JEE Advanced 2026: ಜೆಇಇ ಕೀ ಆನ್ಸರ್ ಆಕ್ಷೇಪಣೆಗೆ ಮಂಗಳವಾರ ಸಂಜೆ 5ರವರೆಗೆ ಮಾತ್ರ ಅವಕಾಶ!

ವಿಶ್ವದ ಎರಡನೇ ಅತಿ ಕಠಿಣ ಪರೀಕ್ಷೆ ಎಂದೇ ಪರಿಗಣಿಸಲಾಗುವ ‘ಜೆಇಇ ಅಡ್ವಾನ್ಸ್ಡ್ 2026’ (JEE Advanced 2026) ಪರೀಕ್ಷೆಯ ತಾತ್ಕಾಲಿಕ ಕೀ ಉತ್ತರಗಳನ್ನು (Provisional Answer Key) ಐಐಟಿ ರೂರ್ಕಿ ಸೋಮವಾರ ಪ್ರಕಟಿಸಿದೆ. ವಿಶೇಷವೆಂದರೆ, ಈ ಬಾರಿಯ ಕೀ ಉತ್ತರಗಳ ಪ್ರಕಾರ ಯಾವುದೇ ಪ್ರಶ್ನೆಗೆ ‘ಬೋನಸ್ ಅಂಕ’ಗಳನ್ನು ನೀಡಲಾಗಿಲ್ಲ.

ಮೇ 17 ರಂದು ಯಶಸ್ವಿಯಾಗಿ ನಡೆದಿದ್ದ ಈ ಪರೀಕ್ಷೆಯ ಕೀ ಉತ್ತರಗಳ ಕುರಿತು ಆಕ್ಷೇಪಣೆಗಳಿದ್ದರೆ, ವಿದ್ಯಾರ್ಥಿಗಳು ಮಂಗಳವಾರ ಸಂಜೆ 5 ಗಂಟೆಯೊಳಗೆ ಮೇಲ್ಮನವಿ ಸಲ್ಲಿಸಲು ಕಾಲಾವಕಾಶ ನೀಡಲಾಗಿದೆ.

ಭೌತಶಾಸ್ತ್ರದ ಪ್ರಶ್ನೆಗೆ ಎರಡು ಸರಿ ಉತ್ತರ! ರಸಾಯನಶಾಸ್ತ್ರ (Chemistry) ಮತ್ತು ಗಣಿತ (Mathematics) ವಿಷಯಗಳ ಕೀ ಉತ್ತರಗಳಲ್ಲಿ ಯಾವುದೇ ದೋಷಗಳು ಕಂಡುಬಂದಿಲ್ಲ. ಆದರೆ, ಭೌತಶಾಸ್ತ್ರದ (Physics) ಪತ್ರಿಕೆ-1ರ ಮೊದಲ ವಿಭಾಗದಲ್ಲಿ ಕೇಳಲಾಗಿದ್ದ ರೇ-ಆಪ್ಟಿಕ್ಸ್ (Ray-Optics) ಅಧ್ಯಾಯದ ಒಂದು ಪ್ರಶ್ನೆಗೆ ಎರಡು ಆಯ್ಕೆಗಳನ್ನು ಸರಿಯುತ್ತರವೆಂದು ಪರಿಗಣಿಸಲಾಗಿದೆ. ಡಬಲ್ ಕಾನ್ವೆಕ್ಸ್ ಲೆನ್ಸ್‌ನ ಶಕ್ತಿಯ ಬದಲಾವಣೆ ಕುರಿತ ಗ್ರಾಫ್ ಆಧರಿಸಿದ್ದ ಈ ಪ್ರಶ್ನೆಗೆ, ಸರಿಯಾದ ಉತ್ತರ ನೀಡಿದ ವಿದ್ಯಾರ್ಥಿಗಳಿಗೆ 3 ಅಂಕಗಳು ದೊರೆಯಲಿದ್ದು, ತಪ್ಪಾದ ಉತ್ತರಕ್ಕೆ 1 ಅಂಕ (Negative marking) ಕಡಿತಗೊಳ್ಳಲಿದೆ.

ತಜ್ಞರ ವಿಶ್ಲೇಷಣೆ ಏನು? ಶಿಕ್ಷಣ ತಜ್ಞರಾದ ದೇವ್ ಶರ್ಮಾ ಅವರ ಪ್ರಕಾರ, ಈ ಬಾರಿಯ ತಾತ್ಕಾಲಿಕ ಉತ್ತರ ಪತ್ರಿಕೆಗಳಲ್ಲಿ ಯಾವುದೇ ಪ್ರಶ್ನೆಗಳನ್ನು ಬೋನಸ್ ಎಂದು ಪರಿಗಣಿಸಿಲ್ಲ. ಕಳೆದ ವರ್ಷ (ಜೆಇಇ ಅಡ್ವಾನ್ಸ್ಡ್ 2025) ಪತ್ರಿಕೆ-2ರ ಭೌತಶಾಸ್ತ್ರ ವಿಭಾಗದಲ್ಲಿ ಒಂದು ಪ್ರಶ್ನೆಗೆ ಬೋನಸ್ ಅಂಕ ನೀಡಲಾಗಿತ್ತು. ಆ ಪ್ರಶ್ನೆಗೆ ಉತ್ತರಿಸಲು ಪ್ರಯತ್ನಿಸಿದ ಹಾಗೂ ಪ್ರಯತ್ನಿಸದ ಎಲ್ಲ ವಿದ್ಯಾರ್ಥಿಗಳಿಗೂ ಅಂಕಗಳನ್ನು ಹಂಚಲಾಗಿತ್ತು. ಆದರೆ ಈ ವರ್ಷ ಅಂತಹ ಯಾವುದೇ ವಿನಾಯಿತಿ ಇಲ್ಲ.

ರ‍್ಯಾಂಕಿಂಗ್ ನಿರ್ಧರಿಸಲಿದೆ ಭೌತಶಾಸ್ತ್ರ: ಈ ವರ್ಷದ ಪರೀಕ್ಷೆಯಲ್ಲಿ ರಸಾಯನಶಾಸ್ತ್ರ ಮತ್ತು ಗಣಿತ ಪತ್ರಿಕೆಗಳು ಹೆಚ್ಚು ಕಠಿಣವಾಗಿದ್ದವು ಎಂದು ವಿದ್ಯಾರ್ಥಿಗಳು ಮತ್ತು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಹೀಗಾಗಿ, ಈ ಬಾರಿಯ ವಿದ್ಯಾರ್ಥಿಗಳ ಅಂತಿಮ ರ‍್ಯಾಂಕಿಂಗ್ (Rank) ಪಟ್ಟಿಯನ್ನು ನಿರ್ಧರಿಸುವಲ್ಲಿ ‘ಭೌತಶಾಸ್ತ್ರ’ ವಿಷಯವೇ ಅತ್ಯಂತ ನಿರ್ಣಾಯಕ ಪಾತ್ರ ವಹಿಸಲಿದೆ ಎನ್ನಲಾಗಿದೆ.

ಈ ವರ್ಷ ಒಟ್ಟು 1.88 ಲಕ್ಷ ವಿದ್ಯಾರ್ಥಿಗಳು ಜೆಇಇ ಅಡ್ವಾನ್ಸ್ಡ್ ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದರು, ಅವರಲ್ಲಿ ಸುಮಾರು 1.80 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದಾರೆ.

Leave a Reply

Your email address will not be published. Required fields are marked *