ದಾವಣಗೆರೆ|ಎಸ್‌ಸಿ–ಎಸ್‌ಟಿ ಸಮುದಾಯಕ್ಕೆ ಸೈಟ್ ವಿತರಣೆಗೆ ರಾಜ್ಯ ಸರ್ಕಾರದ ಮಹತ್ವದ ನಿರ್ಧಾರ: ಸತೀಶ್ ಜಾರಕಿಹೊಳಿ

ದಾವಣಗೆರೆ (ಫೆಬ್ರವರಿ 09):
ಪರಿಶಿಷ್ಟ ಜಾತಿ (ಎಸ್‌ಸಿ) ಹಾಗೂ ಪರಿಶಿಷ್ಟ ಪಂಗಡ (ಎಸ್‌ಟಿ) ಸಮುದಾಯದ ಜನರ ಬದುಕು ಸುಧಾರಣೆಗೆ ರಾಜ್ಯ ಸರ್ಕಾರ ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದೆ. ಈವರೆಗೆ ಭೂಮಿ ವಿತರಣೆಗೆ ಸೀಮಿತವಾಗಿದ್ದ ಯೋಜನೆಯನ್ನು ವಿಸ್ತರಿಸಿ, ಇದೀಗ ವಸತಿ ಸೈಟ್‌ಗಳನ್ನೂ ನೀಡಲು ಸರ್ಕಾರ ತೀರ್ಮಾನಿಸಿರುವುದಾಗಿ ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ.

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನ ರಾಜನಹಳ್ಳಿ ಗ್ರಾಮದಲ್ಲಿ ಆಯೋಜಿಸಿದ್ದ ವಾಲ್ಮೀಕಿ ಜಾಗೃತಿ ಸಮಾವೇಶದಲ್ಲಿ ಮಾತನಾಡಿದ ಅವರು, ಸಮಾಜ ಕಲ್ಯಾಣ ಇಲಾಖೆ ಮೂಲಕ ಎಸ್‌ಸಿ–ಎಸ್‌ಟಿ ಸಮುದಾಯಗಳ ಅಭಿವೃದ್ಧಿಗೆ ವಿಶೇಷ ಅನುದಾನವನ್ನು ಒದಗಿಸಲಾಗಿದೆ ಎಂದರು. ಈ ಅನುದಾನದ ಮೂಲಕ ಭೂಮಿ ಖರೀದಿಸಿ, ಅರ್ಹ ಫಲಾನುಭವಿಗಳಿಗೆ ಸೈಟ್‌ಗಳನ್ನು ವಿತರಿಸುವ ಯೋಜನೆ ರೂಪಿಸಲಾಗಿದೆ ಎಂದು ವಿವರಿಸಿದರು.

ಈ ಯೋಜನೆಗೆ ಮುಖ್ಯಮಂತ್ರಿ ಅವರ ಅನುಮೋದನೆ ಅಗತ್ಯವಿದ್ದು, ಒಪ್ಪಿಗೆ ದೊರೆತಲ್ಲಿ ಪ್ರತಿ ಪ್ರದೇಶದಲ್ಲಿ ಸುಮಾರು 30ರಿಂದ 40 ವಸತಿ ಸೈಟ್‌ಗಳನ್ನು ಸಮುದಾಯದ ಜನರಿಗೆ ನೀಡಲಾಗುವುದು ಎಂದು ಸಚಿವರು ಭರವಸೆ ನೀಡಿದರು. ಇದರಿಂದ ಮನೆ ಇಲ್ಲದ ಅನೇಕ ಕುಟುಂಬಗಳಿಗೆ ಶಾಶ್ವತ ನೆಲೆ ದೊರಕುವ ಸಾಧ್ಯತೆ ಇದೆ ಎಂದು ಅವರು ಅಭಿಪ್ರಾಯಪಟ್ಟರು.

ರಾಜ್ಯ ಸರ್ಕಾರ ಎಸ್‌ಸಿ–ಎಸ್‌ಟಿ ಸಮುದಾಯದ ಸಾಮಾಜಿಕ ಹಾಗೂ ಆರ್ಥಿಕ ಭದ್ರತೆಗಾಗಿ ಹಲವು ಯೋಜನೆಗಳನ್ನು ಜಾರಿಗೊಳಿಸುತ್ತಿದ್ದು, ವಸತಿ ಸೌಲಭ್ಯ ಒದಗಿಸುವ ಈ ನಿರ್ಧಾರವು ಅವರ ಜೀವನ ಮಟ್ಟವನ್ನು ಮತ್ತಷ್ಟು ಮೇಲಕ್ಕೆತ್ತಲಿದೆ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.

Leave a Reply

Your email address will not be published. Required fields are marked *