ಚಿತ್ರದುರ್ಗ| NEET ಪರೀಕ್ಷೆ ಅಕ್ರಮ ಆರೋಪಗಳ ಕುರಿತು ಪಾರದರ್ಶಕ ತನಿಖೆಗೆ ಆಗ್ರಹ: ಜೂನ್ 6ರಂದು NSUI ಪಂಜಿನ ಮೆರವಣಿಗೆ.

ಚಿತ್ರದುರ್ಗ ಜೂ. 05

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

NEET ಪರೀಕ್ಷೆಯಲ್ಲಿನ ಎಲ್ಲಾ ಅಕ್ರಮಗಳ ಆರೋಪಗಳ ಕುರಿತು ಸ್ವತಂತ್ರ ಮತ್ತು ಪಾರದರ್ಶಕ ತನಿಖೆ ನಡೆಸಬೇಕು. ಪ್ರಶ್ನೆಪತ್ರಿಕೆ ಸೋರಿಕೆ ಅಥವಾ ಪರೀಕ್ಷಾ ಅಕ್ರಮಗಳಲ್ಲಿ ಭಾಗಿಯಾಗಿರುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ವಿದ್ಯಾರ್ಥಿ ಆತ್ಮಹತ್ಯೆ ಪ್ರಕರಣದ ಕುರಿತು ಸಮಗ್ರ ತನಿಖೆ ನಡೆಸಿ ಸತ್ಯಾಂಶವನ್ನು ಸಾರ್ವಜನಿಕರ ಮುಂದೆ ತರಬೇಕು ಎಂದು ಕೇಂಧ್ರ ಸರ್ಕಾರವನ್ನು ರಾಷ್ಟ್ರೀಯ ವಿದ್ಯಾರ್ಥಿ ಕಾಂಗ್ರೆಸ್ ಕರ್ನಾಟಕ ಹಾಗೂ ಕರ್ನಾಟಕ ರಾಜ್ಯ ಡಿ ದೇವರಾಜು ಅರಸು ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಕೀರ್ತಿ ಗಣೇಶ್ ಆಗ್ರಹಿಸಿದ್ದಾರೆ.

ಚಿತ್ರದುರ್ಗ ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಶುಕ್ರವಾರ ಭಾರತ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟ, ಕರ್ನಾಟಕ ಭಾರತೀಯ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟ ಕರ್ನಾಟಕದವತಿಯಿಂದ ಏರ್ಪಡಿಸಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, NEET ಪರೀಕ್ಷೆ ವೈದ್ಯಕೀಯ ಶಿಕ್ಷಣದ ಕನಸು ಕಾಣುವ ವಿದ್ಯಾರ್ಥಿಗಳಿಗೆ ಅತ್ಯಂತ ಮಹತ್ವದ ಪರೀಕ್ಷೆಯಾಗಿದೆ. ಆದರೆ ಕಳೆದ ಕೆಲವು ವರ್ಷಗಳಿಂದ ಪ್ರಶ್ನೆಪತ್ರಿಕೆ ಸೋರಿಕೆ ಆರೋಪಗಳು, ಪರೀಕ್ಷಾ ಪ್ರಕ್ರಿಯೆಯಲ್ಲಿನ ಅಕ್ರಮಗಳ ಬಗ್ಗೆ ಕೇಳಿ ಬರುತ್ತಿರುವ ಹಾಗೂ ಇತ್ತೀಚಿನ ವಿದ್ಯಾರ್ಥಿಗಳ ಆತ್ಮಹತ್ಯೆ ಘಟನೆ, ವಿದ್ಯಾರ್ಥಿಗಳು ಮತ್ತು ಪೋಷಕರಲ್ಲಿ ತೀವ್ರ ಆತಂಕ ಉಂಟುಮಾಡಿವೆ. ಒಬ್ಬ ಯುವ ವಿದ್ಯಾರ್ಥಿಯ ಜೀವ ಕಳೆದುಹೋಗಿರುವುದು ಇಡೀ ಸಮಾಜಕ್ಕೆ ಎಚ್ಚರಿಕೆಯ ಗಂಟೆಯಾಗಿದೆ. 2015ರಲ್ಲಿ ವೈದ್ಯಕೀಯ ಪ್ರವೇಶ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ ಹಿನ್ನೆಲೆಯಲ್ಲಿ ಮರುಪರೀಕ್ಷೆ ನಡೆಸಬೇಕಾದ ಪರಿಸ್ಥಿತಿ ಉಂಟಾಗಿತ್ತು. 2024ರ NEET ಪರೀಕ್ಷೆಯಲ್ಲಿಯೂ ಪ್ರಶ್ನೆಪತ್ರಿಕೆ ಸೋರಿಕೆ ಆರೋಪಗಳು ರಾಷ್ಟ್ರವ್ಯಾಪಿ ಚರ್ಚೆಗೆ ಕಾರಣವಾದವು. ಇಂತಹ ಘಟನೆಗಳು ಪದೆ ಪದೆ ನಡೆಯುತ್ತಿರುವುದು ಪರೀಕ್ಷಾ ವ್ಯವಸ್ಥೆಯ ಮೇಲಿನ ವಿದ್ಯಾರ್ಥಿಗಳ ವಿಶ್ವಾಸವನ್ನು ಕುಂದಿಸುತ್ತಿದೆ ಎಂದು ಅಂತಕವನ್ನು ವ್ಯಕ್ತಪಡಿಸಿದರು.

ಲಕ್ಷಾಂತರ ವಿದ್ಯಾರ್ಥಿಗಳು ವರ್ಷಗಳ ಕಾಲ ಶ್ರಮಿಸುತ್ತಾರೆ. ಕುಟುಂಬಗಳು ತಮ್ಮ ಮಕ್ಕಳ ಭವಿಷ್ಯಕ್ಕಾಗಿ ತ್ಯಾಗ ಮಾಡುತ್ತವೆ. ಆದರೆ ಪರೀಕ್ಷಾ ವ್ಯವಸ್ಥೆಯ ಪಾರದರ್ಶಕತೆ ಕುರಿತು ಅನುಮಾನಗಳು ಮೂಡಿದಾಗ ಅದರ ಹೊರೆ ವಿದ್ಯಾರ್ಥಿಗಳ ಮನಸ್ಸಿನ ಮೇಲೆ ಬೀಳುತ್ತದೆ. ವಿದ್ಯಾರ್ಥಿಗಳಿಗೆ ಮಾನಸಿಕ ಆರೋಗ್ಯ ನೆರವು ಮತ್ತು ಸಮಾಲೋಚನಾ ವ್ಯವಸ್ಥೆಯನ್ನು ಬಲಪಡಿಸಬೇಕು. ಭವಿಷ್ಯದಲ್ಲಿ ಯಾವುದೇ ರೀತಿಯ ಪೇಪರ್ ಲೀಕ್ ಅಥವಾ ಅಕ್ರಮಗಳು ನಡೆಯದಂತೆ ಅತ್ಯಾಧುನಿಕ ಭದ್ರತಾ ಕ್ರಮಗಳನ್ನು ಕೇಂದ್ರ ಸರ್ಕಾರ ಜಾರಿಗೆ ತರಬೇಕು. ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿಯ 12ನೇ ತರಗತಿಯ ‘ಆನ್-ಸ್ಕಿನ್ ಮಾಕಿರ್‍ಂಗ್’ ಅಂಕಗಳ ಹಂಚಿಕೆಯಲ್ಲಿನ ಗೊಂದಲ ಮತ್ತು ಅಕ್ರಮ ತನಿಖೆ ನಡೆಸಬೇಕು ಎಂದು ಕೇಂದ್ರ ಸರ್ಕಾರವನ್ನು ಆಗ್ರಹಿಸಿದರು.

ಎನ್ ಎಸ್ ಯು ಐ ಜಿಲ್ಲಾಧ್ಯಕ್ಷ ಕಿರಣ್ ಯಾದವ್ ಮಾತನಾಡಿ, ವಿದ್ಯಾರ್ಥಿಗಳಿಗೆ ನ್ಯಾಯ ಸಿಗಬೇಕು. ಪರೀಕ್ಷಾ ವ್ಯವಸ್ಥೆಯಲ್ಲಿ ಪಾರದರ್ಶಕತೆ ಬರಬೇಕು. ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕೆಂದು ಅಗ್ರಹಿಸಿ ಚಿತ್ರದುರ್ಗ ನಗರದಲ್ಲಿ ಜೂನ್ 06ರಂದು ಸಂಜೆ 5ಗಂಟೆಗೆ ನೀಲಕಂಠೇಶ್ವರ ದೇವಸ್ಥಾನದಿಂದ ಡಿಸಿ ಸರ್ಕಲ್‍ವರೆಗೆ ಪಂಜಿನ ಮೆರವಣಿಗೆ ಆಯೋಜಿಸಿದ್ದು ಜಿಲ್ಲೆಯ ಎಲ್ಲಾ ವಿಧ್ಯಾರ್ಥಿಗಳು ಆಗಮಿಸಿ ಹೋರಾಟವನ್ನು ಯಶಸ್ವಿಗೊಳಿಸಬೇಕಾಗಿ ಮನವಿ ಮಾಡಿ ನಮ್ಮ ಹೋರಾಟ ಯಾವುದೇ ರಾಜಕೀಯ ಉದ್ದೇಶಕ್ಕಾಗಿ ಅಲ್ಲ. ಇದು ವಿದ್ಯಾರ್ಥಿಗಳ ನ್ಯಾಯಕ್ಕಾಗಿ, ಅವರ ಭವಿಷ್ಯಕ್ಕಾಗಿ ಮತ್ತು ಶಿಕ್ಷಣ ವ್ಯವಸ್ಥೆಯ ವಿಶ್ವಾಸಾರ್ಹತೆಯನ್ನು ಉಳಿಸುವುದಕ್ಕಾಗಿ. ನಿಮ್ಮ ಜೀವನ ಯಾವುದೇ ಪರೀಕ್ಷೆಗಿಂತ ಅಮೂಲ್ಯವಾದದ್ದು. ಸಂಕಷ್ಟದ ಸಮಯದಲ್ಲಿ ಕುಟುಂಬ, ಸ್ನೇಹಿತರು, ಶಿಕ್ಷಕರು ಮತ್ತು ತಜ್ಞರ ನೆರವು ಪಡೆಯಿರಿ ಎಂದು ಸಲಹೆಯನ್ನು ನೀಡಿದರು.

ಪತ್ರಿಕಾ ಗೋಷ್ಟಿಯಲ್ಲಿ ಡಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಕೆ. ಪಿ. ಸಂಪತ್ ಕುಮಾರ್, ಮೈಲಾರಪ್ಪ, ಓಬಿಸಿ ಅಧ್ಯಕ್ಷ ಎನ್.ಡಿ.ಕುಮಾರ್, ಪ್ರಕಾಶ್‍ರಾಮನಾಯ್ಕ, ರಫೀ, ಶಶಾಂಕ್ ಮೂರ್ತಿ, ಸೇರಿದಂತೆ ಇತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *