WPL 2023: ಅರ್ಧ ಗಂಟೆ ತಡವಾಗಿ ಆರಂಭವಾಗಲಿದೆ ಮೊದಲ ಪಂದ್ಯ! ಕಾರಣವೇನು ಗೊತ್ತಾ?

WPL 2023 opener match rescheduled to start at 8 pm

ಇಡೀ ವಿಶ್ವವೇ ಕಾಯುತ್ತಿರುವ ಚೊಚ್ಚಲ ಆವೃತ್ತಿಯ ಬಹುನಿರೀಕ್ಷಿತ ಮಹಿಳಾ ಪ್ರೀಮಿಯರ್ ಲೀಗ್​ಗೆ (WPL 2023) ಇಂದು ಚಾಲನೆ ಸಿಗಲಿದೆ. ಮೊದಲ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ಮತ್ತು ಮುಂಬೈ ಇಂಡಿಯನ್ಸ್ (Gujarat Giants vs Mumbai Indians) ತಂಡಗಳು ಮುಖಾಮುಖಿಯಾಗಲಿವೆ. ಆದರೆ ಪಂದ್ಯ ಆರಂಭಕ್ಕೂ ಮುನ್ನ ಮಂಡಳಿ ತುರ್ತು ಸಂದೇಶ ಹೊರಡಿಸಿದ್ದು, ಇದರಲ್ಲಿ ಪಂದ್ಯ ಆರಂಭವಾಗುವ ಸಮಯವನ್ನು ಬದಲಾಯಿಸಿರುವ ಬಗ್ಗೆ ಮಾಹಿತಿ ನೀಡಲಾಗಿದೆ. ವೇಳಾಪಟ್ಟಿಯ ಪ್ರಕಾರ, ಪಂದ್ಯವು 7.30 ಕ್ಕೆ ಪ್ರಾರಂಭವಾಗಬೇಕಿತ್ತು. ಆದರೀಗ 7.30ರ ಬದಲಿಗೆ ಅರ್ಧ ಗಂಟೆ ತಡವಾಗಿ ಪಂದ್ಯ ಆರಂಭವಾಗಲಿದೆ ಎಂದು ಮಂಡಳಿಯು ತಿಳಿಸಿದೆ. ಹೀಗಾಗಿ ಮೊದಲ ಪಂದ್ಯ ರಾತ್ರಿ 8 ಗಂಟೆಗೆ ಆರಂಭವಾಗಲಿದೆ. 7.30ಕ್ಕೆ ಟಾಸ್ ನಡೆಯಲಿದೆ.

ಮಹಿಳೆಯರಿಗೆ ಉಚಿತ ಟಿಕೆಟ್

ಮಹಿಳಾ ಪ್ರೀಮಿಯರ್ ಲೀಗ್‌ನ ಆರಂಭಿಕ ಪಂದ್ಯವು ನಬಿ ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಆದರೆ ಮೊದಲ ಪಂದ್ಯ ಯಾಕೆ ವಿಳಂಬವಾಗುತ್ತಿದೆ ಎಂಬುದಕ್ಕೆ ಮಂಡಳಿ ಕಾರಣವನ್ನು ಸ್ಪಷ್ಟಪಡಿಸಿಲ್ಲ. ಇಂದು ಉದ್ಘಾಟನಾ ಸಮಾರಂಭ ಇರುವ ಕಾರಣ ಮೊದಲ ಪಂದ್ಯದ ಸಮಯವನ್ನು ಬದಲಾಯಿಸಿರಬಹುದು ಎಂಬ ಮಾತು ಕೇಳಿಬರುತ್ತಿದೆ. ಮಹಿಳಾ ಪ್ರೀಮಿಯರ್ ಲೀಗ್‌ನ ಉದ್ಘಾಟನಾ ಸಮಾರಂಭ ಸಂಜೆ 6.25ಕ್ಕೆ ಆರಂಭವಾಗಲಿದೆ. ಪಂದ್ಯ ವೀಕ್ಷಿಸಲು ಮೈದಾನಕ್ಕೆ ತೆರಳುವವರು ಸಂಜೆ 4ರಿಂದ ಕ್ರೀಡಾಂಗಣಕ್ಕೆ ಎಂಟ್ರಿಕೊಡಬಹುದಾಗಿದೆ. ಮಹಿಳಾ ಪ್ರೀಮಿಯರ್​ ಲೀಗ್ ಅನ್ನು ಅತ್ಯಂತ ಯಶಸ್ವಿಗೊಳಿಸುವ ಸಲುವಾಗಿ ಬಿಸಿಸಿಐ, ಮಹಿಳೆಯರಿಗೆ ಉಚಿತ ಟಿಕೆಟ್ ನೀಡಿದೆ. ಆದರೆ ಪುರುಷರಿಗೆ ಕನಿಷ್ಠ ಟಿಕೆಟ್ ದರ 100 ರೂ. ನಿಗದಿ ಪಡಿಸಿದೆ.

WPL 2023: ಲೀಗ್​ನಲ್ಲಿರುವ ನಿಯಮಗಳ ಬಗ್ಗೆ ನಿಮಗೆಷ್ಟು ಗೊತ್ತು? ಪಂದ್ಯವನ್ನು ಉಚಿತವಾಗಿ ವೀಕ್ಷಿಸುವುದು ಹೇಗೆ?

ಬಾಲಿವುಡ್ ತಾರೆಯರ ಉಪಸ್ಥಿತಿ

ಉದ್ಘಾಟನಾ ಸಮಾರಂಭಕ್ಕೆ ಬಾಲಿವುಡ್ ತಾರೆಯರು ಮೆರಗು ತರಲಿದ್ದು, ಬಾಲಿವುಡ್ ತಾರೆಯರಾದ ಕಿಯಾರಾ ಅಡ್ವಾಣಿ ಮತ್ತು ಕೃತಿ ಸನೋನ್ ಅವರು ಪ್ರದರ್ಶನ ನೀಡಲು ಸಜ್ಜಾಗಿದ್ದಾರೆ. ಇವರಿಬ್ಬರ ಜೊತೆಗೆ ಜನಪ್ರಿಯ ಪಂಜಾಬಿ ಗಾಯಕ ಎಪಿ ಧಿಲ್ಲೋನ್ ತಮ್ಮ ಹಾಡುಗಳ ಮೂಲಕ ಅಭಿಮಾನಿಗಳನ್ನು ರಂಜಿಸಲಿದ್ದಾರೆ. ಮಹಿಳಾ ಪ್ರೀಮಿಯರ್ ಲೀಗ್‌ನ ಅಧಿಕೃತ ಟ್ವಿಟರ್ ಖಾತೆ ಟ್ವೀಟ್‌ನಲ್ಲಿ ಮಾಹಿತಿ ನೀಡಿದೆ. ಈ ಅದ್ಧೂರಿ ಆಚರಣೆಗೆ ಅಭಿಮಾನಿಗಳು ಕೂಡ ಉತ್ಸುಕರಾಗಿದ್ದಾರೆ.

ಒಟ್ಟು ಐದು ತಂಡಗಳು

ಇದಾದ ಬಳಿಕ ಪಂದ್ಯ ಆರಂಭವಾಗಲಿದೆ. ಎಲ್ಲಾ ಪಂದ್ಯಗಳು ಮುಂಬೈ ಹಾಗೂ ನವಿ ಮುಂಬೈ ಕ್ರೀಡಾಂಗಣದಲ್ಲಿ ನಡೆಯಲಿವೆ. ಇನ್ನು ಈ ಲೀಗ್ ಬಗ್ಗೆ ಹೇಳುವುದಾದರೆ, ಒಟ್ಟು ಐದು ತಂಡಗಳು ಈ ಮಹಿಳಾ ಪ್ರೀಮಿಯರ್ ಲೀಗ್​ನ ಮೊದಲ ಸೀಸನ್​ನಲ್ಲಿ ಕಣಕ್ಕಿಳಿಯುತ್ತಿವೆ. ಇದು ಗುಜರಾತ್ ಜೈಂಟ್ಸ್, ಮುಂಬೈ ಇಂಡಿಯನ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು, ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಯುಪಿ ವಾರಿಯರ್ಸ್ ತಂಡಗಳನ್ನು ಒಳಗೊಂಡಿದೆ. ಟೂರ್ನಿಯಲ್ಲಿ ಲೀಗ್ ಪಂದ್ಯಗಳ ನಂತರ ಎಲಿಮಿನೇಟರ್ ಪಂದ್ಯಗಳನ್ನು ನಡೆಯುತ್ತವೆ. ಇದಾದ ಬಳಿಕ ಮಾರ್ಚ್ 26ರಂದು ಮುಂಬೈನ ಬ್ರಬೋರ್ನ್ ಸ್ಟೇಡಿಯಂನಲ್ಲಿ ಫೈನಲ್ ಪಂದ್ಯ ನಡೆಯಲಿದೆ. ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ತಂಡ ನೇರವಾಗಿ ಫೈನಲ್‌ಗೆ ಪ್ರವೇಶ ಪಡೆಯುತ್ತದೆ. ಇನ್ನು ಎಲಿಮಿನೇಟರ್ ಪಂದ್ಯದಲ್ಲಿ ಗೆಲುವು ಸಾಧಿಸುವ ತಂಡ ಎರಡನೇ ಫೈನಲಿಸ್ಟ್ ಆಗಿ ಎಂಟ್ರಿಕೊಡಲಿದೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

source https://tv9kannada.com/sports/cricket-news/wpl-2023-opener-match-rescheduled-to-start-at-8-pm-psr-au14-530720.html

Leave a Reply

Your email address will not be published. Required fields are marked *