೃಷ್ಠವಾಗಿದೆ. ಅಧಿಕಾರಿಗಳು ನಾಲ್ಕು ವರ್ಷದಿಂದ ಹೇಳುತ್ತಲೇ ಇದ್ದಾರೆ. ಆದರೆ, ಸೂರು ಭಾಗ್ಯ ದೂರದ ಕನಸಾಗಿದೆ ಎಂದು ಬೇಸರಿಸಿದರು.
ನಿವೃತ್ತ ಉಪನ್ಯಾಸಕ ಎಲ್.ನಾಗರಾಜ್ ಮಾತನಾಡಿ, ಫುಲೆ, ಶೇಖ್ ಇಬ್ಬರು ದಿಟ್ಟ ಮಹಿಳೆಯರು ದೇಶದ ಬಡಜನರ ಬದುಕಿನಲ್ಲಿ ಬೆಳಕು ಮೂಡಿಸಿದ ಪ್ರಥಮ ಶಿಕ್ಷಕಿಯರು. ಕಣ್ಣು ತೆರೆಸಿದ, ಭವಿಷ್ಯ ರೂಪಿಸಿದ, ದಿಟ್ಟ ಹೋರಾಟದ ಹೆಣ್ಣು. ಆಕೆಯ ಸೇವಾ ಬದುಕು ಅತ್ಯಂತ ಸವಾಲು ಆಗಿತ್ತು ಊಟ ಇಲ್ಲದಿದ್ದರೂ ಮೊಬೈಲ್ ಬೇಕು. ಅಂತಹ ವಾತಾವರಣ ನಿರ್ಮಾಣವಾಗಿದೆ. ಮಕ್ಕಳ ಕೈಗೆ ಮೊಬೈಲ್ ಕೊಡುವ ವೇಳೆ ಎಚ್ಚರಿಕೆ ವಹಿಸಬೇಕು. ಒಳ್ಳೆಯದಕ್ಕೆ ಬಳಸಬೇಕು ಎಂದು ಅರಿವು ಮೂಡಿಸಬೇಕು ಎಂದರು.
ಜಿಲ್ಲಾ ನೀರಾವರಿ ಹೋರಾಟ ಸಮಿತಿ ಸಂಚಾಲಕ ಜೋಗಿಮಟ್ಟಿ ಈ.ಮಹೇಶಬಾಬು, ಸ್ಲಂ ಜನರ ಸಂಘಟನೆ ಜಿಲ್ಲಾಧ್ಯಕ್ಷ ಎಂ.ಮಹೇಶ್, ಪದಾಧಿಕಾರಿಗಳಾದ ಭಾಗ್ಯಾ, ಮಾಲತಿ, ರಕ್ಷಿತಾ, ರೇಷ್ಮಾ, ಮಾದಾರ ಚನ್ನಯ್ಯ ಸೇವಾ ಸಮಿತಿ ಜಿಲ್ಲಾಧ್ಯಕ್ಷ ಪರಶುರಾಮ್, ಮುಖಂಡರಾದ ಟಿ.ಆರ್.ತಿಪ್ಪೇಸ್ವಾಮಿ, ಕೆ.ರುದ್ರಮುನಿ, ವಕೀಲ ಹರೀಶ್, ಪುರುಷೋತ್ತಮ್, ಕಣಿವೆ ಮಾರಮ್ಮ ತಿಪ್ಪೇಸ್ವಾಮಿ, ಟಿ.ಎಚ್.ಕೆಂಚಪ್ಪ, ಬಿ.ಹನುಮಂತಪ್ಪ, ಆರ್.ಮಲ್ಲಿಕಾರ್ಜುನ್, ಹೀನಾ ಕೌಸರ್, ಸಿದ್ಧಾರ್ಥ ಇತರರಿದ್ದರು.
Views: 9