ಏಷ್ಯನ್ ಕ್ರೀಡಾಕೂಟ: ಆರ್ಚರಿಯಲ್ಲಿ ಭಾರತಕ್ಕೆ 2 ಚಿನ್ನದ ಪದಕ; ಒಲಿಂಪಿಕ್ಸ್‌ಗೆ ನೇರ ಅರ್ಹತೆ ಪಡೆದ ಮಿಶ್ರ ತಂಡ.

ಏಷ್ಯನ್ ಕ್ರೀಡಾಕೂಟದಲ್ಲಿ ಭಾರತದ ಬಿಲ್ಲುಗಾರರು ಅದ್ಭುತ ಸಾಧನೆ ಮೆರೆದಿದ್ದು, ಒಂದೇ ದಿನ ಆರ್ಚರಿಯಲ್ಲಿ (ಬಿಲ್ಲುಗಾರಿಕೆ) ಎರಡು ಚಿನ್ನದ ಪದಕಗಳನ್ನು ಭಾರತದ ಮುಡಿಗೇರಿಸಿದ್ದಾರೆ. ಮಹಿಳಾ ಕಾಂಪೌಂಡ್ ಆರ್ಚರಿ ತಂಡ ಹಾಗೂ ಮಿಶ್ರ ಆರ್ಚರಿ ತಂಡಗಳು ಫೈನಲ್‌ನಲ್ಲಿ ಅಮೋಘ ಪ್ರದರ್ಶನ ನೀಡಿ ದೇಶಕ್ಕೆ ಕೀರ್ತಿ ತಂದಿವೆ. ವಿಶೇಷವೆಂದರೆ, ಈ ಎರಡೂ ಚಿನ್ನದ ಪದಕ ವಿಜೇತ ತಂಡಗಳಲ್ಲಿ ಸ್ಥಾನ ಪಡೆದಿದ್ದ ಚಿಕಿತಾ ತನಿಪರ್ತಿ ಭಾರತದ ಪಾಲಿನ ‘ಗೋಲ್ಡನ್ ಗರ್ಲ್’ ಆಗಿ ಹೊರಹೊಮ್ಮಿದ್ದಾರೆ.

ಮಹಿಳಾ ಕಾಂಪೌಂಡ್ ತಂಡದ ಪಾರುಪತ್ಯ ಮಹಿಳಾ ಕಾಂಪೌಂಡ್ ಆರ್ಚರಿ ಟೀಮ್ ವಿಭಾಗದ ಫೈನಲ್ ಪಂದ್ಯದಲ್ಲಿ ಜ್ಯೋತಿ ಸುರೇಖಾ, ಚಿಕಿತಾ ತನಿಪರ್ತಿ ಮತ್ತು ಪ್ರೀತಿಕಾ ಪ್ರದೀಪ್ ಅವರನ್ನೊಳಗೊಂಡ ಭಾರತ ತಂಡವು ಬಲಿಷ್ಠ ಚೀನಾ ತಂಡವನ್ನು ಎದುರಿಸಿತು. ಪಂದ್ಯದ ಆರಂಭದಿಂದಲೇ ಪ್ರಾಬಲ್ಯ ಸಾಧಿಸಿದ ಭಾರತ, ಮೊದಲ ಹಂತದಲ್ಲಿಯೇ ಎದುರಾಳಿಯ ಮೇಲೆ ಒತ್ತಡ ಹೇರಿತು. ಚೀನಾ ಸತತ ಮೂರು ಸುತ್ತುಗಳಲ್ಲಿ 9 ಅಂಕಗಳನ್ನು ಗಳಿಸಿದರೆ, ಇದಕ್ಕೆ ಪ್ರತಿಯಾಗಿ ಭಾರತದ ಚಿಖಿತಾ, ಪ್ರೀತಿಕಾ ಮತ್ತು ಜ್ಯೋತಿ ನಿಖರವಾಗಿ ಗುರಿಭೇದಿಸಿ ತಲಾ 10 ಅಂಕಗಳನ್ನು ಗಳಿಸುವ ಮೂಲಕ ಆರಂಭಿಕ ಮುನ್ನಡೆ ಒದಗಿಸಿದರು.

ಮೊದಲ ಸುತ್ತಿನಲ್ಲಿ ಭಾರತ 60 ಅಂಕ ಕಲೆಹಾಕಿದರೆ, ಚೀನಾ 58 ಅಂಕಗಳಿಗೆ ತೃಪ್ತಿಪಟ್ಟಿತು. ಇದೇ ಮುನ್ನಡೆಯನ್ನು ಕೊನೆಯವರೆಗೂ ಕಾಯ್ದುಕೊಂಡ ಭಾರತ ತಂಡವು, ಒಟ್ಟು ನಾಲ್ಕು ಸುತ್ತುಗಳ ಮುಕ್ತಾಯಕ್ಕೆ 238-234 ಅಂಕಗಳ ಅಂತರದಿಂದ (4 ಅಂಕಗಳ ಲೀಡ್) ಚೀನಾವನ್ನು ಮಣಿಸಿ ಚಿನ್ನದ ಪದಕಕ್ಕೆ ಮುತ್ತಿಕ್ಕಿತು. ಸೋತ ಚೀನಾ ಬೆಳ್ಳಿ ಪದಕಕ್ಕೆ ತೃಪ್ತಿಪಡಬೇಕಾಯಿತು.

ರೋಚಕ ಶೂಟ್-ಆಫ್‌ನಲ್ಲಿ ಚಿನ್ನ ಗೆದ್ದ ಮಿಶ್ರ ತಂಡ ಆರ್ಚರಿ ಕಾಂಪೌಂಡ್ ಮಿಶ್ರ ಸ್ಪರ್ಧೆಯಲ್ಲಿ ಸಾಹಿಲ್ ರಾಜೇಶ್ ಜಾಧವ್ ಮತ್ತು ಚಿಕಿತಾ ತನಿಪರ್ತಿ ಅವರನ್ನೊಳಗೊಂಡ ಭಾರತೀಯ ಜೋಡಿ ಚಿನ್ನದ ಪದಕ ಜಯಿಸಿದೆ. ಈ ಐತಿಹಾಸಿಕ ಗೆಲುವಿನೊಂದಿಗೆ 2028ರಲ್ಲಿ ನಡೆಯಲಿರುವ ಲಾಸ್ ಏಂಜಲೀಸ್ ಒಲಿಂಪಿಕ್ಸ್‌ನ ಮಿಶ್ರ ತಂಡ ಸ್ಪರ್ಧೆಗೆ ಭಾರತ ನೇರವಾಗಿ ಅರ್ಹತೆ ಗಿಟ್ಟಿಸಿಕೊಂಡಿರುವುದು ಮತ್ತೊಂದು ಪ್ರಮುಖ ಸಾಧನೆಯಾಗಿದೆ.

ಫೈನಲ್‌ನಲ್ಲಿ ದಕ್ಷಿಣ ಕೊರಿಯಾ ವಿರುದ್ಧದ ಮುಖಾಮುಖಿ ತೀವ್ರ ಜಿದ್ದಾಜಿದ್ದಿನಿಂದ ಕೂಡಿತ್ತು. ಮೊದಲ ಎರಡು ಸೆಟ್‌ಗಳಲ್ಲಿ ಎಲ್ಲಾ 10 ಶಾಟ್​​ಗಳನ್ನು ಗುರಿ ಸೇರಿಸಿದ ಭಾರತೀಯ ಜೋಡಿ, ಮೊದಲಾರ್ಧದಲ್ಲಿ 80-78 ಅಂಕಗಳಿಂದ ಎರಡು ಪಾಯಿಂಟ್‌ಗಳ ಮುನ್ನಡೆ ಸಾಧಿಸಿತ್ತು. ಆದರೆ ದಕ್ಷಿಣ ಕೊರಿಯಾ ತಿರುಗೇಟು ನೀಡಿದ ಪರಿಣಾಮ, ನಿಗದಿತ ಸುತ್ತುಗಳ ಮುಕ್ತಾಯಕ್ಕೆ ಉಭಯ ತಂಡಗಳು 157-157 ಅಂಕಗಳಿಂದ ಸಮಬಲ ಸಾಧಿಸಿದವು. ಪಂದ್ಯದ ವಿಜೇತರನ್ನು ನಿರ್ಧರಿಸಲು ಮೊರೆಹೋದ ‘ಶೂಟ್-ಆಫ್‌’ನಲ್ಲಿ (Shoot-off) ಭಾರತೀಯ ಆರ್ಚರ್‌ಗಳು ಉಕ್ಕಿನ ನರ ಪ್ರದರ್ಶಿಸಿ 20-19 ಅಂತರದಿಂದ ಕೊರಿಯಾವನ್ನು ಮಣಿಸಿ ರೋಚಕ ಗೆಲುವು ದಾಖಲಿಸಿದರು.

ಇದಕ್ಕೂ ಮುನ್ನ ನಡೆದ ಸೆಮಿಫೈನಲ್ ಹಣಾಹಣಿಯಲ್ಲಿ ಈ ಜೋಡಿ ಥೈಲ್ಯಾಂಡ್ ವಿರುದ್ಧ 156-155 ಅಂಕಗಳ ಅಂತರದ ರೋಚಕ ಗೆಲುವು ಸಾಧಿಸಿತ್ತು. ಮೊದಲಾರ್ಧದಲ್ಲಿ 39-37ರ ಮುನ್ನಡೆ ಸಾಧಿಸಿದ್ದ ಭಾರತಕ್ಕೆ, ಕೊನೆಯ ಕ್ಷಣಗಳಲ್ಲಿ ಥಾಯ್ಲೆಂಡ್ ಕಠಿಣ ಪೈಪೋಟಿ ನೀಡಿತಾದರೂ, ಚಿಕಿತಾ ಮತ್ತು ಸಾಹಿಲ್ ಅವರ ನಿಖರವಾದ ಹೊಡೆತಗಳು ಭಾರತವನ್ನು ಫೈನಲ್‌ಗೇರಿಸಿದ್ದವು.

ಸ್ಕ್ವಾಷ್‌ನಲ್ಲಿ ಪದಕ ಖಚಿತ ಹಾಗೂ ಪದಕ ಪಟ್ಟಿಯಲ್ಲಿ ಏರಿಕೆ ಬಿಲ್ಲುಗಾರಿಕೆ ಮಾತ್ರವಲ್ಲದೆ ಸ್ಕ್ವಾಷ್ ಕ್ರೀಡೆಯಲ್ಲೂ ಭಾರತೀಯ ಮಹಿಳಾ ತಂಡ ಭರವಸೆ ಮೂಡಿಸಿದೆ. ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಸಿಂಗಾಪುರವನ್ನು 2-0 ಅಂತರದಿಂದ ಸೋಲಿಸಿರುವ ಭಾರತ ತಂಡ ಸೆಮಿಫೈನಲ್‌ಗೆ ಲಗ್ಗೆ ಇಡುವ ಮೂಲಕ ಕನಿಷ್ಠ ಕಂಚಿನ ಪದಕವನ್ನು ಖಚಿತಪಡಿಸಿಕೊಂಡಿದೆ. ಸೆಮಿಫೈನಲ್ ಪಂದ್ಯದ ಎದುರಾಳಿ ಇನ್ನಷ್ಟೇ ನಿರ್ಧಾರವಾಗಬೇಕಿದೆ.

ಆರ್ಚರಿಯಲ್ಲಿ ಬಂದೆರಡು ಚಿನ್ನದ ಪದಕಗಳ ಸೇರ್ಪಡೆಯೊಂದಿಗೆ, ಏಷ್ಯನ್ ಕ್ರೀಡಾಕೂಟದ ಪದಕ ಪಟ್ಟಿಯಲ್ಲಿ ಭಾರತದ ಸ್ಥಾನ ಮತ್ತಷ್ಟು ಭದ್ರವಾಗಿದೆ. ಸದ್ಯದ ಮಾಹಿತಿಯ ಪ್ರಕಾರ ಭಾರತ 8 ಚಿನ್ನ, 21 ಬೆಳ್ಳಿ ಮತ್ತು 25 ಕಂಚಿನ ಪದಕಗಳೊಂದಿಗೆ ಒಟ್ಟು 54 ಪದಕಗಳನ್ನು ಕಲೆಹಾಕಿ 9ನೇ ಸ್ಥಾನದಲ್ಲಿದೆ. ಬಿಲ್ಲುಗಾರಿಕೆಯಲ್ಲಿ ಭಾರತ ತೋರುತ್ತಿರುವ ಈ ಪ್ರಾಬಲ್ಯವು ಮುಂಬರುವ ಕ್ರೀಡಾಕೂಟಗಳಲ್ಲಿ ಮತ್ತಷ್ಟು ಪದಕಗಳ ನಿರೀಕ್ಷೆ ಹುಟ್ಟುಹಾಕಿದೆ.

Leave a Reply

Your email address will not be published. Required fields are marked *