
ಇಡೀ ವಿಶ್ವವೇ ಕಾಯುತ್ತಿರುವ ಚೊಚ್ಚಲ ಆವೃತ್ತಿಯ ಬಹುನಿರೀಕ್ಷಿತ ಮಹಿಳಾ ಪ್ರೀಮಿಯರ್ ಲೀಗ್ಗೆ (WPL 2023) ಇಂದು ಚಾಲನೆ ಸಿಗಲಿದೆ. ಒಂದು ಕಪ್ಗಾಗಿ ಒಟ್ಟು 20 ಪಂದ್ಯಗಳು ನಡೆಯಲಿದ್ದು ಗುಜರಾತ್ ಜೈಂಟ್ಸ್, ಮುಂಬೈ ಇಂಡಿಯನ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು, ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಯುಪಿ ವಾರಿಯರ್ಸ್ ಹೋರಾಟ ನಡೆಸಲಿದೆ. ಉದ್ಘಾಟನಾ ಪಂದ್ಯದಲ್ಲಿ ಬೆತ್ ಮೂನಿ ನಾಯಕತ್ವದ ಗುಜರಾತ್ ಜೈಂಟ್ಸ್ ಮತ್ತು ಹರ್ಮನ್‌ಪ್ರೀತ್ ಕೌರ್ (Harmanpreet Kaur) ನೇತೃತ್ವದ ಮುಂಬೈ ಇಂಡಿಯನ್ಸ್ (GJ vs MI) ತಂಡಗಳು ಸೆಣೆಸಾಟ ನಡೆಸಲಿದೆ. ಮಹಿಳಾ ಕ್ರಿಕೆಟ್ಗೆ ದೊಡ್ಡ ಮಟ್ಟದ ಪ್ರಾಮುಖ್ಯತೆ ನೀಡುವ ಉದ್ದೇಶ ಈ ಟೂರ್ನಿಯದ್ದಾಗಿದೆ.
ಗುಜರಾತ್ vs ಮುಂಬೈ:
ಡಬ್ಲ್ಯುಪಿಎಲ್ನ ಮೊದಲ ಪಂದ್ಯವೇ ಜಿದ್ದಾಜಿದ್ದಿನಿಂದ ಕೂಡಿರಲಿದೆ. ಮುಂಬೈನ ಡಿ. ವೈ. ಪಾಟೀಲ್ ಕ್ರೀಡಾಂಗಣದಲ್ಲಿ ನಡೆಯಲಿರುವ ಮೊದಲ ಪಂದ್ಯದಲ್ಲಿ ಅಬ್ಬರದ ಬ್ಯಾಟಿಂಗ್‌ನಿಂದ ಆಸ್ಟ್ರೇಲಿಯಾಕ್ಕೆ ಅನೇಕ ವಿಶ್ವಕಪ್ ಟ್ರೋಫಿಗಳನ್ನು ಗೆಲ್ಲಿಸಿಕೊಟ್ಟಿ ಬೆತ್ ಮೂನಿ ನಾಯಕತ್ವದ ಗುಜರಾತ್ ಜೈಂಟ್ಸ್ ತಂಡ ಭಾರತ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ ಅವರ ಮುಂಬೈ ಇಂಡಿಯನ್ಸ್ ತಂಡವನ್ನು ಎದುರಿಸಲಿದೆ. ಗುಜರಾತ್ ತಂಡವು ಹರ್ಲೀನ್ ಡಿಯೊಲ್, ಸ್ನೇಹಾ ರಾಣಾ ಮತ್ತು ಸುಷ್ಮಾ ವರ್ಮಾ ಅವರನ್ನು ಒಳಗೊಂಡಿದೆ. ಆಶ್ಲಿ ಗಾರ್ಡನರ್, ಜಾರ್ಜಿಯಾ ವೇರ್‌ಹಂ ಮತ್ತು ಸೋಫಿ ಡಂಕ್ಲಿ ಅವರು ಈ ತಂಡದಲ್ಲಿರುವ ಪ್ರಮುಖ ವಿದೇಶಿ ಆಟಗಾರ್ತಿಯರು. ಇತ್ತ ಕೌರ್ ತಂಡದಲ್ಲಿ ನಥಾಲಿ ಸಿವೆರ್ ಬ್ರಂಟ್, ಇಸಿ ವಾಂಗ್, ಅಮೇಲಿ ಕೆರ್, ಕ್ಲೋ ಟ್ರಯಾನ್ ಅವರನ್ನು ಒಳಗೊಂಡಿದೆ. ನ್ಯಾಟ್ ಸ್ಕೀವರ್ ಹಾಗೂ ಪೂಜಾ ವಸ್ತಾಕರ್ ಅವರಂಥ ಹೊಡೆಬಡಿಯ ದಾಂಡಿಗರನ್ನು ಹೊಂದಿದೆ.
ಒಟ್ಟು 23 ಪಂದ್ಯಗಳು:
ಟೂರ್ನಿಯಲ್ಲಿ ಒಟ್ಟು 20 ಲೀಗ್ ಪಂದ್ಯಗಳು ಮತ್ತು 2 ಪ್ಲೇ-ಆಫ್ಸ್ ಪಂದ್ಯಗಳು ಸೇರಿ 23 ದಿನ ನಡೆಯಲಿದೆ. ಎಲ್ಲ ಪಂದ್ಯಗಳಿಗೆ ಮಹಾರಾಷ್ಟ್ರದ ಡಿವೈ ಪಾಟೀಲ್ ಸ್ಟೇಡಿಯಂ ಮತ್ತು ಬ್ರಬೋರ್ನ್ ಸ್ಟೇಡಿಯಂ ಆತಿಥ್ಯವಹಿಸಲಿದೆ. ಎರಡು ಕ್ರೀಡಾಂಗಣಗಳಲ್ಲಿ ತಲಾ 11 ಪಂದ್ಯಗಳು ಆಯೋಜನೆಯಾಗಲಿದೆ. ಲೀಗ್ ಹಂತದಲ್ಲಿ ಪ್ರತಿ ತಂಡಗಳು 8 ಪಂದ್ಯಗಳನ್ನು ಆಡಲಿದೆ. ಲೀಗ್ ಹಂತದಲ್ಲಿ ಅಗ್ರ ಮೂರು ಸ್ಥಾನ ಪಡೆಯುವ ತಂಡಗಳು ಪ್ಲೇ-ಆಫ್ಸ್ ಹಂತಕ್ಕೆ ಕಾಲಿಡಲಿವೆ. ಲೀಗ್ ಹಂತದಲ್ಲಿ ಅಂಕಪಟ್ಟಿಯ ಅಗ್ರ ಸ್ಥಾನ ಪಡೆಯುವ ತಂಡ ನೇರವಾಗಿ ಫೈನಲ್‌ಗೆ ಅರ್ಹತೆ ಪಡೆಯಲಿದೆ. ಲೀಗ್ ಹಂತದಲ್ಲಿ 2 ಮತ್ತು 3ನೇ ಸ್ಥಾನ ಪಡೆಯುವ ತಂಡಗಳು ಎಲಿಮಿನೇಟರ್ ಪಂದ್ಯದಲ್ಲಿ ಪೈಪೋಟಿ ನಡೆಸಲಿವೆ. ಅಂಕಪಟ್ಟಿಯ ಅಗ್ರಸ್ಥಾನಿ ಮತ್ತು ಎಲಿಮಿನೇಟರ್ ಪಂದ್ಯ ಗೆದ್ದ ತಂಡ ಫೈನಲ್‌ನಲ್ಲಿ ಟ್ರೋಫಿಗಾಗಿ ಹೋರಾಡಲಿದೆ.
IND vs AUS: ‘ಪಾಕಿಸ್ತಾನದಂತೆ ಫ್ಯಾನ್ಸ್ಗೆ ಬೋರ್ ಹೊಡೆಸುವುದಿಲ್ಲ’; ಸೋತ ಬಳಿಕ ರೋಹಿತ್ ಅಚ್ಚರಿ ಹೇಳಿಕೆ
ಅದ್ಧೂರಿ ಉದ್ಘಾಟನಾ ಸಮಾರಂಭ:
ಪಂದ್ಯ ಆರಂಭಕ್ಕೂ ಮುನ್ನ ಅದ್ಧೂರಿ ಮನರಂಜಾನಾ ಕಾರ್ಯಕ್ರಮಗಳು ನಡೆಯಲಿದೆ. ಬಾಲಿವುಡ್ ಸೂಪರ್‌ಸ್ಟಾರ್‌ಗಳಾದ ಕಿಯಾರಾ ಅಡ್ವಾಣಿ ಮತ್ತು ಕೃತಿ ಸನೋನ್ ಉದ್ಘಾಟನಾ ಸಮಾರಂಭದಲ್ಲಿ ಪ್ರಪಂಚದಾದ್ಯಂತದ ಅಭಿಮಾನಿಗಳನ್ನು ರಂಜಿಸಲು ಸಿದ್ಧರಾಗಿದ್ದಾರೆ. ಜನಪ್ರಿಯ ಪಂಜಾಬಿ ಗಾಯಕ ಎಪಿ ಧಿಲ್ಲೋನ್ ಅವರು ಸಂಭ್ರಮಾಚರಣೆಯಲ್ಲಿ ಮಹಿಳಾ ಪ್ರೀಮಿಯರ್ ಲೀಗ್ ಗೀತೆ ಹಾಡಲಿದ್ದಾರೆ.
ಪಂದ್ಯ ಎಷ್ಟು ಗಂಟೆಗೆ?:
ಗುಜರಾತ್ ಜೈಂಟ್ಸ್ ಮತ್ತು ಮುಂಬೈ ಇಂಡಿಯನ್ಸ್ ನಡುವಿನ ಪಂದ್ಯ ರಾತ್ರಿ 7.30 ಕ್ಕೆ ಪ್ರಾರಂಭವಾಗಲಿದೆ. ಟಾಸ್ 7.00 ಗಂಟೆಗೆ ನಡೆಯಲಿದೆ. ಪಂದ್ಯದ ನೇರ ಪ್ರಸಾರವು ಸ್ಪೋರ್ಟ್ಸ್ 18 ಚಾನೆಲ್‌ಗಳಲ್ಲಿರಲಿದೆ. ಲೈವ್ ಸ್ಟ್ರೀಮಿಂಗ್ ಜಿಯೋ ಸಿನಿಮಾ ಅಪ್ಲಿಕೇಶನ್‌ನಲ್ಲಿ ವೀಕ್ಷಿಸಬಹುದು.
ಗುಜರಾತ್ ಜೈಂಟ್ಸ್ ತಂಡ: ಆಶ್ಲೇ ಗಾರ್ಡ್ನರ್, ಬೆತ್ ಮೂನಿ (ನಾಯಕಿ), ಸ್ನೇಹ ರಾಣಾ, ಮಾನಸಿ ಜೋಶಿ, ಶಬ್ನಮ್ ಶಕೀಲ್, ಸೋಫಿ ಡಂಕ್ಲೆ, ಅನ್ನಾಬೆಲ್ ಸದರ್ಲ್ಯಾಂಡ್, ಹರ್ಲೀನ್ ಡಿಯೋಲ್, ಡಿಯಾಂಡ್ರಾ ಡಾಟಿನ್, ಡೈಲನ್ ಹೇಮಲತಾ, ಮೋನಿಕಾ ಪಟೇಲ್, ತನುಜಾ ಕನ್ವರ್, ಸುಷ್ಮಾ ವರ್ಮಾ, ಹರ್ಲಿ ಗಲಾ, ಎಸ್ ಮೇಘನಾ, ಜಾರ್ಜಿಯಾ, ಅಶ್ವಿನಿ, ಪರುಣಿಕಾ ಸಿಸೋಡಿಯಾ.
ಮುಂಬೈ ಇಂಡಿಯನ್ಸ್ ತಂಡ: ಹರ್ಮನ್‌ಪ್ರೀತ್ ಕೌರ್ (ನಾಯಕಿ), ಯಾಸ್ತಿಕಾ ಭಾಟಿಯಾ, ಅಮನ್‌ಜೋತ್ ಕೌರ್, ಹೇಲಿ ಮ್ಯಾಥ್ಯೂಸ್, ಕ್ಲೋಯ್ ಟ್ರಯಾನ್, ನೇಟ್ ಸಿವರ್, ಧಾರಾ ಗುಜ್ಜರ್, ಸೈಕಾ ಇಶಾಕ್, ಹುಮೈರಾ ಕಾಜಿ, ಪ್ರಿಯಾಂಕಾ ಬಾಲಾ, ಸೋನಮ್ ಯಾದವ್, ನೀಲಂ ಬಿಷ್ತ್, ಸಿ ವಾಂಗ್, ಹೀದರ್ ಗ್ರಹಾಂ, ಜಿಂತಿಮಣಿ ಕಲಿತಾ, ಪೂಜಾ ವಸ್ತ್ರಾಕರ್, ಅಮೆಲಿಯಾ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ