ಚಿತ್ರದುರ್ಗ ಮೇ. 20
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ಕಾರ್ಮಿಕರಿಗೆ ಶಕ್ತಿ ಬಂದಂತಾಗಿದೆ. ನಿಜವಾದ ಕಟ್ಟಡ ಕಾರ್ಮಿಕರು ಗುರುತಿನ ಚೀಟಿಗಳನ್ನು ಮಾಡಿಸಿಕೊಂಡು ಇಲಾಖೆಯೊಂದಿಗೆ ಸಹಕರಿಸಿ ಎಂದು ಕಾರ್ಮಿಕ ನಿರೀಕ್ಷಕ ಟಿ. ಭೀಮೇಶ್ ಕಟ್ಟಡ ಕಾರ್ಮಿಕರಿಗೆ ತಿಳಿಸಿದರು.
ಕರ್ನಾಟಕ ರಾಜ್ಯ ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕರ ಕ್ಷೇಮಾಭಿವೃದ್ದಿ ಸಂಘದಿಂದ ಹೊಳಲ್ಕೆರೆ ರಸ್ತೆಯಲ್ಲಿನÀ ಸಂಘದ ಕಚೇರಿಯಲ್ಲಿ ಮಂಗಳವಾರ ನಡೆದ ಕಾರ್ಮಿಕ ದಿನಾಚರಣೆ ಕಾರ್ಯಕ್ರಮದಲ್ಲಿ ಎಸ್.ಎಸ್.ಎಲ್.ಸಿ. ಹಾಗೂ ದ್ವಿತೀಯ ಪಿ.ಯು.ಸಿ.ಯಲ್ಲಿ ಅತಿ ಹೆಚ್ಚು ಅಂಕಗಳನ್ನು ಗಳಿಸಿರುವ ಕಾರ್ಮಿಕರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೇರವೇರಿಸಿ ಮಾತನಾಡಿದ ಅವರು, ಕಾರ್ಮಿಕ ಇಲಾಖೆ ಕಾರ್ಮಿಕರಿಗೆ ಹಲವು ಸವಲತ್ತು ಗಳನ್ನು ಕೊಡುವ ಕಲ್ಯಾಣ ಇಲಾಖೆಯಾಗಿ ಮಾರ್ಪಟ್ಟಿದೆ. ಗುರುತಿನ ಚೀಟಿಗಳನ್ನು ನವೀಕರಣ ಗೊಳಿಸಿಕೊಳ್ಳುವುದನ್ನು ಮಾತ್ರ ಕಾರ್ಮಿಕರು ಮರೆಯಬಾರದು. ಕಾರ್ಮಿಕರ ಇಬ್ಬರು ಮಕ್ಕಳಿಗೆ ಪ್ರತಿ ವರ್ಷವೂ ಒಂದನೆ ತರಗತಿಯಿಂದ ಸ್ನಾತಕೋತ್ತರ ಶಿಕ್ಷಣದವರೆಗೆ ವಿದ್ಯಾರ್ಥಿ ವೇತನ ನೀಡಲಾಗುವುದು. ಮದುವೆಗೆ ಸಹಾಯ ಧನ, ಸ್ವಾಭಾವಿಕ ಮರಣ ಹೊಂದಿದರೆ ಪರಿಹಾರ, ಅಪಘಾತದಲ್ಲಿ ಕಾರ್ಮಿಕ ಮೃತಪಟ್ಟರೆ ಎಂಟು ಲಕ್ಷ ರೂ.ಗಳನ್ನು ನೀಡಲಾಗುವುದು. ವೈದ್ಯಕೀಯ ಸಹಾಯಧನ, ಅರವತ್ತು ವರ್ಷ ತುಂಬಿದವರಿಗೆ ಪಿಂಚಣಿ, ಹೆರಿಗೆ ಭತ್ಯೆ, ತಾಯಿ ಮಗು ಸಹಾಯ ಹಸ್ತ ಆರೈಕೆಗೆ ವರ್ಷಕ್ಕೆ ಆರು ಸಾವಿರ ರೂ.ಗಳನ್ನು ಕೊಡಲಾಗುವುದು. ಇಷ್ಟೆಲ್ಲಾ ಅನುಕೂಲಗಳನ್ನು ಪಡೆಯಬೇಕೆಂದು ಕಡ್ಡಾಯವಾಗಿ ಕಾರ್ಮಿಕರು ಗುರುತಿನ ಚೀಟಿಗಳನ್ನು ಇಟ್ಟುಕೊಂಡು ನವೀಕರಣ ಮಾಡಿಸಿಕೊಳ್ಳಬೇಕು. ಇಲ್ಲವಾದಲ್ಲಿ ಸೌಲಭ್ಯಗಳಿಂದ ವಂಚಿತರಾಗುತ್ತೀರ ಎಂದು ಎಚ್ಚರಿಸಿದರು.

ಕರ್ನಾಟಕ ರಾಜ್ಯ ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕರ ಕ್ಷೇಮಾಭಿವೃದ್ದಿ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ವೈ.ಕುಮಾರ್ ಮಾತನಾಡಿ ಕಲ್ಯಾಣ ಮಂಡಳಿ ಸ್ಥಾಪನೆಯಾಗಿ ಹದಿನೆಂಟು ವರ್ಷಗಳಾಗಿದ್ದರೂ ಸರ್ಕಾರ ಕಣ್ಣೊರೆಸುವ ತಂತ್ರ ಅನುಸರಿಸುತ್ತಿದೆ. ಕಾರ್ಮಿಕ ಸಚಿವರಿಗೆ ಕಾರ್ಮಿಕರ ಬಗ್ಗೆ ಕಾಳಜಿಯಿಲ್ಲದಂತಾಗಿದೆ. ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿರುವ ಹಣವನ್ನು ಲೂಟಿ ಹೊಡೆಯಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿ ನೊಂದಾಯಿತ ಕಟ್ಟಡ ಕಾರ್ಮಿಕರು ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ಸಿಗಬೇಕಾದ ಸೌಲತ್ತುಗಳನ್ನು ಪಡೆದು ಕೊಳ್ಳಬೇಕಾದರೆ ಕಡ್ಡಾಯವಾಗಿ ಗುರುತಿನ ಚೀಟಿಗಳನ್ನು ಮಾಡಿಸಿಕೊಳ್ಳಬೇಕು. ಅಸಡ್ಡೆ ಸರಿಯಲ್ಲ ಎಂದರು.

ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ಹತ್ತು ಸಾವಿರ ಕೋಟಿ ರೂ.ಗಳಿದೆ. ಬಡವರಿಗೆ ಮನೆಗಳನ್ನು ಕಟ್ಟಿಸಿಕೊಡುತ್ತಿಲ್ಲ. ಭ್ರಷ್ಠಾಚಾರ ತಡೆಯಲು ಹೋರಾಟ ಮಾಡಬೇಕಿದೆ. ಕಾರ್ಮಿಕರಲ್ಲಿ ತಿಳುವಳಿಕೆ ಮೂಡಿದಾಗ ಮಾತ್ರ ಇಲಾಖೆಯಿಂದ ಸಿಗುವ ಸೌಲಭ್ಯಗಳನ್ನು ಪಡೆಯಲು ಸಾಧ್ಯ. ಕಾರ್ಮಿಕರ ಹೆಸರಿನಲ್ಲಿ ಹಣ ಲೂಟಿ ಮಾಡುತ್ತಿರುವವರ ವಿರುದ್ದ ಸೆಟೆದು ನಿಲ್ಲಬೇಕಾಗಿದೆ. ಕಾರ್ಮಿಕರ ಮಕ್ಕಳು ವಿದೇಶಕ್ಕೆ ಶಿಕ್ಷಣಕ್ಕೆ ಹೋಗಲು ಹಣಕಾಸಿನ ನೆರವು ಬೇಕು. ಆಳುವ ಸರ್ಕಾರಗಳು ಕಾರ್ಮಿಕರ ಕಷ್ಟ-ಸಮಸ್ಯೆಗಳನ್ನು ಕೇಳುತ್ತಿಲ್ಲ. ಕಾರ್ಮಿಕರ ಹಕ್ಕುಗಳಿಗಾಗಿ ಹೋರಾಟಗಳಾಗಿವೆ. ಗುರುತಿನ ಕಾರ್ಡ್ ನವೀಕರಣದ ಅವಧಿಯನ್ನು ಒಂದು ವರ್ಷದ ಬದಲಿಗೆ ಮೂರು ವರ್ಷಗಳಿಗೆ ನಿಗಧಿಪಡಿಸಬೇಕು. ಸೆಸ್ ಹಣ ವಸೂಲಿಯಾಗುತ್ತಿಲ್ಲ. ವೈದ್ಯಕೀಯ ಚಿಕಿತ್ಸೆ ಕಿಟ್ ಬೇಕಿಲ್ಲ. ಕಾರ್ಮಿಕರಿಗೆ ಮೂಲಭೂತ ಸೌಲಭ್ಯಗಳು ಬೇಕು ಎಂದರು.
ಕರ್ನಾಟಕ ರಾಜ್ಯ ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕರ ಕ್ಷೇಮಾಭಿವೃದ್ದಿ ಸಂಘದ ರಾಜ್ಯಾಧ್ಯಕ್ಷ ಜೆ.ಮಂಜುನಾಥ್ ಅಧ್ಯಕ್ಷತೆ ವಹಿಸಿದ್ದರು.ರಾಜ್ಯ ಉಪಾಧ್ಯಕ್ಷರುಗಳಾದ ಕೆ.ಗೌಸ್ಪೀರ್, ನಾದಿ ಅಲಿ, ಎಂ.ಆರ್. ನರಸಿಂಹಸ್ವಾಮಿ, ರಾಜ್ಯ ಖಜಾಂಚಿ ಡಿ.ಈಶ್ವರಪ್ಪ, ಚಾಂದ್ಪೀರ್, ಇಮಾಮ್ ಮೊಹಿದ್ದೀನ್, ಮುಜಿಬುಲ್ಲಾ, ವೈ. ಬಸವರಾಜ್, ಮಹಂತೇಶ್, ಸಲೀಂ, ರಾಜಣ್ಣ, ಮಾಯಣ್ಣ, ರಾಜಪ್ಪ ಸೇರಿದಂತೆ ಪದಾಧಿಕಾರಿಗಳು ವೇದಿಕೆಯಲ್ಲಿದ್ದರು.

