ಅಕ್ಷಯ ತೃತೀಯದಂದು ಬಾಲ್ಯವಿವಾಹ ತಡೆಗೆ ಬಾಗಲಕೋಟೆಯಲ್ಲಿ ‘ಜಾಗೃತಿ ದಿನ’ ಆಚರಣೆ.

ಪೋಟೋ ಮತ್ತು ವರದಿ : ಕುಮಾರ್ ಜಿ ಎನ್ 9945712918

19 ಏಪ್ರಿಲ್ : ಅಕ್ಷಯ ತೃತೀಯದಂದು ಬಾಲ್ಯವಿವಾಹ ತಡೆಗಟ್ಟಲು ಜಿಲ್ಲಾಡಳಿತ, ಬಿ.ವಿ.ವಿ.ಸಂಘದ ಬಸವೇಶ್ವರ ವಾಣಿಜ್ಯ ಮಹಾವಿದ್ಯಾಲಯ, ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಸಹಯೋಗದೊಂದಿಗೆ ರೀಚ್ ಸಂಸ್ಥೆಯಿಂದ ಜಾಗೃತಿ ದಿನ ಆಚರಣೆ.


ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕರಾದ ವೀಣಾ ಪಟ್ಟಣಶೆಟ್ಟಿರವರು ಬಾಲ್ಯವಿವಾಹ ವಿರೋಧ ಹಾಗೂ ಬಾಲ್ಯವಿವಾಹದಲ್ಲಿ ಪಾಲ್ಗೊಳ್ಳುವ ಪ್ರತಿಯೊಬ್ಬರಿಗೂ ವಿಧಿಸಲಾಗುವ ಶಿಕ್ಷೆ ಬಗ್ಗೆ ಬಾಲ್ಯವಿವಾಹ ನಿಷೇಧ ಕಾಯ್ದೆ ಬಗ್ಗೆ ಅರಿವನ್ನು ಮೂಡಿಸಿದರು. ಜಯಶ್ರೀ, ಮಕ್ಕಳ ಸಹಾಯವಾಣಿ 1098, ಹುಡುಗಿಗೆ 18 ಹುಡುಗನಿಗೆ 21 ವರ್ಷ ದಾಟಿರಬೇಕು ಎಂದು ಮಾಹಿತಿ ನೀಡಿದರು.

ಬಾಲ್ಯವಿವಾಹವಾದಲ್ಲಿ ಹುಡುಗನಿಗೆ ಪೋಕ್ಸೋ ಕಾಯ್ದೆ 2012ರ ಅಡಿ ಕೂಡ ದೂರ ದಾಖಲಾಗುತ್ತದೆ ಎಂದು ತಿಳಿಸಿದರು. ಸುಧಾ ರೀಚ್ ಸಂಸ್ಥೆರವರು ಬಾಲ್ಯವಿವಾಹ ವಿರೋಧಿಸುವ ಪ್ರತಿಜ್ಞಾವಿಧಿ ಬೋಧಿಸಿದರು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಮಹಾವಿದ್ಯಾಲಯದ ಪ್ರಾಚಾರ್ಯರು ಡಾ.ಜಗನ್ನಾಥ್.ವಿ.ಚೌಹಾನ್ ರವರು ಬಾಲ್ಯ ವಿವಾಹದಿಂದಾಗುವ ಅನಾನುಕೂಲತೆಗಳು ಹಾಗೂ ಬಾಲ್ಯವಿವಾಹಕ್ಕೆ ಸಂಬಂಧಿಸಿದ ವಿದ್ಯಾರ್ಥಿಗಳ ಪಾತ್ರ ಕುರಿತು ಮಾತನಾಡಿದರು.


ಬಾಗಲಕೋಟೆ ಜಿಲ್ಲೆಯಲ್ಲಿ ಮಕ್ಕಳ ಹಕ್ಕುಗಳ ರಕ್ಷಣೆ ಮತ್ತು ಬಾಲ್ಯವಿವಾಹ ತಡೆಗಟ್ಟಲು ಶ್ರಮಿಸುತ್ತಿರುವ ರೀಚ್ ಸ್ವಯಂ ಸೇವಾ ಸಂಸ್ಥೆಯು, ಅಕ್ಷಯ ತೃತೀಯ ಸಂದರ್ಭದಲ್ಲಿ ಬಾಲ್ಯವಿವಾಹಗಳನ್ನು ತಡೆಗಟ್ಟಲು ‘ಜಾಗೃತಿ ದಿನ’ವನ್ನು ಆಚರಿಸಿತು. ಬಾಲ್ಯವಿವಾಹ ನಿಷೇಧ ಅಧಿಕಾರಿಗಳು ಮತ್ತು ಆಶಾ, ಅಂಗನವಾಡಿ ಕಾರ್ಯಕರ್ತೆಯರು, ರಾಷ್ಟ್ರೀಯ ಸ್ವಯಂ ಸೇವಾ ವಿದ್ಯಾರ್ಥಿಗಳು ಈ ಅಭಿಯಾನಕ್ಕೆ ಬೆಂಬಲ ಸೂಚಿಸುವುದರ ಜೊತೆಗೆ, ಜಿಲ್ಲೆಯಾದ್ಯಂತ ಬಾಲ್ಯವಿವಾಹಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ತಮ್ಮ ಬದ್ಧತೆಯನ್ನು ಸೂಚಿಸಿ ಶಪಥ ಮಾಡಿದರು.


ಜಿಲ್ಲೆಯನ್ನು ಬಾಲ್ಯವಿವಾಹ ಮುಕ್ತವಾಗಿಸುವ ಗುರಿಯೊಂದಿಗೆ ರೀಚ್ ಸಂಸ್ಥೆಯು ಶಾಲೆಗಳು, ಜಿಲ್ಲೆಯನ್ನು ಬಾಲ್ಯವಿವಾಹ ಮುಕ್ತವಾಗಿಸುವ ಗುರಿಯನ್ನು ತಲುಪಲು ಶಾಲೆಗಳು, ಗ್ರಾಮ ಪಂಚಾಯಿತಿಗಳು ಮತ್ತು ಹಳ್ಳಿಗಳಲ್ಲಿ ಬಾಲ್ಯವಿವಾಹದ ವಿರುದ್ಧ ಜಿಲ್ಲಾಡಳಿತ, ಗ್ರಾಮ ಪಂಚಾಯತಿಗಳು. ಶಾಲೆಗಳು ಮತ್ತು ಧಾರ್ಮಿಕ ಮುಖಂಡರ ಸಹಯೋಗದೊಂದಿಗೆ ನಿರಂತರವಾಗಿ ಜಾಗೃತಿ ಅಭಿಯಾನಗಳನ್ನು ನಡೆಸುತ್ತಿದೆ.


ಸಂಸ್ಥೆಯು ಈವರೆಗೆ ಜಿಲ್ಲೆಯಾದ್ಯಂತ ಸಾವಿರಾರು ಜನರಿಗೆ ಬಾಲ್ಯವಿವಾಹದ ವಿರುದ್ಧ ಪ್ರಮಾಣ ವಚನ ಬೋಧಿಸಿದೆ. ವಿಶೇಷವಾಗಿ ಅಕ್ಷಯ ತೃತೀಯ ಮತ್ತು ವಿವಿಧ ಧರ್ಮಗಳ ವಿವಾಹದ ಸೀಸನ್ ಪ್ರಾರಂಭವಾಗುವಂತಹ ಸೂಕ್ಷ್ಮ ಸಂದರ್ಭಗಳಲ್ಲಿ ಸರ್ಕಾರ ಮತ್ತು ಜಿಲ್ಲಾಡಳಿತದ ಬೆಂಬಲದೊಂದಿಗೆ ಸಂಸ್ಥೆಯು ವಿಶೇಷವಾಗಿ ಬಾಲ್ಯವಿವಾಹ ತಡೆಗಟ್ಟುವ ಕಾರ್ಯಕ್ರಮಗಳನ್ನು ನಡೆಸುತ್ತಿದೆ.

ರೀಚ್ ಸಂಸ್ಥೆಯು ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ದೇಶಾದ್ಯಂತ ಕಾರ್ಯನಿರ್ವಹಿಸುತ್ತಿರುವ 250ಕ್ಕೂ ಹೆಚ್ಚು ಎನ್‌ಜಿಒಗಳ ದೊಡ್ಡ ಜಾಲವಾದ ‘ಜಸ್ಟ್ ರೈಟ್ಸ್ ಫಾರ್ ಚಿಲ್ಸನ್’ ಸಂಸ್ಥೆಯ ಪಾಲುದಾರ ಸಂಸ್ಥೆಯಾಗಿದೆ.


ಇದುವರೆಗೆ ಜಿಲ್ಲೆಯಲ್ಲಿ ಬಾಲ್ಯವಿವಾಹದ ವಿರುದ್ಧ ಸಂಸ್ಥೆಯು ನಡೆಸಿದ ಅಭಿಯಾನದ ಯಶಸ್ಸಿನ ಬಗ್ಗೆ ತೃಪ್ತಿ ವ್ಯಕ್ತಪಡಿಸಿದ ರೀಚ್ ಸಂಸ್ಥೆಯ ನಿರ್ದೇಶಕರಾದ ಜಿ.ಎನ್ ಸಿಂಹ, “ಬಾಲ್ಯ ವಿವಾಹವು ಒಂದು ಘೋರ ಅಪರಾಧವಾಗಿದೆ. ಅಕ್ಷಯ ತೃತೀಯದಂತಹ ಶುಭ ಸಂದರ್ಭದ ನೆಪದಲ್ಲಿ ಅಥವಾ ಇನ್ನಾವುದೇ ಧಾರ್ಮಿಕ ಪರಂಪರೆಯ ಅಡಿಯಲ್ಲಿ ಇದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಆಡಳಿತ ಮತ್ತು ಸಮಾಜಿಕ ಸಂಸ್ಥೆಗಳ ಜಾಗರೂಕತೆಯಿಂದಾಗಿ ಈಗ ಬಾಲ್ಯವಿವಾಹಗಳ ಸಂಖ್ಯೆಯಲ್ಲಿ ಗಣನೀಯ ಇಳಿಕೆಯಾಗಿದೆ. ಆದರೆ ಈ ಪದ್ಧತಿಯನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಬೇಕಿದೆ,” ಎಂದು ಹೇಳಿದರು.


ಅವರು ಮುಂದುವರಿದು ಮಾತನಾಡುತ್ತಾ. “ಕೆಲವು ವರ್ಷಗಳ ಹಿಂದೆ ಬಾಲ್ಯವಿವಾಹವು ‘ಬಾಲ್ಯವಿವಾಹ ನಿಷೇಧ ಕಾಯ್ದೆ 2006ರ ಅಡಿಯಲ್ಲಿ ಶಿಕ್ಷಾರ್ಹ ಅಪರಾಧವಾಗಿದೆ ಎಂಬುದು ಜನರಿಗೆ ತಿಳಿದಿರಲಿಲ್ಲ. ಈ ಕಾಯ್ದೆಯು ಇಂತಹ ವಿವಾಹಗಳಲ್ಲಿ ಸಹಭಾಗಿಯಾಗುವ ಅಥವಾ ಅದಕ್ಕಾಗಿ ಸೇವೆಗಳನ್ನು ಒದಗಿಸುವ ವ್ಯಕ್ತಿಗಳಿಗೆ 2 ವರ್ಷಗಳವರೆಗೆ ಜೈಲು ಶಿಕ್ಷೆ, ದಂಡ ಅಥವಾ ಎರಡನ್ನೂ ವಿಧಿಸಲು ಅವಕಾಶ ನೀಡುತ್ತದೆ. ಇದರಲ್ಲಿ ಕೇವಲ ಮದುವೆಯಲ್ಲಿ ಭಾಗವಹಿಸುವವರು ಅಥವಾ ಹುಡುಗಿಯ ಕುಟುಂಬದವರು ಮಾತ್ರವಲ್ಲದೆ, ಕ್ಯಾಟರರ್‌ಗಳು. ಡೆಕೋರೇಟರ್‌ಗಳು, ಪೋಟೊಗ್ರಾಪರ್, ಅಡುಗೆ ತಯಾರಕರು, ಹೂಗಾರರು, ಬ್ಯಾಂಡ್ ವಾದಕರು, ಕಲ್ಯಾಣ ಮಂಟಪದ ಮಾಲೀಕರು, ಮುದ್ರಣಕಾರರು ಮತ್ತು ಮದುವೆ ಮಾಡಿಸುವ ಅರ್ಚಕರು ಅಥವಾ ಮೌಲ್ವಿಗಳನ್ನು ಸಹ ಅಪರಾಧಿಗಳೆಂದು ಪರಿಗಣಿಸಲಾಗುತ್ತದೆ,” ಎಂದು ತಿಳಿಸಿದರು.


ಆದಾಗ್ಯೂ, ತಳಮಟ್ಟದಲ್ಲಿ ನಡೆದ ಅತ್ಯಧಿಕ ಜಾಗೃತಿ ಅಭಿಯಾನಗಳಿಂದಾಗಿ ಜಿಲ್ಲೆಯಲ್ಲಿ ಪರಿಸ್ಥಿತಿ ಬದಲಾಗಿದೆ. ಜನರು ಈಗ ಬಾಲ್ಯವಿವಾಹದ ಘಟನೆಗಳ ಬಗ್ಗೆ ವರದಿ ಮಾಡುತ್ತಿದ್ದಾರೆ ಮತ್ತು ಜಿಲ್ಲಾಡಳಿತವು ಅವುಗಳನ್ನು ತಡೆಯಲು ತಕ್ಷಣ ಕ್ರಮ ಕೈಗೊಳ್ಳುತ್ತಿದೆ. ಇದೊಂದು ಮಹತ್ವದ ಬದಲಾವಣೆಯಾಗಿದ್ದು, 2030ರ ಒಳಗಾಗಿ ಜಿಲ್ಲೆಯು ಬಾಲ್ಯವಿವಾಹ ಮುಕ್ತವಾಗುವ ಗುರಿಯನ್ನು ಸಾಧಿಸುತ್ತದೆ ಎಂಬ ವಿಶ್ವಾಸ ನಮಗಿದೆ.


‘ಜಸ್ಟ್ ರೈಟ್ಸ್ ಫಾರ್ ಚಿಲ್ಮನ್ ‘ಸಂಸ್ಥೆಯು ತನ್ನ 250ಕ್ಕೂ ಹೆಚ್ಚು ಪಾಲುದಾರರೊಂದಿಗೆ ಸೇರಿ, ಬಾಲ್ಯ ವಿವಾಹದ ಪ್ರಮಾಣ ಹೆಚ್ಚಾಗಿರುವ ದೇಶದ 450ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಈ ಅಪರಾಧದ ವಿರುದ್ಧ ಅಭಿಯಾನ ನಡೆಸುತ್ತಿದೆ. ಈ ಅಭಿಯಾನವು ಈವರೆಗೆ ಐದು ಲಕ್ಷಕ್ಕೂ ಹೆಚ್ಚು ಬಾಲ್ಯ ವಿವಾಹಗಳನ್ನು ತಡೆಗಟ್ಟುವಲ್ಲಿ ಯಶಸ್ವಿಯಾಗಿದೆ.

ರೀಚ್ ಸಂಸ್ಥೆಯ ಸುಧಾರವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು ಮಹಾವಿದ್ಯಾಲಯದ ಐ ಕ್ಯೂ ಸಿ ಸಂಯೋಜಕರು. ಜಿ.ಎಂ.ನಾವದಗಿ, ಸಿಬ್ಬಂದಿ ಕಾರ್ಯದರ್ಶಿಗಳಾದ ಡಾ.ಎಮ್.ನಂಜುoಡಸ್ವಾಮಿ, ಉಪಸ್ಥಿತರಿದ್ದರು. ರೇಂಜರ್ ಘಟಕದ ಮುಖ್ಯಸ್ಥೆ ಡಾ. ಐ.ಕೆ.ಮಠದ ಕಾರ್ಯಕ್ರಮ ನಿರೂಪಿಸಿದರು. ರೋವರ್ ಘಟಕದ ಮುಖ್ಯಸ್ಥ ಸುರೇಶ್ ಆಡಗಲ್ ವಂದನಾರ್ಪಣೆ ಸಲ್ಲಿಸಿದರು.

Leave a Reply

Your email address will not be published. Required fields are marked *