ತೆರಿಗೆ ಪಾವತಿದಾರರಿಗೆ ರಿಟರ್ನ್ಸ್ (ITR) ಸಲ್ಲಿಸುವ ಪ್ರಕ್ರಿಯೆಯನ್ನು ಮತ್ತಷ್ಟು ಸರಳಗೊಳಿಸುವ ನಿಟ್ಟಿನಲ್ಲಿ ಆದಾಯ ತೆರಿಗೆ ಇಲಾಖೆಯು ಹೊಸ ವಿಡಿಯೋ ಮಾರ್ಗದರ್ಶಿಯನ್ನು ಬಿಡುಗಡೆ ಮಾಡಿದೆ. ಕಡ್ಡಾಯವಾಗಿ ತೆರಿಗೆ ಪಾವತಿಸಬೇಕಾದವರು ಹಾಗೂ ರಿಟರ್ನ್ಸ್ ಸಲ್ಲಿಸುವ ಬಾಧ್ಯತೆ ಹೊಂದಿರುವವರ ಅನುಕೂಲಕ್ಕಾಗಿ, ವಿಶೇಷವಾಗಿ ITR-1 (ಸಹಜ್) ಫಾರ್ಮ್ ಅನ್ನು ದೋಷರಹಿತವಾಗಿ ಹೇಗೆ ಭರ್ತಿ ಮಾಡಬೇಕು ಎಂಬುದನ್ನು ಈ ವಿಡಿಯೋದಲ್ಲಿ ಎಳೆಎಳೆಯಾಗಿ ವಿವರಿಸಲಾಗಿದೆ.
ಐಟಿ ಇಲಾಖೆ ಪೋಸ್ಟ್ ಮಾಡಿದ ವಿಡಿಯೋ
ಯಾರೆಲ್ಲಾ ITR-1 (ಸಹಜ್) ಫಾರ್ಮ್ ಬಳಸಬಹುದು?
ಈ ಕೆಳಗಿನ ವರ್ಗಗಳಿಗೆ ಸೇರಿದ ತೆರಿಗೆದಾರರು ITR-1 ನಮೂನೆಯನ್ನು ಬಳಸಲು ಅರ್ಹರಾಗಿರುತ್ತಾರೆ:
- ವೇತನ (Salary) ಅಥವಾ ಪಿಂಚಣಿಯ (Pension) ಮೂಲಕ ಆದಾಯ ಪಡೆಯುತ್ತಿರುವವರು.
- ಗರಿಷ್ಠ ಎರಡು ಮನೆಗಳ ಮಾಲೀಕತ್ವ ಹೊಂದಿರುವವರು.
- ಕುಟುಂಬ ಪಿಂಚಣಿ (Family Pension) ಪಡೆಯುತ್ತಿರುವವರು.
- ಕೃಷಿ ಮೂಲದಿಂದ ವಾರ್ಷಿಕ ₹5,000 ವರೆಗೆ ಆದಾಯ ಹೊಂದಿರುವವರು.
- ದೀರ್ಘಾವಧಿ ಬಂಡವಾಳ ಲಾಭದ (Long Term Capital Gain) ಅಡಿಯಲ್ಲಿ ₹1.25 ಲಕ್ಷದವರೆಗೆ ತೆರಿಗೆ ಬಾಧ್ಯತೆ ಇರುವವರು.
- ಬ್ಯಾಂಕ್ ಉಳಿತಾಯ ಖಾತೆ, ನಿಶ್ಚಿತ ಠೇವಣಿ (FD) ಅಥವಾ ಆದಾಯ ತೆರಿಗೆಯ ರೀಫಂಡ್‌ನಿಂದ ಬಡ್ಡಿ ಪಡೆಯುತ್ತಿರುವವರು.
ಆನ್‌ಲೈನ್‌ನಲ್ಲಿ ITR-1 ಸಲ್ಲಿಸುವ 16 ಹಂತಗಳ ಸರಳ ಪ್ರಕ್ರಿಯೆ
ಹಂತ 1: ಮೊದಲಿಗೆ ಆದಾಯ ತೆರಿಗೆ ಇಲಾಖೆಯ ಅಧಿಕೃತ ವೆಬ್‌ಸೈಟ್ (incometax.gov.in) ಗೆ ಭೇಟಿ ನೀಡಿ, ನಿಮ್ಮ ಖಾತೆಗೆ ಲಾಗಿನ್ ಆಗಿ.
ಹಂತ 2: ಮುಖಪುಟದಲ್ಲಿರುವ (Home Page) e-File ವಿಭಾಗಕ್ಕೆ ಹೋಗಿ, Income Tax Returns ಅನ್ನು ಆಯ್ಕೆ ಮಾಡಿ, ಆನಂತರ File Income Tax Return ಮೇಲೆ ಕ್ಲಿಕ್ ಮಾಡಿ.
ಹಂತ 3: ಮುಂದಿನ ಪುಟದಲ್ಲಿ ಮೌಲ್ಯಮಾಪನ ವರ್ಷ (Assessment Year) ‘2026-27’ ಎಂದು ಆಯ್ಕೆ ಮಾಡಿ, ಫೈಲಿಂಗ್ ಮೋಡ್ ಅನ್ನು ‘Online’ ಎಂದು ನಿರ್ಧರಿಸಿ.
ಹಂತ 4: ಹೊಸದಾಗಿ ಪ್ರಕ್ರಿಯೆ ಆರಂಭಿಸಲು Start New Filing ಮೇಲೆ ಕ್ಲಿಕ್ ಮಾಡಿ. (ಈಗಾಗಲೇ ಅರ್ಧ ತುಂಬಿ ಸೇವ್ ಮಾಡಿದ್ದರೆ Resume Filing ಬಳಸಬಹುದು).
ಹಂತ 5: ನಿಮ್ಮ ತೆರಿಗೆಯ ಸ್ಟೇಟಸ್ ಅನ್ನು Individual (ವೈಯಕ್ತಿಕ) ಎಂದು ಆಯ್ಕೆ ಮಾಡಿ, ಮುಂದಕ್ಕೆ ಸಾಗಿ. ಹಂತ 6: ಲಭ್ಯವಿರುವ ಫಾರ್ಮ್‌ಗಳ ಪಟ್ಟಿಯಲ್ಲಿ (Dropdown menu) ITR-1 (Sahaj) ಅನ್ನು ಆಯ್ಕೆ ಮಾಡಿಕೊಳ್ಳಿ.
ಹಂತ 7: ಯಾವ ಫಾರ್ಮ್ ಸೂಕ್ತ ಎಂಬ ಗೊಂದಲವಿದ್ದರೆ, ಅಲ್ಲಿಯೇ ಇರುವ Help me decide which ITR form to file ಎಂಬ ಆಯ್ಕೆಯನ್ನು ಬಳಸಿಕೊಳ್ಳಬಹುದು.
ಹಂತ 8: ಪರದೆಯ ಮೇಲೆ ಕಾಣಿಸುವ ಅಗತ್ಯ ದಾಖಲೆಗಳ ಪಟ್ಟಿಯನ್ನು (Document Checklist) ಪರಿಶೀಲಿಸಿ, Let’s get started ಬಟನ್ ಒತ್ತಿ.
ಹಂತ 9: ನೀವು ಯಾವ ಕಾರಣಕ್ಕಾಗಿ ಐಟಿಆರ್ ಸಲ್ಲಿಸುತ್ತಿದ್ದೀರಿ ಎಂಬುದನ್ನು ನಮೂದಿಸಿ (ಉದಾಹರಣೆಗೆ: ನಿಮ್ಮ ಆದಾಯವು ಮೂಲ ವಿನಾಯಿತಿ ಮಿತಿಗಿಂತ ಹೆಚ್ಚಿದ್ದರೆ ಸಂಬಂಧಿತ ಆಯ್ಕೆಯನ್ನು ಟಿಕ್ ಮಾಡಿ).
ಹಂತ 10: ಇದೀಗ ಪರದೆಯ ಮೇಲೆ ಈಗಾಗಲೇ ಭರ್ತಿಯಾಗಿರುವ (Pre-filled) ಮಾಹಿತಿಗಳು ಕಾಣಿಸುತ್ತವೆ. ಇದನ್ನು ನಿಮ್ಮ ವಾರ್ಷಿಕ ಮಾಹಿತಿ ಹೇಳಿಕೆ (AIS) ಮತ್ತು ಫಾರ್ಮ್ 26AS ಜೊತೆ ತಾಳೆ ನೋಡಿ. ವ್ಯತ್ಯಾಸಗಳಿದ್ದರೆ ಎಡಿಟ್ ಮಾಡಿ.
ಹಂತ 11: ನಿಮ್ಮ ಆದಾಯ ಹಾಗೂ ಹೂಡಿಕೆಗಳ ಕಡಿತದ (Income & Deductions) ನಿಖರ ವಿವರಗಳನ್ನು ಸಂಬಂಧಪಟ್ಟ ಕಾಲಂಗಳಲ್ಲಿ ಜಾಗರೂಕತೆಯಿಂದ ನಮೂದಿಸಿ.
ಹಂತ 12 (ಎ): ಈಗ Tax Computation (ತೆರಿಗೆ ಲೆಕ್ಕಾಚಾರ) ಪುಟವನ್ನು ಪರಿಶೀಲಿಸಿ. ನೀವು ಇಲಾಖೆಗೆ ತೆರಿಗೆ ಕಟ್ಟಲು ಬಾಕಿ ಇದ್ದರೆ, Pay Now ಆಯ್ಕೆ ಮೂಲಕ ಆನ್‌ಲೈನ್‌ನಲ್ಲೇ ಹಣ ಪಾವತಿಸಿ, ಮರಳಿ ಫೈಲಿಂಗ್ ಪುಟಕ್ಕೆ ಬನ್ನಿ.
ಹಂತ 12 (ಬಿ): ನಿಮಗೆ ಯಾವುದೇ ತೆರಿಗೆ ಬಾಕಿ ಇಲ್ಲದಿದ್ದರೆ ಅಥವಾ ರೀಫಂಡ್ ಬರಬೇಕಾಗಿದ್ದರೆ, ನೇರವಾಗಿ ಮುಂದಿನ ಹಂತಕ್ಕೆ ತೆರಳಿ. (ಸೂಚನೆ: ನೀವು ಪಾವತಿಸಿದ ತೆರಿಗೆ ವಿವರಗಳು ಆಟೋ-ಅಪ್ಡೇಟ್ ಆಗದಿದ್ದರೆ, Tax Paid ವಿಭಾಗದಲ್ಲಿ Add Another ಮೂಲಕ ಮ್ಯಾನುಯಲ್ ಆಗಿ ವಿವರಗಳನ್ನು ಸೇರಿಸಬಹುದು).
ಹಂತ 13: ನಮೂದಿಸಿದ ಎಲ್ಲಾ ಮಾಹಿತಿಗಳು ಸರಿಯಾಗಿವೆ ಎಂಬುದನ್ನು ಖಚಿತಪಡಿಸಿಕೊಂಡು ಸ್ವಯಂ-ಘೋಷಣೆಗೆ (Declaration) ಒಪ್ಪಿಗೆ ಸೂಚಿಸಿ Validation ಕಡೆಗೆ ಹೆಜ್ಜೆ ಹಾಕಿ.
ಹಂತ 14: ಸಿಸ್ಟಂನ ಆಂತರಿಕ ವ್ಯಾಲಿಡೇಶನ್ ಮುಗಿದ ಬಳಿಕ, Preview ಬಟನ್ ಒತ್ತಿ ಇಡೀ ಫಾರ್ಮ್ ಅನ್ನು ಒಮ್ಮೆ ಕಣ್ಣಾಡಿಸಿ. ತಪ್ಪುಗಳಿಲ್ಲ ಎಂದು ದೃಢಪಟ್ಟರೆ Proceed to Validation ಕ್ಲಿಕ್ ಮಾಡಿ. (ಏನಾದರೂ ತಪ್ಪುಗಳಿದ್ದರೆ ಸಿಸ್ಟಂ ಸೂಚನೆ ನೀಡುತ್ತದೆ, ಅದನ್ನು ಸರಿಪಡಿಸಿ).
ಹಂತ 15: ಈ ಪ್ರಕ್ರಿಯೆ ಮುಗಿದ ತಕ್ಷಣ, ವೆರಿಫಿಕೇಶನ್‌ಗಾಗಿ Proceed to Verification ಆಯ್ಕೆಯನ್ನು ಒತ್ತಿ. ಹಂತ 16: ಕೊನೆಯ ಹಂತವಾಗಿ, ಆನ್‌ಲೈನ್ ಮೂಲಕ ಸುಲಭವಾಗಿ ಇ-ವೆರಿಫಿಕೇಶನ್ (ಇ-ಪರಿಶೀಲನೆ) ಮಾಡಲು ಆಧಾರ್ ಒಟಿಪಿ (Aadhaar OTP) ಅಥವಾ ಇನ್ಯಾವುದೇ ಸೂಕ್ತ ವಿಧಾನವನ್ನು ಆಯ್ಕೆ ಮಾಡಿ, ಪ್ರಕ್ರಿಯೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ.
ಗಮನಿಸಿ: ಸಲ್ಲಿಕೆ ಪ್ರಕ್ರಿಯೆ ಸಂಪೂರ್ಣಗೊಂಡ ಬಳಿಕ ನಿಮ್ಮ ಪರದೆಯ ಮೇಲೆ “ನಿಮ್ಮ ITR-1 ಫೈಲಿಂಗ್ ಯಶಸ್ವಿಯಾಗಿದೆ” ಎಂಬ ಸಂದೇಶ ಮೂಡುತ್ತದೆ. ಯಾವುದೇ ಕಾರಣಕ್ಕೂ ಇ-ವೆರಿಫಿಕೇಶನ್ ಹಂತವನ್ನು ಮರೆಯದಿರಿ, ಇಲ್ಲವಾದಲ್ಲಿ ರಿಟರ್ನ್ಸ್ ಸಲ್ಲಿಕೆ ಅಪೂರ್ಣವೆಂದು ಪರಿಗಣಿಸಲಾಗುತ್ತದೆ.
ITR-1 ಸಲ್ಲಿಸುವ ಮುನ್ನ ನಿಮ್ಮ ಬಳಿ ಇರಬೇಕಾದ ಪ್ರಮುಖ ದಾಖಲೆಗಳು
ರಿಟರ್ನ್ಸ್ ಸಲ್ಲಿಸಲು ಕುಳಿತುಕೊಳ್ಳುವ ಮುನ್ನ ಈ ಕೆಳಗಿನ ದಾಖಲೆಗಳನ್ನು ಸಿದ್ಧವಾಗಿಟ್ಟುಕೊಳ್ಳಿ:
- ಪ್ಯಾನ್ ಮತ್ತು ಆಧಾರ್: ಪ್ಯಾನ್ ಕಾರ್ಡ್ (PAN) ಮತ್ತು ಆಧಾರ್ ಕಾರ್ಡ್ (Aadhaar) ಕಡ್ಡಾಯ ಹಾಗೂ ಇವೆರಡೂ ಲಿಂಕ್ ಆಗಿರುವುದು ಅವಶ್ಯಕ.
- ಫಾರ್ಮ್ 16 (Form 16): ವೇತನ ಪಡೆಯುವ ನೌಕರರು (ಶಿಕ್ಷಕರು, ಸರ್ಕಾರಿ ಮತ್ತು ಖಾಸಗಿ ಉದ್ಯೋಗಿಗಳು) ತಮ್ಮ ಸಂಸ್ಥೆ ಅಥವಾ ಇಲಾಖೆಯಿಂದ ಪಡೆದ ಫಾರ್ಮ್ 16 ದಾಖಲೆ.
- ಬ್ಯಾಂಕ್ ಖಾತೆಯ ವಿವರಗಳು: ನಿಮ್ಮ ಹೆಸರಿನಲ್ಲಿರುವ ಎಲ್ಲಾ ಸಕ್ರಿಯ ಬ್ಯಾಂಕ್ ಖಾತೆಗಳ ಮಾಹಿತಿ ಹಾಗೂ ರೀಫಂಡ್ ಪಡೆಯಲು ಒಂದು ಖಾತೆಯನ್ನು ‘Pre-validate’ ಮಾಡಿರಬೇಕು.
- ಹೂಡಿಕೆಗಳ ಪುರಾವೆಗಳು: ಸೆಕ್ಷನ್ 80C ಅಡಿಯಲ್ಲಿ ತೆರಿಗೆ ವಿನಾಯಿತಿ ಪಡೆಯಲು ನೀವು ಮಾಡಿರುವ ಹೂಡಿಕೆಗಳು (ಉದಾಹರಣೆಗೆ: ಪಿಪಿಎಫ್ (PPF), ಮ್ಯೂಚುವಲ್ ಫಂಡ್ (ELSS), ಸುಕನ್ಯಾ ಸಮೃದ್ಧಿ ಯೋಜನೆ, ಎಲ್ಐಸಿ, ಇತ್ಯಾದಿ) ಹಾಗೂ ಮನೆ ಬಾಡಿಗೆ ರಸೀದಿ (HRA).
ನಿಗದಿತ ಅವಧಿಯೊಳಗೆ ಐಟಿಆರ್ (ITR) ಸಲ್ಲಿಸುವುದರ ಪ್ರಮುಖ ಪ್ರಯೋಜನಗಳು
ಆದಾಯ ತೆರಿಗೆ ಮಿತಿಯೊಳಗೆ ಇಲ್ಲದಿದ್ದರೂ, ಶೂನ್ಯ (Nil) ಐಟಿಆರ್ ಸಲ್ಲಿಸುವುದರಿಂದ ಹಲವು ಲಾಭಗಳಿವೆ:
- ಸಾಲ ಪಡೆಯಲು ಸುಲಭ: ಗೃಹ ಸಾಲ (Home Loan), ವಾಹನ ಸಾಲ ಅಥವಾ ವೈಯಕ್ತಿಕ ಸಾಲ ಪಡೆಯುವಾಗ ಬ್ಯಾಂಕ್‌ಗಳು 2 ರಿಂದ 3 ವರ್ಷಗಳ ITR ಪ್ರತಿಯನ್ನು ಕಡ್ಡಾಯವಾಗಿ ಕೇಳುತ್ತವೆ. ಇದು ನಿಮ್ಮ ಆದಾಯದ ಅಧಿಕೃತ ದೃಢೀಕರಣವಾಗಿ ಕೆಲಸ ಮಾಡುತ್ತದೆ.
- ವೀಸಾ ಪ್ರಕ್ರಿಯೆಗೆ ಅನುಕೂಲ: ವಿದೇಶ ಪ್ರಯಾಣಕ್ಕೆ ವೀಸಾ (Visa) ಪಡೆಯಲು ITR ಸಲ್ಲಿಕೆಯ ದಾಖಲೆ ಬಹುಮುಖ್ಯ.
- ಟಿಡಿಎಸ್ (TDS) ರೀಫಂಡ್: ನಿಮ್ಮ ಬ್ಯಾಂಕ್ ಎಫ್‌ಡಿ (FD) ಅಥವಾ ಇತರ ಆದಾಯದ ಮೇಲೆ ಹೆಚ್ಚುವರಿ ಟಿಡಿಎಸ್ ಕಡಿತವಾಗಿದ್ದರೆ, ಐಟಿಆರ್ ಸಲ್ಲಿಸುವ ಮೂಲಕ ಆ ಹಣವನ್ನು ಮರಳಿ (Refund) ಪಡೆಯಬಹುದು.
ದಂಡದ ಎಚ್ಚರಿಕೆ (Penalty for late filing)
ಸಾಮಾನ್ಯವಾಗಿ ವೈಯಕ್ತಿಕ ತೆರಿಗೆದಾರರಿಗೆ ಐಟಿಆರ್ ಸಲ್ಲಿಸಲು ಜುಲೈ 31 ಅಂತಿಮ ದಿನಾಂಕವಾಗಿರುತ್ತದೆ. ಒಂದು ವೇಳೆ ಈ ಗಡುವನ್ನು ಮೀರಿದರೆ, ಆದಾಯ ತೆರಿಗೆ ಕಾಯ್ದೆ ಸೆಕ್ಷನ್ 234F ಅಡಿಯಲ್ಲಿ ₹1,000 ದಿಂದ ₹5,000 ವರೆಗೆ ದಂಡ (Late Fee) ಪಾವತಿಸಬೇಕಾಗಬಹುದು.