IND vs AUS: ಜಡೇಜಾ- ಅಶ್ವಿನ್ ದಾಳಿಗೆ ಆಸೀಸ್ ತತ್ತರ; ಭಾರತಕ್ಕೆ 115 ರನ್ ಗೆಲುವಿನ ಗುರಿ

ind vs aus 2nd test australia all out just 113 runs in 2nd innings

ದೆಹಲಿಯಲ್ಲಿ ನಡೆಯುತ್ತಿರುವ ಭಾರತ ಹಾಗೂ ಆಸ್ಟ್ರೇಲಿಯಾ (India Vs Australia) ನಡುವಿನ ಎರಡನೇ ಟೆಸ್ಟ್ ಪಂದ್ಯದಲ್ಲಿ ಭಾರತದ ಸ್ಪಿನ್ ದಾಳಿ ಮುಂದೆ ಮಂಕಾದ ಆಸೀಸ್ ಪಡೆ ಕೇವಲ 113 ರನ್​ಗಳಿಗೆ ತನ್ನ ಎರಡನೇ ಇನ್ನಿಂಗ್ಸ್ ಮುಗಿಸಿದೆ. ಈ ಮೂಲಕ ಭಾರತಕ್ಕೆ 115 ರನ್​ಗಳ ಗೆಲುವಿನ ಗುರಿ ನೀಡಿದೆ. ಹೀಗಾಗಿ ಎರಡನೇ ಟೆಸ್ಟ್ ಪಂದ್ಯದ ಫಲಿತಾಂಶ ಮೂರನೇ ದಿನದಲ್ಲೇ ಹೊರಬೀಳುವ ಸಾಧ್ಯತೆಗಳಿವೆ. ನಿನ್ನೆಯ ಎರಡನೇ ದಿನದಾಟದ ಅಂತ್ಯಕ್ಕೆ ಆಸ್ಟ್ರೇಲಿಯದ ಇನ್ನಿಂಗ್ಸ್ ಸುಸ್ಥಿತಿಯಲ್ಲಿರುವಂತೆ ತೋರುತ್ತಿತ್ತು. ದಿನದಾಟದಂತ್ಯಕ್ಕೆ ಆಸೀಸ್ ಪಡೆ ಕೇವಲ 1 ವಿಕೆಟ್‌ ಕಳೆದುಕೊಂಡು 61 ಕಲೆ ಹಾಕಿತ್ತು. ಹೀಗಾಗಿ ಎರಡನೇ ಇನ್ನಿಂಗ್ಸ್​ನಲ್ಲಿ ಆಸೀಸ್ ಪಡೆ ಬೃಹತ್ ಟಾರ್ಗೆಟ್ ಸೆಟ್ ಮಾಡುವ ಸೂಚನೆ ನೀಡಿತ್ತು. ಆದರೆ ಮೂರನೇ ದಿನದಾಟ ಆರಂಭವಾದ ಬಳಿಕ ಲೆಕ್ಕಾಚಾರವೆಲ್ಲ ಬುಡಮೇಲಾಯಿತು. ರವೀಂದ್ರ ಜಡೇಜಾ (Ravindra Jadeja) ಹಾಗೂ ಆರ್​ ಅಶ್ವಿನ್ (R Ashwin) ಸ್ಪಿನ್ ದಾಳಿಗೆ ನಲುಗಿದ ಆಸೀಸ್ ಪಡೆ 3ನೇ ದಿನದಾಟದ ಮೊದಲ ಸೆಷನ್​ನಲ್ಲಿ ಉಳಿದ 9 ವಿಕೆಟ್ ಕಳೆದುಕೊಂಡು ಕೇವಲ 52 ರನ್ ಕಲೆಹಾಕಿತು.

7  ವಿಕೆಟ್ ಪಡೆದ ಜಡೇಜಾ

ಟೆಸ್ಟ್‌ನ ಮೂರನೇ ದಿನವಾದ ಭಾನುವಾರ ಆಸ್ಟ್ರೇಲಿಯಾಕ್ಕೆ ನಿರಾಶಾದಾಯಕ ಆರಂಭ ಸಿಕ್ಕಿತು. ರವೀಂದ್ರ ಜಡೇಜಾ ಮತ್ತು ರವಿಚಂದ್ರನ್ ಅಶ್ವಿನ್ ಸ್ಪಿನ್‌ಗೆ ಆಸೀಸ್ ತಂಡದ ಯಾವ ಬ್ಯಾಟ್ಸ್‌ಮನ್‌ ಬಳಿಯೂ ಉತ್ತರ ಇರಲಿಲ್ಲ. ಈ ಪಂದ್ಯದಲ್ಲಿ ತಮ್ಮ ವೃತ್ತಿ ಜೀವನದ ಅತ್ಯುತ್ತಮ ಪ್ರದರ್ಶನ ನೀಡಿದ ರವೀಂದ್ರ ಜಡೇಜಾ ಒಂದೇ ಇನ್ನಿಂಗ್ಸ್‌ನಲ್ಲಿ ಏಳು ವಿಕೆಟ್ ಪಡೆದರು. ಈ ಇನ್ನಿಂಗ್ಸ್​ನಲ್ಲಿ 12.1 ಓವರ್‌ ಬೌಲ್ ಮಾಡಿದ ಜಡೇಜಾ 42 ರನ್ ನೀಡಿ ಏಳು ವಿಕೆಟ್ ಪಡೆದರೆ, ಅಶ್ವಿನ್ 16 ಓವರ್‌ಗಳಲ್ಲಿ 59 ರನ್ ನೀಡಿ ಮೂರು ವಿಕೆಟ್ ಪಡೆದರು.

ಆಸ್ಟ್ರೇಲಿಯಾ ಪರ ಟ್ರಾವಿಸ್ ಹೆಡ್ 43 ರನ್ ಗಳಿಸಿ ಗರಿಷ್ಠ ಸ್ಕೋರರ್ ಎನಿಸಿಕೊಂಡರು. ಜೊತೆಗೆ ಮಾರ್ನಸ್ ಲ್ಯಾಬುಸ್ಚಾಗ್ನೆ (35) ಅವರೊಂದಿಗೆ ಎರಡನೇ ವಿಕೆಟ್‌ಗೆ 42 ರನ್‌ಗಳ ಜೊತೆಯಾಟವನ್ನು ಹಂಚಿಕೊಂಡರು. ಆದರೆ ಮೂರನೇ ದಿನದ ಮೊದಲ ಓವರ್‌ನಲ್ಲಿ ಈ ಜೊತೆಯಾಟವನ್ನು ಮುರಿಯುವುದರೊಂದಿಗೆ ಭಾರತೀಯ ಬೌಲರ್‌ಗಳು ಪಂದ್ಯದಲ್ಲಿ ಪ್ರಾಬಲ್ಯ ಸಾಧಿಸಿದರು. ಬಳಿಕ ಆಸ್ಟ್ರೇಲಿಯಾ ತಂಡ ತನ್ನ ಕೊನೆಯ ಏಳು ವಿಕೆಟ್‌ಗಳನ್ನು ಕೇವಲ 18 ರನ್‌ಗಳ ಅಂತರದಲ್ಲಿ ಕಳೆದುಕೊಂಡಿತು.

NZ vs ENG: ಆಂಗ್ಲರ ಹೊಡಿಬಡಿ ಆಟಕ್ಕೆ ಸುಸ್ತಾದ ಕಿವೀಸ್; ಮೊದಲ ಟೆಸ್ಟ್​ನಲ್ಲಿ 267 ರನ್​ಗಳ ಬೃಹತ್ ಸೋಲು!

ಆಸೀಸ್ ದಿನದಾರಂಭ ಕಳಪೆ

ಮೂರನೇ ದಿನ 61 ರನ್​ಗಳಿಂದ ಇನ್ನಿಂಗ್ಸ್ ಮುಂದುವರೆಸಿದ ಆಸೀಸ್ ಪರ ಟ್ರಾವಿಸ್ ಹೆಡ್ ಮತ್ತು ಮಾರ್ನಸ್ ಲಬುಶೆನ್ ಕ್ರೀಸ್‌ನಲ್ಲಿದ್ದರು. ಆದರೆ ಆರ್. ಅಶ್ವಿನ್ ಮೊದಲ ಓವರ್‌ನ ಕೊನೆಯ ಎಸೆತದಲ್ಲಿ ಟ್ರಾವಿಸ್ ಹೆಡ್ ಅವರನ್ನು ಬಲಿಪಶು ಮಾಡಿದರು. ಹೆಡ್ ವಿಕೆಟ್ ನಂತರ ಸ್ಮಿತ್ ಮತ್ತು ಲಬುಶೆನ್ ಜೊತೆಯಾಟವನ್ನು ರೂಪಿಸಲು ಪ್ರಯತ್ನಿಸಿದರಾದರೂ ಯಶಸ್ವಿಯಾಗಲಿಲ್ಲ. ಅಶ್ವಿನ್ ಸ್ಮಿತ್ ಅವರನ್ನು ಔಟ್ ಮಾಡುವ ಮೂಲಕ ತಂಡಕ್ಕೆ ಮೂರನೇ ಹೊಡೆತ ನೀಡಿದರು.

ಜಡೇಜಾ ಸ್ಪಿನ್​ಗೆ ಸೈಲೆಂಟ್ ಆದ ಆಸೀಸ್

ಸ್ಮಿತ್ ಔಟಾದ ನಂತರ, ಲಬುಶೆನ್ ಕೂಡ ಹೆಚ್ಚು ಹೊತ್ತು ನಿಲ್ಲದೆ 35 ರನ್ ಗಳಿಸಿ ಔಟಾದರು. ಇಲ್ಲಿಂದ ಆಸ್ಟ್ರೇಲಿಯಾದ ಬ್ಯಾಟಿಂಗ್ ಪತನವಾಗಲು ಆರಂಭವಾಯಿತು. ಮುಂದಿನ ಮೂರು ಓವರ್‌ಗಳಲ್ಲಿ ನಾಲ್ಕು ವಿಕೆಟ್‌ಗಳನ್ನು ಆಸೀಸ್ ತಂಡ ಕಳೆದುಕೊಂಡಿತು. ಮ್ಯಾಟ್ ರೆನ್ಶಾ (2) ಅಶ್ವಿನ್​ಗೆ ಬಲಿಯಾದರೆ, ಪೀಟರ್ ಹ್ಯಾಂಡ್ಸ್‌ಕಾಂಬ್ (0), ಕಮಿನ್ಸ್ ಅವರನ್ನು ಒಂದೇ ಓವರ್‌ನಲ್ಲಿ ಜಡೇಜಾ ಪೆವಿಲಿಯನ್​ಗಟ್ಟಿದರು. ಬಳಿಕ ಅಲೆಕ್ಸ್ ಕ್ಯಾರಿ ಕೂಡ ಯಾವುದೇ ಪ್ರಭಾವ ಬೀರಲಾಗದೆ ಜಡೇಜಾಗೆ ಬಲಿಯಾದರು. ಅಂತಿಮವಾಗಿ ಲಿಯಾನ್ (8 ರನ್) ಮತ್ತು ಕುನ್ಹೆಮನ್ ಖಾತೆ ತೆರೆಯದೆ ಔಟಾಗುವುದರೊಂದಿಗೆ ಆಸೀಸ್ ಇನ್ನಿಂಗ್ಸ್​ಗೆ ತೆರೆ ಎಳೆದರು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

source https://tv9kannada.com/sports/cricket-news/ind-vs-aus-2nd-test-australia-all-out-just-113-runs-in-2nd-innings-psr-au14-522812.html

Leave a Reply

Your email address will not be published. Required fields are marked *