
ಆಸೀಸ್ ವಿರುದ್ಧ ಬಾರ್ಡರ್-ಗವಾಸ್ಕರ್ (Border-Gavaskar trophy) ಟ್ರೋಫಿ ಟೆಸ್ಟ್ ಸರಣಿಯನ್ನು ಆಡುತ್ತಿರುವ ಟೀಂ ಇಂಡಿಯಾ ಈ ಸರಣಿಯ ಬಳಿಕ 3 ಪಂದ್ಯಗಳ ಏಕದಿನ ಸರಣಿಯನ್ನೂ ಆಡಲಿದೆ. ಮಾರ್ಚ್ 17 ರಿಂದ ಈ ಉಭಯ ತಂಡಗಳ (India Vs Australia) ನಡುವೆ ಏಕದಿನ ಸರಣಿ ಆರಂಭವಾಗಲಿದ್ದು, ಈ ಸರಣಿಗೆ 18 ಸದಸ್ಯರ ತಂಡವನ್ನು ಬಿಸಿಸಿಐ (BCCI) ಪ್ರಕಟಿಸಿದೆ. ವೈಯಕ್ತಿಕ ಕಾರಣಗಳಿಂದಾಗಿ ಏಕದಿನ ತಂಡದ ಖಾಯಂ ನಾಯಕ ರೋಹಿತ್ ಶರ್ಮಾ (Rohit Sharma) ಮೊದಲ ಪಂದ್ಯಕ್ಕೆ ಅಲಭ್ಯರಾಗಲಿದ್ದು, ಅವರ ಸ್ಥಾನದಲ್ಲಿ ಹಾರ್ದಿಕ್ ಪಾಂಡ್ಯಗೆ ತಂಡದ ನಾಯಕತ್ವವನ್ನು ವಹಿಸಲಾಗಿದೆ. ಇದರೊಂದಿಗೆ ಟಿ20 ತಂಡದ ನಾಯಕತ್ವದ ಬಳಿಕ ಇದೀಗ ಮೊದಲ ಬಾರಿಗೆ ಹಾರ್ದಿಕ್ ಪಾಂಡ್ಯ (Hardik Pandya) ಏಕದಿನ ತಂಡವನ್ನು ಮುನ್ನಡೆಸಲಿದ್ದಾರೆ. ಇದರೊಂದಿಗೆ ಉಳಿದಿರುವ ಎರಡು ಟೆಸ್ಟ್ ಪಂದ್ಯಗಳಿಗೂ ತಂಡವನ್ನು ಪ್ರಕಟಿಸಲಾಗಿದ್ದು, ಈಗಿರುವ ತಂಡವನ್ನೇ ಆಡಿಸಲು ಬಿಸಿಸಿಐ ಮುಂದಾಗಿದೆ. ಹೀಗಾಗಿ ತಂಡದಲ್ಲಿ ಒಂದೇ ಒಂದು ಬದಲಾವಣೆ ಕಂಡು ಬಂದಿದ್ದು, ತಂಡದಿಂದ ಕೈಬಿಟ್ಟಿದ್ದ ಜಯ್ದೇವ್ ಉನದ್ಕಟ್ರನ್ನು ಮತ್ತೆ ಟೆಸ್ಟ್ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.
ಏಕದಿನ ಸರಣಿಗೆ ಟೀಂ ಇಂಡಿಯಾವನ್ನು ಪ್ರಕಟಿಸಿರುವ ಬಿಸಿಸಿಐ ರೋಹಿತ್ ಅಲಭ್ಯತೆಯ ಬಗ್ಗೆಯೂ ಮಾಹಿತಿ ನೀಡಿದ್ದು, ವೈಯಕ್ತಿಕ ಕಾರಣಗಳಿಂದಾಗಿ ರೋಹಿತ್ ಶರ್ಮಾ ಮೊದಲ ಪಂದ್ಯದಿಂದ ಹೊರಗುಳಿಯಲಿದ್ದು, ಅವರ ಸ್ಥಾನದಲ್ಲಿ ಹಾರ್ದಿಕ್ ಪಾಂಡ್ಯ ಮೊದಲ ಪಂದ್ಯಕ್ಕೆ ತಂಡವನ್ನು ಮುನ್ನಡೆಸಲಿದ್ದಾರೆ ಎಂದು ತಿಳಿಸಿದೆ.
𝗡𝗢𝗧𝗘: Mr Rohit Sharma will be unavailable for the first ODI due to family commitments and Mr Hardik Pandya will lead the side in the first ODI.
— BCCI (@BCCI) February 19, 2023
ಏಕದಿನ ತಂಡಕ್ಕೆ ಜಡೇಜಾ ಎಂಟ್ರಿ
ಮಾರ್ಚ್ 17ರಿಂದ ಆರಂಭವಾಗಲಿರುವ ಏಕದಿನ ಸರಣಿಯೊಂದಿಗೆ ಏಕದಿನ ತಂಡಕ್ಕೆ ಕೆಲವು ಪ್ರಮುಖ ಆಟಗಾರರು ವಾಪಸಾಗುತ್ತಿದ್ದಾರೆ.ಇದರಲ್ಲಿ ವಿಶೇಷವಾದ ಹೆಸರು ಎಂದರೆ, ಗಾಯದ ಸಮಸ್ಯೆಯಿಂದ ತಂಡದಿಂದ ಹೊರಗುಳಿದಿದ್ದ ಸ್ಟಾರ್ ಆಲ್ ರೌಂಡರ್ ರವೀಂದ್ರ ಜಡೇಜಾ. ಜಡೇಜಾ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಿಂದ ಟೀಂ ಇಂಡಿಯಾಕ್ಕೆ ವಾಪಸಾಗಿದ್ದು, ಎರಡೂ ಟೆಸ್ಟ್‌ಗಳಲ್ಲಿ ಆಲ್ರೌಂಡರ್ ಪ್ರದರ್ಶನ ನೀಡುವ ಮೂಲಕ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಈಗ ಏಕದಿನ ತಂಡಕ್ಕೆ ಜಡೇಜಾ ವಾಪಸಾತಿಯಿಂದ ಟೀಂ ಇಂಡಿಯಾ ಮತ್ತಷ್ಟು ಬಲ ಪಡೆಯಲಿದೆ.
ಏಕದಿನ ಸರಣಿಗೆ ಟೀಂ ಇಂಡಿಯಾ
ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ಕೆಎಲ್ ರಾಹುಲ್, ಇಶಾನ್ ಕಿಶನ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ (ಉಪನಾಯಕ/ ಮೊದಲ ಪಂದ್ಯಕ್ಕೆ ನಾಯಕ), ರವೀಂದ್ರ ಜಡೇಜಾ, ಕುಲ್ದೀಪ್ ಯಾದವ್, ವಾಷಿಂಗ್ಟನ್ ಸುಂದರ್, ಯುಜ್ವೇಂದ್ರ ಚಾಹಲ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಉಮ್ರಾನ್ ಮಲಿಕ್, ಶಾರ್ದೂಲ್ ಠಾಕೂರ್, ಅಕ್ಷರ್ ಪಟೇಲ್, ಜಯದೇವ್ ಉನದ್ಕಟ್.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ