ಟಿ20 ವಿಶ್ವಕಪ್ 2026: ಕಿವೀಸ್ ಎದುರು ರೋಚಕ ಜಯ ಸಾಧಿಸಿ ಸೆಮೀಸ್ ಲಗ್ಗೆಯಿಟ್ಟ ಇಂಗ್ಲೆಂಡ್

ಕೊಲಂಬೊದಲ್ಲಿ ನಡೆದ ಟಿ20 ವಿಶ್ವಕಪ್‌ನ ಸೂಪರ್ 8 ಹಂತದ ಅತ್ಯಂತ ನಿರ್ಣಾಯಕ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು ಮಣಿಸಿದ ಇಂಗ್ಲೆಂಡ್, ಅಜೇಯವಾಗಿ ಸೆಮಿಫೈನಲ್ ಪ್ರವೇಶಿಸಿದೆ. ಆರ್. ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆದ ಈ ಹಣಾಹಣಿಯಲ್ಲಿ ಬಹುಪಾಲು ಸಮಯ ಕಿವೀಸ್ ಮೇಲುಗೈ ಸಾಧಿಸಿತ್ತಾದರೂ, ಅಂತಿಮ ಓವರ್‌ಗಳಲ್ಲಿ ಆಂಗ್ಲರು ಪಂದ್ಯವನ್ನು ತಮ್ಮತ್ತ ವಾಲಿಸಿಕೊಂಡರು. ಈ ಸೋಲಿನಿಂದ ನ್ಯೂಜಿಲೆಂಡ್‌ನ ಸೆಮೀಸ್ ಹಾದಿ ಕಠಿಣವಾಗಿದ್ದು, ಮುಂದಿನ ಪಾಕಿಸ್ತಾನ ಹಾಗೂ ಶ್ರೀಲಂಕಾ ನಡುವಿನ ಪಂದ್ಯದ ಫಲಿತಾಂಶವನ್ನು ಎದುರುನೋಡಬೇಕಿದೆ.

ಸ್ಪಿನ್ನರ್‌ಗಳ ಮೋಡಿಗೆ ಕುಸಿದ ಕಿವೀಸ್ ಬ್ಯಾಟಿಂಗ್ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ನ್ಯೂಜಿಲೆಂಡ್, ನಿಧಾನಗತಿಯ ಪಿಚ್‌ನಲ್ಲೂ ಸ್ಫೋಟಕ ಆರಂಭ ಪಡೆಯಿತು. ಫಿನ್ ಅಲೆನ್ ಹಾಗೂ ಟಿಮ್ ಸೀಫರ್ಟ್ ಮೊದಲ 7 ಓವರ್‌ಗಳಲ್ಲಿಯೇ 64 ರನ್ ಸಿಡಿಸಿ ಬೃಹತ್ ಮೊತ್ತದ ಮುನ್ಸೂಚನೆ ನೀಡಿದ್ದರು. ಆದರೆ ಈ ಜೊತೆಯಾಟ ಮುರಿಯುತ್ತಿದ್ದಂತೆ ಇಂಗ್ಲೆಂಡ್ ಸ್ಪಿನ್ನರ್‌ಗಳು ಪಂದ್ಯದ ಮೇಲೆ ಬಿಗಿಯಾದ ಹಿಡಿತ ಸಾಧಿಸಿದರು. ಆದಿಲ್ ರಶೀದ್, ರೆಹಾನ್ ಅಹ್ಮದ್ ಹಾಗೂ ವಿಲ್ ಜಾಕ್ಸ್ ತಲಾ ಎರಡು ವಿಕೆಟ್ ಕಬಳಿಸುವ ಮೂಲಕ ಕಿವೀಸ್ ಓಟಕ್ಕೆ ಬ್ರೇಕ್ ಹಾಕಿದರು. 180ರ ಗಡಿ ದಾಟುವ ನಿರೀಕ್ಷೆಯಲ್ಲಿದ್ದ ನ್ಯೂಜಿಲೆಂಡ್ ಅಂತಿಮವಾಗಿ 159 ರನ್‌ಗಳ ಸಾಧಾರಣ ಮೊತ್ತಕ್ಕೆ ಸೀಮಿತವಾಯಿತು.

ಇಂಗ್ಲೆಂಡ್‌ಗೆ ಆರಂಭಿಕ ಆಘಾತ 160 ರನ್‌ಗಳ ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಆಂಗ್ಲರ ಪಡೆಗೆ ಆರಂಭದಲ್ಲೇ ಭಾರೀ ಆಘಾತ ಎದುರಾಯಿತು. ಮೊದಲ ಎರಡು ಓವರ್‌ಗಳು ಮುಗಿಯುವಷ್ಟರಲ್ಲಿ ಕೇವಲ 2 ರನ್ ಗಳಿಸಿ ಇಬ್ಬರು ಪ್ರಮುಖ ಆರಂಭಿಕರು ಪೆವಿಲಿಯನ್ ಸೇರಿದರು. ಬಳಿಕ ಜೊತೆಯಾದ ಜಾಕೋಬ್ ಬೆಥೆಲ್ ಹಾಗೂ ನಾಯಕ ಹ್ಯಾರಿ ಬ್ರೂಕ್ ತಂಡಕ್ಕೆ ಆಸರೆಯಾಗಲು ಯತ್ನಿಸಿದರಾದರೂ, ಗ್ಲೆನ್ ಫಿಲಿಪ್ಸ್ ಮತ್ತು ರಚಿನ್ ರವೀಂದ್ರ ಅವರ ಸ್ಪಿನ್ ದಾಳಿಗೆ ಸಿಲುಕಿ ವಿಕೆಟ್ ಒಪ್ಪಿಸಿದರು. ಒಂದು ಹಂತದಲ್ಲಿ ಇಂಗ್ಲೆಂಡ್ ಕೇವಲ 117 ರನ್ ಗಳಿಗೆ ಪ್ರಮುಖ 6 ವಿಕೆಟ್ ಕಳೆದುಕೊಂಡು ತೀವ್ರ ಸಂಕಷ್ಟಕ್ಕೆ ಸಿಲುಕಿತ್ತು.

ಪಂದ್ಯದ ಗತಿ ಬದಲಿಸಿದ ಅಂತಿಮ 3 ಓವರ್‌ಗಳು ಪಂದ್ಯದ ಅಂತಿಮ 18 ಎಸೆತಗಳಲ್ಲಿ ಇಂಗ್ಲೆಂಡ್‌ಗೆ ಗೆಲ್ಲಲು 43 ರನ್‌ಗಳ ಅವಶ್ಯಕತೆಯಿತ್ತು. ಈ ಹಂತದಲ್ಲಿ ಕಿವೀಸ್ ಪಾಳಯದಲ್ಲಿ ಗೆಲುವಿನ ನಗೆ ಬೀರಿತ್ತು ಮತ್ತು ಪಾಕಿಸ್ತಾನದ ಅಭಿಮಾನಿಗಳು ನ್ಯೂಜಿಲೆಂಡ್‌ನ ಗೆಲುವಿಗಾಗಿ ಪ್ರಾರ್ಥಿಸುತ್ತಿದ್ದರು. ಆದರೆ ಕ್ರೀಸ್‌ನಲ್ಲಿದ್ದ ವಿಲ್ ಜ್ಯಾಕ್ಸ್ ಹಾಗೂ ರೆಹಾನ್ ಅಹ್ಮದ್ ಪಂದ್ಯದ ದಿಕ್ಕನ್ನೇ ಬದಲಿಸಿದರು. 18ನೇ ಓವರ್‌ನಲ್ಲಿ ಬರೋಬ್ಬರಿ 22 ರನ್ ಚಚ್ಚಿದ ಈ ಜೋಡಿ, ಮುಂದಿನ ಕೇವಲ 9 ಎಸೆತಗಳಲ್ಲಿ ಉಳಿದ 22 ರನ್ ಬಾರಿಸಿ, 19.3 ಓವರ್‌ಗಳಲ್ಲಿ ತಂಡಕ್ಕೆ ರೋಚಕ ಜಯ ತಂದುಕೊಟ್ಟರು.

ನ್ಯೂಜಿಲೆಂಡ್ ಸೆಮಿಫೈನಲ್ ಲೆಕ್ಕಾಚಾರವೇನು? ಇಂಗ್ಲೆಂಡ್ ವಿರುದ್ಧದ ಈ ಆಘಾತಕಾರಿ ಸೋಲಿನ ಹೊರತಾಗಿಯೂ ನ್ಯೂಜಿಲೆಂಡ್ ಸೆಮಿಫೈನಲ್ ಆಸೆ ಸಂಪೂರ್ಣವಾಗಿ ಕಮರಿಲ್ಲ. ಕಿವೀಸ್ ಭವಿಷ್ಯ ಇದೀಗ ಶ್ರೀಲಂಕಾ ಹಾಗೂ ಪಾಕಿಸ್ತಾನ ನಡುವಿನ ಪಂದ್ಯದ ಮೇಲೆ ನಿಂತಿದೆ. ಒಂದು ವೇಳೆ ಆ ಪಂದ್ಯದಲ್ಲಿ ಪಾಕ್ ಎದುರು ಲಂಕಾ ಗೆದ್ದರೆ, ನ್ಯೂಜಿಲೆಂಡ್ ಸುಲಭವಾಗಿ ಸೆಮೀಸ್ ಗೇರಲಿದೆ. ಆದರೆ ಪಾಕಿಸ್ತಾನ ಬೃಹತ್ ಅಂತರದಿಂದ ಜಯಗಳಿಸಿ, ನೆಟ್ ರನ್ ರೇಟ್‌ನಲ್ಲಿ ಕಿವೀಸ್ ತಂಡವನ್ನು ಹಿಂದಿಕ್ಕಿದರೆ ಪಾಕ್ ತಂಡವೇ ಸೆಮಿಫೈನಲ್ ಪ್ರವೇಶಿಸಲಿದೆ.

Leave a Reply

Your email address will not be published. Required fields are marked *