ಹೋಳಿ ಹಬ್ಬ ಎಂದರೆ ಅಲ್ಲಿ ಬಣ್ಣಗಳದ್ದೇ ಕಾರುಬಾರು. ಕಾಮನಬಿಲ್ಲಿನ ಬಣ್ಣಗಳಲ್ಲಿ ಮೈ-ಮನಸ್ಸು ಅದ್ದಿ ತೆಗೆಯದೆ ಹಬ್ಬದ ಖುಷಿ ಪೂರ್ಣವಾಗುವುದಿಲ್ಲ. ಆದರೆ, ಬಣ್ಣದಾಟದ ನಂತರ ತ್ವಚೆಯ ಮೇಲಾಗುವ ಅಡ್ಡಪರಿಣಾಮಗಳ ಬಗ್ಗೆ ಯೋಚಿಸಿದರೆ ತುಸು ಆತಂಕವಾಗುವುದು ಸಹಜ. ಚರ್ಮ ಕೆಂಪಾಗುವುದು, ಉರಿ, ತುರಿಕೆ, ಚರ್ಮ ಒಣಗುವಿಕೆ ಮತ್ತು ಎಷ್ಟೇ ತೊಳೆದರೂ ಹೋಗದ ಬಣ್ಣಗಳು ಕಿರಿಕಿರಿ ಉಂಟುಮಾಡುತ್ತವೆ.
ಕೆಲವು ರಾಸಾಯನಿಕಯುಕ್ತ ಬಣ್ಣಗಳು ಚರ್ಮದ ಸೂಕ್ಷ್ಮ ರಂಧ್ರಗಳನ್ನು ಮುಚ್ಚಿ ಅಲರ್ಜಿಗೆ ಕಾರಣವಾಗಬಹುದು. ಹಾಗಂತ ಹಬ್ಬದ ಸಂಭ್ರಮದಿಂದ ದೂರ ಉಳಿಯಬೇಕಿಲ್ಲ. ಸರಿಯಾದ ಮುನ್ನೆಚ್ಚರಿಕೆ ಮತ್ತು ಆರೈಕೆಯಿಂದ ನಿಮ್ಮ ತ್ವಚೆಯನ್ನು ಸುಲಭವಾಗಿ ಕಾಪಾಡಿಕೊಳ್ಳಬಹುದು. ಅದಕ್ಕಾಗಿ ಈ ಸರಳ ಟಿಪ್ಸ್ ಫಾಲೋ ಮಾಡಿ.
ಬಣ್ಣದಾಟಕ್ಕೆ ಮುನ್ನ ನಿಮ್ಮ ಸಿದ್ಧತೆ ಹೀಗಿರಲಿ
ಹಬ್ಬದ ದಿನ ಹಾನಿಯಾಗದಂತೆ ತಡೆಯಲು, ಎರಡು ದಿನ ಮುಂಚಿತವಾಗಿಯೇ ತ್ವಚೆಯನ್ನು ಸಿದ್ಧಪಡಿಸಿಕೊಳ್ಳುವುದು ಜಾಣತನ.
- ಮೃದುವಾದ ಎಕ್ಸ್ಫೋಲಿಯೇಶನ್: ಹಬ್ಬಕ್ಕೆ ಎರಡು ದಿನ ಇರುವಾಗಲೇ ಚರ್ಮದ ಮೇಲಿನ ಸತ್ತ ಜೀವಕೋಶಗಳನ್ನು (Dead cells) ನಿವಾರಿಸಿಕೊಳ್ಳಿ. ಇದಕ್ಕಾಗಿ ದುಬಾರಿ ಸ್ಕ್ರಬ್ಗಳೇ ಬೇಕಿಲ್ಲ. ಸ್ವಲ್ಪ ಕಡಲೆಹಿಟ್ಟಿಗೆ ಮೊಸರು ಬೆರೆಸಿ ಮುಖವನ್ನು ಮೃದುವಾಗಿ ಮಸಾಜ್ ಮಾಡಿ ತೊಳೆದುಕೊಳ್ಳಿ.
- ಎಣ್ಣೆಯ ರಕ್ಷಣಾ ಕವಚ: ಬಣ್ಣ ಆಡುವ ಮೊದಲು ಚರ್ಮಕ್ಕೆ ಉತ್ತಮ ಮಾಯಿಶ್ಚರೈಸರ್ ಅಥವಾ ಎಣ್ಣೆಯ ಅಗತ್ಯವಿದೆ. ಶುದ್ಧ ಕೊಬ್ಬರಿ ಎಣ್ಣೆ ಅಥವಾ ಬಾದಾಮಿ ಎಣ್ಣೆಯನ್ನು ಮುಖ, ಕುತ್ತಿಗೆ, ಕೈ-ಕಾಲುಗಳು ಹಾಗೂ ಉಗುರುಗಳಿಗೆ ಚೆನ್ನಾಗಿ ಸವರಿಕೊಳ್ಳಿ. ಇದು ಚರ್ಮ ಮತ್ತು ಬಣ್ಣದ ನಡುವೆ ಒಂದು ತಡೆಯಾಗಿ ನಿಂತು, ಬಣ್ಣವು ಚರ್ಮದೊಳಗೆ ಇಳಿಯದಂತೆ ನೋಡಿಕೊಳ್ಳುತ್ತದೆ.
ಹೋಳಿಯ ನಂತರದ ಚರ್ಮದ ಆರೈಕೆ
ಬಣ್ಣ ಆಡಿದ ಖುಷಿಯಲ್ಲಿ ಸ್ನಾನ ಮಾಡುವುದನ್ನು ನಿರ್ಲಕ್ಷ್ಯ ಮಾಡಬೇಡಿ. ಬಣ್ಣ ತೆಗೆಯುವಾಗ ಈ ಕೆಳಗಿನ ಅಂಶಗಳು ನೆನಪಿರಲಿ.
- ಬಣ್ಣ ಒಣಗಲು ಬಿಡಬೇಡಿ: ಮೈಮೇಲೆ ಬಣ್ಣವಿದ್ದಾಗ ಅದು ಒಣಗುವ ಮುನ್ನವೇ ತೊಳೆದುಕೊಳ್ಳಿ. ಬೆಳಗಿನಿಂದ ಸಂಜೆಯವರೆಗೆ ಬಣ್ಣದೊಟ್ಟಿಗೆ ತಿರುಗಾಡಿದರೆ ತ್ವಚೆಗೆ ಹಾನಿಯಾಗುವ ಸಾಧ್ಯತೆ ಹೆಚ್ಚು.
- ಕಠಿಣ ಸೋಪು ಬೇಡ: ಬಣ್ಣ ಹೋಗಲಾಡಿಸಲು ಬಲವಾಗಿ ಉಜ್ಜುವುದು ಅಥವಾ ಕಠಿಣ ರಾಸಾಯನಿಕವಿರುವ ಸೋಪುಗಳನ್ನು ಬಳಸಬೇಡಿ. ನೈಸರ್ಗಿಕ ಅಥವಾ ಎಣ್ಣೆಯಂಶವಿರುವ ಮೃದುವಾದ ಕ್ಲೆನ್ಸರ್ (Oil-based cleanser) ಬಳಸಿ.
- ಉಗುರುಬೆಚ್ಚಗಿನ ನೀರು ಬಳಸಿ: ಅತಿಯಾದ ಬಿಸಿ ನೀರು ಚರ್ಮದ ನೈಸರ್ಗಿಕ ತೇವಾಂಶವನ್ನು ಕಿತ್ತುಕೊಂಡು ಚರ್ಮವನ್ನು ಮತ್ತಷ್ಟು ಒಣಗಿಸುತ್ತದೆ. ಆದ್ದರಿಂದ ಉಗುರುಬೆಚ್ಚಗಿನ ನೀರನ್ನೇ ಬಳಸಿ. ಸ್ನಾನದ ನಂತರ ತಕ್ಷಣವೇ ಕೊಬ್ಬರಿ ಎಣ್ಣೆ ಅಥವಾ ಬಾಡಿ ಲೋಷನ್ ಹಚ್ಚಿ.
ತ್ವಚೆಯ ಪೋಷಣೆ ಮತ್ತು ಹೈಡ್ರೇಶನ್
ಬಣ್ಣದಾಟದಿಂದ ದಣಿದ ಚರ್ಮಕ್ಕೆ ಮರಳಿ ಜೀವ ತುಂಬಲು ವಿಶೇಷ ಪೋಷಣೆಯ ಅಗತ್ಯವಿರುತ್ತದೆ.
- ನೈಸರ್ಗಿಕ ಫೇಸ್ ಮಾಸ್ಕ್: ಬಣ್ಣ ತೊಳೆದ ಒಂದೆರಡು ಗಂಟೆಗಳ ನಂತರ ತ್ವಚೆಗೆ ತಂಪು ನೀಡಲು ಅಲೋವೆರಾ ಜೆಲ್ ಹಚ್ಚಿ. ಅಥವಾ ಮನೆಯಲ್ಲೇ ಸೌತೇಕಾಯಿ ರಸ, ಓಟ್ಸ್, ತೆಂಗಿನ ಹಾಲು ಮತ್ತು ಸ್ವಲ್ಪ ಜೇನುತುಪ್ಪ ಸೇರಿಸಿ ಫೇಸ್ ಪ್ಯಾಕ್ ತಯಾರಿಸಿ ಹಚ್ಚಿಕೊಳ್ಳಿ.
- ತೇವಾಂಶ ಕಾಪಾಡಿ: ತ್ವಚೆಯ ಹಾನಿಯನ್ನು ಸರಿಪಡಿಸಲು ಸೆರಮೈಡ್ (Ceramide) ಅಂಶವಿರುವ ಕ್ರೀಮ್ ಅಥವಾ ಹೈಲುರಾನಿಕ್ ಆಸಿಡ್ (Hyaluronic acid) ಸೀರಂ ಬಳಸುವುದು ಅತ್ಯುತ್ತಮ.
- ಧಾರಾಳವಾಗಿ ನೀರು ಕುಡಿಯಿರಿ: ಹೊರಗಿನ ಆರೈಕೆಯಷ್ಟೇ ಒಳಗಿನ ಪೋಷಣೆಯೂ ಮುಖ್ಯ. ಚರ್ಮದ ತೇವಾಂಶವನ್ನು ಕಾಪಾಡಿಕೊಳ್ಳಲು ದಿನವಿಡೀ ಕನಿಷ್ಠ 3 ಲೀಟರ್ ನೀರು ಕುಡಿಯುವುದನ್ನು ಮರೆಯಬೇಡಿ.
ಈ ಮೇಲಿನ ಸರಳ ವಿಧಾನಗಳನ್ನು ಅನುಸರಿಸುವ ಮೂಲಕ, ಯಾವುದೇ ಚರ್ಮದ ಸಮಸ್ಯೆಯಿಲ್ಲದೆ ಈ ಬಾರಿಯ ಹೋಳಿ ಹಬ್ಬವನ್ನು ನೀವು ಸಂಪೂರ್ಣವಾಗಿ ಆನಂದಿಸಬಹುದು.